ಭಾನುವಾರ, ಅಕ್ಟೋಬರ್ 20, 2019
21 °C

ಅಭಯದ ನಿರೀಕ್ಷೆಯಲ್ಲಿ ರಾಮಗಿರಿ ಕರಿಸಿದ್ದೇಶ್ವರ

Published:
Updated:
ಅಭಯದ ನಿರೀಕ್ಷೆಯಲ್ಲಿ ರಾಮಗಿರಿ ಕರಿಸಿದ್ದೇಶ್ವರ

ಹೊಳಲ್ಕೆರೆ ತಾಲ್ಲೂಕಿನ ಹೋಬಳಿ ಕೇಂದ್ರಗಳಲ್ಲಿ ಒಂದಾದ ರಾಮಗಿರಿ ಪಟ್ಟಣವಾಗಿ ತ್ವರಿತಗತಿಯಲ್ಲಿ ಬೆಳೆಯುತ್ತಿರುವ ಮಾದರಿ ಗ್ರಾಮ. ಸುಮಾರು 10 ಸಾವಿರ ಜನಸಂಖ್ಯೆ ದಾಟಿರುವ ಈ ಗ್ರಾಮ ಕರಿಸಿದ್ದೇಶ್ವರ ಪುಣ್ಯಕ್ಷೇತ್ರವೆಂದೇ ಖ್ಯಾತಿ ಪಡೆದಿದೆ.

 

ಗ್ರಾಮದ ದಕ್ಷಿಣಕ್ಕಿರುವ ಕಡಿದಾದ ಬೆಟ್ಟದ ತುದಿಯಲ್ಲಿ ನೆಲೆಸಿರುವ ಕರಿಸಿದ್ದೇಶ್ವರ ಸ್ವಾಮಿಯನ್ನು ಪವಾಡಪುರುಷನೆಂದೇ ಭಕ್ತರು ನಂಬಿದ್ದಾರೆ. ಇಲ್ಲಿ ಸ್ವಾಮಿ ನೆಲೆಸಿದ್ದು, ಗ್ರಾಮಕ್ಕೆ ರಾಮಗಿರಿ ಎಂದು ಹೆಸರು ಬಂದಿದ್ದಕ್ಕೆ ಹಿರಿಯರು ಅನೇಕ ದಂತಕತೆ ಹೇಳುತ್ತಾರೆ.ಕರಿಸಿದ್ದೇಶ್ವರ ಸ್ವಾಮಿ ಸಾವಿರಾರು ಭಕ್ತರ ಆರಾಧ್ಯ ದೈವ. 365 ಮೆಟ್ಟಿಲುಗಳಿರುವ ರಾಮಗಿರಿ ಬೆಟ್ಟ ಮತ್ತು ಗ್ರಾಮಕ್ಕೆ ರೋಚಕ ಇತಿಹಾಸವಿದೆ. ಹಿಂದೆ ಈ ಪ್ರದೇಶ ದಂಡಕಾರಣ್ಯವಾಗಿತ್ತು. ಶ್ರೀರಾಮ ಅಜ್ಞಾತ ವಾಸದಲ್ಲಿದ್ದಾಗ ಇಲ್ಲಿಗೆ ಬಂದು ತಂಗಿದ್ದ. ಶ್ರೀರಾಮನಿಗೆ ನಿತ್ಯ ಪೂಜೆ ಸಲ್ಲಿಸಲು ಇಲ್ಲಿ ಯಾವುದೇ ವ್ಯವಸ್ಥೆಗಳಿರಲಿಲ್ಲ. ಆಗ ಅಲ್ಲಿಗೆ ಬಂದ ಒಬ್ಬ ಋಷಿಮುನಿಯನ್ನು ಶ್ರೀರಾಮ ಪೂಜೆಗೆ ವ್ಯವಸ್ಥೆ ಮಾಡಿಕೊಡಿ ಎಂದು ಕೇಳಿಕೊಂಡನು.

 

ಆಗ ಋಷಿ ಒಂದು ಲಿಂಗ ಉದ್ಭವವಾಗುವಂತೆ ಮಾಡಿದರು. ಪೂಜೆಗೆ ಬೇಕಾದ ನೀರಿಗಾಗಿ ಬೆತ್ತ(ಊರುಗೋಲು)ದಿಂದ ನೆಲ ಮುಟ್ಟಿ ನೀರು ಚಿಮ್ಮುವಂತೆ ಮಾಡಿ `ತೃಪ್ತಿಯಾಗುವಂತೆ ಪೂಜಿಸು~ ಎಂದು ಹೇಳಿದರಂತೆ. ರಾಮ ಹಲವು ದಿನ ಇಲ್ಲಿ ತಂಗಿದ್ದರಿಂದ ಇದು `ರಾಮನಗಿರಿ~ ಆಗಿ ಬರಬರುತ್ತ `ರಾಮಗಿರಿ~ ಆಯಿತು ಎನ್ನುತ್ತಾರೆ ಹಿರಿಯರು.ದೇವರಿಗೆ ಕರಿಸಿದ್ದೇಶ್ವರ ಎಂದು ಹೆಸರು ಬಂದಿದ್ದಕ್ಕೂ ಒಂದು ಕತೆಯಿದೆ. ಹಿಂದೆ ಹೈದರಾಲಿ ಬಾಗೂರು ಪಟ್ಟಣದ ಮೇಲೆ ಯುದ್ದ ಮಾಡಲು ಸೈನ್ಯ ಸಮೇತ ಇದೇ ಮಾರ್ಗದಲ್ಲಿ ಹೋಗುತ್ತಿದ್ದಾಗ ಇಲ್ಲಿ ಅವರ ಪ್ರೀತಿಯ ಪಟ್ಟದ ಆನೆ ಸಾವನ್ನಪ್ಪಿತು.ಬೆಟ್ಟದ ಮೇಲಿದ್ದ ದೇವರು ಸಾಧುವಿನ ವೇಷದಲ್ಲಿ ಬಂದು `ನಿನ್ನ ಆನೆ ಸತ್ತಿಲ್ಲ, ತಟ್ಟಿ ಎಬ್ಬಿಸು~ ಎಂದು ಹೇಳಿತು. ರಾಜ ಆನೆಯನ್ನು ತಟ್ಟಿದಾಗ ಎದ್ದು ನಿಂತುಕೊಂಡಿತು. ಆನೆ (ಕರಿ)ಯನ್ನು ಬದುಕಿಸಿದ(ಸಿದ್ಧಿಸಿದ)ದೇವರಿಗೆ ಅಂದಿನಿಂದ ಕರಿಸಿದ್ದೇಶ್ವರ ಎಂದು ಹೆಸರು ಬಂತು~ ಎಂದು ಗ್ರಾಮದ ಅನೇಕರು ಪುರಾಣ ಕತೆ ಹೇಳುತ್ತಾರೆ.ದೇವಾಲಯದ ಒಳಗೆ ಒಂದು ಪುಷ್ಕರಣಿ ಇದೆ. ದೇವರ ಅಪ್ಪಣೆಯಂತೆ ವಿವಿಧ ರೋಗಗಳ ನಿವಾರಣೆಗಾಗಿ ಇಂದಿಗೂ ಇದರ ನೀರನ್ನು ಕೊಡಲಾಗುತ್ತದೆ. ಬರಗಾಲದ ಮುನ್ಸೂಚನೆಗೆ ಇದರಲ್ಲಿನ ನೀರು ಮೇಲೇರುತ್ತದೆ. ಮಳೆ ಬರುವ ಸೂಚನೆ ಇದ್ದರೆ ನೀರು ಕೆಳಕ್ಕೆ ಹೋಗುತ್ತದೆ~ ಎಂದು ಅನುಭವಸ್ಥರು ನುಡಿಯುತ್ತಾರೆ.ಇಂತಹ ಇತಿಹಾಸ ಪ್ರಸಿದ್ಧ ದೇವಾಲಯ ಈಗ ಕುಸಿದು ಬೀಳುವ ದುಸ್ಥಿತಿಯಲ್ಲಿದೆ. ದೇವಾಲಯದ ಆವರಣದ ತಡೆಗೋಡೆ ಕುಸಿದು ಬಿದ್ದಿದ್ದು, ಯಾವ ಕ್ಷಣದಲ್ಲಾದರೂ ದೇವಾಲಯ ಬೀಳುವ ಅಪಾಯವಿದೆ. `ದೇವಾಲಯದ ಪರಿಸ್ಥಿತಿ ನೋಡಿ ದುಃಖವಾಗುತ್ತದೆ. ಇಡೀ ಗ್ರಾಮದಲ್ಲಿ ಎಲ್ಲರೂ ಕರಿಸಿದ್ದೇಶ್ವರನ ಹೆಸರಿನಿಂದಲೇ ಬದುಕು ನಡೆಸುತ್ತಾರೆ. ಲಕ್ಷಾಂತರ ಭಕ್ತರನ್ನು ಹೊಂದಿರುವ ಈ ಕ್ಷೇತ್ರಕ್ಕೆ ಇಂತಹ ದುರ್ಗತಿ ಬಂದಿದೆಯಲ್ಲಾ ಎಂದು ನೋವಾಗುತ್ತದೆ.ತಡೆಗೋಡೆ ನಿರ್ಮಿಸಲು ಎಷ್ಟು ಹಣ ಬೇಕಾದರೂ ಕೊಡುವ ಭಕ್ತರಿದ್ದಾರೆ. ಶಾಸಕ ಎಂ. ಚಂದ್ರಪ್ಪ ಕೂಡ ರೂ.  5 ಲಕ್ಷ ಅನುದಾನ ನೀಡಿದ್ದಾರೆ. ಆದರೆ, ಗ್ರಾಮದಲ್ಲಿನ ಸ್ವಪ್ರತಿಷ್ಠೆ, ಗುಂಪುಗಾರಿಕೆಗಳು ಅಭಿವೃದ್ಧಿಗೆ ಮುಳುವಾಗುತ್ತಿವೆ. ಎಲ್ಲರ ಸಹಕಾರದಿಂದ ದೇವಾಲಯವನ್ನು ಭದ್ರಪಡಿಸುವ ಜರೂರತ್ತು ಇದೆ ಎನ್ನುತ್ತಾರೆ ಗ್ರಾಮದ ಮುಖಂಡ ರಾಮಣ್ಣ.ಪ್ರತಿ ಸೋಮವಾರ ದೇವಾಲಯಕ್ಕೆ ನೂರಾರು ಭಕ್ತರು ಬರುತ್ತಾರೆ. ಕಾರ್ತೀಕದ ಲಕ್ಷದೀಪೋತ್ಸವಕ್ಕೆ ರಾಜ್ಯದ ನಾನಾಭಾಗಗಳು ಮತ್ತು ಮಹಾರಾಷ್ಟ್ರ, ಆಂಧ್ರಪ್ರದೇಶಗಳಿಂದಲೂ ಭಕ್ತರು ಬರುತ್ತಾರೆ. ಆದರೆ, ಇಲ್ಲಿ ಭಕ್ತರು ಉಳಿಯಲು ಶೌಚಾಲಯ ಮತ್ತು ವಸತಿ ವ್ಯವಸ್ಥೆಗಳಿಲ್ಲ. ದೇವಾಲಯವೂ ಮಳೆಗಾಲದಲ್ಲಿ ಸೋರುತ್ತದೆ. ಎಲ್ಲರೂ ಒಗ್ಗೂಡಿ ಕ್ಷೇತ್ರವನ್ನು ಅಭಿವೃದ್ಧಿಪಡಿಸುವ ಅಗತ್ಯ ಇದೆ ಎನ್ನುವುದು ಅರ್ಚಕ ರುದ್ರಸ್ವಾಮಿ ಅವರ ಅಭಿಪ್ರಾಯ.ಗ್ರಾಮದಲ್ಲಿ ಪ್ರಾಥಮಿಕ, ಪ್ರೌಢ ಮತ್ತು ಪಿಯು ಕಾಲೇಜುಗಳಿವೆ. ಗ್ರಾಮಗಳ ಅಭಿವೃದ್ಧಿಗೆ ಶಿಕ್ಷಣವೇ ಪ್ರಮುಖ ಅಸ್ತ್ರವಾಗಿದ್ದು, ಇಲ್ಲಿ ಪದವಿ ಕಾಲೇಜು ಇಲ್ಲದೆ ಅನೇಕ ಯುವಕ, ಯುವತಿಯರು ಉನ್ನತ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ.

