ಭಾನುವಾರ, ಡಿಸೆಂಬರ್ 15, 2019
26 °C

ಅಬ್ಬಾ ಅಡುಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಬ್ಬಾ ಅಡುಗೆ

ಅಡುಗೆ ವೃತ್ತಿಯಾಗಿರುವುದು ಹೊಸತಲ್ಲ. ಆದರೀಗ ಅದು ಜ್ಞಾನದ ಶಾಖೆಯಂತೆ ಪಸರಿಸುತ್ತಿದೆ. ಲೋಕದ ನಾನಾಬಗೆಯ ಖಾದ್ಯಗಳನ್ನು ತಯಾರಿಸುವುದಷ್ಟೇ ಅಲ್ಲ, ಅಲಂಕರಿಸುವುದು, ಪ್ರದರ್ಶಿಸುವುದೂ ಕಲೆಯಾಗಿದೆ. ಅಡುಗೆ ಕಲೆಯ ಕಲಿಕೆಗಾಗಿ ಟೀವಿಯ ವಿವಿಧ ವಾಹಿನಿಗಳು ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿವೆ. ಇಂಥ ಶೋಗಳು ಎಲ್ಲ ವಯೋಮಾನದವರನ್ನೂ ಸೆಳೆಯುತ್ತಿವೆ. ಇದೇ ಕಾರಣದಿಂದ ವಿವಿಧ ವಾಹಿನಿಗಳು ತಮ್ಮ ಶೋ ಜನರ ಬಳಿ ಬರಲಿ ಎಂದು ಬಯಸುತ್ತಿವೆ. ಇಂಥದ್ದೇ ಒಂದು ಪ್ರಯತ್ನ ಇತ್ತೀಚೆಗೆ ನಗರದ ಬನ್ನೇರುಘಟ್ಟ ರಸ್ತೆಯಲ್ಲಿರುವ ಮೀನಾಕ್ಷಿ ಮಾಲ್‌ನಲ್ಲಿರುವ ಹೈಪರ್ ಸಿಟಿಯಲ್ಲಿ ನಡೆಯಿತು.ಫುಡ್ ಚಾನೆಲ್ಗಳ ಅಡುಗೆ ಸ್ಪರ್ಧೆಗಾಗಿ ದೇಶದಾದ್ಯಂತ ನಡೆಯುತ್ತಿರುವ 30 ಬಾಣಸಿಗರ ಬೇಟೆಗಾಗಿ ಬೆಂಗಳೂರಿನಲ್ಲೂ ಸ್ಪರ್ಧೆ ಆಯೋಜಿಸಲಾಗಿತ್ತು. ಒಂದು ತಿಂಗಳ ಹಿಂದೆಯೇ ನೀಡಿದ ಜಾಹೀರಾತು, ಪ್ರಕಟಣೆಯನ್ನು ಆಧರಿಸಿ ಹಲವು ಮಂದಿ ತಮ್ಮ ವಿಶೇಷ ಖಾದ್ಯ ತಯಾರಿಸುವ ಬಗೆಯನ್ನು ಬರೆದು ‘ಹೈಪರ್ ಶೆಫ್ ಚಾಲೆಂಜ್’ಗೆ ಕಳುಹಿಸಿದ್ದರು.ಬೆಂಗಳೂರಿನ ಮೀನಾಕ್ಷಿ ಮಾಲ್ ಹಾಗೂ ಆರ್ಬಿಟ್ ಮಾಲ್‌ನಲ್ಲಿ ಸ್ಪರ್ಧೆ ಏರ್ಪಡಿಸಲಾಗಿತ್ತು. ಒಟ್ಟು 60 ಜನ ಪಾಲ್ಗೊಂಡಿದ್ದರು. ಪ್ರತಿಯೊಬ್ಬರೂ ತಮ್ಮ ಕೈರುಚಿಯ ಖಾದ್ಯ ಸಿದ್ಧಪಡಿಸಿ ಸ್ಪರ್ಧೆಗೆ ತರಬೇಕಿತ್ತು. 60 ಬಗೆಯ ಖಾದ್ಯಗಳು ಆಕರ್ಷಕವಾಗಿ ಅಲಂಕೃತಗೊಂಡು ತೀರ್ಪುಗಾರರ ಗಮನ ಸೆಳೆಯಲು ಸಿದ್ಧವಾಗಿದ್ದವು.ತೀರ್ಪುಗಾರರಾಗಿ ಆಗಮಿಸಿದ್ದು ಪ್ರಸಿದ್ಧ ಬಾಣಸಿಗ ಶೈಲೇಂದ್ರ ಕೇಕಡೆ. ಸ್ಪರ್ಧೆಯಲ್ಲಿ ಪಾಲ್ಗೊಂಡ ಪ್ರತಿಯೊಬ್ಬರ ವ್ಯಂಜನದ ರುಚಿ ನೋಡಿ, ಅದರ ವೈಶಿಷ್ಟ್ಯವನ್ನು ಅವರು ವಿವರಿಸುತ್ತಿದ್ದರು. ರುಚಿ ಹೆಚ್ಚಿಸಲು ಏನೇನು ಮಾಡಬೇಕು ಎಂಬ ಟಿಪ್ಸ್‌ ಕೂಡ ನೀಡಿದರು.

ಅವರೂ ಸರಳವಾಗಿ ಮಾಡಬಹುದಾದ ಕೆಲವು ತಿನಿಸುಗಳನ್ನು ಮಾಡಿ ತೋರಿಸಿದರು. ಬೀಟ್‌ರೂಟ್‌ ಬಳಸಿ ಸಿದ್ಧಪಡಿಸಿದ ಆ್ಯಪಿಟೈಸರ್ ಖಾದ್ಯ ನೆರೆದವರು ಕಣ್ಣರಳಿಸುವಂತೆ ಮಾಡಿತ್ತು. ಬಿಸ್ಕತ್ತು ಮತ್ತು ಚಾಕೊಲೇಟಿನಿಂದ ಸಿದ್ಧಪಡಿಸಿದ್ದ ಡೆಸರ್ಟ್ ಎಲ್ಲರ ಮನ ತಣಿಸಿತು.

ರುಚಿಕಟ್ಟಾದ ಡೆಸರ್ಟ್ ಸಿದ್ಧಪಡಿಸಿದ್ದ ಸಜ್ಜಲ್ ರಖೇಚಾ ಅವರಿಗೆ ಮೊದಲ ಬಹುಮಾನ ಹಾಗೂ ಮುಂಬೈನಲ್ಲಿ ನಡೆಯಲಿರುವ ಗ್ರಾಂಡ್ ಫಿನಾಲೆ ಪ್ರವೇಶ ಪಡೆಯುವ ಅವಕಾಶ ದೊರೆಯಿತು.‘ಅಡುಗೆ ಮಾಡುವುದು ಸಹಜ ಕ್ರಿಯೆ. ಅದರಲ್ಲೇ ವಿಭಿನ್ನವಾಗಿ ಏನಾದರೂ ಮಾಡಬೇಕೆನ್ನುವುದು ನನ್ನ ಬಯಕೆ. ಇದಕ್ಕೆ ಸಹಕಾರ ನೀಡಿದವರು ನನ್ನ ತಂದೆ ಹಾಗೂ ಸೋದರ. ನಾನು ಸಿದ್ಧಪಡಿಸಿದ ಹೊಸ ರುಚಿ ಸವಿದು ತಮ್ಮ ಪ್ರಾಮಾಣಿಕ ಅಭಿಪ್ರಾಯ ತಿಳಿಸುತ್ತಿದ್ದದರಿಂದ ನಾನೂ ಬಾಣಸಿಗಳಾದೆ. ಗೆದ್ದಿದ್ದು ತುಂಬಾ ಖುಷಿಯಾಗಿದೆ. ಮುಂದೆ ಏನಾಗುತ್ತದೋ ಕಾದು ನೋಡಬೇಕು’ ಎಂದು ಪ್ರತಿಕ್ರಿಯಿಸಿದರು ಸಜ್ಜಲ್.ರನ್ನರ್ ಅಪ್ ಸ್ಥಾನ ಪಡೆದ ಸುಷ್ಮಾ ಪ್ರಕಾಶ್ ವೃತ್ತಿಯಲ್ಲಿ ನ್ಯೂಟ್ರಿಶನಿಸ್ಟ್. ಮಕ್ಕಳು ಹಾಗೂ ತೂಕ ಇಳಿಸುವವರಿಗೆ ಸದಾ ಸಲಹೆ ನೀಡುವ ಸುಷ್ಮಾ ಸ್ಪರ್ಧೆಗಾಗಿ ಸಿದ್ಧಪಡಿಸಿದ್ದು ನೀರು ದೋಸೆ, ಚಿಕ್ಕನ್ ಸುಕ್ಕಾ ಹಾಗೂ ಕಾಯಿ ಬೆಲ್ಲದ ಸವಿರುಚಿ.ವಿಜೇತರಿಗೆ ಮರ್ಫಿರಿಚರ್ಡ್ ಕಂಪೆನಿಯು ಮಿಕ್ಸರ್, ಜ್ಯೂಸರ್, ಇಸ್ತ್ರಪೆಟ್ಟಿಗೆ ಇತ್ಯಾದಿ ಗೃಹೋಪಯೋಗಿ ಸಾಮಗ್ರಿಗಳನ್ನು ನೀಡಿತು. ಗ್ರಾಂಡ್ ಫಿನಾಲೆಯಲ್ಲಿ ಗೆಲ್ಲುವ ವಿಜೇತರಿಗೆ ಐದು ಲಕ್ಷ ರೂಪಾಯಿ ಬಹುಮಾನ ಲಭಿಸುವುದರ ಜತೆಗೆ ಪ್ರಖ್ಯಾತ ಬಾಣಸಿಗ ಸಂಜೀವ್ ಕಪೂರ್ ಜತೆ ಶೋಗಳಲ್ಲಿ ಪಾಲ್ಗೊಳ್ಳುವ ಅವಕಾಶ ಸಿಗಲಿದೆ. ಗ್ರಾಂಡ್ ಫಿನಾಲೆಗೆ ಕುಮುದಾ ರೈ ಹಾಗೂ ಸಜ್ಜಲ್ ರಖೇಚಾ ಆಯ್ಕೆಯಾಗಿದ್ದಾರೆ.

 

ಪ್ರತಿಕ್ರಿಯಿಸಿ (+)