ಬುಧವಾರ, ನವೆಂಬರ್ 13, 2019
18 °C

ಅಭಿವೃದ್ಧಿಗಾಗಿ ಕೆಜೆಪಿಗೆ ಬೆಂಬಲಿಸಲು ಮನವಿ

Published:
Updated:

ಜನವಾಡ: ರಾಜ್ಯದ ಅಭಿವೃದ್ಧಿಗಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ನೇತೃತ್ವದ ಕರ್ನಾಟಕ ಜನತಾ ಪಕ್ಷವನ್ನು ಬೆಂಬಲಿಸಬೇಕು ಎಂದು ಕೆಜೆಪಿ ರಾಜ್ಯ ಉಪಾಧ್ಯಕ್ಷೆಯೂ ಆಗಿರುವ ಚಿತ್ರನಟಿ ಶ್ರುತಿ ಹೇಳಿದರು.ಬೀದರ್ ತಾಲ್ಲೂಕಿನ ಆಣದೂರು ಗ್ರಾಮದಲ್ಲಿ ಸೋಮವಾರ ನಡೆದ ಕೆಜೆಪಿ ವಲಯ ಮಟ್ಟದ ಕಾರ್ಯಕರ್ತರ ಸಭೆ ಉದ್ಘಾಟಿಸಿ ಮಾತನಾಡಿದರು.ರಾಜ್ಯದಲ್ಲಿ ಭ್ರಷ್ಟಾಚಾರ ಸಾಂಕ್ರಾಮಿಕ ರೋಗಗಳಂತೆ ಹರಡಿದ್ದು, ಇದನ್ನು ಹೋಗಲಾಡಿಸುವ ಅವಶ್ಯಕತೆ ಇದೆ. ವಿದ್ಯಾವಂತರು ಹೆಚ್ಚಿನ ಸಂಖ್ಯೆಯಲ್ಲಿ ರಾಜಕಾರಣಕ್ಕೆ ಬರಬೇಕಿದೆ ಎಂದರು.ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಹಲವು ಜನಪ್ರಿಯ ಯೋಜನೆಗಳನ್ನು ಜಾರಿಗೊಳಿಸಿದ್ದರು. ಭಾಗ್ಯಲಕ್ಷ್ಮಿ ಯೋಜನೆ ಮೂಲಕ ಲಕ್ಷಾಂತರ ಮಹಿಳೆಯರ ಬಾಳಿಗೆ ಬೆಳಕಾಗಿದ್ದಾರೆ ಎಂದು ಬಣ್ಣಿಸಿದರು.ಕಲ್ಯಾಣ ಕರ್ನಾಟಕ ನಿರ್ಮಾಣ ಯಡಿಯೂರಪ್ಪನವರ ಕನಸಾಗಿದೆ. ಈ ಕಾರ್ಯಕ್ಕೆ ಎಲ್ಲರೂ ಸಹಕರಿಸಬೇಕಿದೆ ಎಂದು ಕೆಜೆಪಿ ಯುವ ಘಟಕದ ರಾಜ್ಯ ಅಧ್ಯಕ್ಷ ಜಗದೀಶ್ ಹಿರೇಮನಿ ನುಡಿದರು.ಕೆಜೆಪಿ ರಾಜ್ಯ ಕಾರ್ಯದರ್ಶಿ ಶಕುಂತಲಾ ಬೆಲ್ದಾಳೆ, ಬೀದರ್ ದಕ್ಷಿಣ ಕ್ಷೇತ್ರದ ಪಕ್ಷದ ಅಭ್ಯರ್ಥಿ ಡಾ. ಶೈಲೇಂದ್ರ ಬೆಲ್ದಾಳೆ ಮತ್ತಿತರರು ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)