ಅಭಿವೃದ್ಧಿಗೆ ಅಧಿಕಾರಿಗಳ ಅಸಡ್ಡೆ: ಆಕ್ರೋಶ

7

ಅಭಿವೃದ್ಧಿಗೆ ಅಧಿಕಾರಿಗಳ ಅಸಡ್ಡೆ: ಆಕ್ರೋಶ

Published:
Updated:

ಯಾದಗಿರಿ: “ಪ್ರತಿ ಸಭೆಯಲ್ಲೂ ಅದೇ ಉತ್ತರ. ಪ್ರಗತಿಯ ಮಾಹಿತಿ ಪುಸ್ತಕದಲ್ಲೂ ಅದೇ ಹಳೆಯ ಮಾಹಿತಿ. ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದಿಂದ ಪುಟ್ಟ ಜಿಲ್ಲೆ ಅಭಿವೃದ್ಧಿ ಕಾಣುತ್ತಿಲ್ಲ. ಅನುದಾನವಿದ್ದರೂ, ಅಭಿವೃದ್ಧಿ ಆಗದೇ ಇದ್ದರೆ ಹೇಗೆ? ಅಭಿವೃದ್ಧಿ ಮಾಡುವ ಇಚ್ಛೆ ಇದ್ದರೆ, ಜಿಲ್ಲೆಯಲ್ಲಿ ಇದ್ದುಕೊಂಡು ಕೆಲಸ ಮಾಡಿ. ಇಲ್ಲವೇ ವರ್ಗಾವಣೆ ಮಾಡಿಸಿಕೊಳ್ಳಿ”ಅಭಿವೃದ್ಧಿಯ ವಿಷಯದಲ್ಲಿ ಜಿಲ್ಲೆಯ ಅಧಿಕಾರಿಗಳು ತೋರುತ್ತಿರುವ ನಿರ್ಲಕ್ಷ್ಯಕ್ಕೆ ಸಂಸದ ಸಣ್ಣ ಫಕೀರಪ್ಪ ಪ್ರತಿಕ್ರಿಯಿಸಿದ ರೀತಿ ಇದು. ಶನಿವಾರ ಇಲ್ಲಿಯ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾ ಜಾಗೃತ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆ ಹೊಸದಾಗಿದ್ದು, ಸಾಕಷ್ಟು ಅನುದಾನ ಬರುತ್ತಿದೆ. ಅಧಿಕಾರಿಗಳಲ್ಲಿನ ಆಸಕ್ತಿಯ ಕೊರತೆಯಿಂದ ನಿರೀಕ್ಷಿತ ಅಭಿವೃದ್ಧಿ ಕಾಣುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.ಪ್ರತಿ ಸಭೆಯ ಮಾಹಿತಿ ಪುಸ್ತಕದಲ್ಲಿ ಅದೇ ಅಂಕಿ ಸಂಖ್ಯೆಗಳು ಕಾಣುತ್ತವೆ. ಸಕಾರದ ಯೋಜನೆಗಳಿಗಾಗಿ ಕೆಲ ಇಲಾಖೆಗಳು ಇನ್ನೂ ಕ್ರಿಯಾ ಯೋಜನೆ ಸಿದ್ಧಪಡಿಸಿಲ್ಲ. ಸಂಬಂಧಿಸಿದ ಇಲಾಖೆಗೆ ಪ್ರಸ್ತಾವನೆಯನ್ನೂ ಕಳುಹಿಸಿಲ್ಲ. ಮಾರ್ಚ್ ಸಮೀಪಿಸುತ್ತಿದ್ದರೂ, ನಿರೀಕ್ಷಿತ ಪ್ರಮಾಣದಲ್ಲಿ ಅನುದಾನ ಬಳಕೆ ಮಾಡದೇ ಇರುವುದು ಅಧಿಕಾರಿಗಳ ನಿರ್ಲಕ್ಷ್ಯವನ್ನು ಎತ್ತಿ ತೋರಿಸುತ್ತದೆ. ಇಂತಹ ಅಧಿಕಾರಿಗಳು ಜಿಲ್ಲೆಯಲ್ಲಿ ಇರುವುದರಿಂದ ಆಗುವ ಪ್ರಯೋಜನವಾದರೂ ಏನು ಎಂದು ಖಾರವಾಗಿ ಪ್ರಶ್ನಿಸಿದರು.

 

2011-12 ನೇ ಸಾಲಿನ 13 ನೇ ಹಣಕಾಸು ಯೋಜನೆಯಡಿ ಜಿಲ್ಲಾ ಪಂಚಾಯಿತಿ ವಲಯಕ್ಕೆ ರೂ. 60.85 ಲಕ್ಷ, ತಾಲ್ಲೂಕು ಪಂಚಾಯಿತಿ ವಲಯಕ್ಕೆ ರೂ. 121.700 ಲಕ್ಷ ಮತ್ತು ಗ್ರಾಮ ಪಂಚಾಯಿತಿ ವಲಯಕ್ಕೆ ರೂ. 425.940 ಲಕ್ಷ  ಕಳೆದ ಆಗಸ್ಟ್‌ನಲ್ಲಿ ಬಿಡುಗಡೆ ಆಗಿದೆ. ಆದರೆ ಕ್ರಿಯಾ ಯೋಜನೆ ಮಂಜೂರಾತಿ ಪಡೆಯದೇ ಇರುವುದರಿಂದ ಕಾಮಗಾರಿಗಳನ್ನು ಇನ್ನೂ ಪ್ರಾರಂಭಿಸಿಲ್ಲ ಎಂದು ಅಧಿಕಾರಿಯೊಬ್ಬರು ವಿವರಣೆ ನೀಡಿದರು.

 

ಇದರಿಂದ ಕೆಂಡಾಮಂಡಲರಾದ ಸಂಸದ ಸಣ್ಣಫಕೀರಪ್ಪ, “ನಿಮ್ಮ ನಿರ್ಲಕ್ಷ್ಯ ಧೋರಣೆಯಿಂದ ಜಿಲ್ಲೆಯ ಅಭಿವೃದ್ಧಿಗೆ ಹಿನ್ನಡೆ ಆಗುತ್ತಿದೆ. ತೀವ್ರಗತಿಯಲ್ಲಿ ಕೆಲಸ ಮಾಡಲು ಮನಸು ಮಾಡಿ ಎಂದು ಹೇಳಿದರು.  

ಕೇವಲ ಅಂಕಿ-ಸಂಖ್ಯೆಗಳನ್ನು ಮುಂದಿಟ್ಟುಕೊಂಡು ಹೇಳಿದರೆ, ಸಾಲದು. ವಾಸ್ತವವಾಗಿ ಕಾಮಗಾರಿ ಪೂರ್ಣಗೊಳ್ಳಬೇಕು. ಇಲ್ಲವಾದಲ್ಲಿ ಕಠಿಣ ಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಸಭೆಗೆ ಗೈರು ಹಾಜರಾದ ಅಧಿಕಾರಿಗಳಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡುವಂತೆ ಸೂಚಿಸಿದ ಅವರು, ಸಭೆ ನಡೆಯುವ ಮುರ‌್ನಾಲ್ಕು ದಿನ ಮುಂಚಿತವಾಗಿ ಪ್ರಗತಿಯ ವರದಿಯನ್ನು ಸಲ್ಲಿಸಬೇಕು ಎಂದು ಸಲಹೆ ಮಾಡಿದರು.ಜಿಲ್ಲೆಯ 948 ಪ್ರಾಥಮಿಕ ಶಾಲೆಗಳಲ್ಲಿ ಕುಡಿಯುವ ನೀರಿನ ಯೋಜನೆ ಜಾರಿಗೆ ಬಂದಿದ್ದು, ಅದರಲ್ಲಿ 721 ಶಾಲೆಗಳಲ್ಲಿ ಕುಡಿಯುವ ನೀರಿನ ಸೌಲಭ್ಯ ಒದಗಿಸಲಾಗಿದೆ. ಇನ್ನು 227 ಶಾಲೆಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಅಂತಹ ಶಾಲೆಗಳಲ್ಲಿ ತಾತ್ಕಾಲಿಕವಾಗಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಸರ್ವ ಶಿಕ್ಷಣ ಅಭಿಯಾನದ ಅಧಿಕಾರಿ ಮಾಹಿತಿ ನೀಡಿದರು.113 ಪ್ರೌಢಶಾಲೆಗಳ ಪೈಕಿ 75 ಶಾಲೆಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಇದ್ದು, 38 ಶಾಲೆಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಲಾಗುತ್ತಿದೆ ಎಂದು ತಿಳಿಸಿದರು.948 ಪ್ರಾಥಮಿಕ ಶಾಲೆಗಳಲ್ಲಿ 402 ಶಾಲೆಗಳಲ್ಲಿ ಹೆಣ್ಣು ಮಕ್ಕಳ ಶೌಚಾಲಯ ಪೂರ್ಣಗೊಂಡಿವೆ. ಇನ್ನುಳಿದ 546 ಶಾಲೆಗಳ ಪೈಕಿ 250 ಶೌಚಾಲಯಗಳ ಕಾಮಗಾರಿ ಮುಗಿಯುವ ಹಂತದಲ್ಲಿದ್ದು, 274 ವಿವಿಧ ಹಂತದಲ್ಲಿವೆ. ಇನ್ನೂ 21 ಶಾಲೆಗಳಲ್ಲಿ ಶೌಚಾಲಯದ ವ್ಯವಸ್ಥೆ ಇಲ್ಲ. 113 ಪ್ರೌಢಶಾಲೆಗಳ ಪೈಕಿ 53 ಶಾಲೆಗಳಲ್ಲಿ ಮಾತ್ರ ಶೌಚಾಲಯ ನಿರ್ಮಿಸಿದ್ದು, ಇನ್ನೂ 60 ಶಾಲೆಗಳಲ್ಲಿ ನಿರ್ಮಾಣದ ಕಾರ್ಯ ನಡೆದಿದೆ ಎದು ವಿವರಣೆ ನೀಡಿದರು.ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಡೆಯಲ್ಲಿ ಕೈಗೆತ್ತಿಕೊಂಡ ಎರಡು ಕಾಮಗಾರಿಗಳು ಪೂರ್ಣಗೊಂಡಿವೆ. ಯಾದಗಿರಿ ತಾಲ್ಲೂಕಿನಲ್ಲಿ 8, ಸುರಪುರ ತಾಲ್ಲೂಕಿನಲ್ಲಿ 15 ಮತ್ತು ಶಹಾಪುರ ತಾಲ್ಲೂಕಿನಲ್ಲಿ 15 ರಸ್ತೆ ಕಾಮಗಾರಿಗಳನ್ನು ರೂ. 41.36 ಕೋಟಿ ವೆಚ್ಚದಲ್ಲಿ ಪೂರ್ಣಗೊಳಿಸಲಾಗಿದೆ. ರಾಯಚೂರು ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ರೂ. 13.25 ಕೋಟಿ ವೆಚ್ಚದಲ್ಲಿ  41.79 ಕಿ.ಮೀ ಉದ್ದದ ಮೂರು ರಸ್ತೆ ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ಅಧಿಕಾರಿಗಳು ತಿಳಿಸಿದರು.ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಬಿ.ವಿ. ಭೋಸಲೆ, ಮುಖ್ಯ ಯೋಜನಾಧಿಕಾರಿ ವಿರೂಪಾಕ್ಷಪ್ಪ ಕರಣಗಿ, ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

ಅಧಿಕಾರಿಗಳೂ ಇಲ್ಲ, ಜನಪ್ರತಿನಿಧಿಗಳೂ ಇಲ್ಲ!

ಯಾದಗಿರಿ: ಸಂಸದ ಸಣ್ಣ ಫಕೀರಪ್ಪನವರ ಅಧ್ಯಕ್ಷತೆಯಲ್ಲಿ ಶನಿವಾರ ಕರೆಯಲಾಗಿದ್ದ ಸಭೆಯಲ್ಲಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಗೈರು ಹಾಜರಿ ಎದ್ದು ಕಾಣುತ್ತಿತ್ತು.  15 ದಿನಗಳ ಹಿಂದೆಯೇ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆ ನಿಗದಿಯಾಗಿದ್ದು, ಜಿಲ್ಲಾ ಪಂಚಾತಿ ಸಿಇಒ, ಜಿಲ್ಲಾಧಿಕಾರಿಗಳು, ನಗರಸಭೆ ಪೌರಾಯುಕ್ತರು ಸೇರಿದಂತೆ ಪ್ರಮುಖ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಕಾಣಿಸಲಿಲ್ಲ.

ಇನ್ನೊಂದೆಡೆ ಜಿಲ್ಲೆಯ ಜನರ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಬೇಕಾದ ಶಾಸಕರು, ಜಿಲ್ಲಾ ಪಂಚಾಯಿತಿ ಅಧ್ಯಕ್ಷ-ಉಪಾಧ್ಯಕ್ಷರೂ ಸಭೆಗೆ ಬರಲಿಲ್ಲ. ಇದರಿಂದಾಗಿ ಕೇವಲ ಸಂಸದ ಸಣ್ಣಫಕೀರಪ್ಪ ಹಾಗೂ ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಬಿ.ವಿ. ಭೋಸಲೆ ಮಾತ್ರ ವೇದಿಕೆಯಲ್ಲಿದ್ದರು.ಸಭೆಯ ನಂತರ ಸುದ್ದಿಗಾರರ ಜೊತೆಗೆ ಮಾತನಾಡಿದ ಸಂಸದ ಸಣ್ಣಫಕೀರಪ್ಪ, ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತರಲಾಗಿದೆ. ಜಿಲ್ಲಾಧಿಕಾರಿಗಳಿಗೂ ವಿಷಯ ತಿಳಿಸಲಾಗಿದೆ. ಈ ರೀತಿ ಮಾಡುವುದರಿಂದ ಜಿಲ್ಲೆಯ ಅಭಿವೃದ್ಧಿ ಆಗುವುದಾದರೂ ಯಾವಾಗ ಎಂದು ಪ್ರಶ್ನಿಸಿದರು.ಜಿಲ್ಲೆಯಲ್ಲಿ ಹಲವಾರು ಸಮಸ್ಯೆಗಳಿದ್ದು, ಅವುಗಳ ಬಗ್ಗೆ ಚರ್ಚಿಸಿ, ಕ್ರಮ ಕೈಗೊಳ್ಳಬೇಕಾಗಿದೆ. ಸಂಸದರು ಸಭೆ ಕರೆದರೂ, ಅಧಿಕಾರಿಗಳು ಬರದೇ ಇದ್ದರೇ ಹೇಗೆ? ಈ ಕುರಿತು ಸಚಿವರ ಜೊತೆ ಸುದೀರ್ಘ ಚರ್ಚಿಸಿ, ಮುಂಬರುವ ಕೆಡಿಪಿ ಸಭೆಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸುವಂತೆ ತಿಳಿಸಿದ್ದಾಗಿ ಹೇಳಿದರು.ರೈಲ್ವೆ ಸಮಸ್ಯೆಗಳ ಕುರಿತು ಈಗಾಗಲೇ ಕೇಂದ್ರ ರೈಲ್ವೆ ಸಚಿವರಿಗೆ ಪಟ್ಟಿ ನೀಡಲಾಗಿದೆ. ಪೂರ್ವಭಾವಿ ಸಭೆ ಕರೆಯುವುದಾಗಿ ತಿಳಿಸಿದ್ದಾರೆ. ಸಭೆಯಲ್ಲಿ ಚರ್ಚಿಸಿದ ನಂತರ ವಿವರ ನೀಡುವುದಾಗಿ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry