ಅಭಿವೃದ್ಧಿ ಆಯುಕ್ತರ ಹುದ್ದೆ ಅಗತ್ಯ

7

ಅಭಿವೃದ್ಧಿ ಆಯುಕ್ತರ ಹುದ್ದೆ ಅಗತ್ಯ

Published:
Updated:

ಬೆಂಗಳೂರು: ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಪ್ರತ್ಯೇಕವಾದ ಅಭಿವೃದ್ಧಿ ಆಯುಕ್ತರ ಹುದ್ದೆಯನ್ನು ಸೃಷ್ಟಿಸಬೇಕು ಎಂದು ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘವು ಮುಖ್ಯಮಂತ್ರಿಯವರನ್ನು ಒತ್ತಾಯಿಸಿದೆ.

ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಅವರಿಗೆ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ ಪ್ರಕಾಶ್ ಎನ್.ರಾಯ್ಕರ್ ಅವರು 2012 ರ ಪೂರ್ವಭಾವಿ ಆಯವ್ಯಯ ಪ್ರಸ್ತಾವನೆ  ಪತ್ರವನ್ನು ಸಲ್ಲಿಸಿದ ನಂತರ ಪ್ರೆಸ್‌ಕ್ಲಬ್‌ನ ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಅವರು ಮಾತನಾಡಿದರು.

`ಕರ್ನಾಟಕ ಸರ್ಕಾರದ ಕೈಗಾರಿಕಾ ನೀತಿ 2009-14 ರಂತೆ ಸರ್ಕಾರಿ ಇಲಾಖೆ, ನಿಗಮ ಮತ್ತು ಮಂಡಳಿಗಳು ಮಾಡುವ ಖರೀದಿಯಲ್ಲಿ ರಾಜ್ಯದ ಸಣ್ಣ ಕೈಗಾರಿಕೆಗಳಿಗೆ ಶೇ 15 ರಷ್ಟು ಆದ್ಯತೆಯನ್ನು ಕಲ್ಪಿಸಲಾಗಿದೆ. ಆದರೆ, ಇದನ್ನು ಜಾರಿಗೊಳಿಸದೆ, ಕೇವಲ ಸರ್ಕಾರಿ ಸ್ವಾಮ್ಯದ ಕೈಗಾರಿಕೆಗಳಿಗೆ ಮಾತ್ರ ಸೀಮಿತಗೊಳಿಸಲಾಗಿದೆ. ಆದರೆ, ಸರ್ಕಾರಿ ಇಲಾಖೆಗಳಲ್ಲಿ ಹೆಚ್ಚಿನ ಅಥವಾ ಗಣನೀಯ ಖರೀದಿ ಇರುವುದಿಲ್ಲ~ ಎಂದರು.

`ಸರ್ಕಾರದ ಈ ನೀತಿಯಿಂದ ನಮ್ಮ ರಾಜ್ಯದ ಸಮಗ್ರ ಸಣ್ಣ ಕೈಗಾರಿಕೆಗಳಿಗೆ ಬಹಳ ಅನ್ಯಾಯವಾಗಿದೆ. ಆದ್ದರಿಂದ ಈ ನೀತಿಯನ್ನು ಸರ್ಕಾರಿ ಇಲಾಖೆಗಳು, ಸಾರ್ವಜನಿಕ ಉದ್ದಿಮೆಗಳು ಮತ್ತು ಬೃಹತ್ ಪ್ರಮಾಣದ ಕೈಗಾರಿಕೆಗಳೂ ಸೇರಿದಂತೆ ಖಾಸಗಿ ಕ್ಷೇತ್ರಕ್ಕೂ  ವಿಸ್ತರಿಸಬೇಕು ಎಂದು ಒತ್ತಾಯಿಸಿದ್ದೇವೆ~ ಎಂದು ಅವರು ಹೇಳಿದರು.

`ಸಣ್ಣ ಕೈಗಾರಿಕೆಗಳ ಸಂಘವು ವಿವಿಧ ರೀತಿಯ ಕೈಗಾರಿಕೆಗಳಿಗೆ ಸಂಬಂಧಪಟ್ಟಂತಹ ಪ್ರಯೋಜನಕಾರಿ ಕಾರ್ಯಕ್ರಮಗಳನ್ನು ಸರ್ಕಾರದೊಂದಿಗೆ ಜೊತೆಗೂಡಿ ಬೇರೆ ಬೇರೆ ಕೈಗಾರಿಕಾ ವಲಯಗಳಲ್ಲಿ ಹಮ್ಮಿಕೊಂಡಿದೆ. ಅನೇಕ ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರಿಂದ ಆಯವ್ಯಯದಲ್ಲಿ 50 ಲಕ್ಷ ರೂಪಾಯಿಯನ್ನು ಅನುದಾನವಾಗಿ ನೀಡಬೇಕು~ ಎಂದು ಮನವಿ ಪತ್ರದಲ್ಲಿ  ಒತ್ತಾಯಿಸಲಾಗಿದೆ ಎಂದು ವಿವರಿಸಿದರು.

`ಸಾಮಾನ್ಯ ಬಳಕೆಯ ವಸ್ತುಗಳಾದ ಸಂಸ್ಕರಿಸಿದ ಆಹಾರ ಪದಾರ್ಥಗಳು, ಕುಡಿಯುವ ನೀರು, ಪಾತ್ರೆಗಳು ಮುಂತಾದ ವಸ್ತುಗಳ ಮೇಲೆ ಶೇ 14 ರಷ್ಟು ವ್ಯಾಟ್ ವಿಧಿಸಲಾಗುತ್ತಿದೆ. ಹೊರರಾಜ್ಯಗಳಿಂದ ಬಂದ ವಸ್ತುಗಳ ಮೇಲೆ ಕೇವಲ ಶೇ 2 ರಷ್ಟು ತೆರಿಗೆಯನ್ನು ವಿಧಿಸಲಾಗುತ್ತಿರುವುದರಿಂದ ರಾಜ್ಯದ ಕೈಗಾರಿಕೆಗಳ ಉತ್ಪನ್ನಗಳ ಮಾರಾಟದಲ್ಲಿ ತೊಂದರೆಯಾಗಿದೆ. ಆದ್ದರಿಂದ ಸಾಮಾನ್ಯ ಜನರು ಬಳಸುವ ವಸ್ತುಗಳ ಮೇಲೆ ವ್ಯಾಟ್ ದರವನ್ನು ಶೇ 2 ಕ್ಕೆ ಸೀಮಿತಗೊಳಿಸಬೇಕು~ ಎಂದು ಸಲ್ಲಿಸಿದ ಪತ್ರದಲ್ಲಿ ತಿಳಿಸಲಾಗಿದೆ ಎಂದರು.

ಗೋಷ್ಠಿಯಲ್ಲಿ ಗೌರವ ಪ್ರಧಾನ ಕಾರ್ಯದರ್ಶಿ ವಿ.ಎಲ್.ಶ್ರೀನಿವಾಸ್ ಮತ್ತಿತರರು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry