ಅಬ್ಬರಿಸಿದ ಮಳೆಗೆ ಜಿಲ್ಲೆ ತತ್ತರ

ಶನಿವಾರ, ಜೂಲೈ 20, 2019
28 °C

ಅಬ್ಬರಿಸಿದ ಮಳೆಗೆ ಜಿಲ್ಲೆ ತತ್ತರ

Published:
Updated:

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಮುಂಗಾರು ಮಳೆ ಧಾರಾಕಾರವಾಗಿ ಸುರಿಯುತ್ತಿದೆ. ಗುರುವಾರ ಮಡಿಕೇರಿ ಸೇರಿದಂತೆ ಜಿಲ್ಲೆಯ ಬಹುತೇಕ ಭಾಗಗಳಲ್ಲಿ ಮಳೆಯ ಆರ್ಭಟ ಮುಂದುವರೆದಿದೆ.ಕೊಡಗಿನಾದ್ಯಂತ ಮಳೆಯ ಆರ್ಭಟ ಹೆಚ್ಚಾದಂತೆ ಜಿಲ್ಲೆಯಲ್ಲಿನ ಕರೆ, ಕಟ್ಟೆ, ತೋಡು, ಝರಿ ಸೇರಿದಂತೆ ನದಿ ತೀರ ಪ್ರದೇಶಗಳಲ್ಲಿ ನೀರಿನ ಹರಿವಿನ ರಭಸ ಹೆಚ್ಚಾಗಿದ್ದು, ಈ ಭಾಗಗಳಲ್ಲಿ ವಾಸಿಸುತ್ತಿರುವ ಜನತೆ ಸಂಕಷ್ಟ ಎದುರಿಸುವ ಪರಿಸ್ಥಿತಿ ಉಂಟಾಗಿದೆ.ಮಡಿಕೇರಿಯಲ್ಲಿ ಗುರುವಾರ ಸುರಿದ ಮಳೆಗೆ ಹಲವು ಭಾಗಗಳಲ್ಲಿ ಬರೆ ಕುಸಿತ ಉಂಟಾಗಿರುವ ಜೊತೆಗೆ ಹಲವು ಮನೆಗಳಿಗೆ ನೀರು ನುಗ್ಗಿ ಸಾರ್ವಜನಿಕರು ಪರದಾಡುವ ಪರಿಸ್ಥಿತಿ ಎದುರಾಗಿದೆ.ನಗರದ ಗದ್ದಿಗೆ ಹಿಂಭಾಗ ಮೊಹಿದ್ದೀನ್ ಹಾಗೂ ಜುಬೈದಾ ದಂಪತಿಗಳು ವಾಸವಿದ್ದ ಬಾಡಿಗೆ ಮನೆಯ ಮೇಲೆ ಗುರುವಾರ ಬೆಳಿಗ್ಗೆ 5 ಗಂಟೆ ಸುಮಾರಿಗೆ ಬರೆ ಕುಸಿತ ಉಂಟಾಗಿ ಸಂಪೂರ್ಣವಾಗಿ ಮನೆ ಜಖಂಗೊಂಡು ದಂಪತಿಗಳು ಗಾಯಾಗೊಂಡಿದ್ದಾರೆ.ಮಳೆಯ ಹಿನ್ನೆಲೆಯಲ್ಲಿ ಗುರುವಾರ ಶಾಲೆಗಳಿಗೆ ರಜೆ ನೀಡಿದ್ದ ಕಾರಣ ಮಕ್ಕಳು ಪಕ್ಕದಲ್ಲಿದ್ದ ಸಂಬಂಧಿಕರ ಮನೆಯಲ್ಲಿ ಮಲಗಿದ್ದ ಕಾರಣ ಹೆಚ್ಚಿನ ಅನಾಹುತ ತಪ್ಪಿದೆ. ಗಾಯಾಳುಗಳಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.ಸ್ಥಳಕ್ಕಾಗಮಿಸಿದ್ದ ನಗರಸಭೆ ಮಾಜಿ ಸದಸ್ಯ ಟಿ.ಎಂ. ಐಯ್ಯಪ್ಪ ಮಾತನಾಡಿ, ಜಿಲ್ಲೆಯೂ ಸೇರಿದಂತೆ ಮಡಿಕೇರಿಯಲ್ಲಿ ಮಳೆಯ ಆರ್ಭಟ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಯಾವುದೇ ಪ್ರದೇಶದಲ್ಲಿ ಅನಾಹುತ ಸಂಭವಿಸಿದರೆ ಸೂಕ್ತ ಪರಿಹಾರಕ್ಕೆ ಮುಂದಾಗಬೇಕಿದೆ ಎಂದರು.ಇನ್ನೂ ನಗರದ ತ್ಯಾಗಾರಾಜ ಕಾಲೋನಿಯಲ್ಲಿ ಶರೀಫ್ ಎಂಬುವವರ ಮನೆ ಸೇರಿದಂತೆ ಹಲವು ಮನೆಗಳಿಗೆ ನೀರು ನುಗ್ಗಿ ಮನೆಯ ರಿಪೇರಿಗೆಂದು ತಂದಿದ್ದ ಮರಳು, ಜಲ್ಲಿ ಸೇರಿದಂತೆ ಹಲವು ಸಾಮಾನುಗಳು ನೀರಿನಲ್ಲಿ ಕೊಚ್ಚಿಕೊಂಡು ಹೋಗಿದೆ.

ಹಾಗೆಯೇ ನಗರದ ರಾಣಿಪೇಟೆ ಮತ್ತು ಮಂಗಳಾದೇವಿ ನಗರದಲ್ಲಿಯೂ ಬರೆ ಕುಸಿತ ಉಂಟಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿರುವ ಬಗ್ಗೆ ವರದಿಯಾಗಿಲ್ಲ.ಸಂಚಾರಕ್ಕೆ ಅಡಚಣೆ: ಮಡಿಕೇರಿ ಮತ್ತು ಮಂಗಳೂರು ರಸ್ತೆಯ ಮಾರ್ಗ ಮಧ್ಯೆ ಮದೆನಾಡು ಸಮೀಪದಲ್ಲಿ ರಾಜ್ಯ ಹೆದ್ದಾರಿಯ ಮೇಲೆ ಬೃಹತ್ ಬರೆ ಕುಸಿತ ಉಂಟಾದ ಹಿನ್ನೆಲೆಯಲ್ಲಿ ಹಲವು ಗಂಟೆಗಳ ಕಾಲ ಪ್ರಯಾಣಿಕರು ಪರದಾಡುವ ಪರಿಸ್ಥಿತಿ ಎದುರಾಗಿತ್ತು.ಇದೇ ರೀತಿಯಲ್ಲಿ ಜಿಲ್ಲೆಯ ಬಹುತೇಕ ರಸ್ತೆಯಲ್ಲಿ ದೊಡ್ಡದಾದ ಹೊಂಡ ಸೃಷ್ಟಿಯಾಗುವ ಜೊತೆಗೆ ಸಂಚಾರಕ್ಕೆ ಯೋಗ್ಯವಲ್ಲದ ರೀತಿಯಲ್ಲಿ ರಸ್ತೆಗಳು ಮಾರ್ಪಡುತ್ತಿವೆ.ಜಿಲ್ಲೆಯ ಮಳೆಯ ವಿವರ: ಕೊಡಗು ಜಿಲ್ಲೆಯಲ್ಲಿ ಗುರುವಾರ ಬೆಳಿಗ್ಗೆ 8 ಗಂಟೆಗೆ ಅಂತ್ಯಗೊಂಡಂತೆ 24 ಗಂಟೆಯಲ್ಲಿ 124.96ಮಿ.ಮೀ. ಮಳೆ ದಾಖಲಾಗಿದೆ. ಕಳೆದ ವರ್ಷ ಇದೇ ದಿನ 35.36 ಮಿ.ಮೀ. ಮಳೆ ಸುರಿದಿತ್ತು. ಜನವರಿಯಿಂದ ಇಲ್ಲಿಯವರೆಗೆ 1189.61 ಮಿ.ಮೀ ಮಳೆ ದಾಖಲಾಗಿದೆ.ಮಡಿಕೇರಿ ತಾಲ್ಲೂಕಿನಲ್ಲಿ 164.4ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 46.1 ಮಿ.ಮೀ. ಮಳೆಯಾಗಿತ್ತು. ವೀರಾಜಪೇಟೆ ತಾಲ್ಲೂಕಿನಲ್ಲಿ 105.08 ಮಿ.ಮೀ. ಮಳೆ ಸುರಿದಿದೆ. ಕಳೆದ ವರ್ಷ ಇದೇ ದಿನ 36.05 ಮಿ.ಮೀ. ಮಳೆಯಾಗಿತ್ತು. ಸೋಮವಾರಪೇಟೆ ತಾಲ್ಲೂಕಿನಲ್ಲಿ 105.4 ಮಿ.ಮೀ. ಮಳೆ ಬಿದ್ದಿದೆ. ಕಳೆದ ವರ್ಷ ಇದೇ ದಿನ 23.93 ಮಿ.ಮೀ.  ಮಳೆಯಾಗಿತ್ತು.ಹೋಬಳಿವಾರು ಮಳೆ ವಿವರ: ಮಡಿಕೇರಿ ಕಸಬಾ 134.6 ಮಿ.ಮೀ., ನಾಪೋಕ್ಲು 131.2 ಮಿ.ಮೀ., ಸಂಪಾಜೆ 176.6 ಮಿ.ಮೀ., ಭಾಗಮಂಡಲ 215.2 ಮಿ.ಮೀ., ವೀರಾಜಪೇಟೆ ಕಸಬಾ 130.6 ಮಿ.