ಅಭಿವೃದ್ಧಿಯೇ ಮುಖ್ಯ ಗುರಿ: ಸುಧಾಕರ್

7

ಅಭಿವೃದ್ಧಿಯೇ ಮುಖ್ಯ ಗುರಿ: ಸುಧಾಕರ್

Published:
Updated:

ಹಿರಿಯೂರು: ರಾಜಕೀಯ ಕ್ಷೇತ್ರದಲ್ಲಿ ಉಂಟಾದ ಬದಲಾವಣೆ ಕಾರಣಕ್ಕೆ ಚಳ್ಳಕೆರೆ ಕ್ಷೇತ್ರದಿಂದ ಹಿರಿಯೂರು ವಿಧಾನಸಭಾ ಕ್ಷೇತ್ರಕ್ಕೆ ಬಂದು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ ತನಗೆ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯ ಸಾಧಿಸುವುದೇ ಮುಖ್ಯ ಗುರಿ ಎಂದು ಶಾಸಕ ಡಿ. ಸುಧಾಕರ್ ಹೇಳಿದರು.ಭಾನುವಾರ ತಾಲ್ಲೂಕಿನ ಹಳೇ ಯಳನಾಡು ಗ್ರಾಮದ ಪರಿಶಿಷ್ಟ ಕಾಲೊನಿಯ ಗಲ್ಲೇ ಮಾರಮ್ಮ ದೇಗುಲ ನಿರ್ಮಾಣಕ್ಕೆ ಗುದ್ದಲಿಪೂಜೆ ನೆರವೇರಿಸಿ ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, ಕ್ಷೇತ್ರದ ಅಭಿವೃದ್ಧಿಯೇ ಮುಖ್ಯವಾಗಿದ್ದು, ರಾಜಕೀಯ ನಂತರದ ವಿಚಾರ ಎಂದು ಸ್ಪಷ್ಟಪಡಿಸಿದರು. ರಾಜಕೀಯದಲ್ಲಿ ಪರ-ವಿರೋಧ ಅಭಿಪ್ರಾಯ ಬರುವುದು ಸಹಜ. ಟೀಕೆಗಳು ರಚನಾತ್ಮಕವಾಗಿದ್ದರೆ ಸ್ವಾಗತಿಸುತ್ತೇನೆ. ಕುಡಿಯುವ ನೀರು, ರಸ್ತೆ, ಶಿಕ್ಷಣ ಕ್ಷೇತ್ರದಲ್ಲಿ ಹಿಂದೆಂದೂ ಆಗದ ಸಾಧನೆ ಮಾಡಲಾಗಿದೆ. ಅಲ್ಪಸಂಖ್ಯಾತರು, ಹಿಂದುಳಿದವರು, ಬಡ ಪ್ರತಿಭಾವಂತರ ಮಕ್ಕಳು ಗುಣಮಟ್ಟದ ಶಿಕ್ಷಣ ಪಡೆಯುವಂತೆ ಮಾಡಲು ಮೊರಾರ್ಜಿ ವಸತಿ ಸಮುಚ್ಚಯ, ಕಿತ್ತೂರು ಚೆನ್ನಮ್ಮ ಶಾಲೆ, ಏಕಲವ್ಯ ಶಾಲೆಗಳನ್ನು ಆರಂಭಿಸಲಾಗಿದೆ. ಪರಿಶಿಷ್ಟ ಜಾತಿ- ಪಂಗಡದವರಿಗೆ ಹಿಂದೆಂದೂ ಕಾಣದಷ್ಟು ಅನುದಾನ ಬಿಡುಗಡೆ ಮಾಡಲಾಗಿದೆ. ವಾಲ್ಮೀಕಿ ಸಮುದಾಯ ಭವನ, ಬಂಜಾರ ಭವನ, ತಾಲ್ಲೂಕಿನ ಬಹುತೇಕ ಹಳ್ಳಿಗಳಲ್ಲಿ ಮಹಿಳಾಭವನ ನಿರ್ಮಿಸಲಾಗಿದೆ ಎಂದು ವಿವರಿಸಿದರು.ಹಿರಿಯೂರು ನಗರದ ಅಭಿವೃದ್ಧಿಗೆ ಮುಖ್ಯಮಂತ್ರಿ ವಿಶೇಷ ಅನುದಾನ್ಙ 7.41 ಕೋಟಿ, ಬಿಡುಗಡೆ ಮಾಡಿಸಲಾಗಿದೆ. ವಾಣಿವಿಲಾಸ ಜಲಾಶಯದಿಂದ ಹಿರಿಯೂರಿಗೆ ಕೊಳವೆ ಮಾರ್ಗದ ಮೂಲಕ ನೀರು ತರುವ ಯೋಜನೆ ಪೂರ್ಣಗೊಂಡರೆ ನಗರದ 56 ಸಾವಿರ ಜನರಿಗೆ ಶುದ್ಧ ಕುಡಿಯುವ ನೀರು ಸಿಗಲಿದೆ. ಕ್ಷೇತ್ರದಲ್ಲಿ ಮೂಲಸೌಲಭ್ಯ ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ನಗರದ ಹರಿಶ್ಚಂದ್ರಘಾಟ್ ಬಡಾವಣೆಯ ನಿವೇಶನ ರಹಿತರಿಗೆ ಶೀಘ್ರದಲ್ಲಿಯೇ ಹಕ್ಕುಪತ್ರ ವಿತರಿಸಲಾಗುವುದು. ವಿರೋಧಿಗಳ ಟೀಕೆಗೆ ಉತ್ತರಿಸುವ ಬದಲು ಅಭಿವೃದ್ಧಿ ಕಾರ್ಯಗಳಿಗೆ ಒತ್ತು ನೀಡುತ್ತೇನೆ. ಯಾವುದು ಸರಿ, ಯಾವುದು ತಪ್ಪು ಎಂದು ತೀರ್ಮಾನಿಸುವ ಕೆಲಸವನ್ನು ಮತದಾರರಿಗೆ ಬಿಡುತ್ತೇನೆ ಎಂದು ಸುಧಾಕರ್ ಹೇಳಿದರು.ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷ ದ್ಯಾಮಣ್ಣ, ತುಳಸೀನಾಯ್ಕ, ಶಾರದಮ್ಮ ಮಂಜುನಾಥ್, ಭಾಗ್ಯಾ ಕೀರ್ತಿಪ್ರಕಾಶ್, ಶೇಷಗಿರಿ, ವೀರೇಂದ್ರ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry