ಭಾನುವಾರ, ಜೂನ್ 13, 2021
26 °C

ಅಭಿವೃದ್ಧಿಯ ಸವಿ ಕಾಣದ ಮಾವಿನೂರು

ಜಾನೇಕೆರೆ ಆರ್‌. ಪರಮೇಶ್‌ Updated:

ಅಕ್ಷರ ಗಾತ್ರ : | |

ಸಕಲೇಶಪುರ: ನಿತ್ಯ ಹರಿಧ್ವರ್ಣ ಕಾಡುಗಳ ಪಶ್ಚಿಮಘಟ್ಟದ ಅಂಚಿನಲ್ಲಿರುವ ಮಾವಿನೂರು ಮಲೆನಾಡಿನ ನಿಸರ್ಗದ ಸೆರಗಿನಲ್ಲಿರುವ ಸುಂದರ ಗ್ರಾಮ.ತಾಲ್ಲೂಕು ಕೇಂದ್ರದಿಂದ ಸುಮಾರು 55 ಕಿ.ಮೀ. ದೂರದಲ್ಲಿ ಹೊಂಗಡಹಳ್ಳ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿದೆ. ಸುಮಾರು 50ಕ್ಕೂ ಹೆಚ್ಚು ಕುಟುಂಬಗಳು ವಾಸ ಮಾಡುತ್ತಿರುವ ಇಲ್ಲಿಯ ಜನರು ಕಾಡು, ಪ್ರಾಣಿ, ಪಕ್ಷಿ, ಕೃಷಿ, ಭೋರ್ಗರೆದು ಸುರಿಯುವ ಮಳೆ, ಮೋಡ, ಮಂಜಿನ ತಂಪಾದ ಪರಿಸರದೊಂದಿಗೆ ಬೆರೆತು ಶಾಂತಿಯಿಂದ ಬದುಕುತ್ತಿದ್ದಾರೆ. ಆದರೆ ಗ್ರಾಮಸ್ಥರು ಸರ್ಕಾರದ ಮೂಲಸೌಕರ್ಯಗಳಿಂದ ಸಂಪೂರ್ಣವಾಗಿ ವಂಚಿತರಾಗಿದ್ದಾರೆ.ಸಾಮಾನ್ಯವಾಗಿ 55 ಕಿ.ಮೀ. ದೂರವನ್ನು ಒಂದು ಗಂಟೆಯಲ್ಲಿ ಕ್ರಮಿಸಬಹುದು. ಆದರೆ  ಮಾವಿನೂರು ಗ್ರಾಮದಿಂದ ತಾಲ್ಲೂಕು ಕೇಂದ್ರಕ್ಕೆ ಹೋಗಲು ಬರೋಬ್ಬರಿ ಮೂರು ಗಂಟೆ ಬೇಕು. ಸಕಲೇಶಪುರದಿಂದ ದೋಣಿಗಾಲ್‌, ಬ್ಯಾಕರವಳ್ಳಿ, ಹೆತ್ತೂರು, ವಣಗೂರು, ಹಡ್ಲುಗದ್ದೆವರೆಗೆ ಹೆಸರಿಗೆ ರಾಜ್ಯ ಹೆದ್ದಾರಿಯಾದರೂ, ಅಡಿ ಅಡಿಗೂ ಗುಂಡಿ ಬಿದ್ದು ವಾಹನಗಳು ಓಡಾಡುವುದಕ್ಕೆ ಸಾಧ್ಯವಾಗದ ರಸ್ತೆ ಇದೆ. ಹಡ್ಲುಗದ್ದೆಯಿಂದ ಗ್ರಾಮಕ್ಕೆ 4 ಕಿ.ಮೀ. ರಸ್ತೆಯನ್ನು ರಸ್ತೆ ಎಂದು ಕರೆಯುವುದಕ್ಕೆ ಸಾಧ್ಯವಿಲ್ಲ.ಭತ್ತವನ್ನು ಮಿಲ್‌ ಮಾಡಿಸಬೇಕಾದರೆ, ಬೆಳೆದ ಬೆಳೆಯನ್ನು ಮಾರುಕಟ್ಟೆಗೆ ತರಬೇಕಾದರೆ ಹಾಗೂ ಗರ್ಭಿಣಿಯರು, ವಯಸ್ಸಾದವರು, ರೋಗಿಗಳು ಆಸ್ಪತ್ರೆಗೆ ಹೋಗಲು ಪ್ರತಿಯೊಂದಕ್ಕೂ ನಿಗದಿತ ದರಕ್ಕಿಂತ ದುಪ್ಪಟ್ಟು ಹಣ ನೀಡಿ ಬಾಡಿಗೆ ಜೀಪುಗಳನ್ನು ಆಶ್ರಯಿಸಬೇಕಾಗಿದೆ. ಗ್ರಾಮಕ್ಕೆ ರಸ್ತೆ ನಿರ್ಮಾಣ ಮಾಡುವಂತೆ ಹಲವು ದಶಕಗಳಿಂದ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸುತ್ತಲೇ ಬರಲಾಗಿದೆ. ಆದರೂ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಎಂ.ಎಸ್‌.ಧರ್ಮರಾಜ್‌.ಬಸ್‌ ಸಂಚಾರವಿಲ್ಲ

ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿ 6 ದಶಕ ಕಳೆದರೂ, ಮಾವಿನೂರು ಗ್ರಾಮಕ್ಕೆ ಬಸ್ಸಿನ ವ್ಯವಸ್ಥೆ ಇಲ್ಲ. ಇತ್ತೀಚೆಗೆ ಹುದಿನೂರು ಹಾಗೂ ಮಾವಿನೂರು ಗ್ರಾಮಸ್ಥರೆಲ್ಲರೂ ಸೇರಿ ರಸ್ತೆಯ ಗುಂಡಿಗಳಿಗೆ ಕಲ್ಲು ಮಣ್ಣು ಮುಚ್ಚಿ ಬಸ್ಸು ಓಡಾಡುವಂತೆ ಸಾಧ್ಯವಾಷ್ಟು ಮಟ್ಟಿಗೆ ರಸ್ತೆ ಮಾಡಿಕೊಂಡಿದ್ದರಿಂದ ರಾತ್ರಿ 9ಕ್ಕೆ ಬಸ್ಸು ಬಂದು ಬೆಳಿಗ್ಗೆ ಗ್ರಾಮದಿಂದ ಹೊರಡುತ್ತದೆ. ಅದೂ ಒಂದಲ್ಲ ಒಂದು ಕಾರಣ ಹೇಳಿಕೊಂಡು ವಾರದಲ್ಲಿ ಎರಡು ಮೂರು ದಿನ ಬರುವುದೇ ಇಲ್ಲ.ಮಳೆಗಾಲ ಶುರುವಾದರೆ 8 ತಿಂಗಳು ಆ ಬಸ್ಸೂ ಇಲ್ಲ. ಬಸ್ಸಿನ ವ್ಯವಸ್ಥೆ ಇಲ್ಲದೆ ಇರುವುದರಿಂದ ಗ್ರಾಮದ ಮಕ್ಕಳೆಲ್ಲ ದಕ್ಷಿಣ ಕನ್ನಡ, ಸಕಲೇಶಪುರ, ಹಾಸನ ಹೀಗೆ ಬೇರೆ ಬೇರೆ ಊರುಗಳ ಹಾಸ್ಟೆಲ್‌ಗಳಲ್ಲಿ ವ್ಯಾಸಂಗ ಮಾಡಬೇಕಾಗಿದೆ.ಕಾಡಾನೆ, ಕಾಟಿಗಳ ಸಮಸ್ಯೆ

