ಶುಕ್ರವಾರ, ಏಪ್ರಿಲ್ 16, 2021
30 °C

ಅಭಿವೃದ್ಧಿಯೇ ಆದ್ಯತೆಯಾಗಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ರಾಷ್ಟ್ರಮಟ್ಟದ ಸಮಗ್ರ ಅಭಿವೃದ್ಧಿಯನ್ನು ಗಮನದಲ್ಲಿ ಇಟ್ಟುಕೊಂಡು ಸರ್ಕಾರಗಳು ಬಜೆಟ್ ಮಂಡಿಸಬೇಕೇ ವಿನಾ ಅದನ್ನು ಅಗ್ಗದ ಪ್ರಚಾರ ಪಡೆಯಲು ಇಲ್ಲವೆ ಮತ ಗಿಟ್ಟಿಸಿಕೊಳ್ಳಲು ಅಸ್ತ್ರ ಮಾಡಿಕೊಳ್ಳಬಾರದು ಎಂದು ಅರ್ಥಶಾಸ್ತ್ರಜ್ಞ ಡಾ.ವಿನೋದ ಅಣ್ಣಿಗೇರಿ ಅಭಿಪ್ರಾಯಪಟ್ಟರು. ನಗರದ ಕೈಜನ್ ಎಜ್ಯುಪ್ಲಸ್ ಸೊಸೈಟಿಯ ಇನ್‌ಸ್ಟಿಟ್ಯೂಟ್ ಆಫ್ ಎಕ್ಸ್‌ಲೆನ್ಸ್ ಇನ್ ಮ್ಯಾನೇಜ್‌ಮೆಂಟ್ ಸೈನ್ಸ್ ಸಂಸ್ಥೆ ಹಾಗೂ ಗ್ಲೋಬಲ್ ಶಿಕ್ಷಣ ಪ್ರತಿಷ್ಠಾನದ ಬಿಬಿಎ ಕಾಲೇಜು ಸಂಯುಕ್ತವಾಗಿ ಈಚೆಗೆ ಏರ್ಪಡಿಸಿದ್ದ ಬಜೆಟ್ ಚಿಂತನ-ಮಂಥನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.‘ಗ್ರಾಮೀಣಾಭಿವೃದ್ಧಿ, ಸಾಮಾಜಿಕ ಭದ್ರತೆ, ಉದ್ಯೋಗಾವಕಾಶ ಹೆಚ್ಚಳ, ಕೃಷಿ ಸಬಲೀಕರಣ ಬಜೆಟ್‌ನ ಆದ್ಯತೆಗಳಾಗಬೇಕು’ ಎಂದು ಅವರು ಅಭಿಪ್ರಾಯಪಟ್ಟರು.‘ನೇರ ತೆರಿಗೆ ಕುರಿತ ತಿದ್ದುಪಡಿ ಸ್ವಾಗತಾರ್ಹ. ತೆರಿಗೆ ಸಂಗ್ರಹ ಹೆಚ್ಚಳವಾಗಿ ವ್ಯಾಪಕ ಅಭಿವೃದ್ಧಿಗೆ ಅನುಕೂಲವಾಗಲಿದೆ’ ಎಂದು ಕರ್ನಾಟಕ ವಿಶ್ವವಿದ್ಯಾಲಯದ ವಾಣಿಜ್ಯ ವಿಭಾಗದ ನಿರ್ದೇಶಕ ಡಾ.ಎಸ್.ಜಿ. ಹುಂಡೇಕಾರ್ ಹೇಳಿದರು. ‘ಸಂಗ್ರಹಿಸಿದ ತೆರಿಗೆಯನ್ನು ಯೋಜಿತವಾಗಿ, ಸಮರ್ಪಕವಾಗಿ ಅಭಿವೃದ್ಧಿ ಕಾರ್ಯಗಳಿಗೆ ಬಳಸಿಕೊಳ್ಳುವಂತಾಗಬೇಕು’ ಎಂದು ತಿಳಿಸಿದರು.‘ಭಾರತದಲ್ಲಿ 25 ಕೋಟಿ ಜನ ಹೆಚ್ಚಿನ ಆದಾಯ ಹೊಂದಿದ್ದು ಕೇವಲ 4.5 ಕೋಟಿ ಜನ ಮಾತ್ರ ತೆರಿಗೆ ಪಾವತಿಸುತ್ತಾರೆ. ಉಳಿದವರು ತಪ್ಪು ಮಾಹಿತಿ ನೀಡಿ ತೆರಿಗೆ ತುಂಬದೆ ಸರ್ಕಾರಕ್ಕೆ ವಂಚಿಸುತ್ತಾರೆ’ ಎಂದು ಖ್ಯಾತ ಲೆಕ್ಕಪರಿಶೋಧಕ ಡಾ.ಎನ್.ಎ. ಚರಂತಿಮಠ ಹೇಳಿದರು. 300ಕ್ಕೂ ಅಧಿಕ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ದೀಪಾ ಭಟ್ ಪ್ರಾರ್ಥಿಸಿದರು. ನಿರ್ದೇಶಕ ಡಾ.ಪ್ರಶಾಂತ ಸ್ವಾಗತಿಸಿದರು. ಪ್ರೊ. ಮಹೇಶ ದೇಶಪಾಂಡೆ ವಂದಿಸಿದರು. ಸಹ ನಿರ್ದೇಶಕ ಡಾ.ಶಿವಶಂಕರ ಹಾಗೂ ಚೈತನ್ಯ ಕಿತ್ತೂರ ಹಾಜರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.