ಮೀ., ಹುದಿಕೇರಿ 103.5 ಮಿ.ಮೀ., ಶ್ರಿಮಂಗಲ 171.2 ಮಿ.ಮೀ., ಪೊನ್ನಂಪೇಟೆ 101.2 ಮಿ.ಮೀ., ಅಮ್ಮತ್ತಿ 72 ಮಿ.ಮೀ., ಬಾಳಲೆ 52 ಮಿ.ಮೀ., ಸೋಮವಾರಪೇಟೆ ಕಸಬಾ 98.4 ಮಿ.ಮೀ., ಶನಿವಾರಸಂತೆ 128 ಮಿ.ಮೀ., ಶಾಂತಳ್ಳಿ 180.4 ಮಿ.ಮೀ., ಕೊಡ್ಲಿಪೇಟೆ 97.2 ಮಿ.ಮೀ., ಕುಶಾಲನಗರ 56.4 ಮಿ.ಮೀ., ಸುಂಟಿಕೊಪ್ಪ 72 ಮಿ.ಮೀ. ಮಳೆಯಾಗಿದೆ.ಮಳೆ: ರಕ್ಷಣಾ ಕಾರ್ಯಕ್ಕೆ ಸೂಚನೆ

ಜಿಲ್ಲೆಯಲ್ಲಿ ಮಳೆಯ ಅಬ್ಬರ ಹೆಚ್ಚಾಗಿದ್ದು, ಮಳೆಯಿಂದಾಗುವ ಅವಘಡಗಳಿಂದ ಜನರ ರಕ್ಷಣೆ ಅಧಿಕಾರಿಗಳು ಕ್ರಮ ವಹಿಸಬೇಕೆಂದು ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಬಿದ್ದಂಡ ಉಷಾ ದೇವಮ್ಮ ಸೂಚಿಸಿದರು.

ನಗರದ ಕೋಟೆ ವಿಧಾನ ಸಭಾಂಗಣದಲ್ಲಿ ಗುರುವಾರ ನಡೆದ ಜಿಲ್ಲಾ ಪಂಚಾಯಿತಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.ಜಿಲ್ಲಾ ಪಂಚಾಯಿತಿ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಬಲ್ಲಾರಂಡ ಮಣಿ ಉತ್ತಪ್ಪ ಮಾತನಾಡಿ, ಮಳೆಯ ಆರ್ಭಟದಿಂದ ಬಹುತೇಕ ಪ್ರದೇಶಗಳಲ್ಲಿ ಪ್ರವಾಹ ಉಂಟಾಗಿದೆ. ಪ್ರವಾಹ ಪೀಡಿತ ಪ್ರದೇಶಗಳ ಜನರ ಸಂಕಷ್ಟಕ್ಕೆ ಸ್ಪಂದಿಸಬೇಕು ಎಂದು ಅವರು ಸಲಹೆ ಮಾಡಿದರು.ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಎಸ್.ಎನ್.ರಾಜಾರಾವ್ ಮಾತನಾಡಿ, ಭಾಗಮಂಡಲ ಮತ್ತು ನಾಪೋಕ್ಲು ಸಂಚಾರ ಕಡಿತಗೊಂಡಿದೆ. ಎರಡು ಮೂರು ದಿನಗಳಿಂದ ಸುರಿಯುತ್ತಿರುವ ಬಾರಿ ಮಳೆಯಿಂದ ಪ್ರವಾಹ ಉಂಟಾಗಿದ್ದು, ಸಂಪರ್ಕ ಕಡಿತಗೊಂಡಿದ್ದು, ಇಲ್ಲಿ ಬೋಟ್ ಮತ್ತಿತರ ಮೂಲ ಸೌಲಭ್ಯ ಕಲ್ಪಿಸಲಾಗಿದೆ ಎಂದು ಅವರು ತಿಳಿಸಿದರು.ಕನ್ನಡ ಜಾಗೃತಿ ಸಮಿತಿ ಅಧ್ಯಕ್ಷ ಟಿ.ಪಿ.ರಮೇಶ್ ಮಾತನಾಡಿ, ಜಿಲ್ಲೆಯಲ್ಲಿ ಧಾರಾಕಾರ ಮಳೆಯಾಗುತ್ತಿರುವುದರಿಂದ ರಸ್ತೆಗಳಿಗೆ ಮರಗಳು ಉರುಳಿ ಬೀಳುತ್ತಿದ್ದು, ಅರಣ್ಯ ಮತ್ತು ಲೋಕೊಪಯೋಗಿ ಇಲಾಖೆ ಜಂಟಿಯಾಗಿ ಕಾರ್ಯನಿರ್ವಹಿಸಬೇಕು. ಇಂತಹ ಮರಗಳನ್ನು ತೆರವುಗೊಳಿಸಲು ಕ್ರಮವಹಿಸಬೇಕು ಎಂದು ಅವರು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯ ನಿರ್ವಾಹಕ ಅಧಿಕಾರಿ ಕೆ.ಬಿ.ಅಂಜನಪ್ಪ ಮಾತನಾಡಿ, ಈಗಾಗಲೇ ಪ್ರವಾಹ ಮುನ್ನೆಚ್ಚರಿಕೆ ಎದುರಿಸಲು ಜಿಲ್ಲಾಡಳಿತ ವತಿಯಿಂದ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಅಗತ್ಯವಿದ್ದಲ್ಲಿ ಗಂಜಿ ಕೇಂದ್ರವನ್ನು ತೆರೆಯಲಾಗುತ್ತದೆ ಎಂದರು.ಮಡಿಕೇರಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಧನಂಜಯ ಮಾತನಾಡಿ, ಆನೆ ಹಾವಳಿ ತಡೆಯಲು ಕಂದಕಗಳ ನಿರ್ಮಾಣ, ಸೋಲಾರ್ ಬೇಲಿ, ಪಟಾಕಿ, ಮದ್ದುಗುಂಡು ಸಿಡಿತ ಮತ್ತಿತರ ರೀತಿಯಲ್ಲಿ ನಿರ್ವಹಿಸಲಾಗುತ್ತಿದೆ ಎಂದರು.ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಅಲೆಕ್ಸಾಂಡರ್  ಮಾತನಾಡಿ, ವಿರಾಜಪೇಟೆ ವಿಭಾಗದಲ್ಲಿ ಕಾಡಾನೆ ಹಾವಳಿ ನಿಯಂತ್ರಿಸಲು ಈಗಾಗಲೇ ಕಾರ್ಯಪಡೆಯನ್ನು (ರ‌್ಯಾಪಿಡ್ ರೆಸ್ಪಾನ್ಸ್ ಟೀಮ್) ವನ ಪಾಲಕರ ನೇತೃತ್ವದಲ್ಲಿ ರಚನೆ ಮಾಡಲಾಗಿದ್ದು, ರಚನೆ ಮಾಡಲಾಗಿದ್ದು, ಕಾಡಾನೆ ಹಾವಳಿಯ ಪ್ರದೇಶಗಳಲ್ಲಿನ ಜನರು ದೂರವಾಣಿ ಅಥವಾ ಮೊಬೈಲ್ ಮೂಲಕ ಸಂಬಂಧಪಟ್ಟ ವನಪಾಲಕರಿಗೆ ಮಾಹಿತಿ ನೀಡಿದರೆ ತಕ್ಷಣವೇ ಈ ತಂಡ ಸ್ಥಳಕ್ಕೆ ತೆರಳಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಶ್ರಿನಿವಾಸ ರಾವ್ ಸೇರಿದಂತೆ ಹಲವು ಇಲಾಖಾಧಿಕಾರಿಗಳು ಭಾಗವಹಿಸಿದ್ದರು.ಕೆಲವೆಡೆ ತುಂತುರು: ಉಳಿದಂತೆ ಮಂದ ಬಿಸಿಲು

ಗೋಣಿಕೊಪ್ಪಲು:
ಆಕಾಶವೇ ಕಳಚಿಬಿದ್ದಂತೆ ಬುಧವಾರ ಎಡಬಿಡದೆ ಸುರಿದ ಮಳೆ ಗುರುವಾರ ಸಂಪೂರ್ಣವಾಗಿ ಬಿಡುವು ಕೊಟ್ಟಿತು. ಬಿರುನಾಣಿ, ಇರ್ಪು ಹಾಗೂ ಪರ್ವತ ಸಾಲುಗಳಲ್ಲಿ ಆಗಾಗ್ಗೆ ಸಾಧಾರಣ ಮಳೆಯಾಗಿದ್ದು ಬಿಟ್ಟರೆ ಇತರೆಡೆಗಳಲ್ಲಿ ಮಳೆ ಬೀಳಲಿಲ್ಲ.ಗೋಣಿಕೊಪ್ಪಲು, ಪಾಲಿಬೆಟ್ಟ, ಪೊನ್ನಂಪೇಟೆ, ತಿತಿಮತಿ ಮೊದಲಾದ ಭಾಗಗಳಲ್ಲಿ ಬೆಳಿಗ್ಗಿಯಿಂದಲೇ ಮೋಡಕವಿದ ವಾತಾವರಣದಲ್ಲಿ ಮಂದ ಬಿಸಿಲು ಕಾಣಿಸಿಕೊಂಡಿತು.ಬುಧವಾರ ಭಾರಿ ಮಳೆಯಿಂದ ಪ್ರವಾಹದ ಭೀತಿ ಮೂಡಿಸಿದ್ದ ಲಕ್ಷ್ಮಣತೀರ್ಥ ನದಿ  ನೀರಿನಲ್ಲಿ ಗುರುವಾರ ಏರಿಕೆ ಕಂಡು ಬರಲಿಲ್ಲ.ಗದ್ದೆ ಹಾಗೂ ಹಳ್ಳಕೊಳ್ಳಗಳಲ್ಲಿ ಮಾತ್ರ ನೀರು ತುಂಬಿ ತುಳುಕುತ್ತಿತ್ತು. ಭಾರಿ ಮಳೆ ಹಿನ್ನೆಲೆಯಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಗುರುವಾರ ರಜೆ ನೀಡಲಾಗಿತ್ತು. ದ್ವಿತೀಯ ಪಿಯು ಪೂರಕ ಪರೀಕ್ಷೆ ನಡೆಯುತ್ತಿರುವುದರಿಂದ ಪದವಿಪೂರ್ವ ಕಾಲೇಜುಗಳು ಎಂದಿನಂತೆ ಕಾರ್ಯನಿರ್ವಹಿಸಿದವು. ಮಳೆ ಬಿಡುವುಕೊಟ್ಟಿದ್ದರಿಂದ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೂ ಯಾವುದೇ ತೊಂದರೆಯಾಗಲಿಲ್ಲ.ಧಾರಾಕಾರ ಮಳೆ: ಉಕ್ಕಿಹರಿದ ಕಾವೇರಿ

ಕುಶಾಲನಗರ:
ಸತತ ಎರಡು ದಿನಗಳಿಂದ ನೆಲ್ಯಹುದಿಕೇರಿ, ಸಿದ್ದಾಪುರ ಸೇರಿದಂತೆ ಸುಂಟಿಕೊಪ್ಪ ಮತ್ತು ಕುಶಾಲನಗರ ಹೋಬಳಿಗಳಾದ್ಯಂತ ಧಾರಾಕಾರವಾಗಿ ಮಳೆ ಸುರಿಯುತ್ತಿರುವ ಪರಿಣಾಮ ಕಾವೇರಿ ನದಿ ಉಕ್ಕಿಹರಿಯುತ್ತಿದೆ.ಮುನ್ನೆಚ್ಚರಿಕೆ ಕ್ರಮವಾಗಿ ಬರಡಿ ಮತ್ತು ಬೆಟ್ಟದಕಾಡು ಜನರನ್ನು ನೆಲ್ಯಹುದಿಕೇರಿಯ ಗಂಜಿಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ.

ಕಳೆದ ಸೋಮವಾರ ಸಂಜೆಯಿಂದಲೇ ಸುರಿಯುತ್ತಿರುವ ಮಳೆ ಮಂಗಳವಾರ ಕೊಂಚ ಕಡಿಮೆಯಾಗಿತ್ತಾದರೂ ಬುಧವಾರ ಪುನಃ ರಭಸವಾಗಿ ಸುರಿಯಿತು. ಬುಧವಾರ ಸಂಜೆ ಐದು ಗಂಟೆ ಸಮಯಕ್ಕೆ ಆರಂಭವಾದ ಮಳೆ ರಾತ್ರಿ ಇಡೀ ಸುರಿಯಿತು. ಪರಿಣಾಮ, ಗುರುವಾರ ಬೆಳಿಗ್ಗೆಯಿಂದ ಕಾವೇರಿ ನದಿ ಉಕ್ಕಿ ಹರಿಯುತ್ತಿದೆ.ನೆಲ್ಯಹುದಿಕೇರಿ ಬಳಿಯ ಬೆಟ್ಟದಕಾಡು ಮತ್ತು ಬರಡಿ ಗ್ರಾಮಗಳು ಜಲಾವೃತವಾಗಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ವಿಷಯ ತಿಳಿದ ಸೋಮವಾರಪೇಟೆ ತಹಶೀಲ್ದಾರ್ ವೆಂಕಟಾಚಲಯ್ಯ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಗಂಜಿ ಕೇಂದ್ರ ತೆರೆಯಲು ಆದೇಶಿಸಿದರು.ಬರಡಿ ಮತ್ತು ಬೆಟ್ಟದಕಾಡು ಗ್ರಾಮಗಳ ಕೆಲವು ಕುಟುಂಬಗಳನ್ನು ಸ್ಥಳಾಂತರಿಸಲಾಗಿದ್ದು ನೆಲ್ಯಹುದಿಕೇರಿಯಲ್ಲಿ ಗಂಜಿಕೇಂದ್ರ ಸ್ಥಾಪಿಸಿ ರಕ್ಷಿಸಿಲಾಗಿದೆ ಎಂದು ಕುಶಾಲನಗರ ಉಪತಹಶಿಲ್ದಾರ್ ಪದ್ಮಪ್ಪ ತಿಳಿಸಿದ್ದಾರೆ. ಸದ್ಯ ಜನರನ್ನು ಗಂಜಿಕೇಂದ್ರಕ್ಕೆ ಸ್ಥಳಾಂತರಿಸಲಾಗಿದ್ದು ಯಾವುದೇ ಸಾವು ನೋವುಗಳು ಸಂಭವಿಸಿಲ್ಲ.ಇನ್ನು ಹಾರಂಗಿ ಜಲಾನಯನ ಪ್ರದೇಶದಲ್ಲಿ ಧಾರಾಕಾರ ಮಳೆ ಸುರಿದಿದ್ದು ಸುಂಟಿಕೊಪ್ಪ ಸಮೀಪದ ನಾಕೂರು ಶಿರಂಗಾಲದಲ್ಲಿ ಹಾರಂಗಿ ಜಲಾಶಯದ ಹಿನ್ನೀರು ಕೆಲವು ಮನೆಗಳಿಗೆ ನುಗ್ಗಿರುವ ಕುರಿತು ವರದಿಯಾಗಿದೆ. ನಂಜರಾಯಪಟ್ಟಣ, ಗುಡ್ಡೆಹೊಸೂರು ಹಾಗೂ ಇತರೆ ಕಡೆಗಳಲ್ಲಿ ಕಾವೇರಿ ನದಿ ಉಕ್ಕಿ ಹರಿಯುತ್ತಿರುವುದರಿಂದ ಹೊಲ ಗದ್ದೆಗಳೆಲ್ಲ ಜಲಾವೃತಗೊಂಡಿವೆ.ಹಾರಂಗಿಯಲ್ಲಿ ನೀರಿನ ಪ್ರಮಾಣ ಹೆಚ್ಚಾದ ಕಾರಣದಿಂದ 22.400 ಕ್ಯೂಸೆಕ್ಸ್ ನೀರನ್ನು ಹರಿಬಿಡಲಾಗುತ್ತಿದ್ದು, ಕುಶಾಲನಗರದಿಂದ ಸೋಮವಾರಪೇಟೆಗೆ ತೆರಳುವ ಮಾರ್ಗದ ಹಾರಂಗಿ ಬಳಿಯ ಸೇತುವೆ ಸಂಪೂರ್ಣ ನೀರಿನಿಂದ ಮುಚ್ಚಿಹೋಗಿದ್ದು ಸಂಚಾರಕ್ಕೆ ಸಮಸ್ಯೆಯಾಗಿತ್ತು.ಮೂರು ದಿನಗಳಿಂದ ಧಾರಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಕಾವೇರಿ ನದಿಯು ಉಕ್ಕಿಹರಿಯುತ್ತಿರುವ ಪರಿಣಾಮವಾಗಿ ಹಲವೆಡೆ ಜನಜೀವನ ಅಸ್ತವ್ಯಸ್ತವಾಗಿದೆ. ಇನ್ನು ಕೆಲವು ಗ್ರಾಮಗಳ ಹೊಲಗದ್ದೆಗಳೆಲ್ಲಾ ಸಂಪೂರ್ಣ ಜಲಾವೃತಗೊಂಡಿದ್ದು ಜನರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.ಶಾಲಾ-ಕಾಲೇಜಿಗೆ ರಜೆ ಇಂದು: ಮುಂಜಾಗ್ರತೆಯಿಂದಾಗಿ ಬುಧವಾರ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ಗುರುವಾರವು ಮಳೆ ಧಾರಾಕಾರವಾಗಿ ಸುರಿಯುತ್ತಿರುವುದರಿಂದ ಶುಕ್ರವಾರವು ಶಾಲೆಗಳಿಗೆ ರಜೆ ಘೋಷಿಸಲಾಗಿದೆ.

ಗ್ರಾಮಗಳು ಜಲಾವೃತನಾಪೋಕ್ಲು: ಜಿಲ್ಲೆಯಲ್ಲಿ ವರುಣನ ಆರ್ಭಟ ಮುಂದುವರಿದಿದ್ದು ನಾಪೋಕ್ಲು ವ್ಯಾಪ್ತಿಯಲ್ಲಿ ಬುಧವಾರ ರಾತ್ರಿ ಸುರಿದ ಭಾರೀ ಮಳೆಯಿಂದ ಕಾವೇರಿ ನದಿ ಮೈದುಂಬಿ ಹರಿಯುತ್ತಿದೆ.ಭಾಗಮಂಡಲದಲ್ಲಿ ದಾಖಲೆ ಮಳೆಯಾದ ಹಿನ್ನೆಲೆಯಲ್ಲಿ ನಾಪೋಕ್ಲು- ಮೂರ್ನಾಡು ರಸ್ತೆಯು ಬೊಳಿಬಾಣೆಯಲ್ಲಿ ಜಲಾವೃತವಾಗಿದ್ದು, ವಾಹನ ಸಂಚಾರ ಕಡಿತಗೊಂಡಿದೆ.ಸಮೀಪದ ಬಲ್ಲಮಾವಟಿ ಬಳಿ ತಂಡ್ರಹೊಳೆ ಸೇತುವೆ ಮೇಲೆ ಪ್ರವಾಹ ಬಂದಿದ್ದು ಸಂಚಾರ ಸ್ಥಗಿತಗೊಂಡಿದೆ.

ಭಾಗಮಂಡಲದಲ್ಲಿ ಕಾವೇರಿ ನದಿಯ ಪ್ರವಾಹದಿಂದ ನಾಪೋಕ್ಲು ರಸ್ತೆಯ ಸಂಪರ್ಕ ಕಡಿತಗೊಂಡಿದ್ದು, ಕೋರಂಗಾಲ, ಅಯ್ಯಂಗೇರಿ, ಸಣ್ಣಪುಲಿಕೋಟು, ದೊಡ್ಡಪುಲಿಕೋಟು, ಪೇರೂರು ಗ್ರಾಮಗಳ ಕೆಲವು ಪ್ರದೇಶಗಳು ಜಲಾವೃತವಾಗಿವೆ.ನಾಪೋಕ್ಲುವಿನಿಂದ ಭಾಗಮಂಡಲ ಕಡೆಗೆ ತೆರಳುವ ಬಸ್ಸುಗಳು ಬಲ್ಲಮಾವಟಿ ಗ್ರಾಮದವರೆಗೆ ಮಾತ್ರ ತೆರಳುತ್ತಿವೆ.

