ಅಬೆ: ಜಪಾನಿನಲ್ಲಿ ಬದಲಾವಣೆಯ ಗಾಳಿ

7

ಅಬೆ: ಜಪಾನಿನಲ್ಲಿ ಬದಲಾವಣೆಯ ಗಾಳಿ

Published:
Updated:
ಅಬೆ: ಜಪಾನಿನಲ್ಲಿ ಬದಲಾವಣೆಯ ಗಾಳಿ

ಅದೃಷ್ಟ ಎಂದರೆ ಇದೇ ಇರಬೇಕು. ಇತ್ತೀಚೆಗೆ ಜಪಾನ್ ಸಂಸದೀಯ ಚುನಾವಣೆಯಲ್ಲಿ ಲಿಬರಲ್ ಡೆಮಾಕ್ರಟಿಕ್ ಪಕ್ಷ (ಎಲ್‌ಡಿಪಿ) ಮೂರು ವರ್ಷಗಳ ನಂತರ ಮತ್ತೆ ಅಧಿಕಾರಕ್ಕೆ ಬಂದಿದೆ. ಆಡಳಿತ ಪಕ್ಷ ಜಪಾನ್ ಡೆಮಾಕ್ರಟಿಕ್ (ಡಿಪಿಜೆ) ತೀವ್ರ ಮುಖಭಂಗ ಅನುಭವಿಸಿದೆ. ಸೋಲಿನ ಹೊಣೆ ಹೊತ್ತು ಪ್ರಧಾನಿ ಯೊಶಿಹಿಕೊ ನೊಡಾ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಜನರ ಆಶೋತ್ತರಗಳಿಗೆ ಸ್ಪಂದಿಸಲು ಡಿಪಿಜೆ ವಿಫಲವಾಗ್ದ್ದಿದರಿಂದ ಎಲ್‌ಡಿಪಿ ಗೆಲುವಿನ ಹಾದಿ ಸುಗಮವಾಯಿತು. `ಜಡ್ಡುಗಟ್ಟಿದ ದೇಶದ ಆರ್ಥಿಕತೆಗೆ ಪುನಶ್ಚೇತನ ನೀಡಲಾಗುತ್ತದೆ. ಆಕ್ರಮಣಕಾರಿ ಚೀನಾದ ವಿರುದ್ಧ ಸಿಡಿದೇಳುತ್ತೇವೆ' ಎಂದು ಚುನಾವಣಾ ಪ್ರಣಾಳಿಕೆಯಲ್ಲಿ ಎಲ್‌ಡಿಪಿ ನೀಡಿದ್ದ ಭರವಸೆಗಳಿಗೆ ಮತದಾರರು ಮಾರು ಹೋದರು.`ಡಿಪಿಜೆಯ ಮೂರು ವರ್ಷಗಳ ಅಸಮರ್ಪಕ ಆಡಳಿತವನ್ನು ನಿರಾಕರಿಸಿ ಜನ ಮತ್ತೆ ನಮ್ಮ ಮೇಲೆ ನಂಬಿಕೆ ಇಟ್ಟಿದ್ದಾರೆ' ಎನ್ನುವುದು ಎಲ್‌ಡಿಪಿ ಮುಖಂಡ ಶಿಂಜೊ ಅಬೆ ಅವರು ಹೆಮ್ಮೆಯಿಂದ ಹೇಳುವ ಮಾತು. ಒಟ್ಟು 480 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ 294 ಸ್ಥಾನಗಳು ಎಲ್‌ಡಿಪಿ ಬುಟ್ಟಿಗೆ ಬಿದ್ದವು. ಕಳೆದ ಬಾರಿ ಪಕ್ಷವು ಕೇವಲ 119 ಸ್ಥಾನಗಳಿಗೆ ತೃಪ್ತಿಪಟ್ಟು ಕೊಂಡಿತ್ತು. ಐತಿಹಾಸಿಕ ಗೆಲುವಿನ ಮೂಲಕ ಅಬೆ ಈಗ ಜಪಾನ್‌ನ 14ನೇ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಕಳೆದ ಕೆಲವು ವರ್ಷಗಳ ರಾಜಕೀಯ ನಿಷ್ಕ್ರಿಯತೆಗೆ ಈಗಲಾದರೂ ತೆರೆ ಬೀಳುವುದೇ ಎನ್ನುವುದು ಈಗಿರುವ ಕುತೂಹಲ.ಈ ಮೊದಲು 2006ರಲ್ಲಿ ಪ್ರಧಾನಿಯಾಗಿದ್ದ ಅಬೆ ಅಲ್ಪಾವಧಿಯಲ್ಲಿಯೇ ಅಧಿಕಾರ ತ್ಯಜಿಸಿದ್ದರು. ಇದಕ್ಕೆ ಅವರ ಅನಾರೋಗ್ಯವೂ ಕಾರಣವಾಗಿತ್ತೆನ್ನಿ. ಆರ್ಥಿಕ ಪುನಶ್ಚೇತನದ ಭರವಸೆಯೊಂದಿಗೆ ಅವರು ಎರಡನೇ ಇನಿಂಗ್ಸ್ ಆರಂಭಿಸಿದ್ದಾರೆ. ಆರ್ಥಿಕ ಉತ್ತೇಜಕ ಮಸೂದೆಗಳನ್ನು ಅನುಮೋದಿ ಸುವ ಮೂಲಕ ಹಣದುಬ್ಬರ ವನ್ನು ನಿಯಂತ್ರಿಸಬೇಕೆನ್ನುವುದು ಅಬೆ ಸಂಕಲ್ಪ. ಅಲ್ಲದೇ ಯೆನ್ ಬೆಲೆ ತಗ್ಗಿಸಿ ದೇಶದ ರಫ್ತು ವಹಿವಾಟನ್ನು ಮತ್ತಷ್ಟು ಸ್ಪರ್ಧಾತ್ಮಕ ಗೊಳಿಸುವುದು ಕೂಡ ಅವರ ಉದ್ದೇಶವಾಗಿದೆ.ಅಬೆ ಕಟ್ಟಾ ರಾಷ್ಟ್ರೀಯವಾದಿ ಎಂದು ಗುರುತಿಸಿಕೊಂಡವರು. ಅಲ್ಲದೇ ಚೀನಾ ವಿಷಯದಲ್ಲಿ ಆಕ್ರಮಣಕಾರಿ ನಿಲುವು ತಾಳಿದವರು. ಆದರೂ, ಚೀನಾ ಹಾಗೂ ಅಮೆರಿಕ ಜತೆಗಿನ ಸಂಬಂಧ ಸುಧಾರಣೆಗೆ ಶ್ರಮಿಸುವುದಾಗಿ ಅವರು ಹೇಳಿಕೊಂಡಿದ್ದಾರೆ. ಎಲ್‌ಡಿಪಿ ಅಧಿಕಾರಕ್ಕೆ ಬಂದಿರುವುದರಿಂದ ಜಪಾನ್‌ನಲ್ಲಿ ಪರಮಾಣು ಇಂಧನ ಯೋಜನೆಗಳಿಗೆ ಮತ್ತೆ ಚಾಲನೆ ದೊರೆ ಯಲಿದೆ ಎನ್ನುವುದು ಗಮನಾರ್ಹ ವಿಷಯ. (ಈ ಹಿಂದಿನ ಸರ್ಕಾರವು ಪರಮಾಣು ಇಂಧನದ ಅವಲಂಬನೆಯಿಂದ ಮುಕ್ತ ವಾಗಲು ನಿರ್ಧರಿಸಿತ್ತು)ಪೂರ್ಣ ಪ್ರಮಾಣದ ಸೇನೆಗೆ ಅವಕಾಶ ನೀಡುವಂತೆ ದೇಶದ ಸಂವಿಧಾನವನ್ನು ಪುನರ್‌ರೂಪಿಸುವ ಅಬೆ ಅವರ ಹೆಬ್ಬಯಕೆ ವಿವಾದಕ್ಕೂ ಕಾರಣವಾಗಿದೆ.ದ್ವೀಪಗಳ ಒಡೆತನದ ವಿಷಯದಲ್ಲಿ ಜಪಾನ್ ಹಾಗೂ ಚೀನಾ ಕಚ್ಚಾಡುತ್ತಿವೆ. ಖಾಸಗಿ ಮಾಲೀಕರೊಬ್ಬರಿಂದ ಕೆಲವೊಂದು ದ್ವೀಪಗಳನ್ನು ಖರೀದಿಸಲು ಜಪಾನ್ ಸರ್ಕಾರ ನಿರ್ಧರಿಸಿದ್ದು ಚೀನಾ ಅಸಮಾ ಧಾನದ ಬೆಂಕಿಗೆ ತುಪ್ಪ ಸುರಿದಂತಾಗಿದೆ. ವಿವಾದಿತ ದ್ವೀಪದ ಬಳಿ ಚೀನಾ ಇತ್ತೀಚೆಗೆ ತನ್ನ ನೌಕಾ ಪಡೆಯ ಹಡಗುಗಳನ್ನು ಕಳಿಸಿದೆ. ಅದೂ ಅಲ್ಲದೇ ಚೀನಾ ಸೇನೆಯ ಕಣ್ಗಾವಲು ವಿಮಾನಗಳು ಜಪಾನ್ ವಾಯುಪ್ರದೇಶ ಪ್ರವೇಶಿಸಿವೆ. ಇದಕ್ಕೆ ಪ್ರತಿಯಾಗಿ ಜಪಾನ್ ಕೂಡ ತನ್ನ ಯುದ್ಧ ವಿಮಾನಗಳನ್ನು ಕಳಿಸಬೇಕಾಯಿತು.ಕಾರ್ಯತಂತ್ರದ ಭಾಗ

ಹೊಸ ನಾಯಕ ಕ್ಸಿ ಜಿನ್‌ಪಿಂಗ್ ಅವರ ಕಾರ್ಯತಂತ್ರದ ಭಾಗವಾಗಿ ಚೀನಾ ದೇಶವು ದ್ವೀಪಗಳ ಒಡೆತನದ ವಿಷಯದಲ್ಲಿ ಜಪಾನ್ ಮೇಲೆ ತೀವ್ರ ಒತ್ತಡ ಹಾಕುತ್ತಿದೆ. ಚುನಾವಣೆಯಲ್ಲಿ ಗೆದ್ದ ತಕ್ಷಣ ಅಬೆ ಪ್ರಸ್ತಾಪಿಸಿದ್ದೂ ಇದೇ ಅಂಶವನ್ನು. `ಮೂಲತಃ ಈ ದ್ವೀಪಗಳು ಜಪಾನ್‌ಗೆ ಸೇರಿದ್ದು ಎನ್ನುವ ಅಂಶವನ್ನು ಚೀನಾ ಪ್ರಶ್ನಿಸುತ್ತಿದೆ. ಈ ವಿಷಯದಲ್ಲಿ ಚೀನಾ ತನ್ನ ಮೊಂಡುತನ ಬಿಡುವಂತೆ ಮಾಡುವುದು ನಮ್ಮ ಪಕ್ಷದ ಉದ್ದೇಶವಾಗಿದೆ. ಆದರೆ ಉಭಯ ದೇಶಗಳ ಸಂಬಂಧ ಹದಗೆಡ ಬೇಕೆಂದು ನಾವು ಬಯಸುವುದಿಲ್ಲ' ಎಂದು ಅಬೆ ನುಡಿದಿದ್ದರು.ತಮ್ಮ ಎರಡನೇ ಅವಧಿಯಲ್ಲಿ ಅಬೆ, ದೇಶದ ಆಂತರಿಕ ಹಾಗೂ ವಿದೇಶಾಂಗ ನೀತಿಗೆ ಯಾವ ರೀತಿಯಲ್ಲಿ ನಿರ್ದಿಷ್ಟ ರೂಪ ಕೊಡಲಿದ್ದಾರೆ ಎನ್ನುವುದನ್ನು ಇಡೀ ವಿಶ್ವ ಸೂಕ್ಷ್ಮವಾಗಿ ಅವಲೋಕಿಸುತ್ತಿದೆ. ಜಪಾನ್ ಜತೆಗಿನ ಸಂಬಂಧವನ್ನು ಮತ್ತಷ್ಟು ಬಲಪಡಿಸಿಕೊಳ್ಳಲು ನಮಗೆ ಇದು ಸಕಾಲ. ಹಾಗೆ ನೋಡಿದರೆ ಅಬೆ, ಭಾರತದ ಬಗ್ಗೆ ಅಪಾರ ಮೆಚ್ಚುಗೆ ಇಟ್ಟುಕೊಂಡಿರುವ ವ್ಯಕ್ತಿ. ಎರಡೂ ದೇಶಗಳ ಸಂಬಂಧ ಇನ್ನಷ್ಟು ಗಾಢವಾಗಬೇಕು ಎಂದು ಆಗಾಗ ಹೇಳು ತ್ತಲೇ ಬಂದಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಉಭಯ ದೇಶಗಳ ನಡುವಿನ ಸಂಬಂಧ ಸುಧಾರಿಸಿದೆ. ಸಾಮಾಜಿಕ ಭದ್ರತೆ ಹಾಗೂ ಖನಿಜ ಸಂಪನ್ಮೂಲ ರಫ್ತು ವಹಿವಾಟಿಗೆ ಸಂಬಂಧಿಸಿ ಇತ್ತೀಚೆಗೆ ಎರಡೂ ಕಡೆಯವರು ಒಪ್ಪಂದ ಮಾಡಿಕೊಂಡಿದ್ದಾರೆ. ದ್ವೀಪ ವಿವಾದದ ಹಿನ್ನೆಲೆಯಲ್ಲಿ ಚೀನಾ ಸರ್ಕಾರವು ಜಪಾನ್‌ಗೆ ಖನಿಜಗಳ ರಫ್ತು ನಿಲ್ಲಿಸಲು ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ನೋಡಿದರೆ, ಭಾರತ ಹಾಗೂ ಜಪಾನ್ ನಡುವಿನ ಖನಿಜ ಸಂಪನ್ಮೂಲ ರಫ್ತು ವಹಿವಾಟು ಒಪ್ಪಂದ ಮಹತ್ವದ ಬೆಳವಣಿಗೆ ಯೇ ಸರಿ. ಆದರೆ ನಾಗರಿಕ ಪರಮಾಣು ಇಂಧನ ಸಹಕಾರಕ್ಕೆ ಸಂಬಂಧಿಸಿ ಎರಡೂ ದೇಶಗಳ ನಡುವಿನ ಮಾತುಕತೆ ಕೆಲ ಕಾಲದಿಂದ ನಿಂತು ಹೋಗಿದೆ. ಅಬೆ ಅವರು ಪರಮಾಣು ಇಂಧನ ಯೋಜನೆಯನ್ನು ಬಲವಾಗಿ ಸಮರ್ಥಿಸಿಕೊಂಡಿದ್ದು, ಈ ವಿಷಯವಾಗಿ ಭಾರತ-ಜಪಾನ್ ನಡುವಿನ ಮಾತುಕತೆಗೆ ಮರು ಚಾಲನೆ ನೀಡುವುದಕ್ಕೆ ಕಾಲ ಕೂಡಿ ಬಂದಿದೆ.ಇತ್ತೀಚಿಗಿನ ಜಪಾನ್ ನಾಯಕರಲ್ಲಿ ಶಿಂಜೊ ಅಬೆ ಅವರು ಭಾರತದ ಬಗ್ಗೆ ಭಾರಿ ಉತ್ಸಾಹ ತೋರಿಸುತ್ತ್ದ್ದಿದಾರೆ. ಪೆಸಿಫಿಕ್ ಹಾಗೂ ಹಿಂದೂ ಮಹಾಸಾಗರ ದೇಶಗಳಾದ ಜಪಾನ್, ಭಾರತ, ಆಸ್ಟ್ರೇಲಿಯಾ ಹಾಗೂ ಅಮೆರಿಕ ಮಧ್ಯೆ ಪರಸ್ಪರ ಸಹಕಾರ ವೃದ್ಧಿಯಾಗಬೇಕೆನ್ನುವುದು ಅಬೆ ವಾದ. `ಟುವರ್ಡ್ಸ್ ಎ ಬ್ಯೂಟಿಫುಲ್ ಕಂಟ್ರಿ' ಎಂಬ ಶೀರ್ಷಿಕೆಯ ತಮ್ಮ ಕೃತಿಯಲ್ಲಿಯೂ ಅಬೆ ಜಪಾನ್-  ಭಾರತ ಸಂಬಂಧವನ್ನು ಪ್ರಮುಖವಾಗಿ ಪ್ರಸ್ತಾಪಿಸಿದ್ದಾರೆ. `ಮುಂದಿನ ದಶಕದಲ್ಲಿ ಭಾರತದೊಂದಿಗಿನ ಸಂಬಂಧವು, ಅಮೆರಿಕ ಹಾಗೂ ಚೀನಾ ಜತೆಗಿನ ನಮ್ಮ ಮೈತ್ರಿಯನ್ನು ಮೀರಿಸಿದರೂ ಅಚ್ಚರಿ ಇಲ್ಲ' ಎಂದೂ ಅವರು ವ್ಯಾಖ್ಯಾನಿಸಿದ್ದಾರೆ. ಯೊಶಿ ಹಿಕೊ ನೊಡಾ ಅವರು ತ್ರಿಪಕ್ಷೀಯ (ಜಪಾನ್-ವಾಷಿಂಗ್ಟನ್-ಕ್ಯಾನ್‌ಬೆರಾ) ಭದ್ರತಾ ಮಾತುಕತೆಗೆ ಚಾಲನೆ ನೀಡಿದ್ದರು. ಇದೀಗ ಅಬೆ ಕೂಡ ಈ ಸೂತ್ರವನ್ನು ಅಮೆರಿಕ, ಆಸ್ಟ್ರೇಲಿಯಾ, ಭಾರತ ಹಾಗೂ ಜಪಾನ್ ನಡುವೆ ಅಳವಡಿಸಲು ನಿರ್ಧರಿಸಿ ್ದದಾರೆ. ಈ ನಾಲ್ಕು ದೇಶಗಳ ಸಮಾನ ಮೌಲ್ಯಗಳಾದ ಸ್ವಾತಂತ್ರ್ಯ, ಪ್ರಜಾಪ್ರಭುತ್ವ, ಮಾನವ ಹಕ್ಕು ಹಾಗೂ ಕಾನೂನು ನೀತಿಯನ್ನು ಆಧರಿಸಿ ಇದಕ್ಕೆ ಅಡಿಪಾಯ ಹಾಕಬೇಕೆನ್ನುವುದು ಅವರ ಹಂಬಲ.ಭಾರತ-ಜಪಾನ್ ಸಂಬಂಧಕ್ಕೆ ಹೊಸ ಭಾಷ್ಯ ಬರೆಯುವ ಕಾಲ ಸನ್ನಿಹಿತವಾಗಿದೆ. ನಾವು ಈ ಅವಕಾಶವನ್ನು ಕಳೆದುಕೊಳ್ಳಬಾರದು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry