ಅಭಿಮಾನಿಗಳಿಗೆ ಕುಕ್ ಶತಕದ ಭೋಜನ

7
ಕ್ರಿಕೆಟ್: ನಾಯಕರಾಗಿ ಸತತ ಐದನೇ ಶತಕ; ಈಡನ್ ಅಂಗಳದಲ್ಲಿ ಭಾರತ ತತ್ತರ

ಅಭಿಮಾನಿಗಳಿಗೆ ಕುಕ್ ಶತಕದ ಭೋಜನ

Published:
Updated:

ಕೋಲ್ಕತ್ತ: ಈ ಪಂದ್ಯ ಆರಂಭಕ್ಕೆ ಎರಡು ದಿನಗಳ ಹಿಂದೆಯಷ್ಟೇ ಇಂಗ್ಲೆಂಡ್ ಆಟಗಾರರು `ದಿ ಸಿಟಿ ಆಫ್ ಜಾಯ್' ಖ್ಯಾತಿಯ ನಗರದ ಪ್ರಮುಖ ಮಳಿಗೆಗಳಿಗೆ ತೆರಳಿ ಮುಂಬರುವ ಕ್ರಿಸ್‌ಮಸ್ ಹಬ್ಬದ ಪ್ರಯುಕ್ತ ತಮ್ಮ ಪತ್ನಿಯರಿಗೆ ನೀಡಲು ಉಡುಗೊರೆ ಖರೀದಿಯಲ್ಲಿ ತೊಡಗಿದ್ದರು.ಆದರೆ ಹಬ್ಬಕ್ಕೆ ಮುನ್ನವೇ ತಮ್ಮ ಕುಟುಂಬ ಹಾಗೂ ದೇಶದ ಕ್ರಿಕೆಟ್ ಪ್ರೇಮಿಗಳಿಗೆ ಅದ್ಭುತ ಉಡುಗೊರೆಯೊಂದನ್ನು ನೀಡುವ ಆಂಗ್ಲರ ಕನಸು ನನಸಾಗುವ ಎಲ್ಲಾ ಲಕ್ಷಣಗಳು ಈಡನ್   ಗಾರ್ಡನ್ಸ್‌ನಲ್ಲಿ ಚಿಗುರೊಡೆದಿವೆ.ಏಕೆಂದರೆ ಮೂರನೇ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡದವರು ಸಂಪೂರ್ಣ ಪಾರಮ್ಯದ ಮುದ್ರೆ ಒತ್ತಿದ್ದಾರೆ. ಭಾರತದ ಮೊದಲ ಇನಿಂಗ್ಸ್‌ನ 316 ರನ್‌ಗಳಿಗೆ ಉತ್ತರವಾಗಿ ಇಂಗ್ಲೆಂಡ್ ತನ್ನ ಪ್ರಥಮ ಇನಿಂಗ್ಸ್‌ನಲ್ಲಿ ಎರಡನೇ ದಿನದಾಟದ ಅಂತ್ಯಕ್ಕೆ 73 ಓವರ್‌ಗಳಲ್ಲಿ ಕೇವಲ 1 ವಿಕೆಟ್ ನಷ್ಟಕ್ಕೆ 216 ರನ್ ಗಳಿಸಿದೆ. ಆತಿಥೇಯರ ಮೊತ್ತ ಸರಿಗಟ್ಟಲು 100 ರನ್‌ಗಳು ಬೇಕು ಅಷ್ಟೆ. ಇನ್ನೂ ಮೂರು ದಿನಗಳ ಆಟ ಬಾಕಿ ಇದೆ.ಹಲವು ಸುಂದರ ನೆನಪುಗಳನ್ನು ಕಟ್ಟಿಕೊಟ್ಟಿರುವ ಈ ಅಂಗಳದಲ್ಲಿ ಭಾರತ 13 ವರ್ಷಗಳಿಂದ ಸೋಲಿನ ಮುಖವನ್ನೇ ನೋಡಿಲ್ಲ. ಆದರೆ ಆಂಗ್ಲರು ಆಡುತ್ತಿರುವ ಪರಿ ನೋಡಿದರೆ ಈ ಪಂದ್ಯ ಆತಿಥೇಯರ ಕೈತಪ್ಪಿ ಹೋಗುವ ಆತಂಕ ಎದುರಾಗಿದೆ.

ಅಷ್ಟೇ ಏಕೆ? ಅಲಸ್ಟೇರ್ ಕುಕ್ ಎಂಬ `ರನ್ ಯಂತ್ರ'ದ ಎದುರು ಭಾರತದ ಬೌಲರ್‌ಗಳು ಬಳಲಿ ಬೆಂಡಾಗಿದ್ದಾರೆ. ಕುಕ್ (ಬ್ಯಾಟಿಂಗ್ 136) ಗುರುವಾರ ಕೇವಲ ದಾಖಲೆಗಳನ್ನು ಮಾತ್ರ ಮುರಿಯಲಿಲ್ಲ; ಆತಿಥೇಯ ಆಟಗಾರರ ಮನಸ್ಸಿನ ದಡಕ್ಕೆ ಅಲೆಯಾಗಿ ಬಂದು ಅಪ್ಪಳಿಸಿದರು.ಸ್ಪಿನ್ ಭಯದಲ್ಲಿಯೇ ಭಾರತಕ್ಕೆ ಕಾಲಿರಿಸಿದ್ದ ಆಂಗ್ಲರು ಅದನ್ನು ಮೆಟ್ಟಿ ನಿಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಆ ಶ್ರೇಯವೆಲ್ಲಾ ನಾಯಕ ಕುಕ್‌ಗೆ ಸಲ್ಲಬೇಕು. ಅದ್ಭುತ, ಅಮೋಘ, ಆಕರ್ಷಕ ಇನಿಂಗ್ಸ್ ಮೂಲಕ ಅವರು ಮತ್ತೊಮ್ಮೆ ಪ್ರವಾಸಿ ತಂಡದ ಪಾಲಿಗೆ ಸ್ಫೂರ್ತಿಯ ಚಿಲುಮೆಯಾದರು.ದಾಖಲೆ ನಿರ್ಮಿಸಿದರು, ಹೃದಯ ಗೆದ್ದರು: ಈಡನ್ ಅಂಗಳದ್ಲ್ಲಲಿ ಕುಕ್ ಚೆಂದದ ಆಟದ ಮೂಲಕ ಕ್ರಿಕೆಟ್ ಪ್ರೇಮಿಗಳಿಗೆ ಶತಕದ ಭೋಜನ ಬಡಿಸಿದರು. ವಿಶೇಷವೆಂದರೆ ಇದು ಸರಣಿಯಲ್ಲಿ ಅವರು ಗಳಿಸಿದ ಸತತ ಮೂರನೇ ಶತಕ. ನಾಯಕರಾದ ಮೇಲೆ ಆಡಿದ ಈ ಹಿಂದಿನ ನಾಲ್ಕೂ ಪಂದ್ಯಗಳಲ್ಲಿ ಶತಕ ಗಳಿಸಿದ್ದ ಅಲಸ್ಟೇರ್ ಐದನೇ ಪಂದ್ಯದಲ್ಲೂ ಅಂತಹ ಸಾಧನೆ ಮಾಡಿದರು. ನಾಯಕರಾಗಿ ಸತತ ನಾಲ್ಕು ಪಂದ್ಯಗಳಲ್ಲಿ ಶತಕ ಗಳಿಸಿದ್ದ ಸುನಿಲ್ ಗಾವಸ್ಕರ್ ದಾಖಲೆಯನ್ನು ಅವರು ಅಳಿಸಿ ಹಾಕಿದರು.ಇದು ಅವರ ಪಾಲಿಗೆ 23ನೇ ಶತಕ. ಈ ಮೂಲಕ ಅತಿ ಹೆಚ್ಚು ಶತಕ ಗಳಿಸಿದ ಇಂಗ್ಲೆಂಡ್ ಆಟಗಾರ ಎನಿಸಿದರು. ಕುಕ್ (ಬ್ಯಾಟಿಂಗ್ 136; 288 ನಿ, 236 ಎ, 19 ಬೌಂ, 1 ಸಿ.) ಈ ಮೂಲಕ ಜೆಫ್ರಿ ಬಾಯ್ಕಾಟ್, ಕೌಡ್ರಿ, ಹ್ಯಾಮಂಡ್, ಪೀಟರ್ಸನ್ (ತಲಾ 22 ಶತಕ) ಅವರ ದಾಖಲೆ ಮೆಟ್ಟಿ ನಿಂತರು. ಈ ಸಂದರ್ಭದಲ್ಲಿ ಬಾಯ್ಕಾಟ್ ಈಡನ್ ಕ್ರೀಡಾಂಗಣದಲ್ಲಿ ಬಿಬಿಸಿ ರೇಡಿಯೊದಲ್ಲಿ ವೀಕ್ಷಕ ವಿವರಣೆ ಹೇಳುವುದರಲ್ಲಿ ನಿರತರಾಗಿದ್ದರು.