ಭಾನುವಾರ, ಜನವರಿ 19, 2020
26 °C

ಅಭಿವೃದ್ಧಿಯೇ ನಮ್ಮ ಮೂಲಮಂತ್ರ: ಮಾಡಾಳ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚನ್ನಗಿರಿ: ತಾಲ್ಲೂಕಿನ ಎಲ್ಲಾ ಗ್ರಾಮಗಳಿಗೂ ಕಡ್ಡಾಯವಾಗಿ ಮೂಲ ಸೌಲಭ್ಯ ಒದಗಿಸುವ ದೃಷ್ಟಿಯಿಂದ ಚರಂಡಿ, ಕಾಂಕ್ರೀಟ್ ರಸ್ತೆ, ಸಮುದಾಯ ಭವನ ಮುಂತಾದ ಆವಶ್ಯಕ ಕಾಮಗಾರಿಗಳನ್ನು ಮಾಡಲಾಗುತ್ತಿದೆ. ಅಭಿವೃದ್ಧಿಯೇ ನಮ್ಮ ಮೂಲಮಂತ್ರವಾಗಿದೆ ಎಂದು ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಹೇಳಿದರು.ತಾಲ್ಲೂಕಿನ ಆಗರಬನ್ನಿಹಟ್ಟಿ ಗ್ರಾಮದಲ್ಲಿ ಮಂಗಳವಾರ ಓವರ್ ಹೆಡ್ ಟ್ಯಾಂಕ್, ತೇರುಮನೆ ಹಾಗೂ ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿ ಅವರು ಮಾತನಾಡಿದರು.

ಪ್ರಸಕ್ತ ಸಾಲಿನಲ್ಲಿ ಈ ಗ್ರಾಮವನ್ನು ಸುವರ್ಣ ಗ್ರಾಮ ಯೋಜನೆಗೆ ಆಯ್ಕೆ ಮಾಡಲಾಗಿದೆ. ಈ ಗ್ರಾಮದಲ್ಲಿ ಓವರ್ ಹೆಡ್ ಟ್ಯಾಂಕ್ ನಿರ್ಮಾಣಕ್ಕೆ ರೂ 16 ಲಕ್ಷ, ಸಮುದಾಯ ಭವನಕ್ಕೆ ರೂ3 ಲಕ್ಷ, ಕಾಂಕ್ರೀಟ್ ರಸ್ತೆಗೆ ರೂ 20 ಲಕ್ಷ ಹಾಗೂ 52 ಆಶ್ರಯ ಮನೆಗಳನ್ನು ಮಂಜೂರು ಮಾಡಲಾಗಿದೆ. ಜನರ ಸೇವೆಯೇ ನಮ್ಮ ಗುರಿಯಾಗಿದೆ. ತಾಲ್ಲೂಕಿನ 178 ಹಳ್ಳಿಗಳಿಗೂ ಮುಂದಿನ ಒಂದು ವರ್ಷದಲ್ಲಿ ಶುದ್ಧ, ಶಾಶ್ವತ ಕುಡಿಯುವ ನೀರು ಪೂರೈಸಲು ಕ್ರಮ ಕೈಗೊಳ್ಳಲಾಗಿದೆ. ನಮಗೆ ಯಾವುದೇ ಜಾತಿ, ಧರ್ಮಗಳ ಬಗ್ಗೆ ದ್ವೇಷ ಇಲ್ಲ. ಬಿಜೆಪಿ ಅಲ್ಪಸಂಖ್ಯಾಂತರ ವಿರೋಧಿಯಲ್ಲ. ಮುಸ್ಲಿಂ ಸಮುದಾಯ ಭನವದ ನಿಮಾಣಕ್ಕೆ ರೂ5 ಲಕ್ಷ ನೀಡುವುದಾಗಿ ಭರವಸೆ ನೀಡಿದರು.ಮಾಜಿ ಜಿ.ಪಂ. ಅಧ್ಯಕ್ಷ ಕೆ.ಜಿ. ಬಸವಲಿಂಗಪ್ಪ, ಹೊನ್ನೇಬಾಗಿ ಕ್ಷೇತ್ರದ ಜಿ.ಪಂ. ಸದಸ್ಯ ಎಚ್.ವಿ. ರುದ್ರಪ್ಪ, ತಾ.ಪಂ. ಅಧ್ಯಕ್ಷೆ ಇ. ಸುಧಾ ಕುಮಾರಸ್ವಾಮಿ, ಸದಸ್ಯ ಎ.ಬಿ. ಶಿವಕುಮಾರ್, ಎಪಿಎಂಸಿ ಅಧ್ಯಕ್ಷ ಎಂ.ಎನ್. ಮರುಳಪ್ಪ, ಸದಸ್ಯ ಮಹೇಶ್ವರಪ್ಪ, ಪಂಚಾಯತ್‌ರಾಜ್ ಇಲಾಖೆ ಎಇಇ ಸೋಮಶೇಖರ್, ಬೆ.ಕೆ. ರಾಜಪ್ಪ, ಬೆ.ಜೆ. ಬಸವರಾಜಪ್ಪ, ಶಿವಲಿಂಗಪ್ಪ, ಗ್ರಾ.ಪಂ. ಉಪಾಧ್ಯಕ್ಷ ಎ.ಎಂ. ಚಂದ್ರಶೇಖರ್ ಮುಂತಾದವರು ಉಪಸ್ಥಿತರಿದ್ದರು. ಗ್ರಾ.ಪಂ. ಅಧ್ಯಕ್ಷೆ  ಎಸ್. ಪ್ರೇಮಾ ಅಧ್ಯಕ್ಷತೆ ವಹಿಸಿದ್ದರು.

ಒಳ ಮೀಸಲಾತಿಗೆ ಒತ್ತಾಯ ರಾಜ್ಯದಲ್ಲಿ ಸುಮಾರು 85 ಲಕ್ಷ ಮಾದಿಗ ಸಮಾಜದವರಿದ್ದು, ಸ್ವಾತಂತ್ರ್ಯ ಬಂದು ಇಲ್ಲಿಯವರೆಗೂ ಈ ಸಮಾಜದವರು ಎಲ್ಲಾ ರಂಗಳಲ್ಲಿಯೂ ಹಿಂದುಳಿದಿದ್ದಾರೆ. ಮಾದಿಗ ಜನಾಂಗ ಬಿಟ್ಟು ಪರಿಶಿಷ್ಟ ಜಾತಿಯಲ್ಲಿ ಮೀಸಲಾತಿ ಪಡೆದ ಇತರೆ ಜಾತಿಯವರು  ಈಗಾಗಲೇ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಮುಂದುವರೆದಿದ್ದಾರೆ.ಆದರೆ, ಮಾದಿಗ ಜನಾಂಗದವರು ಈ ಎಲ್ಲಾ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಯಡಿಯೂರಪ್ಪ ಅವರು ನೀಡಿದ್ದ ಭರವಸೆ ಇನ್ನು ಭರವಸೆಯಾಗಿಯೇ ಉಳಿದಿದೆ. ಆದ್ದರಿಂದ, ಮುಂದಿನ ತಿಂಗಳು ನಡೆಯುವ ಅಧಿವೇಶದಲ್ಲಿ ಮಾದಿಗ ಜನಾಂಗಕ್ಕೂ ಒಳ ಮೀಸಲಾತಿಯನ್ನು ನೀಡಲು ಮಸೂದೆಯನ್ನು ಜಾರಿಗೊಳಿಸಲು ಸರ್ಕಾರ ಮುಂದಾಗಬೇಕು ಎಂದು ತಾಲ್ಲೂಕು ಮಾದಿಗರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಕೆ.ಸಿ. ಮೂರ್ತಿ, ಉಪಾಧ್ಯಕ್ಷ ಎ.ಕೆ. ದೇವೇಂದ್ರಪ್ಪ, ಸಿ.ಆರ್. ನಾಗೇಂದ್ರಪ್ಪ, ಎಚ್. ಪ್ರಕಾಶ್, ರಾಜಪ್ಪ, ಪರಮೇಶ್ವರಪ್ಪ  ಒತ್ತಾಯಿಸಿದ್ದಾರೆ. 

ಪ್ರತಿಕ್ರಿಯಿಸಿ (+)