ಭಾನುವಾರ, ಮೇ 31, 2020
27 °C

ಅಭಯಾರಣ್ಯಕ್ಕೆ ಅನಾಥ ಜಿಂಕೆ ಮರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶ್ರೀನಿವಾಸಪುರ: ಈಚೆಗೆ ಕಾಡಿನಿಂದ ಮೇಕೆ ಹಿಂಡಿನೊಂದಿಗೆ ಹಳ್ಳಿಗೆ ಬಂದಿದ್ದ ಜಿಂಕೆ ಮರಿಯೊಂದನ್ನು ಕೆಲವು ಕಾಲ ಸಾಕಿದ ನಂತರ ಶುಕ್ರವಾರ ಅರಣ್ಯ ಇಲಾಖೆ ಅಧಿಕಾರಿಗಳ ವಶಕ್ಕೆ ಒಪ್ಪಿಸಲಾಯಿತು.ತಾಲ್ಲೂಕಿನ ಪಾತೂರು ಗ್ರಾಮದ ರೆಡ್ಡಪ್ಪ ಅವರು ಈಚೆಗೆ ಕಾಡಿನಿಂದ ಮೇಕೆಗಳ ಹಿಂಡಿನೊಂದಿಗೆ ಸಂಜೆ ಮನೆಗೆ ಬಂದಾಗ ಎಳೆ ಜಿಂಕೆ ಮರಿಯೊಂದು ಕಾಣಿಸಿಕೊಂಡಿತ್ತು. ಅನಾಥ ಪ್ರಾಣಿಗಳನ್ನು ಸಾಕುವಲ್ಲಿ ಪರಿಣತಿ ಪಡೆದಿರುವ ಸಾಹಿತಿ ಸ.ರಘುನಾಥ ಅವರ ಮಾರ್ಗದರ್ಶನದಲ್ಲಿ ಅರಣ್ಯ ಇಲಾಖೆ ಒಪ್ಪಿಗೆ ಪಡೆದು ಮೇಕೆ ಹಾಲನ್ನು ಕುಡಿಸಿ ಸಾಕಲಾಗಿತ್ತು.ಮರಿ ಬೆಳೆದು ಸಶಕ್ತವಾದ ನಂತರ ಗ್ರಾಮದಿಂದ ಪಟ್ಟಣದ ಅರಣ್ಯ ಇಲಾಖೆ ಕಚೇರಿಗೆ ತಂದ ರೆಡ್ಡಪ್ಪ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಒಪ್ಪಿಸಿದರು. ವೆಂಕಟೇಶ್ವರ ಗ್ರಾಮೀಣ ಅರೋಗ್ಯ ಶಿಕ್ಷಣ ಹಾಗೂ ಅಭಿವೃದ್ಧಿ ಸಂಸ್ಥೆಯ ಅಧ್ಯಕ್ಷ ಡಾ.ವೆಂಕಟಾಚಲ ಈ ಸಂದರ್ಭದಲ್ಲಿ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಪ್ರಾಣಿದಯೆ ಇನ್ನೂ ಉಳಿದುಕೊಂಡಿದೆ ಎಂಬುದಕ್ಕೆ ಜಿಂಕೆ ಮರಿಯನ್ನು ಉಳಿಸಿರುವ ರೆಡ್ಡಪ್ಪ ನಿದರ್ಶನವಾಗಿದ್ದಾರೆ. ಅವರು ಅಭಿನಂದನಾರ್ಹರು ಎಂದು ಮೆಚ್ಚಿಗೆ ವ್ಯಕ್ತಪಡಿಸಿದರು.ವಲಯ ಅರಣ್ಯಾಧಿಕಾರಿ ಚಂದ್ರಶೇಖರ್ ಮಾತನಾಡಿ, ಕೃಷಿಕರಲ್ಲಿ ಸಂಗೋಪನೆ ಒಂದು ಸಂಸ್ಕೃತಿಯಾಗಿ ಬೆಳೆದು ಬಂದಿದೆ. ಅದನ್ನು ಯುವ ಸಮುದಾಯ ಜೀವಂತವಾಗಿಡಬೇಕು. ಅನಾಥ ಪ್ರಾಣಿಗಳನ್ನು ರಕ್ಷಿಸಿ ಮೂಲ ನೆಲೆ ಸೇರಿಸಿದಲ್ಲಿ ಅದರಿಂದ ಅಳಿವಿನ ಅಂಚಿನಲ್ಲಿರುವ ಅದೆಷ್ಟೊ ಪ್ರಾಣಿ ಪಕ್ಷಿಗಳು ಉಳಿಯಲು ಸಾಧ್ಯವಾಗುತ್ತದೆ ಎಂದು ಹೇಳಿದರು.ಜಿಂಕೆ ಮರಿಯನ್ನು ಸುರಕ್ಷಿತವಾಗಿ ಬನ್ನೇರುಘಟ್ಟ ಅಭಯಾರಣ್ಯದಲ್ಲಿ ರಕ್ಷಿಸಲಾಗುವುದು. ಈಗಾಗಲೇ ದೊಡಮಲದೊಡ್ಡಿ ಹಾಗೂ ಲಕ್ಷ್ಮೀಪುರದಲ್ಲಿ ಇಂತಹುದೇ ಪ್ರಕರಣಗಳು ನಡೆದಿದ್ದು, ಅವುಗಳನ್ನು ಬನ್ನೇರು ಘಟ್ಟ ಅಭಯಾರಣ್ಯದಲ್ಲಿ ಬಿಡಲಾಗಿದೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಪ್ರಾಣಿ ಪ್ರಿಯ ಸಾಹಿತಿ ಸ.ರಘುನಾಥ, ಅರಣ್ಯ ಇಲಾಖೆ ಸಿಬ್ಬಂದಿ ಉಪಸ್ಥಿತರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.