ಕಿರಿಯ ವಯಸ್ಸಿನ ಆಟಗಾರ: ಅಷ್ಟು ಮಾತ್ರವಲ್ಲದೇ, ಕುಕ್ ಕಡಿಮೆ ವಯಸ್ಸಿನಲ್ಲಿ 7 ಸಾವಿರ ರನ್‌ಗಳ ಗಡಿ ದಾಟಿದ ಹೆಗ್ಗಳಿಕೆಗೆ ಪಾತ್ರರಾದರು. ಅವರಿಗೀಗ 27 ವರ್ಷ. ಈ ಮೂಲಕ ಅವರು ಸಚಿನ್ ದಾಖಲೆ ಅಳಿಸಿ ಹಾಕಿದರು. ತೆಂಡೂಲ್ಕರ್ ತಮ್ಮ 28ನೇ ವಯಸ್ಸಿನಲ್ಲಿ ಏಳು ಸಾವಿರ್ ರನ್‌ಗಳ ಗಡಿ ದಾಟಿದ್ದರು.ಮುಳುವಾದ ಜೀವದಾನ: ಕುಕ್ ಕೇವಲ 17 ರನ್ ಗಳಿಸಿದ್ದಾಗ ಜೀವದಾನ ಪಡೆದಿದ್ದರು. ಜಹೀರ್ ಬೌಲಿಂಗ್‌ನಲ್ಲಿ ಮೊದಲ ಸ್ಲಿಪ್‌ನಲ್ಲಿ ಚೇತೇಶ್ವರ ಪೂಜಾರ ಕ್ಯಾಚ್ ಕೈಚೆಲ್ಲಿದರು. ಅದು ದುಬಾರಿಯಾಗಿ ಪರಿಣಮಿಸಿತು. ಜೊತೆಗೆ ಎರಡು ಬಾರಿ ರನ್‌ಔಟ್ ಆತಂಕದಿಂದ ಪಾರಾದರು. ಇದರ ಲಾಭ ಪಡೆದ ಅಲಸ್ಟೇರ್ ಮತ್ತೊಂದು ಚೆಂದದ ಇನಿಂಗ್ಸ್ ಕಟ್ಟಿದರು.ಜಹೀರ್ ಹಾಗೂ ಇಶಾಂತ್ ಬೌಲಿಂಗ್‌ನಲ್ಲಿ ಅವರು ಬಾರಿಸಿದ ಕವರ್ ಡ್ರೈವ್‌ಗಳು ಮನಮೋಹಕವಾಗಿದ್ದವು. 179 ಎಸೆತಗಳಲ್ಲಿ ಅವರು ಮೂರಂಕಿ ಮೊತ್ತ ಮುಟ್ಟಿದರು. ಕುಕ್ ಅಹಮಹಾಬಾದ್ ಪಂದ್ಯದಲ್ಲಿ 41 ಹಾಗೂ 176, ಮುಂಬೈ ಪಂದ್ಯದಲ್ಲಿ 122 ಹಾಗೂ 18 ರನ್ ಗಳಿಸಿದ್ದರು. ಇದರೊಂದಿಗೆ ಸರಣಿಯಲ್ಲಿ ಒಟ್ಟು 493 ರನ್ ಸೇರಿಸಿದ್ದಾರೆ. ನಾಯಕರಾಗಿ ಭಾರತದಲ್ಲಿ ಹೆಚ್ಚು ರನ್ ಗಳಿಸಿದ ಸಾಧನೆಗೆ ಪಾತ್ರರಾದರು.ಅಹಮದಾಬಾದ್ ಪಂದ್ಯದಲ್ಲಿ ಪದಾರ್ಪಣೆ ಮಾಡಿದ್ದ ನಿಕ್ ಕಾಂಪ್ಟನ್ ಚೊಚ್ಚಲ ಅರ್ಧ ಶತಕ ಗಳಿಸಿದರು. ಓಜಾ ಬೌಲಿಂಗ್‌ನಲ್ಲಿ ಅವರು ವಿವಾದಾತ್ಮಕ ಎಲ್‌ಬಿಡಬ್ಲ್ಯು ತೀರ್ಪಿಗೆ ವಿಕೆಟ್ ಒಪ್ಪಿಸಿದರು. ಮೊದಲು ಔಟ್ ಇಲ್ಲ ಎಂದು ತಲೆಯಾಡಿಸಿದ ಅಂಪೈರ್ ರಾಡ್ ಟಕ್ಕರ್ ಒಮ್ಮೆಲೇ ಕೈ ಮೇಲೆತ್ತಿದರು. ಇದೊಂದೇ ಗುರುವಾರ ಭಾರತಕ್ಕೆ ಲಭಿಸಿದ ಖುಷಿಯ ಕ್ಷಣ. ಅಷ್ಟರಲ್ಲಿ ಕುಕ್ ಹಾಗೂ ಕಾಂಪ್ಟನ್ ಮೊದಲ ವಿಕೆಟ್‌ಗೆ 165 ರನ್ ಸೇರಿಸಿದ್ದರು. ಅಷ್ಟು ಮಾತ್ರವಲ್ಲದೇ, ಕುಕ್ ಹಾಗೂ ಟ್ರಾಟ್ ಮುರಿಯದ ಎರಡನೇ ವಿಕೆಟ್‌ಗೆ 51 ರನ್ ಸೇರಿಸಿದ್ದಾರೆ.ದೋನಿ ಜಾಣ್ಮೆಯ ಆಟ: ಭೋಜನ ವಿರಾಮಕ್ಕೆ ಒಂದು ಗಂಟೆ ಇರುವಾಗಲೇ ಭಾರತ ತಂಡದ ಮೊದಲ ಇನಿಂಗ್ಸ್‌ಗೆ ತೆರೆಬಿತ್ತು.105 ಓವರ್‌ಗಳಲ್ಲಿ 316 ರನ್ ಗಳಿಸುವಲ್ಲಿ ಮಾತ್ರ ಆತಿಥೇಯರು ಸಫಲರಾದರು. ತಂಡ 300 ರನ್‌ಗಳ ಗಡಿದಾಟಲು ಕಾರಣವಾಗಿದ್ದು ನಾಯಕ ದೋನಿ ತೋರಿದ ಜಾಣ್ಮೆಯ ಆಟ.ಓಜಾ ಔಟಾಗಬಹುದು ಎಂಬ ಭಯದಿಂದ ದೋನಿ ಹೆಚ್ಚು ಸ್ಟ್ರೈಕ್ ತೆಗೆದುಕೊಳ್ಳಲು ಪ್ರಯತ್ನಿಸುತ್ತಿದ್ದರು. ಹಾಗಾಗಿ ಅವರು ಕೇವಲ ಬೌಂಡರಿ ಮೊರೆ ಹೋದರು. ಒಂಟಿ ರನ್‌ಗೆ ಅವಕಾಶವಿದ್ದರೂ ಓಡುತ್ತಿರಲಿಲ್ಲ. ಹಾಗಾಗಿ ತುಂಬಾ ಹೊತ್ತು ರನ್‌ಗಳೇ ಬರಲಿಲ್ಲ. ಈ ನಡುವೆಯೂ ಅವರು ಓಜಾ ಜೊತೆಗೂಡಿ ಕೊನೆಯ ವಿಕೆಟ್‌ಗೆ 20 ರನ್ ಸೇರಿಸಿದರು.ಆದರೆ ವೇಗಿ ಫಿನ್ ಬೌಲಿಂಗ್‌ನಲ್ಲಿ ಬೌಂಡರಿ ಗಳಿಸಿ ಅರ್ಧ ಶತಕ ಪೂರೈಸುತ್ತ್ದ್ದಿದಂತೆ ದೋನಿ (52; 114 ಎ, 5 ಬೌಂ, 2 ಸಿ.) ಎಡವಟ್ಟು ಮಾಡಿಕೊಂಡರು. ನಂತರದ ಎಸೆತದಲ್ಲಿ ಬೌನ್ಸ್ ಆದ ಚೆಂಡನ್ನು ಕೆಣಕಲು ಹೋಗಿ ಸ್ವಾನ್ ಪಡೆದ ಉತ್ತಮ ಕ್ಯಾಚ್‌ಗೆ ವಿಕೆಟ್ ಒಪ್ಪಿಸಿದರು. ಇಲ್ಲಿಗೆ ಭಾರತದ ಮೊದಲ ಇನಿಂಗ್ಸ್ ಕಥೆ ಮುಗಿಯಿತು.ಸ್ಕೋರ್ ವಿವರ :

ಭಾರತ ಮೊದಲ ಇನಿಂಗ್ಸ್ 105 ಓವರ್‌ಗಳಲ್ಲಿ 316(ಬುಧವಾರ 90 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 273)ಮಹೇಂದ್ರ ಸಿಂಗ್ ದೋನಿ ಸಿ ಗ್ರೇಮ್ ಸ್ವಾನ್ ಬಿ ಸ್ಟೀವನ್ ಫಿನ್  52ಜಹೀರ್ ಖಾನ್ ಎಲ್‌ಬಿಡಬ್ಲ್ಯು ಬಿ ಮಾಂಟಿ ಪನೇಸರ್  06ಇಶಾಂತ್ ಶರ್ಮ ಬಿ ಮಾಂಟಿ ಪನೇಸರ್  00ಪ್ರಗ್ಯಾನ್ ಓಜಾ ಔಟಾಗದೆ  00ಇತರೆ (ಬೈ-5, ಲೆಗ್‌ಬೈ-13, ನೋಬಾಲ್-1, ವೈಡ್-5)  24ವಿಕೆಟ್ ಪತನ: 1-47 (ಸೆಹ್ವಾಗ್; 10.1); 2-88 (ಪೂಜಾರ; 25.4); 3-117 (ಗಂಭೀರ್; 41.1); 4-136 (ಕೊಹ್ಲಿ; 48.4); 5-215 (ಯುವರಾಜ್; 68.3); 6-230 (ಸಚಿನ್; 74.1); 7-268 (ಅಶ್ವಿನ್; 88.3); 8-292 (ಜಹೀರ್; 93.6); 9-296 (ಇಶಾಂತ್; 95.3); 10-316 (ದೋನಿ; 104.6).ಬೌಲಿಂಗ್: ಜೇಮ್ಸ ಆ್ಯಂಡರ್ಸನ್ 28-7-89-3 (ವೈಡ್-1), ಸ್ಟೀವನ್ ಫಿನ್ 21-2-73-1 (ನೋಬಾಲ್-1), ಮಾಂಟಿ ಪನೇಸರ್ 40-13-90-4, ಗ್ರೇಮ್ ಸ್ವಾನ್ 16-3-46-1ಇಂಗ್ಲೆಂಡ್ ಮೊದಲ ಇನಿಂಗ್ಸ್ 73 ಓವರ್‌ಗಳಲ್ಲಿ 1 ವಿಕೆಟ್ ನಷ್ಟಕ್ಕೆ 216ಅಲಸ್ಟೇರ್ ಕುಕ್ ಬ್ಯಾಟಿಂಗ್  136ನಿಕ್ ಕಾಂಪ್ಟನ್ ಎಲ್‌ಬಿಡಬ್ಲ್ಯು ಬಿ ಪ್ರಗ್ಯಾನ್ ಓಜಾ  57ಜೊನಾಥನ್ ಟ್ರಾಟ್ ಬ್ಯಾಟಿಂಗ್  21ಇತರೆ (ನೋಬಾಲ್-2)  02ವಿಕೆಟ್ ಪತನ: 1-165 (ಕಾಂಪ್ಟನ್; 52.6)

ಬೌಲಿಂಗ್: ಜಹೀರ್ ಖಾನ್ 16-4-48-0, ಇಶಾಂತ್ ಶರ್ಮ 15-6-35-0 (ನೋಬಾಲ್-2), ಆರ್.ಅಶ್ವಿನ್ 23-4-68-0, ಪ್ರಗ್ಯಾನ್                         ಓಜಾ 19-4-65-1

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry