ಶುಕ್ರವಾರ, ಮೇ 27, 2022
30 °C

ಅಬಕಾರಿ ಕಚೇರಿ ಮೇಲೆ ಲೋಕಾಯುಕ್ತ ದಾಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಳ್ಳಾರಿ: ನಗರದಲ್ಲಿರುವ ಅಬಕಾರಿ ಇಲಾಖೆಯ ಪ್ರಮುಖ ಕಚೇರಿಗಳ ಮೇಲೆ ಬುಧವಾರ ಲೋಕಾಯುಕ್ತ ಸಿಬ್ಬಂದಿ ದಿಢೀರ್ ದಾಳಿ ನಡೆಸಿ, ಕಡತಗಳನ್ನು ಪರಿಶೀಲಿಸಿದರು.

ಸ್ಥಳೀಯ ಮೋತಿ ವೃತ್ತದ ಬಳಿಯಿರುವ ಲಾಲ್ ಬಹದ್ದೂರ್ ಶಾಸ್ತ್ರಿ ವಾಣಿಜ್ಯ ಸಂಕೀರ್ಣದಲ್ಲಿನ ಅಬಕಾರಿ ಆಯುಕ್ತರು, ಇನ್‌ಸ್ಪೆಕ್ಟರ್ ಹಾಗೂ ಇತರ ಅಧಿಕಾರಿಗಳ ಕಚೇರಿಗಳ ಮೇಲೆ ಮಧ್ಯಾಹ್ನ ಲೋಕಾಯುಕ್ತ ಡಿವೈಎಸ್‌ಪಿ ದೇಸಾಯಿ ನೇತೃತ್ವದಲ್ಲಿ ದಾಳಿ ನಡೆಸಿ, ಕಡತಗಳ ನಿರ್ವಹಣೆ ಕುರಿತು ಮೂರು ಗಂಟೆಗೂ ಅಧಿಕ ಕಾಲ ಕೂಲಂಕಷವಾಗಿ ಪರಿಶೀಲಿಸಲಾಯಿತು.

ದಾಳಿಯ ವೇಳೆ ಬಹುತೇಕ ಅಧಿಕಾರಿಗಳು ಕಚೇರಿಯಲ್ಲಿರಲಿಲ್ಲ. ಉಪಸ್ಥಿತರಿದ್ದ ಕೆಲವೇ ಕೆಲವು ಸಿಬ್ಬಂದಿಯನ್ನು ವಿಚಾರಣೆಗೆ ಒಳಪಡಿಸಿದ ಲೋಕಾಯುಕ್ತ ಸಿಬ್ಬಂದಿ, ಕಚೇರಿಯಲ್ಲಿರುವ ಬೀರುಗಳ ಬೀಗ ತೆಗೆದು ಎಲ್ಲ ಮಹತ್ವದ ದಾಖಲೆಗಳು, ಮದ್ಯ ಮಾರಾಟ ಪರವಾನಗಿ, ನವೀಕರಣ ಕುರಿತ ಕಡತಗಳನ್ನು ತಪಾಸಣೆ ನಡೆಸಿದರಲ್ಲದೆ, ಕೆಲವು ಮಹತ್ವದ ದಾಖಲೆಗಳನ್ನು ವಶಕ್ಕೆ ತೆಗೆದುಕೊಂಡರು.

ಅಬಕಾರಿ ಇಲಾಖೆಯ ಅಧಿಕಾರಿಗಳೂ ಮತ್ತು ಸಿಬ್ಬಂದಿ ಮದ್ಯ ಮಾರಾಟಗಾರರಿಂದ ಹಣ ವಸೂಲಿ ಮಾಡುತ್ತಿದ್ದಾರೆ ಎಂಬ ದೂರಿನ ಹಿನ್ನೆಲೆಯಲ್ಲಿ ಹಿರಿಯ ಅಧಿಕಾರಿಗಳ ಸೂಚನೆಯ ಮೇರೆಗೆ ರಾಜ್ಯದ ವಿವಿಧೆಡೆ  ದಾಳಿ ನಡೆಸಲಾಗಿದೆ ಎಂದು ಡಿವೈಎಸ್‌ಪಿ ಎಂ.ಎಂ. ದೇಸಾಯಿ ತಿಳಿಸಿದ್ದಾರೆ.

ಅಬಕಾರಿ ಇಲಾಖೆ ಸಿಬ್ಬಂದಿ ವಿವಿಧೆಡೆ ದಾಳಿ ನಡೆಸಿದಾಗ ವಶಕ್ಕೆ ತೆಗೆದುಕೊಂಡಿರುವ ಅಕ್ರಮ ಮದ್ಯದ ಮಾಹಿತಿ, ಮದ್ಯ ಮಾರಾಟ ಪರವಾನಗಿ  ನವೀಕರಣಕ್ಕೆ ನಿಗದಿ ಮಾಡಿದ ಶುಲ್ಕಕ್ಕೆ ನೀಡಲಾದ ಅಧಿಕೃತ ರಸೀದಿ, ಸರ್ಕಾರಕ್ಕೆ ಜಮಾ ಮಾಡಿದ ವಿವರಗಳ ಕುರಿತು ಪರಿಶೀಲಿಸಲಾಗಿದೆ. ಕೆಲವು ದಾಖಲೆಗಳಲ್ಲಿ ಮೇಲ್ನೋಟಕ್ಕೆ ವ್ಯತ್ಯಾಸಗಳು ಕಂಡುಬಂದಿವೆ ಎಂದು ಅವರು ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.