 

ಪದವಿ ವ್ಯಾಸಂಗಕ್ಕಾಗಿ ಸುಮಾರು 20, 30 ಕಿ.ಮೀ ದೂರದ ತಾಲ್ಲೂಕು ಕೇಂದ್ರ, ಚನ್ನಗಿರಿ, ಹೊಸದುರ್ಗ ಮತ್ತಿತರ ಕಡೆ ಹೋಗುವ ಪರಿಸ್ಥಿತಿ ಇದ್ದು, ಯುವತಿಯರು ಅರ್ಧಕ್ಕೇ ಶಿಕ್ಷಣ ನಿಲ್ಲಿಸುತ್ತಿದ್ದಾರೆ. ಉನ್ನತ ಶಿಕ್ಷಣ ಸಚಿವ ವಿ.ಎಸ್. ಆಚಾರ್ಯ ಅವರು ಒಮ್ಮೆ ಇಲ್ಲಿಗೆ ಬಂದಾಗ ಕಾಲೇಜು ನೀಡುವ ಭರವಸೆ ನೀಡಿದ್ದರು.

 

ಆದರೆ, ಅದು ಇದುವರೆಗೆ ಈಡೇರಿಲ್ಲ~ಎನ್ನುತ್ತಾರೆ ಸಮಾಜ ಸೇವಕ ಮತ್ತು ವೈದ್ಯ ಡಾ.ಎಚ್.ಪಿ. ನಿಜಗುಣಸ್ವಾಮಿ.

ಗ್ರಾಮದಲ್ಲಿ ರೈಲುನಿಲ್ದಾಣ, ಶಾಲಾ-ಕಾಲೇಜುಗಳು, ಬ್ಯಾಂಕ್, ಹಾಸ್ಟೆಲ್, ಆಸ್ಪತ್ರೆ ಮತ್ತಿತರ ಸೌಲಭ್ಯಗಳಿದ್ದರೂ, ಕಾಲಕ್ಕೆ ತಕ್ಕಂತೆ ಆಧುನಿಕ ಸೌಲಭ್ಯಗಳನ್ನು ಒದಗಿಸುವ ಅಗತ್ಯ ಇದೆ. ಶಾಸಕ ಎಂ. ಚಂದ್ರಪ್ಪ ರೂ. 2 ಕೋಟಿ ವೆಚ್ಚದಲ್ಲಿ ಮುಖ್ಯವೃತ್ತ ಅಭಿವೃದ್ಧಿಪಡಿಸಿದ್ದಾರಾದರೂ, ಇನ್ನೂ ಅನೇಕ ಸೌಲಭ್ಯಗಳನ್ನು ಒದಗಿಸಬೇಕಾಗಿದೆ.ಗ್ರಾಮದಲ್ಲಿ ಜನಸಂಖ್ಯೆ ಹೆಚ್ಚುತ್ತಿದ್ದು, ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೆ ಏರಿಸಬೇಕು. ಗ್ರಾಮದಿಂದ ತಾಲ್ಲೂಕು ಕೇಂದ್ರ 17 ಕಿ.ಮೀ. ದೂರವಿದ್ದು, ಗುಂಡೇರಿ ಮಾರ್ಗದಲ್ಲಿ ಹೋದರೆ ಕೇವಲ 9 ಕಿ.ಮೀ. ಆಗುವುದರಿಂದ ಈ ರಸ್ತೆಯನ್ನು ಅಭಿವೃದ್ಧಿಪಡಿಸಬೇಕು. ಗ್ರಾಮದ ಐತಿಹಾಸಿಕ ಕೆರೆ ಮಲಿನಗೊಂಡಿದ್ದು, ಕಾಯಕಲ್ಪ ಮಾಡಬೇಕು. ಬಸ್‌ನಿಲ್ದಾಣ, ಸಾರ್ವಜನಿಕ ಶೌಚಾಲಯ ನಿರ್ಮಿಸಬೇಕು.ರೈಲುನಿಲ್ದಾಣದಲ್ಲಿ ಮೇಲ್ಚಾವಣೆ ಮತ್ತಿತರ ಸೌಲಭ್ಯ ಒದಗಿಸಬೇಕು. ಗ್ರಾಮವು ತಾಲ್ಲೂಕು ಕೇಂದ್ರ, ಅಜ್ಜಂಪುರ, ಹೊಸದುರ್ಗ, ಚನ್ನಗಿರಿ ಪಟ್ಟಣಗಳನ್ನು ಸಂಧಿಸುವ ಕೇಂದ್ರಸ್ಥಳವಾಗಿದ್ದು, ಕೆಎಸ್‌ಆರ್‌ಟಿಸಿ ಬಸ್ ವ್ಯವಸ್ಥೆ ಕಲ್ಪಿಸಬೇಕು ಎಂಬುದು ಸಾರ್ವಜನಿಕರ ಒತ್ತಾಯ.

Post Comments (+)