ಭಾನುವಾರ, ಮೇ 9, 2021
20 °C

ಅಪ್ಲಿಕೇಷನ್ ಬಳಕೆಯ ಸುತ್ತ ಮುತ್ತ

ನ್ಯೂಯಾರ್ಕ್ ಟೈಮ್ಸ Updated:

ಅಕ್ಷರ ಗಾತ್ರ : | |

ಸ್ಮಾರ್ಟ್‌ಫೋನ್‌ಗಳು ಆಧುನಿಕ ಜೀವನ ಶೈಲಿಯ ಅನಿವಾರ್ಯ ಸರಕುಗಳಾಗಿ ಮಾರ್ಪ  ಟ್ಟಿವೆ. ನಗರದಲ್ಲಿ ವಿಳಾಸ ಹುಡುಕಲು, ಒಳ್ಳೆಯ ರೆಸ್ಟೋರೆಂಟ್ ಎಲ್ಲಿದೆ ಎಂದು ತಿಳಿಯಲು, ಸ್ನೇಹಿತರನ್ನು ಭೇಟಿಯಾಗಲು, ಒಂದು ಕಪ್ ಕಾಫಿ ಹೀರಲು, ವಾಣಿಜ್ಯ ವ್ಯವಹಾರಗಳ  ಮುನ್ನೋಟ ಸಿದ್ಧಪಡಿಸಲು ಹೀಗೆ ಬಹು ಬಗೆಯ ಅಗತ್ಯತೆಗಳಿಗೆ ಸ್ಮಾರ್ಟ್‌ಫೋನ್‌ಗಳು ಬಳಕೆಯಾಗುತ್ತಿವೆ.ಫೇಸ್‌ಬುಕ್, ಟ್ವಿಟ್ಟರ್ ಸೇರಿದಂತೆ ಸಾಮಾಜಿಕ ಸಂವಹನ ತಾಣಗಳು ಪ್ರವರ್ಧಮಾನಕ್ಕೆ ಬಂದ ನಂತರ ಸ್ಮಾರ್ಟ್‌ಫೋನ್ ಬಳಸುವ ವಿಧಾನವೇ ಬದಲಾಗಿ ಹೋಗಿದೆ. ಸ್ಮಾರ್ಟ್‌ಫೋನ್‌ಗಳ ಗೆಲುವಿನ ನಗುವಿನಲ್ಲಿ  ಅಪ್ಲಿಕೇಷನ್ಸ್‌ಗಳ ಕೊಡುಗೆಯನ್ನೂ ಅಲ್ಲಗಳೆಯಲು ಸಾಧ್ಯವಿಲ್ಲ.ಮೈಕಲ್ ನೋರ್ಗನ್ ಮತ್ತು ಕೆವಿನ್ ಸ್ಟೀಫನ್ಸ್ ಎಂಬ ಇಬ್ಬರು ಕಂಪ್ಯೂಟರ್ ತಜ್ಞರು `ಕಿಸ್‌ಮೆಟ್~ (Kismet)   ಎನ್ನುವ ಅಪ್ಲಿಕೇಷನ್ಸ್ ಅಭಿವೃದ್ಧಿಪಡಿಸಿದ್ದಾರೆ. ಸ್ಮಾರ್ಟ್‌ಫೋನ್ ಮೂಲಕ ನಿಗದಿತ ಭೌಗೋಳಿಕ ವ್ಯಾಪ್ತಿಯಲ್ಲಿರುವ ಸ್ನೇಹಿತರನ್ನು ಏಕಕಾಲದಲ್ಲಿ ಸಂಪರ್ಕಿಸಬಹುದಾದ ಅಪ್ಲಿಕೇಷನ್ ಇದು.ಸಾಮಾಜಿಕ ಸಂವಹನ ತಾಣಗಳನ್ನು ಯುವಸಮೂಹ ತಮ್ಮ ಆತ್ಮದೊಳಗೆ ಸೇರಿಸಿಕೊಂಡಿರುವ ಈ ಹೊತ್ತಿನಲ್ಲಿ ನೋರ್ಗನ್ ಮತ್ತು ಸೀಫನ್ಸ್ ಅಭಿವೃದ್ಧಿ ಪಡಿಸಿರುವ ಈ ಹೊಸ ಅಪ್ಲಿಕೇಷನ್ ಹೊಸತೊಂದು ಆನ್‌ಲೈನ್ ವೇದಿಕೆಯನ್ನೇ ಸೃಷ್ಟಿಸಬಹುದು ಎನ್ನುತ್ತಾರೆ ಮಾರುಕಟ್ಟೆ ತಜ್ಞರು.ಮೊಬೈಲ್ ಕಂಪ್ಯೂಟಿಂಗ್ ಜನಪ್ರಿಯತೆಯಿಂದ ಕಿಸ್‌ಮೆಟ್, ಗ್ಲಾನ್ಸಿ, ಹೈಲೈಟ್, ಬ್ಯಾನ್.ಜೊ, ಮೀಟರರ್, ಇಂಟ್ರೊ, ಕ್ವಾರಿಸ್, ಮಿಂಗಲ್‌ನಂತಹ ಅಪ್ಲಿಕೇಷನ್ಸ್‌ಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಈ ಅಪ್ಲಿಕೇಷನ್ಸ್‌ಗಳ ಮೂಲಕ ಸ್ನೇಹಿತರನ್ನು ಹುಡುಕಬಹುದು, ಸ್ನೇಹಿತರ ಸ್ನೇಹಿತರನ್ನೂ ಸಂಪರ್ಕಿಸಬಹುದು.

 

ಯಾರು ಎಲ್ಲಿದ್ದಾರೆ ಅಥವಾ ಎಲ್ಲಿ ಸಿಗುತ್ತಾರೆ ಎನ್ನುವುದನ್ನು  ಆ ಕ್ಷಣಕ್ಕೇ ತಿಳಿಯಬಹುದು. ಯುವ ಜನತೆಗೆ ಬೇಕಾಗಿರುವುದು ಇದೇ ಅಲ್ಲವೇ ಎಂದು ಪ್ರಶ್ನಿಸುತ್ತಾರೆ ನೋರ್ಗನ್.ಫೇಸ್‌ಬುಕ್, ಟ್ವಿಟ್ಟರ್, ಲಿಂಕ್ಡ್ ಇನ್‌ನಂತಹ ತಾಣಗಳು ಆರಂಭವಾದ ಹೊತ್ತಿನಲ್ಲಿ, ಅನೇಕರು ಇದನ್ನು `ವ್ಯಸನ~ ಎಂದು ಕರೆದರು; ನಾವು ಯಾಕೆ ಈ ಚಟಕ್ಕೆ ದಾಸರಾಗಬೇಕು ಎಂದು ವಿರೋಧಿಸಿದರು. ಆದರೆ, ಈಗ ಈ ವ್ಯಾಖ್ಯಾನವೇ ಬದಲಾಗಿ ಹೋಗಿದೆ ಎನ್ನುತ್ತಾರೆ `ಹೈಲೈಟ್~ ಎಂಬ ಅಪ್ಲಿಕೇಷನ್ ಸೃಷ್ಟಿಕರ್ತ ಪೌಲ್ ಡೇವಿಡ್‌ಸನ್.ಸ್ನೇಹಿತರನ್ನು ಪರಸ್ಪರ ಸಂಪರ್ಕದಲ್ಲಿರುವಂತೆ ಮಾಡುವ ಯಾವುದೇ ಹೊಸ ತಂತ್ರಜ್ಞಾನ ಬಂದರೂ ಅದನ್ನು ಅಪ್ಪಿಕೊಳ್ಳುವವರ ಸಂಖ್ಯೆ ದೊಡ್ಡದಿದೆ ಎನ್ನುವ ವಿವರಣೆ ಅವರದು.   

ಉದಾಹರಣೆಗೆ `ಮಿಂಗಲ್~ ಎನ್ನುವ ಅಪ್ಲಿಕೇಷನ್ ಅನ್ನೇ ತೆಗೆದುಕೊಳ್ಳಿ.ಆ್ಯಂಡಿ ಕಿಮ್ ಇದರ ಸೃಷ್ಟಿಕರ್ತ. ಕಳೆದ ವರ್ಷ ಮಾರುಕಟ್ಟೆಗೆ ಬಿಡುಗಡೆಯಾದ ಈ ಅಪ್ಲಿಕೇಷನ್ ಇದುವರೆಗೆ 50 ಸಾವಿರ ಬಾರಿ ಡೌನ್‌ಲೋಡ್ ಆಗಿದೆ.  ಆದರೆ, `ಫೋರ್ ಸ್ಕ್ವೇರ್~ನಂತಹ ಕ್ಷೇತ್ರಾಧಾರಿತ ಅಪ್ಲಿಕೇಷನ್ ಬಳಕೆದಾರರ ಸಂಖ್ಯೆಗೆ ಹೋಲಿಸಿದರೆ ( 1.5 ಕೋಟಿ) ಮಿಂಗಲ್ ಸಂಖ್ಯೆ ತುಂಬಾ ಕಡಿಮೆ. ಫೋರ್‌ಸ್ಕ್ವೇರ್‌ನ `ಚೆಕ್-ಇನ್~ ಸೌಲಭ್ಯ ಈಗಾಗಲೇ ಸಾಕಷ್ಟು ಜನಪ್ರಿಯವಾಗಿದೆ.ಟ್ವಿಟ್ಟರ್‌ನಂತಹ ಕಿರು ಬ್ಲಾಗಿಂಗ್ ತಾಣಗಳಲ್ಲಿ ಸ್ನೇಹಿತರು ಏಕಕಾಲದಲ್ಲಿ ಪರಸ್ಪರ ಮಾಹಿತಿ ವಿನಿಮಯ ಮಾಡಿಕೊಳ್ಳಲು `ಗ್ರೂಪ್ ಚಾಟ್~ `ಗ್ರೂಪ್-ಮಿ~ ನಂತಹ ಅಪ್ಲಿಕೇಷನ್‌ಗಳು ಅಭಿವೃದ್ಧಿಯಾಗಿವೆ. ಆರಂಭದಲ್ಲಿ ಇವು ಕೂಡ ಇತರೆ ಅಪ್ಲಿಕೇಷನ್‌ಗಳಂತೆಯೇ  ಇದೊಂದು `ಗೀಳು~ ಅಥವಾ `ಖಯಾಲಿ~ ಎನ್ನುವ ಅಪವಾದ ಎದುರಿಸಬೇಕಾಯಿತು.

 

ಆದರೆ, ಈಗ ಇವೇ ಸಾಮಾಜಿಕ ಸಂವಹನ ತಾಣಗಳ ಅಸ್ತಿತ್ವ ನಿರ್ಧರಿಸುತ್ತಿವೆ ಎನ್ನುತ್ತಾರೆ ಕಿಮ್.  ಈಗೀಗ ಸ್ಮಾರ್ಟ್‌ಫೋನ್ ಮೂಲಕ ಸ್ನೇಹಿತರನ್ನು ಹುಡುಕಿ ಕೊಡುವ ಹೊಸ ತಲೆಮಾರಿನ ಅಪ್ಲಿಕೇಷನ್‌ಗಳು ಅಭಿವೃದ್ಧಿಯಾಗಿವೆ. ಉದಾಹರಣೆಗೆ ನೀವು ಯಾವುದೋ ಒಂದು ಊರಿಗೆ ಬಂದಿದ್ದೀರಿ ಎಂದಿಟ್ಟುಕೊಳ್ಳಿ. ಈ ಊರಿನಲ್ಲಿ ನಿಮ್ಮ ಫೇಸ್‌ಬುಕ್ ಸ್ನೇಹಿತ/ತೆರೊಬ್ಬರು ಇದ್ದಾರೆ ಎಂದಿಟ್ಟು ಕೊಳ್ಳಿ.ಅಪ್ಲಿಕೇಷನ್ ತಾನಾಗಿಯೇ ಆ ಸ್ನೇಹಿತ/ತೆ ಯಾವ ಭೌಗೋಳಿಕ ವ್ಯಾಪ್ತಿಯಲ್ಲಿ ಇದ್ದಾನೆ/ಳೆ ಎನ್ನುವುದನ್ನು ಹುಡುಕಿ ಕೊಡುತ್ತದೆ. ಅಷ್ಟೇ ಅಲ್ಲ ನಿಮ್ಮ ಮೊಬೈಲ್ ಟವರ್ ವ್ಯಾಪ್ತಿಗೆ ಬರುವ ಎಲ್ಲ ಸ್ನೇಹಿತರನ್ನೂ ಈ ಅಪ್ಲಿಕೇಷನ್ ಬಳಸಿ ಸಂಪರ್ಕಿಸಬಹುದು. ಮನುಷ್ಯನ ಆರನೆಯ ಇಂದ್ರೀಯದ ತರಹ ಈ ಅಪ್ಲಿಕೇಷನ್ ಕಾರ್ಯನಿರ್ವಹಿಸುತ್ತದೆ ಎನ್ನುತ್ತಾರೆ ನೋರ್ಗನ್.`ಹೈಲೈಟ್~ನಂತ ಅಪ್ಲಿಕೇಷನ್‌ಗಳು ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿದ್ದರೆ, ನೀವು ಸ್ನೇಹಿತರನ್ನು ಭೇಟಿಯಾದ ದಿನ, ಅಂದು ನಡೆದ ಹರಟೆ, ಚಿತ್ರ, ಇತ್ಯಾದಿಗಳನ್ನು `ಬುಕ್ ಮಾರ್ಕ್~ ಮಾಡಿ ಇಟ್ಟುಕೊಳ್ಳಬಹುದು. ಮುಂದೆ  ಎರಡು ವರ್ಷಗಳ ನಂತರ ಅದೇ ಸ್ಥಳದಲ್ಲಿ ಭೇಟಿಯಾಗಲು ಸಮಯ ನಿಗದಿಪಡಿಸಿಕೊಳ್ಳಬಹುದು. ಇವೆಲ್ಲಾ ಹೊಸ ತಲೆಮಾರಿಗೆ ತಕ್ಕ ಹಾಗೆ ಸೃಷ್ಟಿಯಾಗುತ್ತಿರುವ `ವೆಬ್ ವಾಸ್ತು ವಿನ್ಯಾಸ~ ಎನ್ನುತ್ತಾರೆ ಡೇವಿಡ್‌ಸನ್.`ಈ ಎಲ್ಲ ಸೇವೆಗಳನ್ನು ಬಳಸುವ ಮೂಲಕ ಇಂಟರ್‌ನೆಟ್ ಬಳಕೆದಾರ ಅಂತರ್ಜಾಲದ ಬಯಲಿನಲ್ಲಿ ಮತ್ತಷ್ಟು ಬೆತ್ತಲಾಗುತ್ತಾ ಹೋಗುತ್ತಾನೆ. ಈ ರೀತಿ ಸಂತೆಯಲ್ಲಿ ಬಟ್ಟೆ ಬಿಚ್ಚಿ ನಿಲ್ಲುವ ಅಗತ್ಯ ಏನಿದೆ ಎಂದು ಪ್ರಶ್ನಿಸುತ್ತಾರೆ ಸಾಮಾಜಿಕ ಸಂವಹನ ತಾಣಗಳ ವಿರೋಧಿಗಳು. ಆದರೆ, ಅಪ್ಲಿಕೇಷನ್‌ಗಳನ್ನು ಅಭಿವೃದ್ಧಿಪಡಿಸುವವರ ವಾದವೇ ಬೇರೆ.ಇದೆಲ್ಲವೂ ಆಧುನಿಕ ಜೀವನ ಶೈಲಿಗೆ ಅಗತ್ಯವಿದೆ. ನಿಮಗೆ ಬೇಕ್ದ್ದಿದನ್ನು ಮಾತ್ರ ಬಳಸಿ ಎನ್ನುವ  ಸಮರ್ಥನೆ ಅವರದು. ಕಾಫಿ ಶಾಪ್‌ಗೆ ಹೋಗುವ ಪ್ರತಿಯೊಬ್ಬರೂ ಅಲ್ಲಿ ಸ್ನೇಹಿತರು ಯಾರಾದರೂ ಸಿಗುತ್ತಾರೆಯೇ ಎಂದು ತಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಹುಡುಕುತ್ತಿರುತ್ತಾರೆ.ಇದು ಇತ್ತೀಚಿನ ದಿನಗಳಲ್ಲಿ ಕಂಡುಬರುತ್ತಿರುವ ಸಹಜ ಪ್ರವೃತ್ತಿ ಎನ್ನುವ ನೋರ್ಗನ್ ತಮ್ಮ `ಕಿಸ್‌ಮೆಟ್~ ಅಪ್ಲಿಕೇಷನ್‌ಗಳು ಸಾಮಾಜಿಕ ಸಂವಹನ ತಾಣಗಳಲ್ಲಿ ಹೊಸತೊಂದು ಮುನ್ನುಡಿ ಬರೆಯಲಿದೆ ಎನ್ನುವ ವಿಶ್ವಾಸ ವ್ಯಕ್ತಪಡಿಸುತ್ತಾರೆ.ಉಳಿದಂತೆ ಇಲ್ಲಿ ಕೂಡ ಭದ್ರತೆಯದ್ದೇ ದೊಡ್ಡ ಸಮಸ್ಯೆ. ಕೆಲವೊಂದು ಅಪ್ಲಿಕೇಷನ್‌ಗಳು ಬಳಕೆದಾರನ ಸಂಪೂರ್ಣ ಖಾಸಗಿ ಮಾಹಿತಿಯನ್ನು ಜಗಜ್ಜಾಹೀರು ಮಾಡುತ್ತವೆ.ವಿಶೇಷವಾಗಿ ಸ್ಮಾರ್ಟ್‌ಫೋನ್ ಮೂಲಕ ಕ್ಷೇತ್ರಾಧಾರಿತ  ಸೇವೆಗಳನ್ನು ಪಡೆಯುವಾಗ, ದತ್ತಾಂಶಗಳನ್ನು ಹಂಚಿಕೊಳ್ಳುವಾಗ, ಡೇಟಿಂಗ್ ಅಪ್ಲಿಕೇಷನ್‌ಗಳನ್ನು ಬಳಸುವಾಗ ತುಂಬಾ ಎಚ್ಚರಿಕೆ ವಹಿಸಬೇಕು ಎನ್ನುತ್ತಾರೆ `ಗ್ಲಾನ್ಸ್~ ಎಂಬ ಅಪ್ಲಿಕೇಷನ್ ಸೃಷ್ಟಿಕರ್ತೆ ಅಂಡೆರಾ ವಕಾರಿ.ವಿಶೇಷವೆಂದರೆ, ಈ ಮೇಲಿನ ಹೆಚ್ಚಿನ ಅಪ್ಲಿಕೇಷನ್‌ಗಳು ಆಂಡ್ರಾಯ್ಡ ಮತ್ತು ಐಫೋನ್ ಬಳಕೆದಾರರಿಗೆ ಉಚಿತವಾಗಿ ಲಭ್ಯ ಇವೆ.  ಆದರೆ, ಬಳಸುವಾಗ ಮಾತ್ರ ಎಚ್ಚರಿಕೆ ವಹಿಸಬೇಕು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.