ಭಾನುವಾರ, ಜನವರಿ 19, 2020
22 °C

ಅಭಿಮಾನ್ ಸ್ಟುಡಿಯೊದಲ್ಲೇ ವಿಷ್ಣು ಸ್ಮಾರಕ: ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ವಿಷ್ಣುವರ್ಧನ್ ಅವರ ಸ್ಮಾರಕ ನಿರ್ಮಾಣದ ವಿಷಯದಲ್ಲಿ ಉಂಟಾಗಿರುವ ಎಲ್ಲಾ ವ್ಯಾಜ್ಯಗಳನ್ನು ಪರಿಹರಿಸಿ, ಅಭಿಮಾನ್ ಸ್ಟುಡಿಯೊದಲ್ಲಿಯೇ ವಿಷ್ಣುವರ್ಧನ್ ಅವರ ಸ್ಮಾರಕ ನಿರ್ಮಾಣಕ್ಕೆ ಸರ್ಕಾರ ಮುಂದಾಗಬೇಕು~ ಎಂದು ಜೆಡಿ (ಎಸ್) ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಒತ್ತಾಯಿಸಿದರು.ಅಭಿನಯಸಿಂಹ ವಿಷ್ಣುವರ್ಧನ್ ಅಭಿಮಾನಿಗಳ ಸಂಘ ನಗರದ ಪ್ರಶಾಂತ ನಗರದಲ್ಲಿ ನೂತನವಾಗಿ ನಿರ್ಮಿಸಿರುವ ವಿಷ್ಣುವರ್ಧನ್ ಅವರ ಪುತ್ಥಳಿ ಅನಾವರಣಗೊಳಿಸಿ ಅವರು ಮಾತನಾಡಿದರು.`ರಾಜ್‌ಕುಮಾರ್ ಅವರ ನಂತರ ಕನ್ನಡಿಗರ ಮನದಲ್ಲಿ ಮನೆ ಮಾಡಿದ ನಟ ವಿಷ್ಣುವರ್ಧನ್. ಅವರ ಸ್ಮಾರಕ ನಿರ್ಮಾಣದ ವಿಚಾರವಾಗಿ ಹಲವು ವಿವಾದಗಳು ಈಗ ಹುಟ್ಟಿಕೊಂಡಿವೆ. ಸ್ಮಾರಕಕ್ಕೆ ಹಿಂದೆ ನಿಗದಿಯಾಗಿದ್ದ ಜಾಗದ ಬದಲಿಗೆ ಮೈಸೂರಿನಲ್ಲಿ ಸ್ಮಾರಕ ನಿರ್ಮಾಣದ ಪ್ರಸ್ತಾವಗಳು ಕೇಳಿ ಬರುತ್ತಿವೆ. ಯಾವುದೇ ಕಾರಣಕ್ಕೂ ಸರ್ಕಾರ ಇದಕ್ಕೆ ಅವಕಾಶ ನೀಡಬಾರದು. ಸ್ಮಾರಕ ನಿರ್ಮಾಣ ವಿಷ್ಣುವರ್ಧನ್ ಅಭಿಮಾನಿಗಳ ಭಾವನೆಯ ಪ್ರಶ್ನೆ~ ಎಂದು ಅವರು ನುಡಿದರು.`ಸ್ಮಾರಕ ನಿರ್ಮಾಣಕ್ಕೆಂದು ಸರ್ಕಾರ ಈಗಾಗಲೇ ಐದು ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ. ಆದರೆ ಸ್ಮಾರಕ ನಿರ್ಮಾಣದ ಕೆಲಸಗಳು ಮಾತ್ರ ಆಗುತ್ತಿಲ್ಲ. ಐದು ಕೋಟಿಯಲ್ಲ ಹತ್ತು ಕೋಟಿ ರೂ.ಗಳ ಅಗತ್ಯವಿದ್ದರೂ ಸರ್ಕಾರ ಸ್ಮಾರಕವನ್ನು ಅಭಿಮಾನ್ ಸ್ಟುಡಿಯೋದಲ್ಲಿಯೇ ಸ್ಥಾಪಿಸಬೇಕು. ಈ ಬಗ್ಗೆ ಸರ್ಕಾರ ಅಸಡ್ಡೆ, ಅನಾದರ ತೋರುವುದು ಸರಿಯಲ್ಲ. ಈ ಸಂಬಂಧ ಮುಖ್ಯಮಂತ್ರಿಗಳಿಗೆ ಹಾಗೂ ಸಂಬಂಧಿಸಿದವರಿಗೆ ಪತ್ರ ಬರೆಯಲಾಗುವುದು~ ಎಂದು ಅವರು ತಿಳಿಸಿದರು.ಚಿಕ್ಕಮಗಳೂರಿನ ಲೋಕಸಭಾ ಉಪ ಚುನಾವಣೆಗೆ ಜೆಡಿ (ಎಸ್) ಪಕ್ಷದಿಂದ ಯಾರನ್ನು ಕಣಕ್ಕಿಳಿಸಲಾಗುವುದು ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ದೇವೇಗೌಡ, `ಕಲಾವಿದ ವಿಷ್ಣುವರ್ಧನ್ ಅವರ ಸ್ಮರಣೆಯ ಈ ಸಂದರ್ಭದಲ್ಲಿ ಯಾವುದೇ ರಾಜಕೀಯದ ಮಾತುಗಳನ್ನಾಡುವುದಿಲ್ಲ~ ಎಂದರು.ಬೆಳಿಗ್ಗೆ ನಡೆದ ಮೆರವಣಿಗೆಯಲ್ಲಿ ಕೀಲು ಕುದುರೆ, ಡೊಳ್ಳು ಕುಣಿತ ಸೇರಿದಂತೆ ವಿವಿಧ ಜಾನಪದ ಕಲಾತಂಡಗಳು ಪಾಲ್ಗೊಂಡಿದ್ದವು. ಕಾವೇರಿಪುರ ವಾರ್ಡ್‌ನ ಬಿಬಿಎಂಪಿ ಸದಸ್ಯ ಆರ್. ಪ್ರಕಾಶ್, ನಟ ಅನಿರುದ್ಧ್ ಮತ್ತಿತರರು ಸಮಾರಂಭದಲ್ಲಿ ಭಾಗವಹಿಸಿದ್ದರು.

ಪ್ರತಿಕ್ರಿಯಿಸಿ (+)