`ಅಭಿವೃದ್ಧಿಗೆ ರಾಜಕೀಯ ಸಲ್ಲದು'

7

`ಅಭಿವೃದ್ಧಿಗೆ ರಾಜಕೀಯ ಸಲ್ಲದು'

Published:
Updated:

ದೇವದುರ್ಗ: `ಗ್ರಾಮ ಮತ್ತು ತಾಲ್ಲೂಕಿನ ಅಭಿವೃದ್ಧಿ ವಿಷಯದಲ್ಲಿ ರಾಜಕೀಯ ಸಲ್ಲದು. ಕ್ಷೇತ್ರದ ಅಭಿವೃದ್ಧಿಗೆ ಎಲ್ಲರೂ ಪಕ್ಷಭೇದ ಮರೆತು ಒತ್ತು ನೀಡಬೇಕು. ಅದು ನಾಗರಿಕರ ಆದ್ಯ ಕರ್ತವ್ಯ' ಎಂದು ಶಾಸಕ ಎ.ವೆಂಕಟೇಶ ನಾಯಕ ಹೇಳಿದರು.ಸೋಮವಾರ ತಾಲ್ಲೂಕಿನ ಬಿ.ಗಣೇಕಲ್ ಗ್ರಾಮದಲ್ಲಿ ಏರ್ಪಡಿಸಲಾದ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.`ರಾಜ್ಯದಲ್ಲಿ ಹಣಕಾಸಿನ ಕೊರತೆ ಇಲ್ಲ. ಗ್ರಾಮ ಪಂಚಾಯಿತಿಗಳಿಗೆ ಹರಿದು ಬರುವ ಹಣದ ಸದುಪಯೋಗ ಮಾಡುವುದು ಎಲ್ಲರ ಕರ್ತವ್ಯ. ತಾಲ್ಲೂಕಿಗೆ ಬೇಕಾಗುವ ಎಲ್ಲ ಸೌಲಭ್ಯಗಳನ್ನು ಹಂತ ಹಂತವಾಗಿ ಈಡೇರಿಸಲು ಕ್ರಮ ತೆಗೆದುಕೊಳ್ಳಲಾಗುವುದು' ಎಂದು ಹೇಳಿದರು.`ತಾಲ್ಲೂಕಿನ ಕೆಲವು ಕಟ್ಟಡಗಳು ಕಳಪೆ ಕಾಮಗಾರಿಯಿಂದ ವರ್ಷ ಕಳೆಯುವ ಮೊದಲೇ ಬಳಕೆಗೆ ಬಾರದ ಸ್ಥಿತಿ ನಿರ್ಮಾಣವಾಗಿದೆ. ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿ ಕಡೆ ಹೆಚ್ಚಿನ ಗಮನ ಹರಿಸಬೇಕು' ಎಂದರು.ಕೃಷ್ಣಾ ಭಾಗ್ಯ ಜಲನಿಗಮ, ಶಿಕ್ಷಣ ಇಲಾಖೆ, ಸಮಾಜ ಕಲ್ಯಾಣ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಸುಮಾರು 5.15 ಕೋಟಿ ರೂಪಾಯಿಯ ವಿವಿಧ ಕಾಮಗಾರಿಗಳಿಗೆ ಶಾಸಕ ಎ.ವೆಂಕಟೇಶ ನಾಯಕ ಅವರು ಅಡಿಗಲ್ಲು ಹಾಕಿದರು.ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಿವಲಿಂಗಮ್ಮ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಬಸವರಾಜ ಹೊಸಮನಿ, ಜಿಲ್ಲಾ ಪಂಚಾಯಿತಿ ಸದಸ್ಯ ಶಿವಣ್ಣ ತಾತ, ಕಾಂಗ್ರೆಸ್ ಮುಖಂಡ ಭೀಮನಗೌಡ, ಬಸಯ್ಯ ಶಾಖೆ, ಶರಣಗೌಡ, ರಾಚಣ್ಣ ಅಬಕಾರಿ, ಪ್ರಭು ಗದ್ಗಿ, ಲಕ್ಷ್ಮಣ ಗೋಸಲ, ಸತ್ಯನಾರಾಯಣ ನಾಯಕ, ಸಮಾಜ ಕಲ್ಯಾಣ ಅಧಿಕಾರಿ ವೆಂಕಟೇಶ ಹೋಗಿಬಂಡಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry