ಶನಿವಾರ, ಏಪ್ರಿಲ್ 10, 2021
32 °C

ಅಫ್ಜಲ್ ಗುರು ಕ್ಷಮಾದಾನ: ಪ್ರತಿಕ್ರಿಯಿಸಲು ಮುಖರ್ಜಿ ನಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಐಎಎನ್‌ಎಸ್):  2001ರಲ್ಲಿ ಸಂಸತ್ತಿನ ಮೇಲೆ ನಡೆದ ದಾಳಿ ಪ್ರಕರಣದಲ್ಲಿ ಮರಣದಂಡನೆ ಶಿಕ್ಷೆ ವಿಧಿಸಲಾಗಿರುವ ಉಗ್ರ ಅಫ್ಜಲ್ ಗುರು ಕ್ಷಮಾದಾನ ಅರ್ಜಿಯ ಕುರಿತು ಪ್ರತಿಕ್ರಿಯಿಸಲು ಪ್ರಣವ್ ಮುಖರ್ಜಿ ನಿರಾಕರಿಸಿದ್ದಾರೆ.ಅಧಿಕಾರ ಸ್ವೀಕರಿಸಿ, ಆ ಅರ್ಜಿಯನ್ನು ಪರಿಶೀಲಿಸದ ಹೊರತೂ ಆ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ ಎಂದು ಮುಖರ್ಜಿ `ಸಿಎನ್‌ಎನ್-ಐಬಿಎನ್~ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಸ್ಪಷ್ಟಪಡಿಸಿದ್ದಾರೆ.ಅಫ್ಜಲ್ ಗುರು ಕ್ಷಮಾದಾನ ಅರ್ಜಿ ಇತ್ಯರ್ಥಗೊಳಿಸುವುದು ಹೊಸ ರಾಷ್ಟ್ರಪತಿ ಮುಂದಿರುವ ಸವಾಲು ಎಂದೇ ಪರಿಗಣಿಸಲಾಗುತ್ತಿದೆ. ರಾಷ್ಟ್ರಪತಿ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟದ ನಿರ್ಧಾರಕ್ಕೆ ಹೊರತಾಗಿ ಪ್ರಣವ್ ಅವರನ್ನು ಬೆಂಬಲಿಸಿರುವ ಶಿವಸೇನೆ ಈಗ ಈ ವಿಚಾರ ಎತ್ತಿದೆ.`ನಿಮ್ಮಿಂದ ನಮಗೆ ಅನೇಕ ನಿರೀಕ್ಷೆಗಳಿವೆ. ಅಫ್ಜಲ್ ಗುರು ಕ್ಷಮಾದಾನ ಅರ್ಜಿಯನ್ನು ತಿರಸ್ಕರಿಸುವ ಮೂಲಕ ರಾಷ್ಟ್ರಪತಿಯಾಗಿ ನಿಮ್ಮ ವೃತ್ತಿಜೀವನ ಆರಂಭಿಸಬೇಕು~ ಎಂದು ಶಿವಸೇನೆಯ ಮುಖ್ಯಸ್ಥ ಬಾಳ ಠಾಕ್ರೆ ಪಕ್ಷದ ಮುಖವಾಣಿ `ಸಾಮ್ನಾ~ದಲ್ಲಿ ಹೇಳಿದ್ದಾರೆ.ಪುರಸ್ಕಾರ: `ಸಿಎನ್‌ಎನ್-ಐಬಿಎನ್~ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ತಮಗೆ ಮತ ನೀಡಿದವರಿಗೆ ಕೃತಜ್ಞತೆ ಹೇಳಿದ ಪ್ರಣವ್ ಅವರು, `ನಮ್ಮ ಪಕ್ಷಕ್ಕೆ ಸೇರದವರೂ ಸಹ ನನಗೆ ಮತ ನೀಡಿದ್ದಾರೆ. ಸಾಮಾನ್ಯವಾಗಿ ಹಾಗಾಗುವುದಿಲ್ಲ. ನನ್ನ ದೀರ್ಘ ಕಾಲದ ಸಾರ್ವಜನಿಕ ಬದುಕಿಗೆ ಸಂದ ಪುರಸ್ಕಾರ ಇದು ಎಂದು ಪರಿಗಣಿಸುತ್ತೇನೆ~ ಎಂದಿದ್ದಾರೆ.ದೇಶದ ಅನುಭವಿ ಹಾಗೂ ಚಾಣಾಕ್ಷ ರಾಜಕಾರಣಿಯಾಗಿರುವ ಮುಖರ್ಜಿ, ರಾಜಕೀಯ ಪಕ್ಷಗಳ ನಡುವಿನ ದ್ವೇಷ ತಮಗೆ ನೋವು ನೀಡುವ ಸಂಗತಿಯಾಗಿದೆ ಎಂದು ಹೇಳಿದ್ದಾರೆ.ತಮ್ಮ ಹುಟ್ಟೂರು ಮಿರಟಿಯಿಂದ ರಾಷ್ಟ್ರಪತಿ ಭವನದವರೆಗಿನ ಹಾದಿ ದೀರ್ಘವಾಗಿತ್ತು ಎಂದು ಹೇಳಿದ ಅವರು, `ಬಾಲ್ಯದಲ್ಲಿ ನಾನು ತುಂಟನಾಗಿದ್ದೆ. ಯಾವಾಗಲೂ ಕಷ್ಟದಲ್ಲಿ ಸಿಲುಕಿಕೊಳ್ಳುತ್ತಿದೆ~ ಎಂದು ಸ್ಮರಿಸಿದ್ದಾರೆ.

ಕಾಂಗ್ರೆಸ್ ಜತೆಗಿನ ನಂಟು ಕಡಿದುಕೊಳ್ಳುವುದಾಗಿ ಸಂದರ್ಶನದಲ್ಲಿ ಹೇಳಿರುವ ಪ್ರಣವ್, ಎಲ್ಲರಿಗಾಗಿ ಕೆಲಸ ಮಾಡುವುದಾಗಿ ಹೇಳಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.