ಅಬಕಾರಿ ದಾಳಿಗೆ ಪ್ರತಿದಾಳಿ: ಕಂಗಾಲಾದ ಸಚಿವ

7

ಅಬಕಾರಿ ದಾಳಿಗೆ ಪ್ರತಿದಾಳಿ: ಕಂಗಾಲಾದ ಸಚಿವ

Published:
Updated:

ಬೆಳಗಾವಿ: ಕಳ್ಳಬಟ್ಟಿ ಅಡ್ಡೆಗಳ ಮೇಲೆ ದಾಳಿ ನಡೆಸಲು ತೆರಳಿದ್ದ ಸಚಿವ ರೇಣುಕಾಚಾರ್ಯ, ಅಬಕಾರಿ ಹಾಗೂ ಪೊಲೀಸರ ಮೇಲೆ ಕಳ್ಳಬಟ್ಟಿ ತಯಾರಕರು ಕಲ್ಲು ತೂರಾಟ ನಡೆಸಿ, 8 ಮಂದಿಯನ್ನು ಗಾಯಗೊಳಿಸಿದ ಘಟನೆ ಗುರುವಾರ ತಾಲ್ಲೂಕಿನ ಕರಾವಿ ಗುಡ್ಡ ಪ್ರದೇಶದಲ್ಲಿ ನಡೆದಿದೆ. ಕಳ್ಳಬಡ್ಡಿ ಅಡ್ಡೆಗಳ ಮೇಲೆ ದಾಳಿ ನಡೆಸಿದ ಸಚಿವರ ತಂಡ ಒಂದು ಗಂಟೆಗೂ ಹೆಚ್ಚು ಕಾಲ ತೀವ್ರ ಪ್ರತಿರೋಧ ಎದುರಿಸಬೇಕಾಯಿತು. ಕೆಲಕಾಲ ಆತಂಕದ ಪರಿಸ್ಥಿತಿ ಅಲ್ಲಿತ್ತು. ಘಟನೆಯ ವರದಿ ಮಾಡಲು ಹೋಗಿದ್ದ ಮಾಧ್ಯಮ ಪ್ರತಿನಿಧಿಗಳ ಮೇಲೂ ಕಲ್ಲು ತೂರಾಟ ನಡೆಯಿತು.ವೀರಾವೇಶದಿಂದ ತೆರಳಿದ್ದ ಅಬಕಾರಿ ಸಚಿವ ರೇಣುಕಾಚಾರ್ಯ ಮೇಲೆ ಏಕಾಏಕಿ ಕಲ್ಲು ತೂರಾಟ ನಡೆಸಿದ ಕಾರಣಕ್ಕೆ ಕೆಲಕಾಲ ಗೊಂದಲಕ್ಕೆ ಒಳಗಾದರು. ನಂತರ ದಾಳಿಕೋರರನ್ನು ಶಿಕ್ಷಿಸಲೇಬೇಕು ಎಂದು ಮುನ್ನುಗ್ಗಿದರು. ಕಳ್ಳಬಟ್ಟಿ ದಂಧೆಕೋರರು ನಿರಂತರವಾಗಿ ಕಲ್ಲು ತೂರಾಟ ನಡೆಸಿದ ಕಾರಣಕ್ಕೆ ಅನೇಕರು ಗಾಯಗೊಂಡರು. ಕೆಲ ಇನ್ಸ್‌ಸ್ಪೆಕ್ಟರ್‌ಗಳ ಬಳಿ ರಿವಾಲ್ವಾರ್ ಇತ್ತಾದರೂ ಗುಂಡು ಹಾರಿಸಲು ಆದೇಶವಿರಲಿಲ್ಲ. ಹೀಗಾಗಿ ಗೊಂದಲ ಉಂಟಾಯಿತು. ಅದೇ ವೇಳೆಗೆ ಕಲ್ಲು ತೂರಾಟ ತೀವ್ರಗೊಂಡಿತು. ಪರಿಸ್ಥಿತಿ ಕೈಮೀರುತ್ತಿರುವುದು ಕಂಡ ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದರು. ಅದೇ ವೇಳೆಗೆ ಹೆಚ್ಚಿನ ಪೊಲೀಸ್ ಬಲ ಕಳುಹಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠರಿಗೆ ಸಚಿವರು ಸೂಚಿಸಿದರು.ಗಾಯಗೊಂಡವರನ್ನು ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಯಿತು. ಜಿಲ್ಲಾ ಪೊಲೀಸ್ ವರಿಷ್ಠ ಸಂದೀಪ ಪಾಟೀಲ ಅವರು ಜಿಲ್ಲಾ ಸಶಸ್ತ್ರ ಪಡೆಯೊಂದಿಗೆ ಘಟನೆ ಸ್ಥಳಕ್ಕೆ ಆಗಮಿಸಿದರು. ಮತ್ತೆ ದಾಳಿಯನ್ನು ತೀವ್ರಗೊಳಿಸಿಲಾಯಿತು. ಕರಾವಿ ಗ್ರಾಮದ ಮನೆಗಳು ಸೇರಿದಂತೆ ವಿವಿಧೆಡೆ ದಾಳಿ ನಡೆಸಿದ ಅಧಿಕಾರಿಗಳು 10ಕ್ಕೂ ಹೆಚ್ಚು ಜನರನ್ನು ಬಂಧಿಸಿದರು. ದಾಳಿ ಸಂಜೆಯವರಗೂ ಮುಂದುವರಿದಿದ್ದು ಬಂಧಿತರ ಸಂಖ್ಯೆ ಹೆಚ್ಚಾಗುವ ಸಂಭವವಿದೆ. ಕಳ್ಳಬಟ್ಟಿಗೆ ಕೆಲವೆಡೆ ಬೆಂಕಿ ಹಚ್ಚಲಾಯಿತು. ಸುಮಾರು 6 ಲಕ್ಷ ರೂಪಾಯಿ ಮೌಲ್ಯದ ಮದ್ಯ ನಾಶಪಡಿಸಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry