ಭಾನುವಾರ, ನವೆಂಬರ್ 17, 2019
27 °C
ಅಮೃತ ಭೂಮಿ 20

ಅಬ್ಬಾ ! ಎಷ್ಟೇಲ್ಲ ಕಬ್ಬು

Published:
Updated:

ರಸಗೊಬ್ಬರ ಬಳಸದೆ ಬೇಸಾಯ ಮಾಡುವುದು ಕಷ್ಟ ಎಂಬಂಥ ಪರಿಸ್ಥಿತಿ ನಿರ್ಮಾಣ ಆಗಿರುವಾಗ ಇಲ್ಲೊಬ್ಬ ರೈತ ಲವಲೇಶವೂ ರಸಗೊಬ್ಬರ ಬಳಸದೆ ಜೀವಾಮೃತ ಬಳಸಿ ಭರ್ಜರಿ ಕಬ್ಬು ಬೆಳೆದು ಕೃಷಿಯಲ್ಲಿ ಯಶಸ್ಸು ಕಂಡಿದ್ದಾರೆ.ಶ್ರೀರಂಗಪಟ್ಟಣ ತಾಲ್ಲೂಕಿನ ಚಂದಗಿರಿಕೊಪ್ಪಲು ಗ್ರಾಮದ ರೈತ ಪುಟ್ಟೇಗೌಡ ತಮ್ಮ ಮೂರೂವರೆ ಎಕರೆ ಜಮೀನಿನಲ್ಲಿ, ನೈಸರ್ಗಿಕ ಪದ್ಧತಿಯಲ್ಲಿ ಕಬ್ಬು ಬೆಳೆದಿದ್ದಾರೆ. ಬೆಳೆಗೆ ಅಗತ್ಯ ಗಾಳಿ, ಬೆಳಕು ಸಿಗಲಿ ಎಂಬ ಉದ್ದೇಶದಿಂದ ನಾಲ್ಕೂವರೆ ಅಡಿ ಅಂತರದಲ್ಲಿ ಕಬ್ಬು ನಾಟಿ ಮಾಡಲಾಗಿದೆ. ಎರಡು ಸಾಲುಗಳ ನಡುವೆ ಸ್ಥಳಾವಕಾಶ ಇರುವುದರಿಂದ ಅಂತರ ಬೆಳೆಯಾಗಿ ಅಲಸಂದೆ, ತೊಗರಿ ಬೆಳೆದಿದ್ದು, ಎರಡೂವರೆ ಕ್ವಿಂಟಲ್ ಅಲಸಂದೆ ಕಾಳು ಪಡೆದಿದ್ದಾರೆ. ಅಲಸಂದೆ ಮತ್ತು ಹುರುಳಿ ಸೊಪ್ಪನ್ನು ಭೂಮಿಗೆ ಸೇರಿಸಿದ್ದು, ಅದು ಗೊಬ್ಬರವಾಗಿ ಮಾರ್ಪಟ್ಟಿದೆ. ಕಬ್ಬು ಬೆಳೆಯಲ್ಲಿ ಅಂತರ ಬೆಳೆ ಬೆಳೆಯುವುದರಿಂದ ಕಳೆ ಕೂಡ ನಿಯಂತ್ರಣಕ್ಕೆ ಬಂದಿದೆ. ಎಕರೆಗೆ 5 ಗಾಡಿಯಂತೆ ಕೊಟ್ಟಿಗೆ ಗೊಬ್ಬರ ಹಾಕಿದ್ದು ಕಬ್ಬು ಹುಲುಸಾಗಿ ಬೆಳೆದಿದೆ.ಪುಟ್ಟೇಗೌಡ ಅವರ ಜಮೀನಿನಲ್ಲಿ ಬೆಳೆದಿರುವ 62-175 ತಳಿಯ ಕಬ್ಬು ಬೆಳೆಯಲ್ಲಿ ಒಂದೊಂದು ತೆಂಡೆಯಲ್ಲಿ 15ರಿಂದ 20 ಕವಲುಗಳು ಬಂದಿವೆ. 7 ತಿಂಗಳ ಹಿಂದೆ ನಾಟಿ ಮಾಡಿರುವ ಕಬ್ಬು 9 ತಿಂಗಳ ಬೆಳೆಯಂತೆ ಕಾಣುತ್ತಿದೆ. ಒಂದೊಂದು ತಳಿಯಲ್ಲಿ 7-8 ಗಿಣ್ಣುಗಳು ಬಂದಿವೆ. `ನಾಟಿ ಮಾಡಿದ ದಿನದಿಂದ ಇಲ್ಲಿಯವರೆಗೆ ಒಂದು ಕಾಳು ಕೂಡ ರಸಗೊಬ್ಬರ ಕೊಟ್ಟಿಲ್ಲ. ರಸಗೊಬ್ಬರಕ್ಕೆ ತಗುಲುತ್ತಿದ್ದ 20 ಸಾವಿರ ರೂಪಾಯಿ ಖರ್ಚು ಉಳಿದಿದೆ. ಜೀವಾಮೃತ ಹಾಗೂ ಮಿತ ಪ್ರಮಾಣದಲ್ಲಿ ತಿಪ್ಪೆ ಗೊಬ್ಬರ ಹಾಕಿದ್ದೇನೆ. ಎಕೆರೆಗೆ 65ರಿಂದ 70 ಟನ್ ಇಳುವರಿ ಸಿಗಲಿದೆ' ಎಂದು ಪುಟ್ಟೇಗೌಡ ವಿಶ್ವಾಸ ವ್ಯಕ್ತಪಡಿಸುತ್ತಾರೆ.ಉತ್ತಮ ಬೆಲೆ

ನೈಸರ್ಗಿಕ ಪದ್ಧತಿಯಲ್ಲಿ ಬೆಳೆದ ಕಬ್ಬಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಇದೆ. ನೈಸರ್ಗಿಕ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡುವ ಸಂಘ, ಸಂಸ್ಥೆಗಳು ಕಬ್ಬು ಖರೀದಿಸುವ ಸಂಬಂಧ ಈಗಾಗಲೇ ಇವರನ್ನು ಸಂಪರ್ಕಿಸಿದ್ದಾರೆ. ರಾಸಾಯನಿಕ ಬಳಸಿ ಬೆಳೆದ ಕಬ್ಬಿಗಿಂತ ಶೇ.20ರಷ್ಟು ಹೆಚ್ಚು ಬೆಲೆ ಸಿಗುವುದರಿಂದ ಹೆಚ್ಚು ಆದಾಯವೂ ಬರುತ್ತದೆ. ಕೂಲಿ, ಜೀವಾಮೃತ ತಯಾರಿಕೆ, ಕಟಾವು ಇತರ ಖರ್ಚು ಕಳೆದರೂ ಮೂರೂವರೆ ಎಕರೆ ಕಬ್ಬು ಬೆಳೆಯಿಂದ 5 ಲಕ್ಷ ರೂಪಾಯಿಗೂ ಹೆಚ್ಚು ಆದಾಯ ನಿರೀಕ್ಷಿಸಿದ್ದೇನೆ ಎಂಬುದು ರೈತ ಪುಟ್ಟೇಗೌಡ ಅವರ ಮಾತು.ಜೀವಾಮೃತ

750 ಲೀಟರ್ ನೀರು ಸಂಗ್ರಹ ಸಾಮರ್ಥ್ಯದ ಸಿಮೆಂಟ್ ತೊಟ್ಟಿಯಲ್ಲಿ 25 ಕೆ.ಜಿ. ನಾಟಿ ಹಸುವಿನ ಸಗಣಿ, 25 ಲೀಟರ್ ಗೋಮೂತ್ರ, 5 ಕೆ.ಜಿ. ಕಡಲೆ ಹಿಟ್ಟು, 5ಕೆ.ಜಿ. ಬೆಲ್ಲ ಸೇರಿಸಿ ಜೀವಾಮೃತ ತಯಾರಿಸಿಕೊಳ್ಳುತ್ತಾರೆ. ಒಂದು ವಾರ ತೊಟ್ಟಿಯಲ್ಲಿ ಹಾಗೇ ಬಿಟ್ಟು ಹುಳಿ ಹಿಡಿದ ನಂತರ ಜೀವಾಮೃತವನ್ನು ನೀರಿನ ಜತೆ ಕಬ್ಬಿನ ಸಾಲುಗಳಿಗೆ ಹಾಯಿಸಲಾಗುತ್ತದೆ. 15 ದಿನಗಳಿಗೊಮ್ಮೆ ಕಬ್ಬು ಬೆಳೆಗೆ ಜೀವಾಮೃತ ಕೊಡಲಾಗುತ್ತಿದೆ.

ಸಂಪರ್ಕಕ್ಕೆ- 99727 30386.

ಪ್ರತಿಕ್ರಿಯಿಸಿ (+)