ಕಾಡಂಚಿನ ಈ ಗ್ರಾಮದಲ್ಲಿ ಕಾಡಾನೆ ಹಾಗೂ ಕಾಟಿಗಳ ನಿರಂತರ ದಾಳಿಯ ಹಿನ್ನೆಲೆಯಲ್ಲಿ ಕಳೆದ 5 ವರ್ಷಗಳಿಂದ ಜನ ಜೀವನಕ್ಕೆ ಆಧಾರವಾಗಿರುವ ಭತ್ತ ಬೆಳೆಯುವುದನ್ನೇ ನಿಲ್ಲಿಸಿದ್ದಾರೆ. ವರ್ಷವೆಲ್ಲಾ ನೀರಿನ ವ್ಯವಸ್ಥೆ ಇರುವ ಇಲ್ಲಿ ವರ್ಷದಲ್ಲಿ ಎರಡು ಬೆಳೆ ಬೆಳೆಯಲಾಗುತ್ತಿತ್ತು. ಕಾಡಾನೆಗಳು ಭತ್ತದ ಗದ್ದೆಗಳಿಗೆ ನುಗ್ಗಿ ತುಳಿದು ತಿಂದು ಅಲ್ಲಲ್ಲಿ ಹಾನಿ ಮಾಡಿದರೆ, ಕಾಟಿಗಳು ಗದ್ದೆ ಕೊಯ್ಲು ಮಾಡುವಂತೆ ಸಂಪೂರ್ಣವಾಗಿ  ತಿಂದು ಒಂದೇ ಒಂದು ಕಾಳು ಭತ್ತ ಇಲ್ಲದಂತೆ ನಾಶ ಮಾಡುತ್ತವೆ. ಬೇಕಾದಷ್ಟು ಜಮೀನು ಇದೆ ಆದರೆ ಈ ಪ್ರಾಣಿಗಳ ಕಾಟದಿಂದ ತುತ್ತು ಅನ್ನಕ್ಕೂ ಭತ್ತ ಬೆಳೆದುಕೊಳ್ಳುವುದು ಕಷ್ಟವಾಗಿದೆ. ಊಟದ ಭತ್ತಕ್ಕಾಗಿ ಸುಮಾರು 30 ಕಿ.ಮೀ. ದೂರದ ವಳಲಹಳ್ಳಿಯ ಸಂಬಂಧಿಕರ  ಗದ್ದೆಯಲ್ಲಿ ಬೇಸಿಗೆ ಬೆಳೆ ಬೆಳೆಯುತ್ತಿದ್ದೇವೆ ಎಂದು ಗ್ರಾಮದ ರೈತ ಎಂ.ಎನ್‌. ಶಿವಪ್ಪಗೌಡ ನೊಂದು ಹೇಳುತ್ತಾರೆ.ಮುಚ್ಚಿದ ಶಾಲೆ

ಮೂಲಸೌಕರ್ಯದ ಕೊರತೆಯ ಹಿನ್ನೆಲೆಯಲ್ಲಿ ಹತ್ತಾರು ವರ್ಷಗಳಿಂದ  ನಡೆಯುತ್ತಿದ್ದ ಒಂದರಿಂದ 5ನೇ ತರಗತಿ ಶಾಲೆಯನ್ನು ಮುಚ್ಚಲಾಗಿದೆ. ಮಳೆಗಾಲದ  8 ತಿಂಗಳು ವಿದ್ಯುತ್‌ ಸಂಪರ್ಕ ಗ್ರಾಮಕ್ಕೆ ಇರುವುದೇ ಇಲ್ಲ, ವಿದ್ಯುತ್‌ ಮಾರ್ಗದಲ್ಲಿ ಬಿದ್ದು ಹೋಗಿರುವ ಆರ್‌ಸಿಸಿ ಕಂಬಗಳನ್ನು ಬದಲಿಸಿಲ್ಲ, ಬದಲಿಗೆ ಮರದ ಕಂಬಗಳನ್ನು ನೆಟ್ಟು ಅದರಿಂದಲೇ ವಿದ್ಯುತ್‌ ತಂತಿಯನ್ನು ಎಳೆಯಲಾಗಿದೆ. ಹೀಗೆ ಸಮಸ್ಯೆಯ ಪಟ್ಟಿ ಬೆಳೆಯುತ್ತಾ ಹೋಗುವ ಅವರ ಬೇಡಿಕೆಗಳಿಗಾಗಿ ಹೋರಾಟ ಮಾಡುವುದಕ್ಕೆ ತಾಲ್ಲೂಕು ಕೇಂದ್ರ ಹಾಗೂ ಜಿಲ್ಲಾ ಕೇಂದ್ರಕ್ಕೆ ಹೋಗಿ ಬರುವಷ್ಟು ಆರ್ಥಿಕ ಶಕ್ತಿ ಹಾಗೂ ಸಮಯವೂ ಇಲ್ಲ. ಇನ್ನಾದರೂ ಸಂಬಂಧಪಟ್ಟವರು ಗಮನಹರಿಸಿ ಗ್ರಾಮಕ್ಕೆ ಮೂಲಸೌಕರ್ಯ ಒದಗಿಸಲಿ ಎಂಬುದು ಇಲ್ಲಿನ ಗ್ರಾಮಸ್ಥರ ಒಕ್ಕೊರಲಿನ ಆಗ್ರಹವಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.