ಅಬ್ಬರಿಸುತ್ತಿರುವ ಮಳೆ : ಐವರ ಸಾವು

7

ಅಬ್ಬರಿಸುತ್ತಿರುವ ಮಳೆ : ಐವರ ಸಾವು

Published:
Updated:
ಅಬ್ಬರಿಸುತ್ತಿರುವ ಮಳೆ : ಐವರ ಸಾವು

ಬೆಂಗಳೂರು: ರಾಜಧಾನಿಯಲ್ಲಿ ಶುಕ್ರವಾರದಿಂದೀಚೆಗೆ ಸುರಿದ ಭಾರಿ ಮಳೆಗೆ ತತ್ತರಿಸಿದ್ದ ಜನಜೀವನ ಇನ್ನೂ ಸಹಜ ಸ್ಥಿತಿಗೆ ಮರಳಿಲ್ಲ. ಈ ನಡುವೆ ಶನಿವಾರ ಸಂಜೆಯೂ ಸುರಿದ ಮಳೆಗೆ ಮೂವರು ಸಾವನ್ನಪ್ಪಿದ್ದಾರೆ. ಚನ್ನ ಪಟ್ಟಣದಲ್ಲಿ ಇಬ್ಬರು ಬಲಿಯಾಗಿದ್ದಾರೆ. ಇನ್ನೂ ಒಂದೆರೆಡು ದಿನ ಮಳೆ ಮುಂದುವರೆಯುವ ಮುನ್ಸೂಚನೆ ಇದೆ.

ನಗರದ ಸ್ವಾತಂತ್ರ್ಯ ಉದ್ಯಾನದ ತಡೆಗೋಡೆ ರಾತ್ರಿ ಕುಸಿದು ಸಿವಿಲ್ ಎಂಜಿನಿಯರ್ ಸಾವನ್ನಪ್ಪಿದ್ದರೆ, ಸಿಟಿ ಮಾರುಕಟ್ಟೆ ಸಮೀಪ ವಿದ್ಯುತ್ ಪ್ರವಹಿಸಿ ಸಾಫ್ಟ್‌ವೇರ್ ಎಂಜಿನಿಯರ್ ಮೃತಪಟ್ಟಿದ್ದಾರೆ.ಸುಮಾರು 70 ಕಡೆಗಳಲ್ಲಿ ಅನಾಹುತ ಸಂಭವಿಸಿದ್ದು, ಅಪಾರ ಪ್ರಮಾಣದ ಆಸ್ತಿಪಾಸ್ತಿ ನಷ್ಟವಾಗಿದೆ. ಹಲವೆಡೆ ಮನೆಗಳು ಕುಸಿದುಬಿದ್ದಿವೆ. ಮಳೆಯ ನೀರು ಮ್ಯಾನ್‌ಹೋಲ್ ಮೂಲಕ ಉಕ್ಕಿ ಹರಿದರೆ, ಕಾಲುವೆಗಳಲ್ಲಿನ ಪ್ರವಾಹ ಉಂಟಾಗಿ ಮನೆಗಳಿಗೆ ನೀರು ನುಗ್ಗಿದೆ. ಗಾಳಿ ಆಂಜನೇಯಸ್ವಾಮಿ ದೇವಾಲಯಕ್ಕೆ ನುಗ್ಗಿದ ಚರಂಡಿ ನೀರನ್ನು ದೇವಾಲಯದ ಆಡಳಿತ ಮಂಡಳಿ ಸದಸ್ಯರು ಪಾಲಿಕೆಯ ಸಿಬ್ಬಂದಿ ನೆರವಿನಿಂದ ಹೊರ ಹಾಕಿ ಆವರಣವನ್ನು ಸ್ವಚ್ಛಗೊಳಿಸಿದರು.ಮಳೆಗಾಲದಲ್ಲಿ ಯಾವುದೇ ಅನಾಹುತ ಉಂಟಾಗದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವುದಾಗಿ ಪಾಲಿಕೆ ಹೇಳುತ್ತಲೇ ಇದ್ದರೂ ಕನಿಷ್ಠ ಸಿದ್ಧತೆಯನ್ನೂ ಮಾಡಿಕೊಂಡಿಲ್ಲ ಎಂಬುದು ಪೂರ್ವ ಮುಂಗಾರು ಮಳೆಯಿಂದ    ಸಾಬೀತಾಯಿತು.ಸಚಿವರಾದ ಆರ್.ಅಶೋಕ್, ಸುರೇಶ್ ಕುಮಾರ್, ಮೇಯರ್ ಎಸ್.ಕೆ.ನಟರಾಜ್, ಬೃಹತ್ ಕಾಮಗಾರಿ ಸ್ಥಾಯಿ ಸಮಿತಿ ಅಧ್ಯಕ್ಷ ಎಚ್.ರವೀಂದ್ರ, ಆಯುಕ್ತ ಸಿದ್ದಯ್ಯ, ಪ್ರಧಾನ ಎಂಜಿನಿಯರ್ ಬಿ.ಟಿ.ರಮೇಶ್ ಮತ್ತು ಅಧಿಕಾರಿಗಳ ತಂಡ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಶನಿವಾರ ಭೇಟಿ ನೀಡಿ ಪರಿಶೀಲಿಸಿತು.ಎಂಟು ಮನೆ ಕುಸಿತ: ಬಾಪೂಜಿ ನಗರದ ಶಾಮಣ್ಣನಗರ ಬಳಿ ಹಾದುಹೋಗಿರುವ ವೃಷಭಾವತಿ ನಾಲೆಯ ತಡೆಗೋಡೆಗೆ ಹೊಂದಿಕೊಂಡಂತೆಯೇ ಇರುವ ಎಂಟು ಮನೆಗಳು ಕುಸಿದಿವೆ. ಇದರಲ್ಲಿ ಎರಡು ಮನೆಗಳು ಸಂಪೂರ್ಣ ಕುಸಿದಿದ್ದರೆ, ಆರು ಮನೆಗಳಿಗೆ ಭಾಗಶಃ ಹಾನಿಯಾಗಿರುವುದನ್ನು ಮೇಯರ್ ವೀಕ್ಷಿಸಿದರು.ಈ ಸಂದರ್ಭದಲ್ಲಿ ಸ್ಥಳೀಯ ನಿವಾಸಿ ಸೈಯದ್ ಯೂಸಫ್, ‘ಮಗಳ ಮದುವೆ ನಿಶ್ಚಯವಾಗಿತ್ತು. ಹಾಗಾಗಿ ಸಾಕಷ್ಟು ಆಹಾರ ಪದಾರ್ಥ, ಅಗತ್ಯ ವಸ್ತುಗಳನ್ನು ಮನೆಯಲ್ಲಿ ಸಂಗ್ರಹಿಸಿಡಲಾಗಿತ್ತು. ಆದರೆ ಮಳೆಗೆ ಮನೆ ಬಹುತೇಕ ಕೊಚ್ಚಿ ಹೋಗಿದ್ದು, ದಿಕ್ಕು ತೋಚದಂತಾಗಿದೆ’ ಎಂದು ಅಳಲು ತೋಡಿಕೊಂಡರು.ಇದಕ್ಕೆ ದನಿಗೂಡಿಸಿದ ಸ್ಥಳೀಯ ವಾರ್ಡ್ ಸದಸ್ಯ ಟಿ.ವಿ.ಕೃಷ್ಣ, ‘ಈ ಭಾಗದಲ್ಲಿ ಬಡವರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಉಳಿದ ಮನೆಗಳು ಶಿಥಿಲಗೊಂಡಿದ್ದು, ಯಾವುದೇ ಕ್ಷಣದಲ್ಲಿ ಬೀಳುವ ಸ್ಥಿತಿಯಲ್ಲಿವೆ. ಹಾಗಾಗಿ ಬೇರೆಡೆ ವಸತಿ ಸೌಲಭ್ಯ ಕಲ್ಪಿಸಬೇಕು’ ಎಂದು ಮನವಿ ಮಾಡಿದರು.ಪಾದರಾಯನಪುರ ಬಳಿಯ ರಾಜ ಕಾಲುವೆ ಸಮೀಪದ ಸುಮಾರು 20 ಮನೆಗಳಿಗೆ ನೀರು ನುಗ್ಗಿದೆ. ತಗ್ಗು ಪ್ರದೇಶವಾಗಿರುವುದರಿಂದ ರಸ್ತೆಯಲ್ಲಿ ನೀರು ಹರಿದ ರಭಸಕ್ಕೆ ದ್ವಿಚಕ್ರ ವಾಹನಗಳು ಕೊಚ್ಚಿ ಹೋಗಿವೆ.ಜಗಜೀವನರಾಂನಗರದ ರಾಯಪುರದ ಬಿನ್ನಿಮಿಲ್ ಮೈದಾನದ ತಡೆಗೋಡೆ ಕುಸಿದು ಮನೆಗಳಿಗೆ ಹಾನಿಯಾಗಿದೆ.  ಬಾಕಿ ಉಳಿದ ಗೋಡೆಯನ್ನು ಕೂಡಲೇ ತೆರವುಗೊಳಿಸುವಂತೆ ಆಯುಕ್ತರು ಸೂಚನೆ ನೀಡಿದರು. ಈ ಸ್ಥಳದಲ್ಲಿ ಶಾಸಕ ಬಿ.ಜಡ್.ಜಮೀರ್ ಅಹಮ್ಮದ್ ಖಾನ್ ಉಪಸ್ಥಿತರಿದ್ದರು.

 ದಾಖಲೆಯ ಮಳೆ

‘ಕಳೆದ 10 ವರ್ಷಗಳ ಏಪ್ರಿಲ್ ತಿಂಗಳುಗಳಿಗೆ ಹೋಲಿಸಿದರೆ ನಗರದಲ್ಲಿ ಈ ಬಾರಿ ದಾಖಲೆಯ ಮಳೆಯಾಗಿದೆ. 2001ರ ಏಪ್ರಿಲ್‌ನಲ್ಲಿ ನಗರದಲ್ಲಿ 108.6 ಮಿ.ಮೀ ಮಳೆಯಾಗಿತ್ತು. ಈ ಬಾರಿ 103.7 ಮಿ.ಮೀ ಮಳೆಯಾಗಿದೆ’ ಎಂದು ಹವಾಮಾನ ಇಲಾಖೆ ನಿರ್ದೇಶಕ ಬಿ.ಪುಟ್ಟಣ್ಣ ‘ಪ್ರಜಾವಾಣಿ’ಗೆ ತಿಳಿಸಿದರು.‘ಅಂತೆಯೇ ಎಚ್‌ಎಎಲ್ ವಿಮಾನ ನಿಲ್ದಾಣ ಕಾರ್ಯಾರಂಭ ಮಾಡಿದ ನಂತರ ಸುತ್ತಮುತ್ತಲ ಪ್ರದೇಶದಲ್ಲಿ ಯಾವುದೇ ವರ್ಷದ ಏಪ್ರಿಲ್ ತಿಂಗಳಿನಲ್ಲಿ ಅತಿ ಹೆಚ್ಚು ಮಳೆ ಸುರಿದ ದಾಖಲೆ ಇಲ್ಲ. ಈ ಬಾರಿ ಎಚ್‌ಎಎಲ್ ವಿಮಾನ ನಿಲ್ದಾಣ ಸುತ್ತಮುತ್ತಲ ಪ್ರದೇಶದಲ್ಲಿ 11 ಸೆಂ.ಮೀನಷ್ಟು ದಾಖಲೆಯ ಮಳೆಯಾಗಿದೆ’ ಎಂದು ಅವರು ಹೇಳಿದರು.

 

ಚನ್ನಪಟ್ಟಣದಲ್ಲೂ  ಅನಾಹುತ

ಪ್ರಜಾವಾಣಿ ವಾರ್ತೆ

ರಾಮನಗರ: 
ಚನ್ನಪಟ್ಟಣದಲ್ಲಿ ಶನಿವಾರ ಭಾರಿ ಮಳೆ ಸುರಿಯುತ್ತಿದ್ದ ಸಂದರ್ಭದಲ್ಲಿ ಇಬ್ಬರು ಅಸುನೀಗಿದ್ದಾರೆ.

ಕಣ್ವ ಅಚ್ಚುಕಟ್ಟು ಪ್ರದೇಶವಾದ ಕೂಟಮಾರನಹಳ್ಳಿ ಗ್ರಾಮದಲ್ಲಿ ಮಳೆ ಸುರಿಯುತ್ತಿರುವಾಗಲೇ ಮರಳು ತೆಗೆಯುತ್ತಿದ್ದ ಇಬ್ಬರು ಮರಳು ಕುಸಿದ ಕಾರಣ ಉಸಿರುಗಟ್ಟಿ ಭೂ ಸಮಾಧಿಯಾಗಿದ್ದಾರೆ.ಮೃತರನ್ನು ಗುಂಡ (30) ಮತ್ತು ಗೋವಿಂದ (30) ಎಂದು ಗುರುತಿಸಲಾಗಿದ್ದು,  ಒಬ್ಬರ ಶವವನ್ನು ಹೊರ ತೆಗೆಯಲಾಗಿದ್ದು,ಆಸ್ಪತ್ರೆಯಲ್ಲಿಡಲಾಗಿದೆ. ಇನ್ನೊಬ್ಬರ ಶವ ಮರಳಿನಲ್ಲಿ ಹುದುಗಿದ್ದು, ಹೊರ ತೆಗೆಯಲು ಪೊಲೀಸರು ಶೋಧ ನಡೆಸಿದ್ದಾರೆ.

 

ರಾಜ್ಯದಲ್ಲಿ ಇನ್ನೂ ಮೂರು ದಿನ ಮಳೆ

ಪ್ರಜಾವಾಣಿ ವಾರ್ತೆ

ಬೆಂಗಳೂರು
: ದಟ್ಟವಾದ ಚಂಡಮಾರುತಗಳು ಈಶಾನ್ಯ ಕರಾವಳಿಯ ಮೂಲಕ ಪ್ರಖರವಾಗಿ ಬೀಸುತ್ತಿದ್ದು, ರಾಜ್ಯದಲ್ಲಿ ಇನ್ನು ಮೂರು ದಿನಗಳ ಕಾಲ ಮಳೆ ಮುಂದುವರೆಯುವ ಸಾಧ್ಯತೆಯಿದೆ.ಮಳೆಯನ್ನು ಹೊತ್ತು ತರುತ್ತಿರುವ ಮಾರುತಗಳು ಪಶ್ಚಿಮ ಬಂಗಾಳ ಮತ್ತು ಆಂಧ್ರಪ್ರದೇಶದ ಮೂಲಕ ರಾಜ್ಯವನ್ನು ಪ್ರವೇಶ ಮಾಡಿದ್ದು, ಲಕ್ಷದ್ವೀಪದ ಕಡೆ ಸಾಗುತ್ತಿವೆ. ಇದರಿಂದ ದಕ್ಷಿಣ ಒಳನಾಡು ಸೇರಿದಂತೆ ಬಹುತೇಕ ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗಲಿದೆ. ಮಳೆಯಿಂದಾಗಿ ತಾಪಮಾನ ಕನಿಷ್ಠ ಪ್ರಮಾಣಕ್ಕೆ ಕುಸಿದಿದ್ದು, ಮೋಡಕವಿದ ವಾತಾವರಣ ಮುಂದುವರೆಯಲಿದೆ.ರಾಜ್ಯದ ದಕ್ಷಿಣ ಒಳನಾಡಿನ ರೈತರು ಬಿತ್ತನೆ ಹಾಗೂ ಕೊಯ್ಲು ಚಟುವಟಿಕೆಯಲ್ಲಿ ತೊಡಗದಂತೆ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಹವಾಮಾನ ವಿಭಾಗ ಮುನ್ನೆಚ್ಚರಿಕೆ ನೀಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry