ಶುಕ್ರವಾರ, ಮೇ 27, 2022
30 °C

ಅಭಿವೃದ್ಧಿ ಎಂದರೆ ಎತ್ತಂಗಡಿ- ನಾಯಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಭಿವೃದ್ಧಿ ಎಂದರೆ ಎತ್ತಂಗಡಿ- ನಾಯಕ

ಬೆಂಗಳೂರು: ‘ಮಾನವ ಹಕ್ಕುಗಳನ್ನು ಬಲಿಕೊಟ್ಟು ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗುತ್ತಿದೆ. ಬಡವರ ಪಾಲಿಗೆ ‘ಅಭಿವೃದ್ಧಿ’ ಎಂದರೆ ಎತ್ತಂಗಡಿ ಅಥವಾ ಸ್ಥಳಾಂತರ ಎಂದೇ ಬಿಂಬಿತವಾಗಿದೆ’ ಎಂದು ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ನ್ಯಾಯಮೂರ್ತಿ ಎಸ್.ಆರ್.ನಾಯಕ ಇಲ್ಲಿ ವಿಷಾದಿಸಿದರು.

ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಭಾನುವಾರ ಕುವೆಂಪು ಕಲಾಕ್ಷೇತ್ರದಲ್ಲಿ ನಡೆದ ಗೋಷ್ಠಿಯಲ್ಲಿ ಅವರು ಮಾತನಾಡಿದರು. ‘ಅಭಿವೃದ್ಧಿ ಹಾಗೂ ಮಾನವ ಹಕ್ಕುಗಳು ಪರಸ್ಪರ ಅವಲಂಬಿಗಳು. ಆದರೆ ಅವೆರಡರ ನಡುವೆ ದೊಡ್ಡ ಕಂದಕ ನಿರ್ಮಾಣ ಮಾಡುವ ಪ್ರಯತ್ನ ಬಹಳ ವರ್ಷಗಳಿಂದ ಇದೆ’ ಎಂದರು.

ವ್ಯಕ್ತಿಗಳ ಮತ್ತು ಸರ್ಕಾರಗಳ ಮೌಲ್ಯ ನಿರ್ಧಾರ ಮಾಡಲು ಮಾನವ ಹಕ್ಕುಗಳನ್ನು ರಕ್ಷಣೆಯನ್ನು ಮಾನದಂಡವಾಗಿ ಬಳಸಲಾಗುತ್ತಿದೆ. ಮಾನವ ಹಕ್ಕು ಎನ್ನುವುದು ಸ್ವಯಂಚಾಲಿತವಲ್ಲ. ಈ ಹಕ್ಕನ್ನು ಆತನಿಗೆ ನೀಡಲು ಸರ್ಕಾರ ಮುಂದಾಗಬೇಕಿದೆ ಎಂದು ನುಡಿದರು.

ಸಮಾಜ ಹಕ್ಕು ಖಾಸಗೀಕರಣ: ಚಿಂತಕ ಕೆ.ಸಿ.ವೆಂಕಟೇಶ್ ಮಾತನಾಡಿ, ಸಾಮಾಜಿಕ ಹಕ್ಕು ಖಾಸಗೀಕರಣ ಆಗುತ್ತಾ ಇದೆ. ಸಂವಿಧಾನ ಹಕ್ಕು ನೀಡಿದರೂ ಅದನ್ನು ಖಾಸಗಿ ವ್ಯಕ್ತಿಗಳು ಕಸಿದುಕೊಳ್ಳುತ್ತಿರುವ ಪರಿಸ್ಥಿತಿ ತಲೆದೋರಿದೆ ಎಂದರು.

ಸಂವಿಧಾನದಲ್ಲಿ ಮಹಿಳೆಗೆ ಪುರುಷನಷ್ಟೇ ಸಮಾನ ಅವಕಾಶ ನೀಡಲಾಗಿದೆ. ಆದರೆ ಮಹಿಳೆ ದೇವಾಲಯದ ಗರ್ಭಗುಡಿ ಪ್ರವೇಶಿಸಿದರೆ ಅದನ್ನು ಸಮಾಜ ಸಹಿಸದು. ಪುರುಷ ವರ್ಗದ ಪ್ರತಿಷ್ಠೆಯ ಮುಂದೆ ಮಹಿಳೆಯ ಅಧಿಕಾರ ಗೌಣವಾಗುತ್ತಿದೆ ಎಂದು ಅವರು ಪ್ರತಿಪಾದಿಸಿದರು.

ಮಹಿಳೆ ಮತ್ತು ಮಕ್ಕಳ ಆಯೋಗ ಇದ್ದರೂ ಅವು ನಿದ್ರಿಸುತ್ತಿದೆ. ಮಕ್ಕಳ ಆಯೋಗದ ವ್ಯಾಪ್ತಿಯನ್ನೇ ಸರ್ಕಾರ ತಿಳಿಸದ ಹಿನ್ನೆಲೆಯಲ್ಲಿ ಅದು ಇದ್ದರೂ ಇಲ್ಲವಾಗಿದೆ. ಇನ್ನೊಂದೆಡೆ ಪೊಲೀಸ್ ಠಾಣೆಗಳಲ್ಲಿ ಮಹಿಳೆಯರು ದಾಖಲಿಸುವ ದೂರುಗಳ ಪ್ರಮಾಣಕ್ಕಿಂತ ಅವರಿಗಾಗಿಯೇ ಇರುವ ಮಹಿಳಾ ಆಯೋಗದ ಮುಂದೆ ದಾಖಲಾಗದೇ ಇರುವುದು ವಿಷಾದನೀಯ ಎಂದರು.

12ವರ್ಷ ಮೇಲ್ಪಟ್ಟ ಬಾಲಕ-ಬಾಲಕಿಯರು ಲೈಂಗಿಕ ಕ್ರಿಯೆಯಲ್ಲಿ ತೊಡಗಲು ಅನುಮತಿ ನೀಡುವ ಬಗ್ಗೆ ಕೇಂದ್ರ ಸರ್ಕಾರ ಚಿಂತಿಸುತ್ತಿರುವ ಕ್ರಮಕ್ಕೆ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಕಾನೂನಿನ ಅಡಿ 18 ವರ್ಷದವರೆಗೆ ‘ಮಕ್ಕಳು’ ಎಂದೇ ಸಂಬೋಧಿಸಲಾಗುತ್ತದೆ. ಆದರೆ ಕೇಂದ್ರ ಸರ್ಕಾರ ಇಂತಹ ಕ್ರಮಕ್ಕೆ ಮುಂದಾಗಿರುವುದು ಖಂಡನಾರ್ಹ ಎಂದರು.

ಮನೆಯಲ್ಲಿ ಥಳಿಸುವ ಪೊಲೀಸರು!: ಕ್ರಿಮಿನಲ್ ಪ್ರಕರಣಗಳ ಖ್ಯಾತ ವಕೀಲ ಸಿ.ಎಚ್.ಹನುಮಂತರಾಯ ಅವರು, ಮಾನವ ಹಕ್ಕುಗಳ ಆಯೋಗದ ಹೆದರಿಕೆಯಿಂದ ಪೊಲೀಸರು ಆರೋಪಿಗಳನ್ನು ಥಳಿಸಲು ಪರ್ಯಾಯ ಮಾರ್ಗ ಕಂಡುಕೊಂಡ ಬಗ್ಗೆ ಮಾರ್ಮಿಕವಾಗಿ ನುಡಿದರು.

‘ಆರೋಪಿಗಳನ್ನು ಠಾಣೆಗಳಲ್ಲಿ ಥಳಿಸುತ್ತಿರುವ ಸುದ್ದಿ ತಿಳಿಯುತ್ತಿದ್ದಂತೆ ಈ ಆಯೋಗದ ಅಧ್ಯಕ್ಷರು ಠಾಣೆಗಳಿಗೆ ಭೇಟಿ ನೀಡಿ, ಪೊಲೀಸರ ವಿರುದ್ಧ ಕ್ರಮ ತೆಗೆದುಕೊಳ್ಳುವುದು ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿಗಳನ್ನು ಥಳಿಸಲು ಕೆಲ ಮನೆಗಳನ್ನು ಹುಡುಕಿಕೊಂಡಿದ್ದಾರೆ. ಇದರಿಂದ ಎಲ್ಲಿ ಘಟನೆ ನಡೆಯುತ್ತಿದೆ ಎನ್ನುವುದು ಪತ್ತೆ ಹಚ್ಚಲು ಕಷ್ಟವಾಗಿದೆ. ಈ ಮೂಲಕ ಮಾನವ ಹಕ್ಕುಗಳ ಉಲ್ಲಂಘನೆ ಆಗುತ್ತಿದೆ’ ಎಂದರು.

ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಎಸ್.ಆರ್.ನಾಯಕ್ ಹಾಗೂ ಮಹಿಳಾ ಆಯೋಗದ ಅಧ್ಯಕ್ಷೆಯಾಗಿದ್ದ ಪ್ರಮಿಳಾ ನೇಸರ್ಗಿ ಅಂಥವರನ್ನು ಕನಿಷ್ಠ 5-10 ವರ್ಷ ಅಧಿಕಾರಾವಧಿಯಲ್ಲಿ ಮುಂದುವರಿಯಲು ಬಿಟ್ಟಿದ್ದೇ ಆದಲ್ಲಿ ಮಾನವ ಮತ್ತು ಮಕ್ಕಳ ಹಕ್ಕುಗಳ ಉಲ್ಲಂಘನೆ ತಕ್ಕಮಟ್ಟಿಗೆ ಕಡಿಮೆಯಾಗುವಲ್ಲಿ ಸಂದೇಹವೇ ಇಲ್ಲ ಎಂದು ಅವರು ಅಭಿಪ್ರಾಯ ಪಟ್ಟರು.

‘ಎಸ್.ಆರ್ ಎಂದರೆ...’: ಹಕ್ಕುಗಳ ಬಗ್ಗೆ ನಡೆಯುತ್ತಿರುವ ಗಂಭೀರ ಚಿಂತನೆಯ ಮಧ್ಯೆ ಲಘು ಹಾಸ್ಯ ಮಾಡಿದ ಹಿರಿಯ ವಕೀಲೆ ಪ್ರಮಿಳಾ ನೇಸರ್ಗಿ ಅವರು, ‘ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರನ್ನು ಎಸ್.ಆರ್.ನಾಯಕ್ ಎಂದು ಹೇಳಿದರೆ ಅದು ಆಂಗ್ಲಭಾಷೆಯಾಗುತ್ತದೆ. ಅದಕ್ಕೆ ‘ಎಸ್’ ಎಂದರೆ ಹೌದು ಹಾಗೂ ‘ಆರ್’ ಎಂದರೆ ಅಥವಾ ಎಂದು ಸಂಬೋಧಿಸುತ್ತಾ ‘ಹೌದು ಅಥವಾ’ ನಾಯಕರೇ ಎನ್ನುತ್ತೇನೆ ಎಂದರು.

‘ಸಾಯುವುದರೊಳಗೆ ಸಂಸಾರದಲ್ಲಿ ಗಂಡಾಗುಂಡಿ ಎಂಬ ಹಾಡಿದೆ. ಆದರೆ ಇಂದಿನ ಪರಿಸ್ಥಿತಿ ನೋಡಿದರೆ ಎಲ್ಲರದಲ್ಲಿಯೂ ಗಂಡಾಗುಂಡಿಯಾಗಿದೆ. ಸಾಹಿತ್ಯದಲ್ಲಿ, ರಾಜಕೀಯದಲ್ಲಿ, ಹಕ್ಕುಗಳಲ್ಲಿ ಎಲ್ಲೆಲ್ಲೂ ಗಂಡಾಗುಂಡಿಯೇ ಕಾಣುತ್ತಿದೆ’ ಎಂದು ಉದಾಹರಣೆ ಸಹಿತ ವಿವರಿಸಿದರು.

ಮಾಹಿತಿ ಹಕ್ಕು ಕಾಯ್ದೆ: ‘ಬಳಸಿ ಮಾಹಿತಿ ಹಕ್ಕು, ಅಳಸಿ ಭ್ರಷ್ಟರ ಸೊಕ್ಕು’ ಎನ್ನುವ ಮೂಲಕ ಮಾಹಿತಿ ಹಕ್ಕು ಕಾಯ್ದೆಯ ಮಹತ್ವವನ್ನು ಚುಟುಕಿನ ರೂಪದಲ್ಲಿ ಸಾದರ ಪಡಿಸಿದ ಸಾಹಿತಿ ಜೆ.ಎಂ.ರಾಜಶೇಖರ ಅವರು ಹೇಳಿದ್ದು ಹೀಗೆ:

ಜನರ ರೊಕ್ಕಕ್ಕೆ ಇಲ್ಲ ಲೆಕ್ಕ

ನಾಯಕರ ಬೊಕ್ಕಸ ಸೇರಿದ್ದು ಪಕ್ಕಾ!

ಲೆಕ್ಕ ಅಂದ್ರ ತೋರಿಸ್ತಾರ ಸೊಕ್ಕ

ಮಾಹಿತಿ ಹಕ್ಕು ಅರ್ಜಿಗೆ ಲೆಕ್ಕ ಕಕ್ಕ!

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.