ಮಂಗಳವಾರ, ಮೇ 18, 2021
31 °C

ಅಭದ್ರತೆಯಿಂದ ಸೃಜನಶೀಲತೆ ಸೃಷ್ಟಿ: ಪ್ರೊ.ಕಾಳೇಗೌಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಅಭದ್ರತೆ ಮನುಷ್ಯನಲ್ಲಿ ಸೃಜನಶೀಲತೆ ಸೃಷ್ಟಿಸುತ್ತದೆ. ಕಲಾಂ, ಅಂಬೇಡ್ಕರ್ ಮುಂತಾದವರು ಅಭದ್ರತೆಯ ನಡುವೆಯೇ ಉತ್ತಮ ಸಾಧನೆ ಮಾಡಿದರು  ಎಂದು ಸಾಹಿತಿ ಪ್ರೊ.ಕಾಳೇಗೌಡ ನಾಗವಾರ ಅಭಿಪ್ರಾಯಪಟ್ಟರು. ನಗರದಲ್ಲಿ ಮಹಾರಾಜ ಕಾಲೇಜು ವತಿಯಿಂದ ಗುರುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅನಂತಯಾತ್ರಿ-2010-11 ಕಾಲೇಜಿನ ವಾರ್ಷಿಕ ಸಂಚಿಕೆ ಬಿಡುಗಡೆಗೊಳಿಸಿ ಅವರು ಮಾತನಾಡಿದರು.ಮಹಾರಾಜ ಕಾಲೇಜು ತನ್ನದೇ ಆದ ಮಹತ್ವ ಹೊಂದಿದ್ದು, ಕೆಂಗಲ್ ಹನುಮಂತಯ್ಯ, ಎಸ್.ಎಂ.ಕೃಷ್ಣ, ಜೆ.ಎಚ್.ಪಟೇಲ್ ಮುಂತಾದವರು ಇಲ್ಲಿ ಅಧ್ಯಯನ ಮಾಡಿದ್ದಾರೆ. ವಿದ್ಯಾರ್ಥಿಗಳು ಇಂದು ಮಾನವೀಯತೆ ಬೆಳೆಸಿಕೊಳ್ಳುವ ಅಗತ್ಯವಿದೆ. ಮಾನವೀಯತೆಯಲ್ಲಿ ಸಂವೇದನಾಶೀಲತೆ, ವೈಚಾರಿಕತೆ ಇದೆ. ಎಷ್ಟೋ ಎಂಜಿನಿಯರಿಂಗ್, ಮೆಡಿಕಲ್ ವಿದ್ಯಾರ್ಥಿಗಳು ಸಂಪ್ರದಾಯವಾದಿ ಗಳಾಗಿದ್ದು, ರಾಹುಕಾಲ-ಗುಳಿಕಕಾಲ ನಂಬುತ್ತಾರೆ. ಅವಿವೇಕದಿಂದ ಮಾಡಿದ ವರ್ಣಾಶ್ರಮವನ್ನು ನಮ್ಮ ವಿವೇಕದಿಂದ ತಿದ್ದಬೇಕಿದೆ ಎಂದರು.ಬುದ್ಧ ವೈಚಾರಿಕ ಚಿಂತನೆಯ ಹರಿಕಾರನಾಗಿದ್ದು, ಜನಸಾಮಾನ್ಯರ ಕಷ್ಟ ಕಾರ್ಪಣ್ಯಗಳಿಗೆ ಮಿಡಿದು, ಸಕಲ ಸಂಪತ್ತನ್ನು ತ್ಯಜಿಸಿ ಜನಸಾಮಾನ್ಯರೆಡೆಗೆ ನಡೆದು  ಬಂದ. ಕುವೆಂಪು ತನ್ನ ಕಾವ್ಯಗಳಲ್ಲಿ ವೈಚಾರಿಕತೆ ಮೆರೆದರು. ಬಸವಣ್ಣ ಸಹ ತನ್ನ ವಚನಗಳಲ್ಲಿ ಜಾತ್ಯತೀತ ಮನೋಭಾವ ಬಿತ್ತಿದ್ದಾನೆ. ಇವರೆಲ್ಲಾ ವೈಚಾರಿಕತೆಯ ಮಹತ್ವ ತಿಳಿಸಿದ್ದಾರೆ. ಆದರೆ ಇಂದು ಎಷ್ಟೋ ರಾಜಕಾರಣಿಗಳು ಹೋಮ-ಹವನ ಮಾಡಿಸುತ್ತಾ ಜನತೆಯಲ್ಲಿ ಮೌಢ್ಯ ಬಿತ್ತುತ್ತಿದ್ದಾರೆ. ಸಂವಿಧಾನದ ಮೌಲ್ಯಗಳನ್ನು ಗಾಳಿಗೆ ತೂರಿ, ಪ್ರಜಾಪ್ರಭುತ್ವಕ್ಕೆ ಅವಮಾನ ಮಾಡಿದವರು ಇಂದು ಜೈಲುವಾಸ ಅನುಭವಿಸುತ್ತಿರುವುದನ್ನು ನಾವು ಕಾಣುತ್ತಿದ್ದೇವೆ ಎಂದು ಹೇಳಿದರು.ಅನಂತಯಾತ್ರಿ ಸಂಚಿಕೆಯಲ್ಲಿ ಒಳ್ಳೆಯ ವಿಚಾರಗಳನ್ನು ಕೊಡಬೇಕೆಂಬ ತುಡಿತವಿದೆ. ವಚನ ಸಾಹಿತ್ಯ, ಅಂಬೇಡ್ಕರ್ ವಿಚಾರಧಾರೆ ಸೇರಿದಂತೆ ಉತ್ತಮ  ಬರಹಗಳನ್ನು ಹೊಂದಿದ್ದು  ಸಂಚಿಕೆ ಚೆನ್ನಾಗಿ ಮೂಡಿಬಂದಿದೆ ಎಂದು ಮೆಚ್ಚುಗೆ ಸೂಚಿಸಿದರು. ಕಳ್ಳಬಟ್ಟಿ ಮಾರುವ ತಾಣವಾಗಿದ್ದ ರಾಣೇಗಾಂವ್ ಅನ್ನು ಅಣ್ಣಾ  ಹಜಾರೆ ಸ್ವರ್ಗವನ್ನಾಗಿಸಿದ್ದಾರೆ. ಪೇಪರ್ ಹಂಚುತ್ತಿದ್ದ ಬಾಲಕ ಕಲಾಂ ಶ್ರೇಷ್ಠ ವಿಜ್ಞಾನಿಯಾದರು. ಇವರು ಇಂದಿನ ವಿದ್ಯಾರ್ಥಿಗಳಿಗೆ ಮಾದರಿಯಾಗಬೇಕು. ಬುದ್ಧ, ಗಾಂಧಿ, ಲೋಹಿಯಾ ಅವರ ಚಿಂತನೆಗಳನ್ನು ಅಧ್ಯಯನ ಮಾಡಿ ಎಂದು ಸಲಹೆ ನೀಡಿದರು.ಮಹಾರಾಜ ಕಾಲೇಜು ಪ್ರಾಂಶುಪಾಲರಾದ ಪ್ರೊ.ಸ.ನ.ಗಾಯತ್ರಿ, ಆಡಳಿತಾಧಿಕಾರಿ ಪ್ರೊ.ಲತಾ ಕೆ.ಬಿದ್ದಪ್ಪ, ಪ್ರೊ.ಶಾಂತಾ ನಾಯಕ್ ಇತರರು ಇದ್ದರು.ವಾರ್ಡನ್ ನಾಪತ್ತೆ

ಮೈಸೂರು: ನಂಜನಗೂಡು ತಾಲ್ಲೂಕಿನ ದೇವನೂರಿನ ಗುರುಮಲ್ಲೇಶ್ವರ ವಿದ್ಯಾರ್ಥಿ ನಿಲಯದ ವಾರ್ಡನ್ ಕೆ.ಆರ್. ರಾಜು ಈಚೆಗೆ ಕಾಣೆಯಾಗಿದ್ದಾರೆ.ಗುರುಮಲ್ಲೇಶ್ವರ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಪ್ರಥಮ ವರ್ಷದ ಇ ಅಂಡ್ ಸಿ ಡಿಪ್ಲೊಮಾ ವ್ಯಾಸಂಗ ಮಾಡುತ್ತಿದ್ದ ರಾಜು ಆ.27 ರಂದು ಸ್ನೇಹಿತನ ಮನೆಗೆ  ಹೋಗಿ ಬರುತ್ತೇನೆ ಎಂದು ಹೋದವರು ಕಾಣೆಯಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಇವರ ಬಗ್ಗೆ ಸುಳಿವು ಸಿಕ್ಕಲ್ಲಿ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡಬಹುದು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.