ಗುರುವಾರ , ಮೇ 13, 2021
16 °C

ಅಭಿವೃದ್ಧಿಯಲ್ಲಿ ಶಿಕ್ಷಕರ ಪಾತ್ರ ಹಿರಿದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಸಮಾಜ ಅಭಿವೃದ್ಧಿಯಲ್ಲಿ ಶಿಕ್ಷಕರ ಪಾತ್ರ ಹಿರಿದಾಗಿದ್ದು, ಶಿಕ್ಷಕರಾದವರು ತಮ್ಮ ಘನತೆಗೆ ತಕ್ಕಂತೆ ನಡೆದುಕೊಳ್ಳಬೇಕು ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಶಿವಪ್ರಭು ಪಾಟೀಲ ತಿಳಿಸಿದರು.ಜಿಲ್ಲಾ ಪಂಚಾಯಿತಿ, ಸಾರ್ವಜನಿಕ ಶಿಕ್ಷಣ ಇಲಾಖೆ ಆಶ್ರಯದಲ್ಲಿ ಗುರುವಾರ ನಗರದ ಎಸ್.ಎಂ. ಪಂಡಿತ ರಂಗ ಮಂದಿರದಲ್ಲಿ ಏರ್ಪಡಿಸಲಾಗಿದ್ದ 2011-12ನೇ ಸಾಲಿನಲ್ಲಿ ಜಿಲ್ಲಾ ಮಟ್ಟದ ಶಿಕ್ಷಕರ ದಿನ ಆಚರಣೆ, ಉತ್ತಮ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ಹಾಗೂ 2011ನೇ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ 100ರಷ್ಟು ಫಲಿತಾಂಶ ಪಡೆದ ಸಂಸ್ಥೆಗೆ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ದೇಶದ ಅಭಿವೃದ್ಧಿ ಎನ್ನುವುದು ಶಿಕ್ಷಣದಿಂದ ಮಾತ್ರ ಎಂಬುದು ರುಜುವಾತಾಗಿದೆ. ಶಿಕ್ಷಣದಿಂದಲೇ ನಮ್ಮೆಲ್ಲ ಸಾಧನೆಗಳು ಎಂದು ಶಿಕ್ಷಕ ಸ್ಥಾನದ ಹಿರಿಮೆ ಕುರಿತು ಮಾತನಾಡಿದರು.ಶಿಕ್ಷಕರಿಗಾಗಿ ಏರ್ಪಡಿಸಿರುವ ಇಂಥ ಕಾರ್ಯಕ್ರಮಗಳಿಂದ ಇನ್ನುಳಿದ ಶಿಕ್ಷಕರು ಪ್ರೇರಣೆಗೊಂಡು ಇನ್ನೂ ಉತ್ತಮ ಕೆಲಸ ಮಾಡಲು ಸಾಧ್ಯ ಎಂದು ಅಧ್ಯಕ್ಷತೆ ವಹಿಸಿದ್ದ ಶಾಸಕಿ ಅರುಣಾ ಚಂದ್ರಶೇಖರ ಪಾಟೀಲ ತಿಳಿಸಿದರು.ಮುಖ್ಯ ಅತಿಥಿಗಳಾಗಿದ್ದ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ ಮಾತನಾಡಿ, ಸರ್ಕಾರಿ ನೌಕರರ 6ನೇ ವೇತನ  ಕುರಿತಂತೆ ಸರ್ಕಾರದೊಂದಿಗೆ ಮಾತುಕತೆ ನಡೆಸಿ ಜಾರಿಗೊಳಿಸಲು ಪ್ರಯತ್ನಿಸಲಾಗುವುದು ಎಂದರು.ಪ್ರಾಸ್ತಾವಿಕವಾಗಿ ಮಾತನಾಡಿದ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಬಿ.ಎಸ್. ಪರಮೇಶ, ಕಳೆದ ಬಾರಿಗಿಂತ ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಜಿಲ್ಲೆಗೆ ಉತ್ತಮ ಫಲಿತಾಂಶ (ಶೇ 73.95) ಬಂದಿದ್ದು, ಜಿಲ್ಲೆಯ 42 ಶಾಲೆಗಳು ನೂರಕ್ಕೆ ನೂರರಷ್ಟು ಪ್ರತಿಶತ ಫಲಿತಾಂಶ ಪಡೆದಿರುವುದು ಹೆಮ್ಮೆಯ ವಿಷಯವಾಗಿದೆ. ಈ ಬಾರಿ ಜಿಲ್ಲೆಯ ಮೂವರು ಶಿಕ್ಷಕರಿಗೆ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಬಂದಿರುವುದು ಶ್ಲಾಘನೀಯ ಎಂದರು.ಶಿಕ್ಷಣ ಹಾಗೂ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಶ್ರೀನಿವಾಸ ಪಿಲ್ಲಿ, ಜಿಲ್ಲಾ ಪಂಚಾಯಿತಿ ಹೆಚ್ಚುವರಿ ಕಾರ್ಯನಿರ್ವಾಹಕ ಅಧಿಕಾರಿ ಎಂ.ಬಿ. ಕೆಂಚಣ್ಣನವರ, ಕಮಲಾಪುರ ಡಯಟ್ ಪ್ರಾಚಾರ್ಯೆ ಮೆಹರುನ್ನಿಸಾ ಬೇಗಂ, ವಿಠ್ಠಲ್ ವಗ್ಗನ್, ವಿಶ್ವನಾಥ ಕಟ್ಟಿಮನಿ, ತುಕಾರಾಮ, ಕರಬಸಯ್ಯ ಜಿ. ಮಠ ಇತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.ಜಿಲ್ಲಾ ಮಟ್ಟದ ಉತ್ತಮ ಹಾಗೂ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದವರಿಗೆ ಸನ್ಮಾನ ಹಾಗೂ ಎಸ್‌ಎಸ್‌ಎಲ್‌ಸಿಯಲ್ಲಿ ಶೇ 100ರಷ್ಟು ಫಲಿತಾಂಶ ಪಡೆದ ಶಾಲೆಗಳಿಗೆ ರೂ. 10, 000 ನಗದು ಬಹುಮಾನ, ಪ್ರಶಸ್ತಿಪತ್ರ ನೀಡಲಾಯಿತು. ವಿಜಯಕುಮಾರ ಹಂಚಿನಾಳ ಕಾರ್ಯಕ್ರಮ ನಿರೂಪಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.