ಅಭಿನಯ,ಅನುಭವ

7

ಅಭಿನಯ,ಅನುಭವ

Published:
Updated:
ಅಭಿನಯ,ಅನುಭವ

ಬೆಂಗಳೂರಿನ ಒಂದು ಗಣ್ಯ ಮನೆತನದಿಂದ ಬಂದ ಶ್ರೀಮತಿ ಅಮ್ಮಣ್ಣಿ ಅಯ್ಯಂಗಾರ್ ಅವರು ಶೈಕ್ಷಣಿಕ, ಸಾಂಸ್ಕೃತಿಕ, ಧಾರ್ಮಿಕ ಕ್ಷೇತ್ರಗಳಲ್ಲಿ ಉಲ್ಲೇಖನೀಯ ಸೇವೆ ಸಲ್ಲಿಸಿದವರು. ಮಹಿಳೆಯರಿಗೆ ವಸತಿ ಗೃಹ, ಶಾಲೆ, ಹೆಣ್ಣುಮಕ್ಕಳ ಅನಾಥಾಶ್ರಮ ಮುಂತಾದವುಗಳ ನಿರ್ಮಾಣ- ನಿರ್ವಹಣೆಯಲ್ಲಿ ಅವರ ಪಾತ್ರ ಮಹತ್ವವಾದುದು.ಅವರ ಜನ್ಮ ಶತಮಾನೋತ್ಸವದ ಅಂಗವಾಗಿ ಎಂಇಎಸ್ ಕಲಾವೇದಿಯವರು ಒಂದು ವಿಶೇಷ- ವಿಶಿಷ್ಟ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಹಿರಿಯ ಕಲಾವಿದೆ, ನಟಿ, ನೃತ್ಯ ಪಟು, ನೃತ್ಯ ಸಂಯೋಜಕಿ ಡಾ. ವೈಜಯಂತಿಮಾಲಾ ಬಾಲಿ ಇಲ್ಲಿ  `ಅಭಿನಯ-ಅನುಭವ~  ಎಂಬ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು.ನೃತ್ಯದಲ್ಲಿ ಅಭಿನಯಕ್ಕೆ ವಿಶೇಷ ಸ್ಥಾನವಿದೆ. ಅಲ್ಲದೆ ಅಭಿನಯ ಅನುಭವ ವೇದ್ಯ! ಅದು ಕಲಿಸಿ ಬರುವುದಕ್ಕಿಂತ ಅನುಭವಿಸಿ ಬರಬೇಕು! ಇಂದಿನ ಕಿರಿಯ ಕಲಾವಿದರಲ್ಲಿ ಅಭಿನಯವೇ ದುರ್ಬಲ ಎಂಬ ಅಭಿಪ್ರಾಯವೂ ಇದೆ. ಈ ದೃಷ್ಟಿಯಿಂದ ವೈಜಯಂತಿಮಾಲಾ ಅವರಿಂದ ಪ್ರಾತ್ಯಕ್ಷಿಕೆ ನಡೆಸಿದ್ದು ಸಮಯೋಚಿತ ಹಾಗೂ ಮಾರ್ಗದರ್ಶಕ.ವೈಜಯಂತಿಮಾಲಾ ಅವರು ತೋಡಿ ರಾಗದ  `ಎಲ್ಲ ಅರುಮೆಗಳ್~ ನಿಂದ ಪ್ರಾರಂಭಿಸಿ, ಶಂಕರಾಭರಣದ (ಗೋವಿಂದಸ್ವಾಮಿ ಪಿಳ್ಳೆ) ಅಪರೂಪ ಪದವನ್ನು ಆಯ್ದರು. ಅದರಲ್ಲಿ  ಮಂದಬುದ್ಧಿಯನ್ನು ನಾಲ್ಕಾರು ರೀತಿಯಲ್ಲಿ ಅಭಿನಯಿಸಿ ತೋರಿದರು. ಮುಂದಿನ `ಅರಿವೆನಯ್ಯ ಎನ್ನ ಅಂತರಂಗಂ~ ಹಸನಾದ ಪದ.ಖರಹರಪ್ರಿಯ ರಾಗವನ್ನು ಮಿತವಾಗಿ ಆಲಾಪಿಸಿ, ಪ್ರಸಿದ್ಧ ವರ್ಣ  `ಮೋಹಮಾಯಿಲೆ~ಯಲ್ಲಿ ಅಭಿನಯಕ್ಕೆ ಒತ್ತು ಕೊಡುವಷ್ಟು ಭಾಗವನ್ನು ಮಾತ್ರ ಅಭಿನಯಿಸಿದರು.ದಾಸರ ದೇವರನಾಮದಲ್ಲಿ ಪೂತನಿಯ ವ್ಯಾಕುಲತೆ ಹಾಗೂ ವಧೆಯ ಅಭಿನಯ ತಾರಕಕ್ಕೆ ಮುಟ್ಟಿ, ಸಭಿಕರ ಚಪ್ಪಾಳೆಯ ಸುರಿಮಳೆಯಾಯಿತು. ಅರುಣಾಚಲ ಕವಿಯ ರಾಮಾಯಣದ ಭಾಗವೂ ಪ್ರಸ್ತುತವೇ. ಸಿಂಜುರಟಿಯ `ಸಖಿ ಪ್ರಾಣ~ ಬಹು ಪ್ರಸಿದ್ಧ ರಚನೆ. ಧನಾಶ್ರಿ ತಿಲ್ಲಾನದೊಂದಿಗೆ ಮುಕ್ತಾಯ.ಅವರು ರಂಗದ ಮಧ್ಯದಲ್ಲಿ ಕುಳಿತು ಮಾಡಿದ ಅಭಿನಯ ಅನೇಕ ದಶಕಗಳ ಅನುಭವದಿಂದ ಮೂಡಿದ್ದು. ಅಂಗಶುದ್ಧ, ನೇತ್ರ-ದೃಷ್ಟಿಗಳ ಸಂದರ್ಭೋಚಿತ ಚಲನ, ಶಿರೋಭೇದಗಳೊಂದಿಗೆ ಹಾಡುತ್ತಾ, ಭಾವಾರ್ಥ, ನಾದಮಿಲನಗಳಿಂದ ಅಭಿನಯ ಸಾಗಿದ ಬಗೆಯಲ್ಲಿ ಒಂದು ಸೊಬಗು- ಬೆಡಗು ಇತ್ತು.ನಿಜ, ಅವರ ಹಾಡುಗಾರಿಕೆಯಲ್ಲಿ ವಯಸ್ಸಿನ ಛಾಯೆ ಆಗಾಗ್ಗೆ ಇಣುಕುತ್ತಿತ್ತು. ಆದರೆ ಭಾವಕ್ಕೇನೂ ಕೊರತೆ ಇರಲಿಲ್ಲ. ಕಿರಿಯ ಗಾಯಕಿ ಅನಾಹಿತ ರವೀಂದ್ರರ ಹಿತಮಿತ ಗಾಯನಕ್ಕೆ ಮೃದಂಗ (ಶಕ್ತಿವೇಲ್ ಮುರುಘನಂದನ್), ಕೊಳಲು (ಚೈತನ್ಯಕುಮಾರ್) ಗಳೊಂದಿಗೆ ನಟುವಾಂಗವೂ (ಗಾಯತ್ರಿ ಶಶಿಧರನ್) ಮಿಳಿತವಾಗಿ ಗಾಢ ಪರಿಣಾಮ ಬೀರಿತು.ಗಾನ ಗಂಧರ್ವನಿಗೆ ನಾದಾಂಜಲಿ

ಬೆಂಗಳೂರು ದೂರದರ್ಶನ ಕೇಂದ್ರ ರಾಜಭವನದ ಸಹಭಾಗಿತ್ವದಲ್ಲಿ ಒಂದು ಭಿನ್ನ ಕಾರ್ಯಕ್ರಮವನ್ನು ಆಯೋಜಿಸಿ ಮಹಾನ್ ಸ್ವರಭಾಸ್ಕರ ದಿ. ಪಂಡಿತ್ ಭೀಮಸೇನ ಜೋಶಿ ಅವರಿಗೆ ಸ್ವರನಮನ ಅರ್ಪಿಸಿತು. ಸಂಗೀತ, ನೃತ್ಯಗಳ ಮೂಲಕ  ಗೀತಾಂಜಲಿ ಸಲ್ಲಿಸಿತು.ಜೋಶಿಯವರು ಪ್ರಚುರಗೊಳಿಸಿದ  ದಾಸವಾಣಿಯಿಂದ ಹರಿದಾಸರ ಪ್ರಸಿದ್ಧ ದೇವರನಾಮಗಳನ್ನು ಹಿಂದುಸ್ತಾನಿ ಶೈಲಿಯಲ್ಲಿ ಕಲಾವಿದರು ಹಾಡಿದರು. ಜೊತೆಗೆ ಸಂತವಾಣಿಯ ಅಭಂಗ್‌ಗಳಲ್ಲಿ ಕೆಲವನ್ನು ನಿರೂಪಿಸಿದರು.ಜಯತೀರ್ಥ ಮೇವುಂಡಿ  `ಸದಾ ಎನ್ನ ಹೃದಯದಲ್ಲಿ~  ಸುಭಗವಾಗಿ ಹಾಡಿದರು. ಜೋಶಿಯವರ ಮಗ ಶ್ರಿನಿವಾಸ ಜೋಶಿ  `ದೇವವಿಠಲ ತೀರ್ಥವಿಠಲ~  ಹಾಡುತ್ತಿದ್ದಂತೆ ಜಗದೀಶರ ಕುಂಚದಲ್ಲಿ ವಿಠಲ ಮೂಡಿದ. ಸಂಧ್ಯಾರಾಗ  ಚಲನಚಿತ್ರದಲ್ಲಿ ಭೀಮಸೇನ ಜೋಶಿ ಹಾಡಿರುವ ಕೆಲ ಹಾಡುಗಳನ್ನೂ ಹಾಡಿಸಿದರು.ನಿಶಾಂತ್ ಅವರು `ನಂಬಿದೆ ನಿನ್ನ ನಾದ ದೇವತೆ  ಮತ್ತು  ತೇಲಿಸೊ ಇಲ್ಲ ಮುಳುಗಿಸೊ~ ತುಂಬು ಕಂಠದಿಂದ ಹಾಡಿದರು. ಉಪೇಂದ್ರ ಭಟ್  `ಮಾಸೆಮಾಹೆ~ಯಲ್ಲಿ ವಿಠಲ ಸ್ಮರಣೆಯಲ್ಲಿ ನಾಲ್ಕಾರು ರೀತಿ ಹಾಡಿ ಸಂತೋಷಗೊಳಿಸಿದರು. ಅನಂತ ತೇರದಾಳರು ಮಹಿಪತಿದಾಸರು ಮತ್ತು ಪುರಂದರ ದಾಸರ ಪದಗಳನ್ನು ಹಸನಾಗಿ ನಿರೂಪಿಸಿದರು. ಪ್ರಸನ್ನ ಗುಡಿ  ಸಿರಿ ಕಂಠದಲ್ಲಿ `ತುಂಗಾ ತೀರದಿ ನಿಂತ~ ಮೂಡಿಬಂತು.ಪಿಟೀಲಿನಲ್ಲಿ ಜೆ.ಕೆ. ಶ್ರಿಧರ, ಹಾರ್ಮೋನಿಯಂನಲ್ಲಿ ರವೀಂದ್ರ ಕಾಟೋಟಿ, ಲಯವಾದ್ಯಗಳಲ್ಲಿ ಗುರುಮೂರ್ತಿ ವೈದ್ಯ, ಹಾಗೂ ಉದಯರಾಜ ಕರ್ಪೂರ ಇಂಬು ತುಂಬಿದರು. ಕೊಡವೂರಿನ ನೃತ್ಯ ನಿಕೇತನದವರು ಲಕ್ಷ್ಮಿ ಗುರುರಾಜ್ ಅವರ ನೇತೃತ್ವದಲ್ಲಿ ಕೆಲ ದೇವರನಾಮಗಳನ್ನು (ಭಾಗ್ಯದ ಲಕ್ಷ್ಮೀ ಬಾರಮ್ಮ, ಇಂದು ಎನಗೆ ಗೋವಿಂದ)  ಅಭಿನಯಿಸಿದರು.ಕೊನೆಯಲ್ಲಿ ಪಂಡಿತ್ ನರಸಿಂಹಲು ವಡವಾಟಿ ಅವರ ಕ್ಲಾರಿಯೊನೆಟ್‌ನಲ್ಲಿ  `ಜೋಭಜೆ ಹರಿಕೊ ಸದಾ~  ಇಂಪಾಗಿ ಮೂಡಿಬಂತು. ಕನ್ನಡ ಹರಿದಾಸರ ಪದಗಳು ಭಿನ್ನ ಕಂಠಗಳಲ್ಲಿ ಹೊಮ್ಮಿ ಹಿರಿಯ ಕಲಾವಿದರಿಗೆ ನಾದಾಂಜಲಿ ಸಂದಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry