ಅಪ್ಪ ನಿನಗಾಗಿ...

7

ಅಪ್ಪ ನಿನಗಾಗಿ...

Published:
Updated:

ಅಪರಿಚಿತವಾದ ಈ ಪ್ರಪಂಚದಲ್ಲಿ ಪರಿಚಿತನಾದ ಎರಡನೇ ವ್ಯಕ್ತಿ. ಬದುಕು ಕೊಟ್ಟವಳು ಅವಳಾದರೆ, ಬದುಕಲು ಕಲಿಸಿಕೊಟ್ಟವನು ನೀನು. ಪ್ರಪಂಚಕ್ಕೆ ತಂದವಳು ಅವಳಾದರೆ ಪ್ರಪಂಚ ತೋರಿಸಿಕೊಟ್ಟವನು ನೀನು. ಕಾಲಿಗೆ ಚಪ್ಪಲಿ ತೊಡಿಸಿದ್ದು ಅವಳಾದರೆ, ಕೈ ಹಿಡಿದು ನಡಿಗೆ ಕಲಿಸಿದ್ದು ನೀನು. ತುತ್ತು ತಿನಿಸಿದ್ದು ಅವಳಾದ್ರೂ, ಹೊತ್ತು ತಂದವನು ನೀನು. ಮಾತು ಕಲಿಸಿದ್ದು ಅವಳಾದ್ರೂ ವಿದ್ಯೆ ಕೊಡಿಸಿದ್ದು ನೀನು. ಪಾಠ ಕಲಿಸಿದ್ದು ಅವಳಾದ್ರು, ಅದಕ್ಕೆ ರೂಪ ಕೊಟ್ಟಿದ್ದು ನೀನು, ಲಾಲಿ ಹಾಡಿದ್ದು ಅವಳಾದ್ರೂ ಹೆಗಲು ಕೊಟ್ಟಿದ್ದು ನೀನು.ಮಳೆ ಬಂದಾಗ ಬೆಚ್ಚಗೆ ಮಡಿಲಲ್ಲಿ ಮಲಗಿಸಿದ್ದು ಅವಳಾದ್ರೆ ಆಚೆ ಆಕಾಶದಲ್ಲಿ ಕಾಮನಬಿಲ್ಲು ತೋರಿಸಿದ್ದು ನೀನು. ಸ್ವೆಟರ್ ತೋಡಿಸಿದ್ದು ಅವಳಾದರೆ ಸ್ವೆಟರ್ ಕೊಡಿಸಿದ್ದು ನೀನು. ಜ್ವರದಲ್ಲಿ ತಣ್ಣೀರಿನ ಬಟ್ಟೆ ಹಾಕಿದ್ದು ಅವಳಾದರೆ, ಆಸ್ಪತ್ರೆಯಲ್ಲಿ ಇಂಜೆಕ್ಷನ್ ಕೊಡಿಸಿದ್ದು ನೀನು. ಹಬ್ಬಕ್ಕೆ ಹೋಳಿಗೆ ಮಾಡಿದ್ದು ಅವಳಾದರೆ, ಹೊಸ ಬಟ್ಟೆ ಕೊಡಿಸಿದ್ದು ನೀನು. ಪ್ರವಾಸಕ್ಕೆ ತಿಂಡಿ ಮಾಡಿಕೊಟ್ಟಿದ್ದು ಅವಳಾದರೆ ಜೋಪಾನ ಮಾಡಿ ಬಸ್ಸು ಹತ್ತಿಸಿದ್ದು ನೀನು.ಊಟದ ಡಬ್ಬಿ ಪ್ಯಾಕ್ ಮಾಡಿದ್ದು ಅವಳಾದರೆ, ಸ್ಕೂಲ್ ಗೇಟ್‌ವರೆಗೂ ಜೊತೆಗೆ ಬಂದಿದ್ದು ನೀನು. ಮುದ್ದು ಮಾಡಿದ್ದು ಅವಳಾದರೆ, ಬುದ್ದಿ ಹೇಳಿದ್ದು ನೀನು. ಅತ್ತಾಗ ಸಮಾಧಾನ ಮಾಡಿದ್ದು ಅವಳಾದರೆ, ಮತ್ತೆ ನಗು ತರಿಸ್ತಾ ಇದ್ದದ್ದು ನೀನು. ಪರೀಕ್ಷೆ ಸಮಯ ರಾತ್ರಿಯಿಡೀ ಜೊತೆಗಿದ್ದದ್ದು ಅವಳಾದರೆ, ಮನದ ಭಯವನ್ನೆಲ್ಲಾ ದೂರ ಮಾಡಿ ಧೈರ್ಯ ತುಂಬಿದ್ದು ನೀನು.ಮಗುವನ್ನು ಕಣ್ಣ ರೆಪ್ಪೆ ತರಹ ಜೊತೆಯಲ್ಲೇ ಇಟ್ಟುಕೊಳ್ಳಬೇಕು ಎಂದುಕೊಂಡಿದ್ದು ಅವಳಾದರೆ, ಹಾಸ್ಟೆಲ್‌ನಲ್ಲಿ ಬಿಟ್ಟು ಪ್ರಪಂಚ ತಿಳಿಯುವ ಹಾಗೆ ಮಾಡಿದ್ದು ನೀನು. ಪೋನ್‌ನಲ್ಲಿ ಹಬ್ಬ ನೆನಪಿಸ್ತಾ ಇದ್ದದ್ದು ಅವಳಾದರೆ, ಓಡಿ ಬಂದು ಊರಿಗೆ ಕರೆದೊಯ್ಯುತ್ತಿದ್ದುದು ನೀನು.ನನ್ನ ಪ್ರತಿ ಪರೀಕ್ಷೆ ಫಲಿತಾಂಶಗಳಲ್ಲಿ ನಿನ್ನ ಸಂತೋಷ. ಕೌನ್ಸಿಲಿಂಗ್‌ನಲ್ಲಿ ನನ್ನ ಜೊತೆ ಕೂತು ನೀ ನೀಡಿದ ಮಾರ್ಗದರ್ಶನ, ನನ್ನ ಪ್ರತೀ ಸೆಮಿಸ್ಟರ್‌ಗಳ ಫೀಸು. ನಾನು ಕೊಂಡ ಪುಸ್ತಕಗಳ ಬೆಲೆ, ನಾನು ಸವೆಸಿದ ಚಪ್ಪಲಿಯ ಹಣ, ಮೊಬೈಲ್ ಸೆಟ್ಟಿಗೂ ಅದರ ರೀಚಾರ್ಜಿಗೂ ನೀನು ಕೊಟ್ಟ ದುಡ್ಡು, ನನ್ನ ಪ್ರತೀ ಖರ್ಚಿನ ಹಿಂದಿದ್ದ ನಿನ್ನ ಬೆವರಿನ ಹನಿಗಳು...ನನಗೊಂದು ಬದುಕು ಕಟ್ಟಿಕೊಡಲು ನೀನು ಸುರಿಸಿದ ಬೆವರು ಅವಳು ಸುರಿಸಿದ ಕಣ್ಣೀರು... ಇಷ್ಟೆಲ್ಲಾ ತ್ಯಾಗ ಮಾಡಿದ ಮೇಲೂ ಮತ್ತೂ ನೀನು ಕೇಳುವುದು ಮತ್ತೇನು ಬೇಕು...? ಅದಕ್ಕೇ ನೀವು ಅಪ್ಪ-ಅಮ್ಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry