ಗುರುವಾರ , ಮಾರ್ಚ್ 4, 2021
29 °C

ಅಪ್ರಯೋಜಕ ಪ್ರಥಮ ಚಿಕಿತ್ಸೆ ಪೆಟ್ಟಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಪ್ರಯೋಜಕ ಪ್ರಥಮ ಚಿಕಿತ್ಸೆ ಪೆಟ್ಟಿಗೆ

ಬೆಂಗಳೂರು: ಬೆಳ್ಳಂಬೆಳಿಗ್ಗೆ ಹಿರಿಯ ಮಹಿಳೆಯೊಬ್ಬರು ಆಗಷ್ಟೇ ಬಸ್ಸು ಹತ್ತಿದ್ದರು. ದ್ವಿಚಕ್ರ ವಾಹನವೊಂದು ನುಗ್ಗಿ ಬಂದ ರಭಸಕ್ಕೆ ಬೆಚ್ಚಿದ ಬಸ್ ಚಾಲಕ ಏಕಾಏಕಿ ಬ್ರೇಕ್ ಹಾಕಿದ. ತಕ್ಷಣವೇ ಕುಸಿದು ಬಿದ್ದ ಮಹಿಳೆ ಹಲ್ಲು ಮುರಿದು ರಕ್ತಸ್ರಾವವಾಯಿತು.ಬೆದರಿದ ನಿರ್ವಾಹಕ ಇಲ್ಲೇ ಇಳಿದು ಹತ್ತಿರ ಇರೋ ಕ್ಲಿನಿಕ್‌ಗೆ ಹೋಗಮ್ಮ... ಎಂದು ಸಲಹೆ ನೀಡಿದರು. ಆದರೆ ಅಲ್ಲೇ ಇದ್ದ ಪ್ರಥಮ ಚಿಕಿತ್ಸಾ ಪೆಟ್ಟಿಗೆಯ ನೆರವಿನೊಂದಿಗೆ ಶುಶ್ರೂಷೆ ಮಾಡಲು ಮುಂದಾಗಲಿಲ್ಲ.

ಬಹುಶಃ ಆ ಪೆಟ್ಟಿಗೆಯಲ್ಲಿ ಏನು ಇಲ್ಲ ಎಂಬುದು ನಿರ್ವಾಹಕರಿಗೆ ತಿಳಿದಿದ್ದಿರಬೇಕು!ನಗರದಲ್ಲಿ ನಿತ್ಯ ಸುಮಾರು 45 ಲಕ್ಷಕ್ಕೂ ಹೆಚ್ಚು ಮಂದಿ ಬಿಎಂಟಿಸಿ ಬಸ್ಸಿನಲ್ಲಿ ಪ್ರಯಾಣಿಸುತ್ತಾರೆ. ಸಂಚಾರ ದಟ್ಟಣೆ ತೀವ್ರವಾಗಿರುವ ನಗರದಲ್ಲಿ ಸಣ್ಣಪುಟ್ಟ ಅಪಘಾತಗಳು ಸಂಭವಿಸುತ್ತಲೇ ಇರುತ್ತವೆ.ನಿತ್ಯದ ಕೆಲಸ ಕಾರ್ಯಗಳಿಗೆಂದು ಬಸ್‌ನಲ್ಲಿ ಸಂಚರಿಸುವಾಗ ಅಪಘಾತ ಸಂಭವಿಸಿದರೆ ಮುಂಜಾಗ್ರತಾ ಕ್ರಮವಾಗಿ ಕನಿಷ್ಠ ಪ್ರಥಮ ಚಿಕಿತ್ಸೆ ನೀಡುವ ಸೌಲಭ್ಯವು ಬಿಎಂಟಿಸಿ ಬಸ್ಸುಗಳಲ್ಲಿ ಇಲ್ಲ!ಬಿಎಂಟಿಸಿಯು ತನ್ನ ಕಾರ್ಯ ವೈಖರಿಗೆ ದೇಶದಲ್ಲಿ ಪ್ರಥಮ ಸ್ಥಾನ ಗಳಿಸಿದೆ ಎಂದು ಬೀಗುತ್ತಿದೆ. ಆದರೆ ಪ್ರಯಾಣಿಕರಿಗೆ ಅನುಕೂಲಕರ ವಾತಾವರಣವನ್ನು ನಿರ್ಮಿಸಲು `ಕಾಮನ್ ಮೊಬಿಲಿಟಿ ಕಾರ್ಡ್~, ಇಂಟರ್‌ನೆಟ್‌ನಂತಹ ನೂತನ ಯೋಜನೆಗಳನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ. ಆದರೆ ಪ್ರಯಾಣಿಕರ ಜೀವದ ಕುರಿತು ಕಾಳಜಿ ವಹಿಸುತ್ತಿಲ್ಲ ಎಂಬುದು ಇದರಿಂದ ವೇದ್ಯವಾಗುತ್ತದೆ.ಪೆಟ್ಟಿಗೆಯಲ್ಲಿ ಏನೇನಿರುತ್ತದೆ?:  ಯಾವುದೇ ಅವಘಡ ಸಂಭವಿಸಿದಾಗ ಗಾಯಗೊಂಡವರಿಗೆ ತಕ್ಷಣ ಶುಶ್ರೂಷೆ ನೀಡಲೆಂದು ಪ್ರಥಮ ಚಿಕಿತ್ಸೆ ಪೆಟ್ಟಿಗೆ ಇಡಲಾಗಿರುತ್ತದೆ. ಇದರಲ್ಲಿ ಹತ್ತಿ, ಡೆಟಾಲ್, ಟಿಂಚರ್, ಸಾಬೂನು, ಹತ್ತಿಬಟ್ಟೆ ಇರುತ್ತವೆ. ಆದರೆ ಇವು ಬಹುಪಾಲು ಬಸ್ಸುಗಳಲ್ಲಿ ನಾಮಕಾವಾಸ್ಥೆಗೆ ಮಾತ್ರ ಇವೆ.ಅನೇಕ ಸಂದರ್ಭಗಳಲ್ಲಿ ಈ ಪೆಟ್ಟಿಗೆಗಳಲ್ಲಿ ಅಗತ್ಯ ವಸ್ತುಗಳು ಇರುವುದಿಲ್ಲ. ಇನ್ನೂ ಕೆಲವೆಡೆ ಪ್ರಥಮ ಚಿಕಿತ್ಸಾ ಪೆಟ್ಟಿಗೆಗಳು ಸಲಹಾ ಪೆಟ್ಟಿಗೆಯಾಗಿ ಮಾರ್ಪಾಡಾಗಿವೆ. ಅಲ್ಲದೇ ಚಾಲಕ ಮತ್ತು ನಿರ್ವಾಹಕರೇ ಪೆಟ್ಟಿಗೆಯನ್ನು ಅಕ್ರಮವಾಗಿ ಮನೆಗೆ ಕೊಂಡೊಯ್ಯ್‌ತ್ತಿದ್ದಾರೆ ಎಂಬ ಆರೋಪವೂ ಕೇಳಿ ಬರುತ್ತಿದೆ.ತಾರತಮ್ಯ: ಸಾಮಾನ್ಯ ಜನರು ಪ್ರಯಾಣಿಸುವ ಬಸ್ಸುಗಳಲ್ಲಿ ಸೂಕ್ತ ಭದ್ರತೆಯಿಲ್ಲದಿರುವ ಮರದ ಪೆಟ್ಟಿಗೆಗಳಿದ್ದರೆ, ದುಬಾರಿ ಹಣ ತೆತ್ತು ಪ್ರಯಾಣಿಸುವ ವೋಲ್ವೊ (ವಜ್ರ) ಬಸ್ಸುಗಳಲ್ಲಿ ಪ್ರಥಮ ಚಿಕಿತ್ಸಾ ಪೆಟ್ಟಿಗೆಗೆ ಸೂಕ್ತ ಭದ್ರತೆ ಒದಗಿಸಲಾಗಿದೆ. ಒಡೆದುಹೋದ ಕೆಲವು ಚಿಕಿತ್ಸಾ ಪೆಟ್ಟಿಗೆಗಳಲ್ಲಿ ಪೂಜಾ ಸಾಮಗ್ರಿಗಳು, ಚಾಲಕನ ವೈಯಕ್ತಿಕ ದಾಖಲೆಯ ವಸ್ತುಗಳೇ ತುಂಬಿರುತ್ತವೆ.ಅಸಮರ್ಪಕ ಬಳಕೆ

ಪ್ರಥಮ ಚಿಕಿತ್ಸಾ ಪೆಟ್ಟಿಗೆಯಲ್ಲಿ ಇರಬೇಕಾದ ಅಗತ್ಯ ವಸ್ತುಗಳನ್ನು ವರ್ಷಕ್ಕೊಮ್ಮೆ ಪೂರೈಸಲಾಗುತ್ತದೆ. ತುರ್ತು ಸಂದರ್ಭಗಳಲ್ಲಿ ಈ ವಸ್ತುಗಳ ಬಳಕೆ ಬಗ್ಗೆ ಚಾಲಕರು, ನಿರ್ವಾಹಕರಿಗೆ ಸೂಕ್ತ ತರಬೇತಿ ನೀಡುವ ವ್ಯವಸ್ಥೆಯಿಲ್ಲ.ಈ ಬಗ್ಗೆ ಬಸ್ ಚಾಲಕ ಅಶೋಕ ಗೌಡ, `ಬಸ್ಸುಗಳಿಗೆ ಯಾವುದೇ ಭದ್ರತೆಯಿಲ್ಲದೇ ಇರುವುದರಿಂದ ಮಧ್ಯಾಹ್ನ ಊಟದ ಸಮಯದಲ್ಲಿ ಕೆಲವು ಕಿಡಿಗೇಡಿಗಳು ಪ್ರಥಮ ಚಿಕಿತ್ಸಾ ಪೆಟ್ಟಿಗೆಯನ್ನು ಒಡೆದು ಅದರಲ್ಲಿರುವ ಸಾಮಗ್ರಿಯನ್ನೇ ಕಳವು ಮಾಡುತ್ತಾರೆ. ಪದೇ ಪದೇ ಈ ರೀತಿ ನಡೆಯುವುದರಿಂದ ಅದರಲ್ಲಿ ವಸ್ತುಗಳನ್ನು ಇಡಲು ಸಾಧ್ಯವಾಗುತ್ತಿಲ್ಲ~  ಎಂದು ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.