ಗುರುವಾರ , ಮೇ 13, 2021
16 °C

ಅಬ್ಬಣಿಯಲ್ಲಿ ಕುಡಿಯುವ ನೀರಿಗೆ ಅಲೆದಾಟ

ವಿಶೇಷ ವರದಿ/ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ: ಈ ಗ್ರಾಮದಲ್ಲಿ ಈಚೆಗಷ್ಟೆ 1200ಕ್ಕೂ ಹೆಚ್ಚು ಅಡಿ ಆಳಕ್ಕೆ ಕೊಳವೆಬಾವಿ ಕೊರೆಯಲಾಗಿದೆ. ಆದರೆ ಅದಕ್ಕೆ ಅಳವಡಿಸಿರುವ ಪಂಪ್-ಮೋಟರ್ ಸಾಮರ್ಥ್ಯ ಕಡಿಮೆ ಇರುವ ಕಾರಣದಿಂದ ನೀರು ಲಭ್ಯವಿದ್ದರೂ ಮೇಲಕ್ಕೆ ಬರುತ್ತಿಲ್ಲ. ನೀರಿನ ಸಮರ್ಪಕ ಪೂರೈಕೆಗೆ ಅವಕಾಶವಿದ್ದರೂ ಪ್ರಯೋಜನವಿಲ್ಲದಂತಾಗಿದೆ.

 

ಹೀಗಾಗಿ ಎರಡು ದಿನಕ್ಕೊಮ್ಮೆ ಕೆಲವು ಬಿಂದಿಗೆಗಳಷ್ಟು ನೀರು ಮಾತ್ರ ಗ್ರಾಮಸ್ಥರಿಗೆ ಸಿಗುತ್ತಿದೆ. ಅದರ ಜೊತೆಗೆ, ಖಾಸಗಿಯಾಗಿ ದಾನಿಯೊಬ್ಬರು ನೀರು ಪೂರೈಸುತ್ತಿರುವುದರಿಂದ ಸಮಸ್ಯೆ ಬಿಗಡಾಯಿಸಿಲ್ಲ.ತಾಲ್ಲೂಕಿನ ಶಾಪೂರು ಗ್ರಾಮ ಪಂಚಾಯಿತಿಗೆ ಸೇರಿದ ಅಬ್ಬಣಿ ಗ್ರಾಮದ ಸ್ಥಿತಿ ಇದು. ಈ ಗ್ರಾಮದಲ್ಲಿ ಈ ತಿಂಗಳಲ್ಲಿ ಇಪ್ಪತ್ತಕ್ಕೂ ಹೆಚ್ಚು ಕೊಳವೆಬಾವಿಗಳನ್ನು ರೈತರು ತಮ್ಮ ಜಮೀನುಗಳಲ್ಲಿ ಕೊರೆದಿದ್ದಾರೆ. ಆದರೆ ಅವುಗಳ ಪೈಕಿ ಸಫಲವಾಗಿರುವುದು ಕೇವಲ ಎರಡು ಮಾತ್ರ. ಗ್ರಾಮದ ಕೆರೆ ಸುತ್ತ-ಮುತ್ತ ಓಡಾಡಿದರೆ ಕಣ್ಣಳತೆ ದೂರದಲ್ಲಿಯೇ ಕೆಲವು ಕೊಳವೆಬಾವಿಗಳು ಕಾಣುತ್ತವೆ.ಗ್ರಾಮದಲ್ಲಿ ಪ್ರಸ್ತುತ ನೀರು ಪೂರೈಸುತ್ತಿರುವುದು ಒಂದೇ ಒಂದು ಕೊಳವೆಬಾವಿ. ಅದನ್ನು ಕೆರೆಯಂಗಳದಲ್ಲಿ ಕೊರೆಯಲಾಗಿದೆ. 1200ಕ್ಕೂ ಹೆಚ್ಚು ಅಡಿ ಆಳ ಕೊರೆದ ಬಳಿಕ ನೀರು ದಕ್ಕಿದೆ. ಆದರೆ ಅಷ್ಟು ಆಳದಿಂದ ಲಭ್ಯವಿರುವಷ್ಟು ನೀರನ್ನು ಮೇಲಕ್ಕೆತ್ತುವ ಸಾಮರ್ಥ್ಯದ ಪಂಪ್-ಮೋಟರ್ ಅಳವಡಿಸಿಲ್ಲ. 15 ಎಚ್‌ಪಿ ಮೋಟರ್ ಹೆಚ್ಚು ನೀರನ್ನು ಮೇಲಕ್ಕೆ ಎಳೆಯಲು ಸಾಧ್ಯವಿಲ್ಲ. ಅಲ್ಲದೆ ಅದಕ್ಕೆ ಅಳವಡಿಸಿರುವ ಕೇಬಲ್‌ನಲ್ಲೂ ಶಕ್ತಿ ಇಲ್ಲ ಎನ್ನುತ್ತಾರೆ ನೀರುಗಂಟಿ ವೆಂಕಟೇಶಪ್ಪ.`ಹೊಸ ಕೊಳವೆಬಾವಿಯ ಪಂಪು-ಮೋಟರ್ ಏಗ್ತಾ ಇಲ್ಲ. ಅದಕ್ಕೇ, ನೀರು ಇದ್ದರೂ ಮೇಲಕ್ಕೆ ಬರ‌್ತಾ ಇಲ್ಲ. ಹೀಗಾಗಿ ದಿನ ಬಿಟ್ಟು ದಿನ ಗ್ರಾಮಕ್ಕೆ ನೀರು ಕೊಡ್ತಿದ್ದೇವೆ. ಕನಿಷ್ಠ 25ಎಚ್‌ಪಿ ಮೋಟರ್ ಅಳವಡಿಸಿದರೆ ಮಾತ್ರ ಕೊಳವೆಬಾವಿ ಕೊರೆದಿದ್ದಕ್ಕೂ ಸಾರ್ಥಕವಾಗುತ್ತದೆ. ಇಲ್ಲವಾದರೆ ಪ್ರಯೋಜನವಿಲ್ಲ~ ಎಂಬುದು ಅವರ ಅನಿಸಿಕೆ.ಕೊಳವೆಬಾವಿ ಆಳಕ್ಕೆ ಹೋದಷ್ಟೂ ಹೆಚ್ಚು ಸಾಮರ್ಥ್ಯದ ಪಂಪ್-ಮೋಟರ್ ಅತ್ಯವಶ್ಯಕ. ಆದರೆ ಆಡಳಿತ ನಡೆಸುವವರಿಗೆ ಅದು ಅರಿವಾಗಿಲ್ಲ. ಹಳೇ ಕಾಲದಲ್ಲಿದ್ದಂತೆಯೇ 10-15 ಎಚ್‌ಪಿ ಮೋಟರ್ ಅನ್ನೇ ಈಗಲೂ ಅಳವಡಿಸುವುದು ಪ್ರಾಯೋಗಿಕವಾಗಿ ಪ್ರಯೋಜನವಿಲ್ಲದ ಕೆಲಸ ಎನ್ನುವುದು ಗ್ರಾಮದ ಕೆಲವರ ಅನಿಸಿಕೆ.ಅಲೆದಾಟ: ನೀರು ಕಡಿಮೆ ದೊರಕುವುದರಿಂದ ಈ ಗ್ರಾಮದ ಬಹಳಷ್ಟು ಮಂದಿ ಖಾಸಗಿ ತೋಟದ ಮಾಲೀಕರಲ್ಲಿ ಮನವಿ ಮಾಡಿ ಅವರ ಕೊಳವೆಬಾವಿಯಿಂದ ನೀರು ಸಂಗ್ರಹಿಸಲು ಅಲೆದಾಡುವುದು ಸಾಮಾನ್ಯ ದೃಶ್ಯ.