ಕಕ್ಕಬ್ಬೆ ಹೊಳೆ ನೀರು ಅಪಾಯಮಟ್ಟದಲ್ಲಿ ಹರಿಯುತ್ತಿದೆ. ನಾಪೋಕ್ಲು- ಪಾರಾಣೆ ರಸ್ತೆಯ ಎತ್ತುಕಡು ಸೇತುವೆಯ ಬಳಿ ಕಕ್ಕಬ್ಬೆ ನದಿ ನೀರು ತುಂಬಿ ಹರಿಯುತ್ತಿದೆ. ಈ ವ್ಯಾಪ್ತಿಯಲ್ಲಿ ಎಲ್ಲ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿದೆ. ಬುಧವಾರ ರಾತ್ರಿ ಗುಡುಗು ಸಹಿತ ಮಳೆಯಾಗಿದ್ದು ಗುರುವಾರ ಮಳೆ ಗಣನೀಯ ಪ್ರಮಾಣದಲ್ಲಿ ಇಳಿಮುಖಗೊಂಡಿತು.ತುಂಬಿ ಹರಿದ ಚಿಕ್ಲಿ ಹೊಳೆ ಜಲಾಶಯ

ಕುಶಾಲನಗರ:
ಹಾರಂಗಿ ಉಪವಿಭಾಗ ಹುಲುಗುಂದ ಚಿಕ್ಲಿಹೊಳೆ ಜಲಾಶಯವು ತುಂಬಿಹರಿಯುತ್ತಿದ್ದು, ಪ್ರವಾಸಿಗರು ಆಗಮಿಸುತ್ತಿದ್ದಾರೆ.ಹಾರಂಗಿ ಹಾಗೂ ಚಿಕ್ಲಿಹೊಳೆ ಜಲಾನಯನ ಪ್ರದೇಶದಲ್ಲಿ ಮೂರು ದಿನಗಳಿಂದ ಎಡಬಿಡದೆ ಮಳೆ ಸುರಿಯುತ್ತಿದ್ದು ಬುಧವಾರ ರಾತ್ರಿ ಸುರಿದ ಧಾರಾಕಾರ ಮಳೆಯಿಂದಾಗಿ ಚಿಕ್ಲಿಹೊಳೆ ಜಲಾಶಯ ತುಂಬಿಹರಿಯುತ್ತಿದೆ.ಚಿಕ್ಲಿಹೊಳೆ ಜಲಾಶಯವು ಗರಿಷ್ಠ 872.60 ಮೀಟರ್ ಅಡಿ ಸಾಮರ್ಥ್ಯ ಹೊಂದಿದೆ.  ಗುರುವಾರ ಸಂಜೆಯ ವರದಿಯಂತೆ 872.75 ಅಡಿ ನೀರು ಸಂಗ್ರಹವಾಗಿದ್ದು ಹೆಚ್ಚುವರಿ ಒಂದು ಅಡಿ ಅಂದರೆ 100 ಕ್ಯೂಸೆಕ್ಸ್ ನೀರು ಜಲಾಶಯದಿಂದ ಹೊರಹೋಗುತ್ತಿದ್ದು ಅಷ್ಟೇ ಪ್ರಮಾಣದ ಒಳಹರಿವು ಇದೆ.`ಹಾರಂಗಿಯಿಂದ ರೈತರಿಗೆ ಬಿಡುವ ನೀರು ಜಿಲ್ಲೆಯ ರೈತರಿಗಿಂತ ಹೊರಜಿಲ್ಲೆಯ ರೈತರ ಭೂಮಿಗೆ ಬಳಕೆಯಾಗುತ್ತದೆ. ಆದರೆ, ಚಿಕ್ಲಿಹೊಳೆ ಜಲಾಶಯದಿಂದ ಕಾಲುವೆಯಲ್ಲಿ ಹರಿಸುವ ನೀರು ಸಂಪೂರ್ಣ ಜಿಲ್ಲೆಯ ರೈತರಿಗೆ ಬಳಕೆಯಾಗುತ್ತಿದೆ.ಇದೇ 10ರ ಒಳಗೆ ನೀರಾವರಿ ಸಲಹಾ ಸಮಿತಿ ಸಭೆ ನಡೆಯಲಿದ್ದು 10 ನಂತರ ಕಾಲುವೆಯಲ್ಲಿ ನೀರು ಹರಿಸಲಾಗುವುದು' ಎಂದು ಚಿಕ್ಲಿಹೊಳೆ ಸಹಾಯಕ ಎಂಜಿನಿಯರ್ ಪಿ. ಚಂದ್ರಶೇಖರ್ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry