ಶುಕ್ರವಾರ, ನವೆಂಬರ್ 22, 2019
26 °C

ಅಪ್ರಮೇಯಸ್ವಾಮಿ ಬ್ರಹ್ಮರಥೋತ್ಸವ

Published:
Updated:
ಅಪ್ರಮೇಯಸ್ವಾಮಿ ಬ್ರಹ್ಮರಥೋತ್ಸವ

ಈದೇವಾಲಯಕ್ಕೆ ತಳಪಾಯವೇ ಇಲ್ಲ, ಕೇವಲ ಮರಳುಗಳಲ್ಲಿಯೇ ಇದರ ರಚನೆ. ಇದುವೇ ಶ್ರೀ ಅಪ್ರಮೇಯಸ್ವಾಮಿ ದೇಗುಲ.ಬೆಂಗಳೂರು - ಮೈಸೂರು ಹೆದ್ದಾರಿಯಲ್ಲಿರುವ ಗೊಂಬೆನಾಡು ಚನ್ನಪಟ್ಟಣದಿಂದ ಮೈಸೂರು ಕಡೆಗೆ ಸುಮಾರು 3 ಕಿ.ಮೀ ಕ್ರಮಿಸಿದಾಗ ಸಿಗುವ ದೊಡ್ಡಮಳೂರು ಗ್ರಾಮದಲ್ಲಿದೆ ಈ ಅಭೂತಪೂರ್ವ ದೇವಸ್ಥಾನ. ನಾಳೆ ಬ್ರಹ್ಮೋತ್ಸವ ಈ ದೇಗುಲದ ವಿಶೇಷತೆ.ಶಿವನ ಸಹಸ್ರ ನಾಮದಲ್ಲಿ `ಅಪ್ರಮೇಯ'ವೂ ಒಂದು. ಈ ದೇವಾಲಯವನ್ನು ಕೇಂದ್ರವನ್ನಾಗಿಸಿ ಕೈಲಾಸೇಶ್ವರ, ಅರ್ಕೆಶ್ವರ, ಕಲ್ಲಿನಾಥೇಶ್ವರ, ಮಂಗಳೇಶ್ವರ ಎಂಬ ಶಿವ ದೇಗುಲಗಳು ಹಾಗೂ ಮಳೂರು ರಾಮದೇವರು, ಬೈರಾಪಟ್ಟಣದ ಜನಾರ್ದನ ಸ್ವಾಮಿ, ಕೂಡ್ಲೂರು ರಾಮದೇವರು, ನದಿನರಸಿಂಹ ಸ್ವಾಮಿ ದೇವಾಲಯಗಳೆಂಬ ವಿಷ್ಣು ದೇವಾಲಯಗಳು ನಾಲ್ಕು ದಿಕ್ಕುಗಳಲ್ಲೂ ನೆಲೆಗೊಂಡಿವೆ.ಹಿಂದೆ ಈ ಕ್ಷೇತ್ರವನ್ನು ತೆಂಕಣ, ಅಯೋಧ್ಯೆ, ಮಳೂರು, ಅಗ್ರಹಾರ, ದಕ್ಷಿಣ ಕಾಶಿ, ಮರಳೂರು ಎಂಬ ಹೆಸರಿನಿಂದ ಕರೆಯಲಾಗುತಿತ್ತು.ಚೋಳರ ದೊರೆ ರಾಜ ರಾಜ ಚೋಳನ ಕಾಲದಲ್ಲಿ ನಿರ್ಮಿಸಲಾದ 1600 ವರ್ಷ ಇತಿಹಾಸವುಳ್ಳ ಪ್ರಾಚೀನ ದೇಗುಲ ಇದು. ಇಲ್ಲಿನ ರಥೋತ್ಸವದಂದು ಸೂರ್ಯರಶ್ಮಿ ನೇರವಾಗಿ ವಿಗ್ರಹದ ಪಾದಗಳ ಮೇಲೆ ಬೀಳುವುದು ಇಲ್ಲಿನ ವಿಶೇಷ. ಮಕ್ಕಳಿಲ್ಲದವರು ತೊಟ್ಟಿಲಿನ ರೂಪದಲ್ಲಿ ಹರಕೆ ಹೊತ್ತು ಪೂಜೆ ಸಲ್ಲಿಸಿದರೆ ಮಕ್ಕಳಾಗುತ್ತದೆ ಎಂಬ ನಂಬಿಕೆ.ಇಲ್ಲಿನ ಅಂಬೆಗಾಲು ಕೃಷ್ಣನ ಮೂರ್ತಿ (ನವನೀತ ಕೃಷ್ಣ) ಪ್ರಮುಖ ಆಕರ್ಷಣೆ. ಪ್ರದಕ್ಷಿಣೆ ಪಥದಲ್ಲಿ ವಾಯುವ್ಯ ಭಾಗದಲ್ಲಿ ಗರುಡ ಪೀಠದ ಮೇಲೆ ವಿಗ್ರಹ ಪ್ರತಿಷ್ಠಾಪಿಸಲಾಗಿದೆ. ಕೈಯಲ್ಲಿ ಬೆಣ್ಣೆಯ ಉಂಡೆ ಹಿಡಿದು ಅಂಬೆಗಾಲಿಡುತ್ತಾ ಒಂದು ಕೈಯನ್ನು ನೆಲಕ್ಕೆ ಊರಿ, ಒಂದು ಕಾಲನ್ನು ಮೇಲಕ್ಕೆ ಎತ್ತಿ ಮುಂದೆ ಬರುತ್ತಿರುವ ಶಿಶುವಿನ ಭಂಗಿಯಲ್ಲಿ ಈ ವಿಗ್ರಹ ಕಂಡು ಬರುತ್ತಿದ್ದು, ನೋಡುಗರ ಕಣ್ಮನ ಸೆಳೆಯುತ್ತದೆ.ವಿಜ್ಞಾನೇಶ್ವರ ಎಂಬ ಮಹರ್ಷಿಗಳು ಹಿಂದೂ ನ್ಯಾಯಶಾಸ್ತ್ರದ ಮೀತಾಕ್ಷರ ಸಂಹಿತೆಯನ್ನು ಇಲ್ಲೇ ಬರೆದಿದ್ದಾರೆಂಬುದಕ್ಕೆ ಇಲ್ಲಿ ದೊರೆತ ಶಾಸನಗಳೇ ಆಧಾರ. ಈ ದೇವಾಲಯದಲ್ಲಿ ಪ್ರತಿ ವರ್ಷವೂ ಮೇಷ ರಾಶಿ ಹಸ್ತ ನಕ್ಷತ್ರದಂದು ಬ್ರಹ್ಮೋತ್ಸವ ನಡೆಯುತ್ತದೆ. ಅಂದು ಇಡೀ ಊರು ತಳಿರು ತೋರಣಗಳಿಂದ ಅಲಂಕಾರಗೊಂಡು ನವ ವಧುವಿನಂತೆ ಕಂಗೊಳಿಸುತ್ತದೆ.ಅಂಕುರರ್ಪಾಣ, (ಕಂಕಣ ಕಟ್ಟುವುದು), ಧ್ವಜಾರೋಹಣ, ಕಲ್ಯಾಣೋತ್ಸವ, ಧಾರಾ ಮಹೋತ್ಸವ, (ಮಾಂಗಲ್ಯ ಧಾರಣೆ), ವೈರಮುಡಿ ಉತ್ಸವ, ಪ್ರಹ್ಲಾದ ಪರಿಪಾಲನೋತ್ಸವ, ಕಳಸ ಆರಾಧನೆ, ಗಜೇಂದ್ರ ಮೋಕ್ಷ, ರಥೋತ್ಸವ ಹೀಗೆ 11 ದಿನಗಳ ಕಾಲ ಪ್ರತಿ ದಿನವೂ ವಿಶೇಷವಾದ ಪೂಜೆ ಮಾಡಲಾಗುತ್ತದೆ.ರಥೋತ್ಸವದಂದು ದೊಡ್ಡ ಮಳೂರಿನ ದಲಿತರು ತಾವು ಹರಕೆ ಹೊತ್ತ ಬಾವುಟಗಳನ್ನು ಮೆರವಣಿಗೆಯಲ್ಲಿ ತಂದು ದೇವರಿಗೆ ಒಪ್ಪಿಸಿದ ಮೇಲೆ ರಥ ಎಳೆಯಲಾಗುತ್ತದೆ. ಅಲ್ಲದೆ ಮಂಗಳವಾರ ಪೇಟೆಯ ಉಪ್ಪಾರ ಜನಾಂಗದವರು ರಥದ ಹಿಂಭಾಗದಿಂದ 35 ಅಡಿ ಎತ್ತರದ 6 ಗಾಲಿಯ ಬೃಹತ್ ರಥವನ್ನು ತಳ್ಳುವುದರ ಮೂಲಕ ಚಾಲನೆ ನೀಡುತ್ತಾರೆ.ಈ ಸುದಿನ ಸೂರ್ಯನ ರಶ್ಮಿ ಸ್ವಾಮಿಯ ಪಾದದ ಮೇಲೆ ಬೀಳುತ್ತದೆ.

 

ಪ್ರತಿಕ್ರಿಯಿಸಿ (+)