ಭಾನುವಾರ, ಮೇ 9, 2021
27 °C

ಅಬ್ಬರವಿಲ್ಲದ ಮೌನ ನದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

`ಸಾಂಸ್ಕೃತಿಕ ಮಧ್ಯವರ್ತಿಗಳ ಹಾವಳಿ ಹೆಚ್ಚುತ್ತಿರುವ ಇಂದಿನ ದಿನಗಳಲ್ಲಿ ಮಹಿಳೆಯರು ಅದರಲ್ಲೂ ಕಲಾವಿದೆಯರು ರಾಜಕೀಯದ ಅರ್ಥ, ಒಳಸುಳಿಗಳನ್ನು ರೂಢಿಸಿಕೊಳ್ಳದೇ ಹೋದರೆ ಅವರು ಹೊಂದಿರುವ ಕಲೆ ಮತ್ತು ಪ್ರತಿಭೆ ಲೆಕ್ಕಕ್ಕೇ ಬರುವುದಿಲ್ಲ. ಒಮ್ಮೆ ಖ್ಯಾತಿಯ ಪ್ರವರ್ಧಮಾನಕ್ಕೆ ಬಂದವರೇ ಮತ್ತೆ ಮತ್ತೆ ಎಲ್ಲ ವೇದಿಕೆಗಳಲ್ಲೂ ಕಾಣಿಸಿಕೊಳ್ಳುತ್ತಾ ಇನ್ನಿತರ ಪ್ರತಿಭಾವಂತರಿಗೆ ಜಾಗ ಮಾಡಿಕೊಡದೇ ಹೋಗುತ್ತಿರುವುದು ಕಲಾವಿದರ ಸೌಜನ್ಯ ಮತ್ತು ವಿನಯಗಳನ್ನು ಅಣಕಿಸುವಂತಿದೆ...~ಹಿಂದೂಸ್ತಾನಿ ಸಂಗೀತಗಾರ್ತಿ ಶಾರದಾ ವಡವಾಟಿ ಭರತ್ ಈ ಮಾತುಗಳನ್ನು ಹೇಳುತ್ತಿದ್ದರೆ ಅವರ ಕಣ್ಣುಗಳಲ್ಲಿ ನೋವಿನ ಛಳಕು ಅಪ್ರಯಾಸವಾಗಿ ಇಣುಕುತ್ತಿತ್ತು. ಯಾವುದೇ ಪ್ರಚಾರ ಹಾಗೂ ಶೋಕಿಗಳಿಂದ ಬಹುದೂರವಿರುವ ಶಾರದಾ ವಡವಾಟಿ ಅಪ್ಪಟ ದೇಸಿ ಪ್ರತಿಭೆ. ಬೆಂಗಳೂರಿನ ಜೆ.ಪಿ.ನಗರದ ಪುಟ್ಟ ಗೂಡಿನಂತಹ ಮನೆಯಲ್ಲಿ ತಮ್ಮದೇ ಆದ ಸರಳ ಚೌಕಟ್ಟಿನಲ್ಲಿ ಬದುಕುತ್ತಿರುವ ನಾಡಿನ ಅಪರೂಪದ ಸಂಗೀತಗಾರ್ತಿ.

ಇಬ್ಬರು ಪುಟಾಣಿ ಹೆಣ್ಣುಮಕ್ಕಳು ಹಾಗೂ ಪತಿ ಭರತ್ ಅವರೊಂದಿಗೆ ಧ್ಯಾನಸ್ಥ ಜೀವನ ನಡೆಸುತ್ತಿರುವ ಅವರ ಸಂಗೀತ ಸಾಧನೆ ಮತ್ತು ಬದುಕು ಎರಡೂ ಅಬ್ಬರವೇ ಇಲ್ಲದ ಮೌನ ನದಿಯಂತೆ ಹರಿಯುತ್ತಿರುವುದು ನಿಜಕ್ಕೂ ಗಮನಾರ್ಹವಾಗಿದೆ. ವಚನ ಗಾಯನ ಪರಂಪರೆಗೆ ಅತ್ಯಂತ ವಿಶಿಷ್ಟ ರಾಗದ ಕವಚ ಹೊದಿಸಿದ ಪಂಡಿತ ಸಿದ್ದರಾಮ ಜಂಬಲದಿನ್ನಿ ಅವರ ಹಾದಿಯಲ್ಲೇ ಸಾಗುತ್ತಿರುವ ಈ ಅನ್ಮೋಲ್ ಹಾಡುಗಾರ್ತಿಗೆ ವಚನಗಳ ಮೇಲೆ ಇನ್ನಿಲ್ಲದ ಅಕ್ಕರೆ.

ಮೂಲತಃ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಗಾಯಕಿಯಾದ ಶಾರದಾ ಅವರು ಗ್ವಾಲಿಯರ್ ಘರಾಣೆ ಹಾಗೂ ಜೈಪುರ ಘರಾಣೆ ಶೈಲಿಯನ್ನು ಅಳವಡಿಸಿಕೊಂಡವರು.ವಚನಗಳನ್ನೂ ಇದೇ ಶೈಲಿಯಲ್ಲಿ ಹಾಡುವುದು ಇವರ ಸಂಗೀತದ ಸೊಗಸು. ಗ್ವಾಲಿಯರ್ ಘರಾಣೆಯನ್ನು ಗಾನಯೋಗಿ ಪಂಚಾಕ್ಷರಿ ಗವಾಯಿಗಳಲ್ಲೂ, ಜೈಪುರ ಘರಾಣೆಯನ್ನು ಪಂಡಿತ ಮಲ್ಲಿಕಾರ್ಜುನ ಮನ್ಸೂರ್ ಮತ್ತು ಪಂಡಿತ ಜಂಬಲದಿನ್ನಿ ಸಿದ್ದರಾಮ ಅವರಲ್ಲೂ ಕಲಿತಿರುವ ಶಾರದಾ ಅವರು, `ಪ್ರಸ್ತುತ ದಿನಮಾನಗಳಲ್ಲಿ ಕಲಾವಿದರು `ರಾಜಕೀಯ~ದ ಗಂಧವಿಲ್ಲದೆ ಸೊರಗುತ್ತಿದ್ದಾರೆ~ ಎಂಬ ಕೊರಗನ್ನು ವ್ಯಕ್ತಪಡಿಸುತ್ತಾರೆ.`ಕನಿಷ್ಠ ಪ್ರತಿಭೆಯ ಜೊತೆಗೆ ಗರಿಷ್ಠ ರಾಜಕೀಯ ಮಾಡಿ ಬದುಕುತ್ತಿರುವ ಕಲಾವಿದರೇ ಎ್ಲ್ಲಲೆಡೆ ಸದ್ದು ಮಾಡುತ್ತಿದ್ದಾರೆ~ಎನ್ನುವ ಅವರು `ಈ ಮಾತುಗಳನ್ನು ನಾನು ಯಾವುದೇ ಬೇಸರದಿಂದ ಹೇಳುತ್ತಿಲ್ಲ. ಬದಲಿಗೆ ಸಂಗೀತ ಪರಂಪರೆಯ ಕಾಳಜಿಯಿಂದ ಮಾತ್ರವೇ~ ಎಂದು ಸ್ಪಷ್ಟಪಡಿಸುತ್ತಾರೆ.  `ಉಳಿವು ಮತ್ತು ಅಸ್ತಿತ್ವದ ದೃಷ್ಟಿಯಿಂದ ಶಾಸ್ತ್ರೀಯ ಪರಂಪರೆಯನ್ನು ಅನುಸರಿಸಿ ಅದರಲ್ಲೇ ಬದುಕು ಸವೆಸುತ್ತಿರುವವರು ಇಂದು ಕಡಿಮೆಯಾಗುತ್ತಿದ್ದಾರೆ. ಅದರಲ್ಲೂ ವಚನಗಳ ಪರಂಪರೆಯನ್ನು ಹಿಂದೂಸ್ತಾನಿ ಹಾಡುಗಾರಿಕೆಯಲ್ಲಿ ಮೆರೆಸುವ ಮಹಿಳಾ ಕಲಾವಿದರೇ ಕಂಡುಬರುತ್ತಿಲ್ಲ~ ಎಂದು ಅವರು ವಿಷಾದಿಸುತ್ತಾರೆ.`ಶಾಸ್ತ್ರೀಯ ಸಂಗೀತಕ್ಕೆ `ಸೀಸನ್~ ಎಂಬುದೇ ಇಲ್ಲ. ಸುಗಮ ಸಂಗೀತ, ಭಾವಗೀತೆ ಅಥವಾ ಸಿನಿಮಾ ಸಂಗೀತದ ಹಾಡುಗಾರ್ತಿಯಾದರೆ ನಿಮಗೆ  ಸೀಸನ್‌ಗಳುಂಟು. ಅವು ಅವಕಾಶ, ಹಣ  ಮತ್ತು ಖ್ಯಾತಿಗಳೆಲ್ಲವನ್ನೂ ಮನೆಬಾಗಿಲಿಗೆ ತಂದು ನಿಲ್ಲಿಸುತ್ತವೆ. ಆದರೆ ಸೀಸನ್‌ಗಳಿಗೆ ಕಾಯದ ಹಿಂದೂಸ್ತಾನಿ ಸಂಗೀತ ಮಾತ್ರ ತನ್ನದೇ ಆದ ಶ್ರೋತೃಗಳನ್ನೇ ಬೇಡುತ್ತದೆ. ಹಾಗಾಗಿ ಅದಕ್ಕಿರುವ ಖದರು ಎಂದಿಗೂ ಕುಂದದಂತೆ ನೋಡಿಕೊಳ್ಳಬೇಕು. ಅಂತೆಯೇ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತದ ಕೇಳುಗರೂ ಹೆಚ್ಚಿನ ಸಂಖ್ಯೆಯಲ್ಲಿ ದೊರೆಯುವಂತಾಗಬೇಕು~ ಎಂದು ಆಶಿಸುತ್ತಾರೆ.ಬಳುವಳಿಯಾಗಿ ಬಂದ ವಿದ್ವತ್

ಶಾರದಾ ಅವರು ಅಂತರರಾಷ್ಟ್ರೀಯ ಖ್ಯಾತಿಯ ಕ್ಲಾರಿಯೊನೆಟ್ ವಾದಕ ಪಂಡಿತ ನರಸಿಂಹ ವಡವಾಟಿ ಅವರ ಮೂರನೇ ಪುತ್ರಿ. ಸಂಗೀತ ಮನೆತನದ ನಾಲ್ಕನೇ ತಲೆಮಾರು ಇವರು. ರಾಯಚೂರು ಜನ್ಮಸ್ಥಳ. ಕೂಗಳತೆ ದೂರದಲ್ಲಿನ ಗ್ರಾಮವೆನಿಸಿದ ವಡವಾಟಿಯಲ್ಲಿ ಇವರ ತಾತ ತಬಲಾ ವಾದಕರಾಗಿ ಹೆಸರು ಮಾಡಿದವರು.

 

ಮುತ್ತಾತ ಶಹನಾಯಿ ವಾದಕರಾಗಿ ಪ್ರಖ್ಯಾತರಾಗಿದ್ದವರು. ಮನೆಯೇ ಇವರಿಗೆ ಸಂಗೀತದ ಮೊದಲ ಪಾಠಶಾಲೆ. 6ನೇ ವರ್ಷಕ್ಕೇ ತಂದೆಯವರ ಬಳಿ ಓನಾಮ ಆರಂಭ. ಬಳುವಳಿಯಾಗಿ ಬಂದ ಈ ವಿದ್ವತ್ತನ್ನು ಅವರು ಶಿಷ್ಟ ಹಾದಿಯಲ್ಲಿ ಇಂದಿಗೂ ಜತನವಾಗಿ ಕಾಪಾಡಿಕೊಂಡು ಹೋಗುತ್ತಿದ್ದಾರೆ.

 

ಮಹಾರಾಷ್ಟ್ರದ ಕೊಲ್ಹಾಪುರದ ಶಿವಾಜಿ ವಿಶ್ವವಿದ್ಯಾಲಯದಲ್ಲಿ ಸಂಗೀತ ವಿಭಾಗದ ಡೀನ್ ಆಗಿರುವ ಡಾ.ಭಾರತಿ ವೈಶಂಪಾಯನ ಅವರಿಂದ ಗುರುಕುಲ ಪದ್ಧತಿಯಲ್ಲಿ ಇಂದಿಗೂ ತಮ್ಮ ಸಂಗೀತ ಶಿಕ್ಷಣವನ್ನು ಅದೇ ಏಕಾಗ್ರತೆಯಿಂದ ಮುಂದುವರಿಸಿದ್ದಾರೆ. ಇವರ ಮೊದಲಿನ ಗುರುಗಳ ಪಟ್ಟಿಯಲ್ಲಿ ಬಸವರಾಜ ರಾಜಗುರು, ಮಲ್ಲಿಕಾರ್ಜುನ ಮನ್ಸೂರ್ ಮತ್ತು ಪುಟ್ಟರಾಜ ಗವಾಯಿಗಳಿಗೆ ಮಹತ್ವದ ಸ್ಥಾನವಿದೆ.ನಾಗಪುರದಲ್ಲಿ ನಡೆದ ದಕ್ಷಿಣ ಮಧ್ಯ ವಲಯದ 13ನೇ ಯುವ ಸಂಗೀತ ನೃತ್ಯ ಮಹೋತ್ಸವದಲ್ಲಿ ರಾಜ್ಯವನ್ನು ಪ್ರತಿನಿಧಿಸಿದ ಶಾರದಾ ಅವರು ಅಂತರರಾಷ್ಟ್ರೀಯ ವೇದಿಕೆಗಳಲ್ಲೂ ತಮ್ಮ ಗಾನಸುಧೆಯನ್ನು ಉಣಬಡಿಸಿದ್ದಾರೆ.ವೇಗದ ದಿನಮಾನಗಳಲ್ಲೂ ಶಾರದಾ ಅವರು ಶಾಸ್ತ್ರೀಯ ಪರಂಪರೆಯ ಚೌಕಟ್ಟುಗಳನ್ನು ಮೀರಿ ನಡೆದಿಲ್ಲ. ಪಾರಂಪರಿಕ ಜಾಡಿನಲ್ಲೇ ಮುಂದುವರಿದಿರುವುದು ಅವರ ಈ ಹೊತ್ತಿನ ಬಹುದೊಡ್ಡ ಸಾಧನೆ. ಅಂತೆಯೇ ಹಿಂದೂಸ್ತಾನಿ ಶಾಸ್ತ್ರೀಯ ಪರಂಪರೆಯಲ್ಲಿ ವಚನಗಳನ್ನು ಹಾಡುತ್ತಿರುವ ನಾಡಿನ ಅಪರೂಪದ ಗಾಯಕಿಯೂ ಹೌದು.

 

ಶಾಸ್ತ್ರೀಯ ಹಾದಿಯನ್ನು ಕೈಬಿಟ್ಟು ಯಾವತ್ತೂ ಆಚೀಚೆ ಸರಿಯಲಾರೆ ಎಂಬುದು ಅವರ ದೃಢ ನಿಲುವು. `ಆಧುನಿಕ ಭರಾಟೆಯಲ್ಲಿ ಶಾಸ್ತ್ರೀಯ ಸಂಗೀತಗಾರರು ಸುಗಮ ಸಂಗೀತ, ಭಾವಗೀತೆ, ಸಿನಿಮಾ ಸಂಗೀತಗಳ ಮೂಲಕ ಜನಪ್ರಿಯತೆಯ ಪ್ರವಾಹದಲ್ಲಿ ಸದ್ದಿಲ್ಲದೇ ಬೆರೆತು ಹೋಗುತ್ತಿದ್ದಾರೆ~ ಎಂಬುದು ಅವರ ವಿಷಾದದ ನುಡಿ.ಗ್ವಾಲಿಯರ್ ಮತ್ತು ಜೈಪುರ ಘರಾಣೆಗಳ ಶೈಲಿಯಲ್ಲಿರುವ “ಮಾನ್‌ಸೂನ್‌” ಹೆಸರಿನ ಆಲ್ಬಂ, “ಶ್ರೀ ಬಸವೇಶ್ವರ ವಚನಾಮೃತ” ಮತ್ತು “ಸಂಗನ ಬಸವ” ಎಂಬ ಇನ್ನೆರಡು ಸಂಗ್ರಹಗಳು ಶಾರದಾ ಅವರ ಒಟ್ಟು ಸಂಗೀತದ ಝಲಕನ್ನು ಪರಿಚಯಿಸುತ್ತವೆ. ಸದ್ಯ ಬೆಂಗಳೂರು ಆಕಾಶವಾಣಿಯಲ್ಲಿ ವಚನಗಳಿಗಾಯೇ ಮೀಸಲಾದ ವಿಭಾಗದಲ್ಲಿ `ಎ~ ಗ್ರೇಡ್ ಕಲಾವಿದರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.`ಇಂದಿನ ಮಕ್ಕಳು ಟಿ.ವಿಗಳಲ್ಲಿ ಬರುವ ಸಂಗೀತ ಕಾರ್ಯಕ್ರಮಗಳೇ ಅಂತಿಮ ಎಂದು ಭಾವಿಸುತ್ತಿದ್ದಾರೆ. ಪೋಷಕರು ಕೂಡಾ ಇದೇ ಭ್ರಮೆಗಳಲ್ಲಿ ಮಕ್ಕಳಿಗೆ ಸಂಗೀತ ಕಲಿಸುತ್ತಿದ್ದಾರೆ. ಸಂಗೀತದ ಅಭಿರುಚಿ ವ್ಯಾಪಕವಾಗಿದ್ದರೂ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಉತ್ತಮ ಗುರುಗುಳ ಕೊರತೆ ಕಾಡುತ್ತಿದೆ~ ಎಂದು ಅವರು ವ್ಯಥೆಯಿಂದ ನುಡಿಯುತ್ತಾರೆ. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.