ಗುರುವಾರ , ಜೂನ್ 17, 2021
21 °C

ಅಭಿವೃದ್ಧಿಯ ಹೆಸರಲ್ಲಿ ಪರಿಸರ ನಾಶ: ಎ.ಎನ್.ಯಲ್ಲಪ್ಪ ರೆಡ್ಡಿ ಕಳವಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಭಿವೃದ್ಧಿಯ ಹೆಸರಲ್ಲಿ ಪರಿಸರ ನಾಶ: ಎ.ಎನ್.ಯಲ್ಲಪ್ಪ ರೆಡ್ಡಿ ಕಳವಳ

ಬೆಂಗಳೂರು: `ಅಭಿವೃದ್ಧಿಯ ಹೆಸರಲ್ಲಿ ಪರಿಸರದ ಮೇಲೆ ಘೋರವಾದ ದಾಳಿ ನಡೆಯುತ್ತಿದೆ~ ಎಂದು ಪರಿಸರ ತಜ್ಞ ಎ.ಎನ್.ಯಲ್ಲಪ್ಪ ರೆಡ್ಡಿ ಕಳವಳ ವ್ಯಕ್ತ ಪಡಿಸಿದರು.

ನಗರದ ಜೈನ್ ವಿಶ್ವವಿದ್ಯಾಲಯದಲ್ಲಿ ಬುಧವಾರ ನಡೆದ ವೃಕ್ಷಾಯುರ್ವೇದ ಸಂಶೋಧನಾ ಘಟಕದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

`ಗಣಿ ಉದ್ಯಮದ ಕಾರಣದಿಂದ ರಾಜ್ಯದಲ್ಲಿ ಇಂದಿಗೂ ಪ್ರಾಕೃತಿಕ ಸಂಪತ್ತಿನ ಲೂಟಿ ನಡೆಯುತ್ತಿದೆ. ಬಳ್ಳಾರಿ ಜಿಲ್ಲೆಯ ಅಮೂಲ್ಯ ಪರಿಸರ ಹಾನಿಗೊಳಗಾಗಿದೆ. ಅಷ್ಟೂ ಸಾಲದು ಎಂಬಂತೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಈಗ ಪಶ್ಚಿಮಘಟ್ಟ ಪ್ರದೇಶದಲ್ಲಿಯೂ ಗಣಿಗಾರಿಕೆಯ ಪ್ರಸ್ತಾವನೆ ಸಲ್ಲಿಸಿರುವುದು ರಾಜ್ಯದಲ್ಲಿ ಪೂರ್ಣ ಪ್ರಮಾಣದ ಪರಿಸರ ವಿನಾಶಕ್ಕೆ ಮುನ್ನುಡಿ~ ಎಂದು ವಿಷಾದಿಸಿದರು.

`ಮಾನವನ ಜೀವನದಲ್ಲಿ ಮರಗಳ ಪಾತ್ರ ಮುಖ್ಯವಾದುದು. ಮನುಷ್ಯನಿಲ್ಲದೇ ಮರಗಳು ಬದುಕಬಲ್ಲವು, ಆದರೆ ಮರಗಳಿಲ್ಲದೇ ಮನುಷ್ಯ ಬದುಕಲು ಸಾಧ್ಯವೇ ಇಲ್ಲ. ಹಿಂದಿನಿಂದಲೂ ಬಾಲವನ, ಪಂಚವಟಿಗಳ ಕಲ್ಪನೆ ಭಾರತೀಯಲ್ಲಿ ಗಟ್ಟಿಯಾಗಿತ್ತು. ಪುರಾತನ ಕಾಲದಲ್ಲಿಯೇ ಭಾರತದ ಜನರಿಗೆ ಮರಗಳ ಮಹತ್ವ ತಿಳಿದಿತ್ತು. ಆದರೆ ಪ್ರಸ್ತುತ ದಿನಗಳಲ್ಲಿ ಮರಗಳ ಹನನ ಹೆಚ್ಚಾಗಿದೆ. ಮರಗಳಿಲ್ಲದೇ ಮನುಷ್ಯನ ಬದುಕಿಲ್ಲ ಎಂಬ ಸತ್ಯವನ್ನು ಜನತೆ ಅರಿಯಬೇಕು~ ಎಂದು ನುಡಿದರು.

`ಜೈವಿಕ ತಂತ್ರಜ್ಞಾನದ ಹೆಸರಲ್ಲಿ ವಿಜ್ಞಾನದ ಆಶಯಗಳನ್ನು ತಿರುಚಲಾಗುತ್ತಿದೆ. ಭೂಮಿಯ ಮೇಲೆ ಎಲ್ಲ ಜೀವಿಗಳಿಗೂ ಬದುಕುವ ಹಕ್ಕು ಇದೆ. ಮಾನ್ಸೆಂಟೊ ಮೊದಲಾದ ಕುಲಾಂತರಿ ಬೀಜದ ಕಂಪೆನಿಗಳು ಆಹಾರ ಧಾನ್ಯಗಳ ಬೀಜದ ಜೀನ್‌ಗಳನ್ನೇ ಪರಿವರ್ತಿಸುವ ಪ್ರಯತ್ನ ಮಾಡುತ್ತಿವೆ. ಇದರಿಂದ ಇಡೀ ಜೈವಿಕ ವ್ಯವಸ್ಥೆಗೇ ಭಂಗ ಉಂಟಾಗಲಿದೆ. ಸರ್ಕಾರಗಳು ಬಿಟಿ ಹತ್ತಿ ಹಾಗೂ ಬಿಟಿ ಬದನೆ ಸೇರಿದಂತೆ ಯಾವುದೇ ಕುಲಾಂತರಿ ಬೆಳೆಗಳ ಪ್ರಯತ್ನಗಳನ್ನು ದೇಶದಲ್ಲಿ ಉತ್ತೇಜಿಸಬಾರದು~ ಎಂದು ಅವರು ಆಗ್ರಹಿಸಿದರು.

ಕಾಲೇಜಿನ ಸಲಹಾ ಸಮಿತಿಯ ಪ್ರೊ.ಕೆ.ಎಸ್.ಶಾಂತಾಮಣಿ ಮಾತನಾಡಿ, `ಮರಗಳ ಬಗೆಗಿನ ಕಾಳಜಿ ಜನರಲ್ಲಿ ಹೆಚ್ಚಾಗಬೇಕು. ವೃಕ್ಷಾಯುರ್ವೇದ ಪರಿಕಲ್ಪನೆ ಬೆಳೆಸಲು ಈ ಕ್ಷೇತ್ರದಲ್ಲಿ ತೊಡಗಿಸಿಕೊಂಡವರ ಜವಾಬ್ದಾರಿ ಹೆಚ್ಚಿನದ್ದಾಗಿದೆ. ಮಾಲಿನ್ಯ ಪ್ರಮಾಣ ಏರುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ಮರಗಳನ್ನು ಉಳಿಸಿ ಬೆಳೆಸಲು ಎಲ್ಲರೂ ಮುಂದಾಗಬೇಕು. ಅಪರೂಪದ ಸಸ್ಯಗಳ ಬಗ್ಗೆ ವಿದ್ಯಾರ್ಥಿಗಳು ಸಂಶೋಧನೆ ಕೈಗೊಳ್ಳಬೇಕು. ಔಷಧೀಯ ಸಸ್ಯಗಳ ಪ್ರಯೋಜನ ಪಡೆಯುವ ದೃಷ್ಟಿಯಿಂದ ಹೆಚ್ಚು ಹೆಚ್ಚು ಸಂಶೋಧನೆಗಳು ನಡೆಯಬೇಕು~ ಎಂದು ಆಶಿಸಿದರು.

ಜೈನ್ ವಿಶ್ವವಿದ್ಯಾಲಯದ ಮುಂದುವರಿದ ಜೈವಿಕ ವಿಜ್ಞಾನಗಳ ಅಧ್ಯಯನ ಕೇಂದ್ರದ ನಿರ್ದೇಶಕ ಡಾ.ಎಸ್.ಸುಂದರ್ ರಾಜನ್ ಮಾತನಾಡಿ, `ಸಸ್ಯಶಾಸ್ತ್ರದಲ್ಲಿ ಉನ್ನತ ವ್ಯಾಸಂಗ ಮಾಡಿದ ಬಹುಪಾಲು ವಿದ್ಯಾರ್ಥಿಗಳಿಗೂ ಅನೇಕ ಅಮೂಲ್ಯ ಸಸ್ಯಗಳ ಹೆಸರುಗಳೇ ತಿಳಿದಿರುವುದಿಲ್ಲ. ಈ ನಿಟ್ಟಿನಲ್ಲಿ ಮುಂದುವರಿದ ಜೈವಿಕ ವಿಜ್ಞಾನಗಳ ಅಧ್ಯಯನ ಕೇಂದ್ರದಿಂದ ಆರು ತಿಂಗಳು ಹಾಗೂ ಒಂದು ವರ್ಷದ ಆಧುನಿಕ ಸಸ್ಯ ವಿಜ್ಞಾನದ ಕೋರ್ಸ್‌ಗಳನ್ನು ಆರಂಭಿಸಲಾಗುವುದು~ ಎಂದು ತಿಳಿಸಿದರು.

ಡಾ.ಎಸ್.ಸುಂದರ್ ರಾಜನ್ ಅವರ `ಎ ಬಿಬ್ಲಿಯೋಗ್ರಫಿ  ಆಫ್ ಸ್ಯಾನ್‌ಸ್ಕ್ರಿಟ್ ವರ್ಕ್ಸ್ ಇನ್ ಲೈಫ್ ಸೈನ್ಸಸ್~ ಗ್ರಂಥಸೂಚಿ ಕೃತಿಯನ್ನು ಯಲ್ಲಪ್ಪ ರೆಡ್ಡಿ ಬಿಡುಗಡೆ ಮಾಡಿದರು.

ಕಾರ್ಯಕ್ರಮದಲ್ಲಿ ಜೈನ್ ವಿಶ್ವವಿದ್ಯಾಲಯದ ಕುಲಪತಿ ಡಾ.ಎನ್.ಸುಂದರ್‌ರಾಜನ್, ಕಾಲೇಜಿನ ಮುಖ್ಯಸ್ಥೆ ಡಾ.ಮೈಥಿಲಿ ಪಿ. ರಾವ್, ಇತಿಹಾಸ ಮತ್ತು ವಿಜ್ಞಾನ ಬರಹಗಾರ ಸುಬ್ಬರಾಯಪ್ಪ ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.