`ಅಭಿವೃದ್ಧಿಯ ರಥಕ್ಕೆ ಕೈಜೋಡಿಸಿ'

7
ಸೌಹಾರ್ದ ಸಭೆಯಲ್ಲಿ ಅಧಿಕಾರಿಗಳಿಗೆ ಡಿಸಿ ಅಂಜನ್‌ಕುಮಾರ್ ಮನವಿ

`ಅಭಿವೃದ್ಧಿಯ ರಥಕ್ಕೆ ಕೈಜೋಡಿಸಿ'

Published:
Updated:

ದಾವಣಗೆರೆ: `ಜಿಲ್ಲೆಯಲ್ಲಿ ಹಮ್ಮಿಕೊಳ್ಳುವ ಅಭಿವೃದ್ಧಿ ರಥಕ್ಕೆ ಜಿಲ್ಲೆಯಲ್ಲಿನ ಸಮಸ್ತ ಅಧಿಕಾರಿಗಳು ಕೈ ಜೋಡಿಸಬೇಕು' ಎಂದು ಜಿಲ್ಲಾಧಿಕಾರಿ ಎಸ್.ಟಿ. ಅಂಜನ್‌ಕುಮಾರ್ ಮನವಿ ಮಾಡಿದರು.ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ಅಧಿಕಾರಿಗಳ ಸೌಹಾರ್ದ ಸಭೆಯಲ್ಲಿ ಅವರು ಮಾತನಾಡಿದರು.

ನಗರದಲ್ಲಿ ಹಲವೆಡೆ ಭೇಟಿ ನೀಡಿದ್ದೇನೆ. ಸುಮಾರು 38 ಅಧಿಕೃತ ಕೊಳಚೆ ಪ್ರದೇಶಗಳಿರುವುದು ಗಮನಕ್ಕೆ ಬಂದಿದೆ. ಕೊಳಚೆ ಪ್ರದೇಶಗಳಲ್ಲಿ ಯಾವುದೇ ಮೂಲಸೌಕರ್ಯ ಇದುವರೆಗೂ ಮಾಡದಿರುವುನ್ನು ಕಣ್ಣಾರೆ ಕಂಡುಬಂದಿದ್ದೇನೆ. ದಾವಣಗೆರೆಯಲ್ಲಿ ಸ್ವಚ್ಛತೆ ವಿಚಾರದಲ್ಲಿ ಹುಬ್ಬಳ್ಳಿ, ಗುಲ್ಬರ್ಗ, ಬೆಳಗಾವಿಗಳಿಗಿಂತಲೂ ತೀರಾ ಕೆಟ್ಟ ಸ್ಥಿತಿ ಇದೆ. ಇನ್ನು ಮುಂದಾದರೂ ಜಿಲ್ಲೆಯ ಅಭಿವೃದ್ಧಿ ವಿಚಾರದಲ್ಲಿ ಬದಲಾವಣೆಯ ವೇಗೋತ್ಕರ್ಷಗಳಾಗಬೇಕು' ಎಂದು ಸಲಹೆ ನೀಡಿದರು.ಜಿಲ್ಲೆಯಲ್ಲಿ ನೂರಾರು ಸಮಸ್ಯೆಗಳಿವೆ. ಎಲ್ಲ ಸಮಸ್ಯೆಗಳಿಗೆ ತಕ್ಷಣ ಪರಿಹಾರ ಕಂಡುಕೊಳ್ಳುವುದು ಕಷ್ಟವಾದರೂ, ನಿರಂತರ ಪ್ರಯತ್ನದಿಂದ ಪರಿಹಾರ ಕಾಣಲು ಸಾಧ್ಯವಿದೆ. ಅಧಿಕಾರಿಗಳು ಆಲಸ್ಯ ಬಿಟ್ಟರೆ ಅಭಿವೃದ್ಧಿ ಸರಾಗವಾಗಲಿದೆ. ತಾಂತ್ರಿಕ ಸಮಸ್ಯೆಗಳು ಸೇರಿದಂತೆ ಯಾವುದೇ ಸಮಸ್ಯೆಗಳಿದ್ದಾಗ ಅಧಿಕಾರಿಗಳು ಉನ್ನತ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರ ಕಾಣಲು ಪ್ರಯತ್ನಿಸಬೇಕು. ಆ ದಿಸೆಯಲ್ಲಿ ಜಿಲ್ಲಾಡಳಿತ ಅಧಿಕಾರಿ ವರ್ಗಕ್ಕೆ ಸಹಕಾರ ನೀಡಲಿದೆ ಎಂದು ಹೇಳಿದರು.ಪ್ರವಾಸಿಗರನ್ನು ಆಕರ್ಷಿಸುವ ಬಾತಿಗುಡ್ಡ, ಕುಂದುವಾಡ ಕೆರೆ, ಸೂಳೆಕೆರೆ, ಹರಿಹರೇಶ್ವರ ದೇಗುಲ ಅಭಿವೃದ್ಧಿಗೆ ಹಾಗೂ ಸಮಸ್ಯೆಗಳಿಂದ ನರಳುತ್ತಿರುವ ಬಿಸಿಯೂಟ, ಅಂಗನವಾಡಿ ಕೇಂದ್ರಗಳಿಗೆ ಸಂಬಂಧಿಸಿದಂತೆ ಮುಂದಿನ ದಿನಗಳಲ್ಲಿ ಸಭೆ ನಡೆಸುವ ಮೂಲಕ ಚರ್ಚೆ ನಡೆಸಲಾಗುವುದು. ಅಭಿವೃದ್ಧಿಗೆ ಸಂಬಂಧಿಸಿದಂತೆ ಯೋಜನೆಗಳಿದ್ದರೆ ಯಾವುದೇ ಮುಜುಗರ ಇಲ್ಲದಂತೆ ಅಧಿಕಾರಿಗಳು ತಿಳಿಸಬಹುದು.ಉತ್ತಮ ಯೋಜನೆಗಳಿಗೆ ಅವಕಾಶ ಮತ್ತು ಮನ್ನಣೆ ನೀಡಲಾಗುವುದು. ಎಲ್ಲಾ ಇಲಾಖೆಗಳು ಸರ್ಕಾರದಡಿ ಕಾರ್ಯನಿರ್ವಹಿಸುತ್ತವೆ. ಹಾಗಾಗಿ, ಅಧಿಕಾರಿಗಳು ಎಲ್ಲಾ ಇಲಾಖೆಗಳ  ಬಗ್ಗೆ ಗೌರವ ಭಾವನೆ ಹೊಂದಬೇಕು. ಬೇರೆ ಇಲಾಖೆಗಳ ಅಭಿವೃದ್ಧಿ ಯೋಜನೆಗಳ ಬಗ್ಗೆ ನಿರ್ಲಕ್ಷಿಸಬಾರದು ಎಂದು ಸಲಹೆ ನೀಡಿದರು.ಜಿಲ್ಲಾ ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿ ಎ.ಬಿ. ಹೇಮಚಂದ್ರ ಮಾತನಾಡಿ, `ಇಲಾಖೆಗಳ ಕಾರ್ಯಗಳನ್ನು ಸಮಯಕ್ಕೆ ಸೂಕ್ತವಾಗಿ ಪೂರ್ಣಗೊಳಿಸಬೇಕು. ಸಾರ್ವಜನಿಕರಿಂದ ನನಗೆ ಅಧಿಕಾರಿಗಳ ಕರ್ತವ್ಯ ನಿರ್ಲಕ್ಷದ ಬಗ್ಗೆ ದೂರು ಕೇಳಿ ಬಂದಿವೆ. ಇದು ಒಳ್ಳೆ ಬೆಳವಣಿಗೆಯಲ್ಲ. ಯಾವುದೇ ಹಳ್ಳಿಯಿಂದ ಸಮಸ್ಯೆ ಹೊತ್ತು ಬರುವ ದೂರವಾಣಿ ಕರೆಯನ್ನು ನಿರ್ಲಕ್ಷಿಸಬಾರದು. ಒಂದು ದೂರವಾಣಿ ಕರೆಯಲ್ಲಿ ಬಂದ ಸಮಸ್ಯೆ ಸರ್ಕಾರಮಟ್ಟದಲ್ಲಿ ಚರ್ಚೆಯಾಗಿ ಮುಖ್ಯಮಂತ್ರಿ, ಲೋಕಾಯುಕ್ತ ತನಿಖೆವರೆಗೂ ಹೋಗುತ್ತದೆ. ಹಾಗಾಗದಂತೆ ಅಧಿಕಾರಿಗಳು ಎಚ್ಚರದಿಂದ ಕಾರ್ಯನಿರ್ವಹಿಸಬೇಕು. ಕಚೇರಿಗಳಿಂದ ಹೊರಬಂದು ಜನರ ಸಮಸ್ಯೆಗಳಿಗೆ ಸ್ಪಂದಿಸುವ ಗುಣ ರೂಢಿಸಿಕೊಳ್ಳಬೇಕು' ಎಂದು ಸಲಹೆ ನೀಡಿದರು.ಪಾಲಿಕೆ ಆಯುಕ್ತ ನಾರಾಯಣಪ್ಪ, ಉಪ ವಿಭಾಗಾಧಿಕಾರಿ ಎ.ಸಿ. ನಾಗರಾಜ್, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಶಂಕರ್ ಮಿರ್ಜಿ, ಜಿಲ್ಲಾ ಅಂಗವಿಕಲರ ಮತ್ತು ಹಿರಿಯ ನಾಗರಿಕರ ಕಲ್ಯಾಣಾಧಿಕಾರಿ ಜಿ.ಎಸ್. ಶಶಿಧರ್, ಜಿಲ್ಲಾ ಅಕ್ಷರವಾಣಿ ಸಹಾಯಕ ಅಧಿಕಾರಿ ಗೋವಿಂದಪ್ಪ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಸಚೇತನಾ ನೆಲವಗಿ, ಪಶುಸಂಗೋಪನೆ ಇಲಾಖೆ ಉಪನಿರ್ದೇಶಕ ಮಹೇಶ್ವರಗೌಡ, ದೂಡಾ ಆಯುಕ್ತ ಜಯಪ್ರಕಾಶ್ ನಾರಾಯಣ, ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಎಚ್. ವಿಶ್ವನಾಥ ಇತರರು ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry