ಶುಕ್ರವಾರ, ನವೆಂಬರ್ 15, 2019
27 °C

ಅಭಿವೃದ್ಧಿಯಲ್ಲಿ ರಾಯರೆಡ್ಡಿ ಹಠಮಾರಿ-ಖರ್ಗೆ

Published:
Updated:

ಯಲಬುರ್ಗಾ: ಅಭಿವೃದ್ಧಿ ವಿಷಯದಲ್ಲಿ ಅತ್ಯಂತ ನಿಷ್ಟುರವಾಗಿ ನಡೆದುಕೊಳ್ಳುವ ಕಾಂಗ್ರೆಸ್ ಪಕ್ಷದ ಏಕೈಕ ವ್ಯಕ್ತಿ ಬಸವರಾಜ ರಾಯರೆಡ್ಡಿಯವರು ಬೇರೆಯವರ ಕ್ಷೇತ್ರಕ್ಕಿಂತಲೂ ಹೆಚ್ಚಿನ ರೀತಿಯಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದಾರೆ. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಬೆಂಬಲಿಸಿದ್ದರೆ ಕ್ಷೇತ್ರದ ಚಿತ್ರಣ ಈ ರೀತಿ ಇರುತ್ತಿರಲಿಲ್ಲ, ಆದರೂ ಇನ್ನೂ ಕಾಲ ಮಿಂಚಿಲ್ಲ, ಕ್ಷೇತ್ರದ ಅಭಿವೃದ್ಧಿಗಾಗಿ ರಾಯರೆಡ್ಡಿಯವರನ್ನು ಬೆಂಬಲಿಸುವಂತೆ ಎಂದು ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ ಕೋರಿದರು.ಭಾನುವಾರ ಪಟ್ಟಣದಲ್ಲಿ ಕಾಂಗ್ರೆಸ್ ಪರ ಪ್ರಚಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕ್ಷೇತ್ರದ ಬಗ್ಗೆ ಹೆಚ್ಚು ಕಳಕಳಿ ಹೊಂದಿರುವ ಬಸವರಾಜ ರಾಯರೆಡ್ಡಿಯವರು ಮುಂಗೋಪ ಸ್ವಭಾವದವರಾಗಿದ್ದರೂ ಅಭಿವೃದ್ಧಿಗಾಗಿ ಹಠಮಾರಿ ಧೋರಣೆಯನ್ನು ವ್ಯಕ್ತಪಡಿಸಿ ಹೆಚ್ಚಿನ ಯೋಜನೆಗಳನ್ನು ಕ್ಷೇತ್ರಕ್ಕೆ ತರುವಲ್ಲಿ ಅತ್ಯಂತ ಚಾಣಾಕ್ಷ್ಯರಾಗಿದ್ದಾರೆ. ಇಂತಹ ಒಳ್ಳೆಯ ವ್ಯಕ್ತಿಯನ್ನು ಕ್ಷೇತ್ರ ಕಳೆದುಕೊಂಡರೆ ಕ್ಷೇತ್ರಕ್ಕೆ ಭಾರಿ ನಷ್ಟವಾಗಲಿದೆ. ಅಷ್ಟೇ ಅಲ್ಲದೇ ರೈಲ್ವೆ ಯೋಜನೆಗೆ ಸಂಬಂಧಿಸಿದಂತೆ ಹೈದ್ರಾಬಾದ್ ಕರ್ನಾಟಕ ಪ್ರದೇಶದಲ್ಲಿ ಅತೀ ಹೆಚ್ಚು ಒತ್ತಡ ಹಾಕಿದ ರಾಜಕಾರಣಿ ಎಂದರೆ ಬಸವರಾಜ ರಾಯರೆಡ್ಡಿ ಎಂದು ಅಭಿಪ್ರಾಯಪಟ್ಟರು.ಹೈದ್ರಾಬಾದ್ ಕರ್ನಾಟಕ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸಿಗರನ್ನು ಆಯ್ಕೆ ಮಾಡಿದರೆ 371ನೇ ಕಲಂ ಅಡಿಯಲ್ಲಿ ಸಾಕಷ್ಟು ಸೌಲಭ್ಯ ಕಲ್ಪಿಸಿಕೊಡಲಾಗುವುದು, ತಿದ್ದುಪಡಿಗೆ ತೀವ್ರ ವಿರೋಧಿಸಿದ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಈ ವಿಶೇಷ ಸೌಲಭ್ಯದ ಅವಕಾಶ ವಂಚಿತರಾಗಬೇಕಾದೀತು, ಮತ್ತೆ ಈ ಭಾಗದ ನಿರುದ್ಯೋಗಿ ಯುವಕರು, ಪ್ರತಿಭಾವಂತರಿಗೆ ಇದು ಗಗನಕುಸುಮವಾಗಲಿದೆ ಈ ನಿಟ್ಟಿನಲ್ಲಿ ಈ ಭಾಗದ ಜನತೆ ಕಾಂಗ್ರೆಸ್ ಕಡೆ ಹೆಚ್ಚಿನ ಒಲವು ತೋರಬೇಕಾಗಿದೆ ಎಂದು ಅಭಿಪ್ರಾಯಪಟ್ಟರು. ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಸಗೀರ ಅಹ್ಮದ್ ಮಾತನಾಡಿ, ರಾಜ್ಯದ ಜನತೆ ಬದಲಾವಣೆ ಬಯಸಿ ಬಿಜೆಪಿಗೆ ಬೆಂಬಲಿಸಿದ್ದಕ್ಕೆ ನಿರೀಕ್ಷಿಸಲಾರದಷ್ಟು ಅನ್ಯಾಯ ಮಾಡಿದ್ದಾರೆ, ನೀತಿ ನಿಯತ್ತನ್ನು ಗಾಳಿಗೆ ತೂರಿ ಮನಬಂದಂತೆ ನಡೆದುಕೊಳ್ಳುವ ಮೂಲಕ ಜನರ ಹಿತವನ್ನು ಸಂಪೂರ್ಣ ಮರೆತು ದ್ರೋಹಮಾಡಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿಗೆ ಜನರತ್ತ ಮತಯಾಚನೆ ಮಾಡಲು ಯಾವುದೇ ರೀತಿಯ ನೈತಿಕ ಹಕ್ಕು ಇಲ್ಲದಾಗಿದೆ.  ಬರೀ ಅಧಿಕಾರ, ಅಕ್ರಮ ಸಂಪತ್ತಿಗೆ ಕಾಲ ಕಳೆದ ಬಿಜೆಪಿಗೆ ಮತ್ತೆ ಜನರು ಒಲವು ತೋರಿದರೆ ಆತ್ಮವಂಚನೆ ಮಾಡಿಕೊಂಡಹಾಗೆ, ಈ ಹಿನ್ನೆಲೆಯಲ್ಲಿ ಕ್ಷೇತ್ರದ ಜನತೆ ಅಭಿವೃದ್ದಿಪರ ಚಿಂತನೆ ಮಾಡುವ ವ್ಯಕ್ತಿಯನ್ನು ಬೆಂಬಲಿಸಿ ಕ್ಷೇತ್ರವನ್ನು ಅಭಿವೃದ್ಧಿಗೊಳಿಸಲು ಜನತೆಗೆ ಕಿವಿ ಮಾತು ಹೇಳಿದರು.ಅಭ್ಯರ್ಥಿ ಬಸವರಾಜ ರಾಯರೆಡ್ಡಿ ಮಾತನಾಡಿ, ಕಳೆದ ಐದಾರು ವರ್ಷಗಳ ಹಿಂದಿನವರೆಗೂ ಮಾಡಿದ್ದ ಅಭಿವೃದ್ಧಿ ಕಾರ್ಯಗಳ ನಂತರ ಕ್ಷೇತ್ರ ಯಾವುದೇ ಕಲ್ಯಾಣ ಕಾರ್ಯಕ್ರಮಗಳು ಕಾಣಲಿಲ್ಲ, ಅನೇಕ ಗ್ರಾಮಗಳಲ್ಲಿ ತಮ್ಮ ಅವಧಿಯಲ್ಲಿ ನಿರ್ಮಿಸಿದ್ದ ಕಟ್ಟಡಗಳಿಗೆ ಸುಣ್ಣಬಣ್ಣ ಹಚ್ಚಲು ಕೂಡಾ ಆಗಿಲ್ಲ,  ದುರಾಸೆಗಾಗಿ ಕ್ಷೇತ್ರದ ಶಾಸಕರಾಗಲು ಬಯಸುವವರಿಗೆ ತಕ್ಕಪಾಠ ಕಲಿಸಿ ಸಮಗ್ರ ಅಭಿವೃದ್ಧಿ ಗುರಿ ಹೊಂದಿರುವ ಕಾಂಗ್ರೆಸ್ ಪಕ್ಷಕ್ಕೆ ಪ್ರೋತ್ಸಾಹಿಸಿರಿ ಎಂದು ಮನವಿ ಮಾಡಿದರು.ಮುಖಂಡ ಬಿ.ಎಂ. ಶಿರೂರು ಪ್ರಸ್ತಾವಿಕವಾಗಿ ಮಾತನಾಡಿದರು. ಕೆಪಿಸಿಸಿ ಸದಸ್ಯ ಬಸವರಾಜ ಉಳ್ಳಾಗಡ್ಡಿ ಸ್ವಾಗತಿಸಿದರು. ಮೌಲಾಹುಸೇನ ಬುಲ್ಡಿಯಾರ ನಿರೂಪಿಸಿದರು. ಮಾಜಿ ಶಾಸಕ ಮಲ್ಲಿಕಾರ್ಜುನ ನಾಗಪ್ಪ, ಹಸನಸಾಬ ದೋಟಿಹಾಳ, ಮುಖಂಡರಾದ ರಾಘವೇಂದ್ರ ಜೋಶಿ, ಯಂಕಣ್ಣ ಯರಾಶಿ, ರಾಮಣ್ಣ, ಸಾಲಭಾವಿ, ಹನಮಂತಗೌಡ ಚಂಡೂರ ಸೇರಿದಂತೆ ಅನೇಕರು ಹಾಜರಿದ್ದರು.

ಪ್ರತಿಕ್ರಿಯಿಸಿ (+)