ಗುರುವಾರ , ಫೆಬ್ರವರಿ 25, 2021
20 °C

ಅಭಿವೃದ್ಧಿಯ ತೆಕ್ಕೆಯಲ್ಲಿ ಬೆಲೆಯ ನಾಗಾಲೋಟ

ನಕ್ಷತ್ರಾ ಎಂ. Updated:

ಅಕ್ಷರ ಗಾತ್ರ : | |

ಅಭಿವೃದ್ಧಿಯ ತೆಕ್ಕೆಯಲ್ಲಿ ಬೆಲೆಯ ನಾಗಾಲೋಟ

ಯಾವುದೇ ನಗರದ ಭೌಗೋಳಿಕ ಸ್ವರೂಪಕ್ಕೆ ಹೊಸ  ಸ್ಪರ್ಶ ನೀಡಬಲ್ಲ ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳು ಜನರ ಕೊಳ್ಳುವ ಸಾಮರ್ಥ್ಯದ ಮೇಲೆ ದೊಡ್ಡ ಹೊಡೆತವನ್ನು ನೀಡುತ್ತವೆ. ಬೆಂಗಳೂರು,  ಮುಂಬೈ ಮತ್ತು ದೆಹಲಿ ಮಹಾನಗರದ ಬಹುತೇಕ ವಸತಿ ಯೋಜನೆಗಳು 65 ಲಕ್ಷ ರೂಪಾಯಿಯ ಗಡಿ ದಾಟಿವೆ. ಆದರೆ ಇವುಗಳಲ್ಲಿ ಬಹುತೇಕ ಯೋಜನೆಗಳು ನಗರದ ಕೇಂದ್ರಭಾಗದಿಂದ ಬಹಳ ದೂರವಿರುವ ಕಾರಣ ಕೈಗೆಟಕುವಂತಿದೆ.ಹೀಗೆ ‘ಕೈಗೆಟಕುವ’ ದರದ ವಸತಿ ಯೋಜನೆಗಳು ನಗರದ ಹೊರವರ್ತುಲದಲ್ಲಷ್ಟೇ ಸಿಗಲು ಸಾಧ್ಯ. ಅಷ್ಟೇ ಅಲ್ಲ ಗ್ರಾಹಕರು ತಕ್ಷಣ ಅಲ್ಲಿ ಬಂದು ನೆಲೆಸಲು ಬೇಕಾದ ವಾತಾವರಣ ಕಲ್ಪಿಸುವ ನಿಟ್ಟಿನಲ್ಲಿ ಮೂಲಸೌಕರ್ಯದಲ್ಲಿ ಸುಧಾರಣೆಯಾಗುವುದೂ ಅತ್ಯಗತ್ಯವಾಗುತ್ತದೆ. ಇದೇ ವೇಳೆ ನಗರಕ್ಕೆ ಅಗತ್ಯವಾದ ಸಂಪರ್ಕ ಸೌಲಭ್ಯಗಳ ಬಗ್ಗೆಯೂ ಗಮನ ಹರಿಸಬೇಕಾಗುತ್ತದೆ.ಈ ಅಂಶಗಳನ್ನು ಭಾರತದ ರಿಯಲ್‌ ಎಸ್ಟೇಟ್‌ ಕ್ಷೇತ್ರದ ಸಾಧಕ–ಬಾಧಕಗಳ ಬಗ್ಗೆ ಜೆಎಲ್‌ಎಲ್‌ ಮತ್ತು ಸಿಐಐ ಸಿದ್ಧಪಡಿಸಿದ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಮೂಲಸೌಕರ್ಯ ಯೋಜನೆಗಳು ರಿಯಲ್‌ ಎಸ್ಟೇಟ್‌ ಪ್ರಗತಿ ಮೇಲೆ ಮೂರು ಆಯಾಮಗಳಲ್ಲಿ ಪರಿಣಾಮ ಬೀರುತ್ತದೆ. ಮೊದಲನೆಯದು ಯೋಜನೆಯ ಪ್ರಕಟಣೆ, ಎರಡನೆಯದು ನಿರ್ಮಾಣ ಹಂತ ಹಾಗೂ ಕೊನೆಯದು ಯೋಜನೆ ಪೂರ್ಣಗೊಳ್ಳುವಿಕೆ ಎಂದು ಅದೇ ವರದಿಯಲ್ಲಿ ಹೇಳಲಾಗಿದೆ.

ಒಂದು ವಿಮಾನ ನಿಲ್ದಾಣ ಕಾರ್ಯಾರಂಭವಾಗುವ ಪ್ರಕಟಣೆಯ ಗರಿಷ್ಠ ಪರಿಣಾಮ ಬೀರುವುದು ಜಮೀನಿನ ಬೆಲೆಯ ಮೇಲೆಯೇ. ಇದರ ಪರಿಣಾಮವಾಗಿ ಸರಿಸುಮಾರು ಶೇಕಡಾ 20ರಿಂದ 30ರಷ್ಟು ಬೆಲೆ ಏರಿಕೆಯಾಗುವುದುಂಟು.ಬೆಂಗಳೂರು, ಮುಂಬೈ ಮತ್ತು ದೆಹಲಿಯಂತಹ ಮೊದಲ ದರ್ಜೆಯ ನಗರಗಳಲ್ಲಿ ಮನೆ/ ಅಪಾರ್ಟ್‌ಮೆಂಟ್‌ಗಳ ಬೆಲೆಯ ಮೇಲೆ  ದಾಖಲೆ ಪ್ರಮಾಣದಲ್ಲಿ ಪರಿಣಾಮ ಬೀರಿರುವುದುಂಟು. ಅದರಲ್ಲೂ  ಸುತ್ತಮುತ್ತಲ ಪ್ರದೇಶಗಳಲ್ಲಿ ನಿರ್ಮಾಣ ಪೂರ್ಣ ಗೊಂಡಿರುವ ಯೋಜನೆಗಳಿಗೆ ಎಲ್ಲಿಲ್ಲದ ಬೇಡಿಕೆಯಿರುತ್ತದೆ. ಇದಕ್ಕೆ ಪ್ರತಿಯಾಗಿ ಎರಡನೇ ದರ್ಜೆಯ ನಗರಗಳೂ ಈ ಬೆಳವಣಿಗೆಗೆ ಕ್ಷಿಪ್ರವಾಗಿ ಸ್ಪಂದಿಸುವುದು ಗಮನಾರ್ಹ.ನಗರದಾಚೆ ಬೆಳವಣಿಗೆ

ಸಾಮಾನ್ಯವಾಗಿ ಜಮೀನಿನ ಬೆಲೆ ಅತ್ಯಂತ ಕಡಿಮೆ ಇರುವ  ಪ್ರದೇಶದಲ್ಲಿ ಅಂದರೆ ನಗರದ ಕೇಂದ್ರ ಭಾಗದಿಂದ ಸಾಕಷ್ಟು ದೂರದಲ್ಲಿ ಹೊಸ ವಿಮಾನ ನಿಲ್ದಾಣ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗುವ ಕಾರಣ ವಸತಿ ಯೋಜನೆಗಳ ಬೆಲೆಯಲ್ಲಿ ಸಹಜವಾಗಿಯೇ ಏರಿಕೆಯಾಗುತ್ತದೆ. ಅಂದರೆ ಮೂಲಸೌಕರ್ಯ ಯೋಜನೆಯೊಂದರ ಆರಂಭದಿಂದ ನಗರದ ಹೊರಭಾಗಗಳಲ್ಲಿ ರಿಯಲ್‌ ಎಸ್ಟೇಟ್‌ ಹೇಗೆ ಅರಳುತ್ತದೆ ಎಂಬುದರ ಹಿಂದಿನ ರಹಸ್ಯವಿದು.ಜಮೀನಿನ ಬೆಲೆ ಕಟ್ಟಡ ನಿರ್ಮಾಣ ಹಂತದಲ್ಲಿ ಶೇ 5ರಿಂದ ಶೇ 10ರಷ್ಟು ಮತ್ತು ಅಷ್ಟೇ ಪ್ರಮಾಣದಲ್ಲಿ ಕಾಮಗಾರಿ ಪೂರ್ಣಗೊಳ್ಳುವ ಹಂತದಲ್ಲಿ ಹೆಚ್ಚಳವಾಗುತ್ತದೆ.

ವಸತಿ ಯೋಜನೆಯೊಂದರ ಕಾಮಗಾರಿ ಆರಂಭವಾದಾಗಿನಿಂದ ಪ್ರತಿವರ್ಷವೂ ಸಾಧಾರಣ ಮಟ್ಟದಲ್ಲಿ ಬೆಲೆ ಏರಿಕೆ ಸಾಗುತ್ತಲೇ ಇರುತ್ತದೆ. ವಿಮಾನ ನಿಲ್ದಾಣ ಯೋಜನೆ ಮುಕ್ತಾಯಗೊಳ್ಳುವವರೆಗೂ ಈ ಬದಲಾವಣೆ ನಿಲ್ಲುವುದಿಲ್ಲ ಎಂದು ವರದಿಯಲ್ಲಿ ಹೇಳಲಾಗಿದೆ.ರಸ್ತೆ ನಿರ್ಮಾಣ ಯೋಜನೆಯ ವಿಚಾರಕ್ಕೆ ಬಂದಾಗ ಜಮೀನು ಮತ್ತು ವಸತಿ ಯೋಜನೆಗಳ ಬೆಲೆಯಲ್ಲಿ ಶೇ ಏಳರಿಂದ 10ರಷ್ಟು ಏರಿಕೆ ಕಂಡುಬರುತ್ತದೆ. ರಸ್ತೆ ಯೋಜನೆ ಪೂರ್ಣಗೊಳ್ಳುವ ಹೊತ್ತಿಗೆ ಶೇ ಎಂಟರಿಂದ 10ರಷ್ಟು ಹೆಚ್ಚಳವಾಗುವುದು ಸಾಮಾನ್ಯ.ಯಾವುದೇ ನಗರದ ಮಧ್ಯಭಾಗದಲ್ಲಿ, ವಸತಿ ಮತ್ತು ವಾಣಿಜ್ಯ ಪ್ರದೇಶದಲ್ಲಿ ಮೆಟ್ರೊ ರೈಲು ಮಾರ್ಗ ಹಾದುಹೋಗುತ್ತದೆ ಎಂದಿಟ್ಟುಕೊಳ್ಳಿ.  ಪ್ರದೇಶಕ್ಕೆ ಅನುಗುಣವಾಗಿ ಬೆಲೆಯಲ್ಲಿ ಏರಿಳಿತ ಕಂಡುಬರುತ್ತದೆ.ಮೆಟ್ರೊ ಯೋಜನೆ ಪ್ರಕಟವಾದ ಬೆನ್ನಲ್ಲೇ ವಸತಿ ಉದ್ದೇಶದ ರಿಯಲ್‌ ಎಸ್ಟೇಟ್‌  ಬೆಲೆಗಳು  ಶೇ 10ರಿಂದ 15ರಷ್ಟು ಹೆಚ್ಚಳವಾದರೆ ಕಾಮಗಾರಿ ಆರಂಭವಾದ ನಂತರ ಶೇ 10ರಿಂದ 12ಕ್ಕೂ ಯೋಜನೆಗಳು ಮುಗಿಯುವಷ್ಟರಲ್ಲಿ ಶೇ 15ರಿಂದ 18ರಷ್ಟು ಏರಿಕೆ ಕಾಣುವುದು ಸರ್ವೇಸಾಮಾನ್ಯ. ಹೊರವರ್ತುಲ ರಸ್ತೆಗಳ ನಿರ್ಮಾಣದ ಸಂದರ್ಭದಲ್ಲಿಯೂ ಇದೇ ಬೆಳವಣಿಗೆಯನ್ನು ಕಾಣಬಹುದು ಎಂದು ಜೆಎಲ್‌ಎಲ್‌ ಮತ್ತು ಸಿಐಐ ವರದಿಯಲ್ಲಿ ಹೇಳಿವೆ.ಆದ್ದರಿಂದ ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳನ್ನು ಅನುಷ್ಠಾನಗೊಳಿಸುವ ಪ್ರಾಧಿಕಾರಗಳು ತಮ್ಮ ಯೋಜನೆಗಳನ್ನು ತ್ವರಿತವಾಗಿ ಮುಗಿಸುವುದು ಮುಖ್ಯವಾಗುತ್ತದೆ. ಇದರಿಂದ ನಗರದ ಒತ್ತಡ ಗಣನೀಯವಾಗಿ ಕಡಿಮೆಯಾಗುವುದಷ್ಟೇ ಅಲ್ಲದೆ ಭರಿಸಬಹುದಾದ ಬೆಲೆಯಲ್ಲಿ ಮನೆಗಳು ಲಭ್ಯವಾಗುತ್ತವೆ.ಕೇಂದ್ರ ಸರ್ಕಾರದ ಸ್ಮಾರ್ಟ್‌ ಸಿಟಿಯಂತಹ ಯೋಜನೆಗಳು ರಸ್ತೆ ಅಭಿವೃದ್ಧಿ ಹಾಗೂ ಭೂ ಒತ್ತುವರಿ ಪರಿಹಾರ ಮತ್ತು ಹಣ ಸಂದಾಯದ ಮೂಲಕ ವ್ಯಾಜ್ಯ ವಿಲೇವಾರಿ ಕಾಯ್ದೆ ಮೂಲಕ ಹೆಚ್ಚು ಹೆಚ್ಚು ಭೂಮಿ ಒದಗಿಸುವ ಗುರಿ ಹೊಂದಿವೆ. ಇವುಗಳನ್ನು ಸಾಕಾರಗೊಳಿಸಿಕೊಳ್ಳಬೇಕು ಅಷ್ಟೇ.ರಸ್ತೆಯ ಉದ್ದ ಮತ್ತು ದರ

ಕುತೂಹಲದ ಅಂಶವೆಂದರೆ, ಹೊಸ ರಸ್ತೆಯ ಉದ್ದ ಎಷ್ಟು ಎಂಬ ಅಂಶವೂ ರಿಯಲ್ ಎಸ್ಟೇಟ್‌ ಮೇಲೆ ನೇರ ಪರಿಣಾಮ ಬೀರುತ್ತದೆ. ಆದರೂ ವಿಶೇಷವಾಗಿ ನಗರ ಪ್ರದೇಶಗಳಲ್ಲಿ ಮನೆಗಳ ಸರಾಸರಿ ಬೆಲೆಯಲ್ಲಿ ಕಡಿತ ಮಾಡುವುದೂ ಅಷ್ಟೇ ಮುಖ್ಯ.

ರಸ್ತೆಯ ಉದ್ದ ಜಾಸ್ತಿಯಾದಷ್ಟೂ ಹೆಚ್ಚು ಹೆಚ್ಚು ಪ್ರದೇಶಗಳಿಗೆ ಸಂಪರ್ಕ ಸಿಗುವ ಕಾರಣ ಕಡಿಮೆ ಬೆಲೆಯಲ್ಲಿ ಮತ್ತಷ್ಟು ಯೋಜನೆಗಳನ್ನು ಜಾರಿಗೆ ತರಲೂ ಸಾಧ್ಯವಾಗುತ್ತದೆ ಎಂದು ವರದಿ ವಿಶ್ಲೇಷಿಸಿದೆ.ಭಾರೀ ಬೆಲೆ ಏರಿಕೆ

ವಿಮಾನ ನಿಲ್ದಾಣವೊಂದು ಆರಂಭವಾಗುವ ಪ್ರಕಟಣೆಯಿಂದ ಶುರುವಾಗಿ ಯೋಜನೆ ಪೂರ್ಣಗೊಳ್ಳುವಷ್ಟರಲ್ಲಿ ಸುತ್ತಮುತ್ತಲಿನ ವಸತಿ ಯೋಜನೆಗಳ ಬೆಲೆಯಲ್ಲಿ ಗರಿಷ್ಠ ಶೇ 20ರಿಂದ 30ರಷ್ಟು ಏರಿಕೆಯಾಗುವುದುಂಟು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.