ದಿನ ಬಿಟ್ಟು ದಿನ ನೀರು ಬಿಡುತ್ತಾರೆ. ಆದರೆ ಆಗ ಸಿಗುವುದು ನಾಲ್ಕೈದು ಬಿಂದಿಗೆ ಮಾತ್ರ. ಹೀಗಾಗಿ ತೋಟದ ಮಾಲೀಕರ ಮನೆಗಳಿಗೆ, ತೋಟಗಳಿಗೆ ತೆರಳಿ ಅಲ್ಲಿಂದ ನೀರು ತರುತ್ತೇವೆ.ಆದರೂ ನೀರು ಸಾಕಾಗುವುದಿಲ್ಲ ಎಂಬುದು ಜನರ ಅಳಲು, ದಿನವೂ ಸೈಕಲ್‌ನಲ್ಲಿ ನೀರು ತರುವ ಬಾಲಕ ಚಲಪತಿಯ ನುಡಿ.ಮೂರ‌್ನಾಲ್ಕು ತಿಂಗಳಿಂದ ನೀರಿನ ಸಮಸ್ಯೆ ಹೆಚ್ಚಿದೆ. ಕೊಳವೆಬಾವಿಗಳು ವಿಫಲವಾದದ್ದು ಪ್ರಮುಖ ಕಾರಣ. ಈಗ ಹೊಸ ಕೊಳವೆಬಾವಿ ಕೊರೆದರೂ ಅದರಲ್ಲಿ ನೀರು ಹೆಚ್ಚಿಗೆ ಬರುವುದಿಲ್ಲ. ಎಸ್.ಎನ್. ಗ್ರೂಪ್‌ನವರು 2-3 ದಿನಕ್ಕೊಮ್ಮೆ ನೀರು ಪೂರೈಕೆ ಮಾಡುತ್ತಿರುವುದರಿಂದ ಕೊಂಚ ಸಮಾಧಾನಕರ ಸ್ಥಿತಿ ಇದೆ. ಇಲ್ಲವಾದರೆ ನಾವು ಅಕ್ಕಪಕ್ಕದ ಗ್ರಾಮಗಳಿಗೆ ನೀರು ತರಲು ಹೋಗಬೇಕಾಗುತ್ತಿತ್ತು ಎನ್ನುತ್ತಾರೆ ಗ್ರಾಮದ ಚಿಲ್ಲರೆ ಅಂಗಡಿ ಮಾಲಿಕ ಶ್ರೀನಿವಾಸಪ್ಪ.ಸಮಸ್ಯೆ: ಇದೇ ಗ್ರಾಮ ಪಂಚಾಯಿತಿಗೆ ಸೇರಿದ ಶಾಪೂರು, ಅಗ್ರಹಾರ ಸೋಮರಸನಹಳ್ಳಿ ಮತ್ತು ನಂದಂಬಳ್ಳಿ ನೀರಿನ ಸಮಸ್ಯೆ ಇರುವ ಗ್ರಾಮಗಳು ಎಂದು ಜಿಲ್ಲಾ ಪಂಚಾಯಿತಿ ಗುರುತಿಸಿದೆ.ಅಬ್ಬಣಿಗಿಂತಲೂ ತೀವ್ರವಾದ ಸಮಸ್ಯೆ ಅಗ್ರಹಾರ, ಸೋಮರಸನಹಳ್ಳಿಯದು. ಅಲ್ಲಿ ಬೀದಿ ನಲ್ಲಿಯಲ್ಲಿ ನೀರು ಪೂರೈಸುವ ವ್ಯವಸ್ಥೆಯೇ ಇಲ್ಲ. ಈಚೆಗೆ ಕೊರೆದ ಕೊಳವೆಬಾವಿಗಳು ವಿಫಲವಾಗಿವೆ. ಖಾಸಗಿಯವರಿಂದ ನೀರು ಪಡೆದು ಪಂಚಾಯಿತಿಯವರು ಜನರಿಗೆ ನೀರು ಪೂರೈಸುತ್ತಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.