ಅಭಿವೃದ್ಧಿ ಕಡೆಗಣನೆ: ಗೌಡರ ಗುಡುಗು!

7

ಅಭಿವೃದ್ಧಿ ಕಡೆಗಣನೆ: ಗೌಡರ ಗುಡುಗು!

Published:
Updated:
ಅಭಿವೃದ್ಧಿ ಕಡೆಗಣನೆ: ಗೌಡರ ಗುಡುಗು!

ಹಾಸನ: ಜಿಲ್ಲಾಧಿಕಾರಿ ಕಚೇರಿ ಆವರಣ ಬುಧವಾರ ಮುಂಜಾನೆಯಿಂದ ಸಂಜೆ ವರೆಗೆ ಪ್ರತಿಭಟನಾಕಾರರಿಂದ ತುಂಬಿತ್ತು. ಸರ್ಕಾರ ಹಾಸನ ಜಿಲ್ಲೆಯನ್ನು ಕಡೆಗಣಿಸುತ್ತಿರುವುದನ್ನು ವಿರೋಧಿಸಿ ಪ್ರತಿಭಟನೆ ನಡೆಸುವುದಾಗಿ ಹಲವು ತಿಂಗಳಿಂದ ಜೆಡಿಎಸ್ ಮುಖಂಡರು ಹೇಳುತ್ತ ಬಂದಿದ್ದರೂ, ಕಾಲ ಕೂಡಿಬಂದಿದ್ದು ಬುಧವಾರ. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರೇ ಪ್ರತಿಭಟನೆಯ ನೇತೃತ್ವ ವಹಿಸಿದ್ದರಿಂದ ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸೇರಿದ್ದರು.ಪ್ರತಿಭಟನೆಯ ದಿನಾಂಕವನ್ನು ವಾರದ ಮೊದಲೇ ಗೊತ್ತುಮಾಡಿದ್ದರೂ ದೇವೇಗೌಡರು ಮುಂಜಾನೆ 9.30ಕ್ಕೆ ಬರಬಹುದೆಂಬ ನಿರೀಕ್ಷೆ ಕಾರ್ಯಕರ್ತರಲ್ಲಿ ಇರಲಿಲ್ಲ. ಪ್ರತಿಭಟನೆಗಾಗಿ ದೇವೇಗೌಡರು ಬಂದಾಗ ಕೆಲವೇ ಕೆಲವು ಮಂದಿ ಮಾತ್ರ ಇದ್ದರು.ನಗರಸಭೆ ಅಧ್ಯಕ್ಷ ಸಿ. ಆರ್. ಶಂಕರ್ ನೇತೃತ್ವದಲ್ಲಿ ಒಂದಿಷ್ಟು ಮಂದಿ ಮೆರವಣಿಗೆ ನಡೆಸುತ್ತ ಪ್ರತಿಭಟನಾ ಸ್ಥಳಕ್ಕೆ ಬಂದರೆ ಮಾಜಿ ಶಾಸಕ ಎ.ಟಿ. ರಾಮಸ್ವಾಮಿ ಅವರು ಬೆಂಬಲಿಗರೊಂದಿಗೆ ಬೈಕ್ ರ‌್ಯಾಲಿ ಮೂಲಕ ಆಗಮಿಸಿದರು. ಮಧ್ಯಾಹ್ನ 12ಗಂಟೆ ಸುಮಾರಿಗೆ ವಿವಿಧ ತಾಲ್ಲೂಕುಗಳಿಂದ ಜನರು ಬಂದು ಸೇರಿದ್ದರಿಂದ ಸಂಖ್ಯೆ ಸಾವಿರ ದಾಟಿತ್ತು. ಜಿಲ್ಲೆಯಲ್ಲಿ ಜೆಡಿಎಸ್‌ನಿಂದ ಆಯ್ಕೆಯಾದ ಎಲ್ಲ ಶಾಸಕರು, ಜಿ.ಪಂ, ತಾ.ಪಂ ಸದಸ್ಯರು, ಕಾರ್ಯಕರ್ತರು ಪಾಲ್ಗೊಂಡರು.ಸಂಜೆ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ದೇವೇಗೌಡರು `ಜಿಲ್ಲೆಯ ಅಭಿವೃದ್ಧಿ ತನ್ನಷ್ಟಕ್ಕೆ ತಾನೇ ಸ್ಥಗಿತಗೊಂಡಿಲ್ಲ, ಉದ್ದೇಶಪೂರ್ವಕವಾಗಿ ಅಡ್ಡಿ ಮಾಡಲಾಗಿದೆ. ಜಿಲ್ಲೆಯ ಎಲ್ಲ ಶಾಸಕರು ಹಲವು ಬಾರಿ ಪತ್ರ ಬರೆದರೂ ಮುಖ್ಯಮಂತ್ರಿ ಹಣ ನೀಡುವ ಔದಾರ್ಯ ತೋರಿಲ್ಲ. ಸೇಡಿನ ರಾಜಕೀಯಕ್ಕೆ ಇಳಿದು ಜಿಲ್ಲೆಯ ಜನತೆಗೆ ಅನ್ಯಾಯ ಮಾಡುತ್ತಿದ್ದಾರೆ. ಇಲ್ಲಷ್ಟೇ ಅಲ್ಲ ಬೇರೆ ಪಕ್ಷಗಳ ಶಾಸಕರು ಇರುವ ಇತರ ಜಿಲ್ಲೆಗಳಲ್ಲೂ ಹಾಗೇ ಆಗಿದೆ. ಬಾಗಲಕೋಟೆಯ ಜನರೂ ಇದೇ ಕಷ್ಟ ಅನುಭವಿಸುತ್ತಿದ್ದಾರೆ~ ಎಂದರು.ಅರಸೀಕೆರೆ ಕ್ಷೇತ್ರದ ಶಾಸಕ ಕೆ.ಎಂ. ಶಿವಲಿಂಗೇಗೌಡ, `ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅಭಿವೃದ್ಧಿಗೆ ಕಂಟಕವಾಗಿದ್ದಾರೆ. ಭ್ರಷ್ಟಾಚಾರದಲ್ಲಿ ರಾಜ್ಯವನ್ನು ಮೊದಲ ಸ್ಥಾನಕ್ಕೆ ಏರಿಸುವ ಮೂಲಕ ಕರ್ನಾಟಕಕ್ಕೆ ಕಪ್ಪು ಚುಕ್ಕೆ ಇಟ್ಟಿದ್ದಾರೆ. ರಾಜ್ಯ ಬಜೆಟ್‌ನ ಶೇ 35ರಷ್ಟು ಹಣವನ್ನು ಶಿಕಾರಿಪುರ ಮತ್ತು ಶಿವಮೊಗ್ಗಕ್ಕೆ ಮೀಸಲಿಟ್ಟಿದ್ದಾರೆ. ಹಾಸನ ಜಿಲ್ಲೆಗೆ ಮಾತ್ರ ಮೋಸ ಮಾಡುತ್ತಿದ್ದಾರೆ. ಈ ಮುಖ್ಯಮಂತ್ರಿಯನ್ನು ಸುಮ್ಮನೆ ಬಿಡುವುದಿಲ್ಲ ಕೊನೆವರೆಗೆ ಕಾಡುತ್ತಲೆ ಇರುತ್ತೇನೆ~ ಎಂದರು.ವೈಎಸ್‌ವಿ ದತ್ತಾ ಮಾತನಾಡಿ, `ಕಡೂರು ದೇವೇಗೌಡರ ಕ್ಷೇತ್ರದ ವ್ಯಾಪ್ತಿಯಲ್ಲೇ ಬರುವುದರಿಂದ ಹಾಸನಕ್ಕಾಗಿರುವ ದುರ್ಗತಿಯೇ ಕಡೂರಿಗೂ ಆಗಿದೆ. ನನ್ನನ್ನು ಸೋಲಿಸ ಬೇಕೆಂಬ ಉದ್ದೇಶದಿಂದಲೇ ಕಡೂರನ್ನು ದತ್ತು ತೆಗೆದು ಕೊಳ್ಳುತ್ತೇನೆ ಎಂದು ಮುಖ್ಯಮಂತ್ರಿ ಹೇಳಿದ್ದರು. ಆದರೆ ಈ ವರೆಗೆ ಒಂದು ರೂಪಾಯಿಯನ್ನೂ ಬಿಡುಗಡೆ ಮಾಡಿಲ್ಲ. ಜಿಲ್ಲೆಯಲ್ಲಿ ಕೆರೆ ಹೂಳೆತ್ತುವ ಯೋಜನೆ ರೂಪಿಸಿದ್ದು, ಇದರಿಂದಾಗಿ ಬಿಜೆಪಿ ಕಾರ್ಯಕರ್ತರು, ಗುತ್ತಿಗೆದಾರರು ಸೊಂಪಾಗಿದ್ದಾರೆ. ಅಭಿವೃದ್ಧಿ ಕೆಲಸಗಳಿಗೆ ಬಿಡಿಗಾಸನ್ನೂ ಸರ್ಕಾರ ಬಿಡುಗಡೆ ಮಾಡದೆ ಅಭಿವೃದ್ಧಿಯಲ್ಲಿ ರಾಜಕೀಯ~ ಮಾಡುತ್ತಿದೆ ಎಂದು  ಟೀಕಿಸಿದರು.ಮುಖಂಡರಾರ ಬಸವನಗೌಡ ಪಾಟೀಲ ಯತ್ನಾಳ ಮಾತನಾಡಿ `ಯಡಿಯೂರಪ್ಪ ಅವರು ನೈತಿಕವಾಗಿ ಅಧಃಪತನ ಹೊಂದಿದ್ದಾರೆ. ಮಠಮಾನ್ಯಗಳಿಗೆ ಹೋಗಿ ಆಣೆ ಪ್ರಮಾಣಗಳನ್ನು ಮಾಡುತ್ತ ಪರೋಕ್ಷವಾಗಿ ತಾನು ತಪ್ಪು ಮಾಡಿದ್ದೇನೆ ಎಂಬುದನ್ನು ಜನರಿಗೆ ತಿಳಿಸುತ್ತಿದ್ದಾರೆ. ಅಭಿವೃದ್ಧಿಯೇ ಮಂತ್ರ ಎಂದರೂ ಅವರ ಕುಟುಂಬದವರೂ ಮಾತ್ರ ಅಭಿವೃದ್ಧಿ ಹೊಂದಿದ್ದಾರೆ. ರಾಜ್ಯದ ಅಭಿವೃದ್ಧಿ ಕಡೆಗಣಿಸಿದ್ದಾರೆ~ ಎಂದು ಹೇಳಿದರು.ಮಾಜಿ ಪ್ರಧಾನಿಯೇ ಇಲ್ಲಿ ಪ್ರತಿಭಟನೆ ನಡೆಸುತ್ತಿದ್ದರೆ ಮುಖ್ಯಮಂತ್ರಿ ಯಾರಾದರೂ ಶಾಸಕರನ್ನು ಕಳುಹಿಸಿ ಸಮಸ್ಯೆ ಆಲಿಸುವ ಮೂಲಕ ದೊಡ್ಡತನ ಮೆರೆಯ ಬೇಕಾಗಿತ್ತು. ಅವರು ಅದನ್ನು ಮಾಡಿಲ್ಲ. ಯಡಿಯೂರಪ್ಪ ಮಾತ್ರವಲ್ಲ ಅವರ ವಂಶದವರು ಯಾರೂ ಮುಂದೆ ಮುಖ್ಯಮಂತ್ರಿಯಾಗದಂತೆ ಹೋರಾಟವನ್ನು ರೂಪಿಸಬೇಕು~ ಎಂದರು.ಹಾಸನ ಜಿಲ್ಲೆಯ ಜೆಡಿಎಸ್‌ನ ಎಲ್ಲ ಶಾಸಕರು. ವಿಧಾನಪರಿಸತ್ ಸದಸ್ಯ ಪಟೇಲ್ ಶಿವರಾಂ, ಎಚ್.ಕೆ. ಜವರೇಗೌಡ, ಮಧು ಬಂಗಾರಪ್ಪ, ಸಿ.ಎನ್. ಬಾಲಕೃಷ್ಣ, ಸಿ.ಆರ್. ಶಂಕರ್, ಬಿ.ಡಿ. ಚಂದ್ರೇಗೌಡ, ಮಾಜಿ ಶಾಸಕ ಬಿ.ವಿ. ಕರೀಗೌಡ, ಮತ್ತಿತರ ಮುಖಂಡರು ಪ್ರತಿಭಟನೆಯಲ್ಲಿ ಪಾಲ್ಗೊಂಡು ದೇವೇಗೌಡರ ಹೋರಾಟಕ್ಕೆ ಬಲ ನೀಡಿದರು.ಪ್ರತಿಭಟನೆ ಬಗ್ಗೆ ಚರ್ಚಿಸಲು ಹೋಗಿಲ್ಲಬುಧವಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸುವುದಾಗಿ ಮೊದಲೇ ಹೇಳಿದ್ದರೂ ದೇವೇಗೌಡರು ಸ್ಥಳಕ್ಕೆ ಬಂದಾಗ ಜಿಲ್ಲಾಧಿಕಾರಿ ಜಗದೀಶ್ ಅವರು ಬೆಂಗಳೂರಿಗೆ ಹೋಗಿರುವ ವಿಚಾರ ತಿಳಿದುಬಂತು.ಸಭೆಯೊಂದರಲ್ಲಿ ಪಾಲ್ಗೊಳ್ಳಲು ಹೋಗಿದ್ದಾರೆ ಎಂದು ಕಚೇರಿ ಸಿಬ್ಬಂದಿ ತಿಳಿಸಿದರೂ ಜೆಡಿಎಸ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸುತ್ತಾರೆ ಎಂಬ ಕಾರಣಕ್ಕೆ ಅವರನ್ನು ಬೆಂಗಳೂರಿಗೆ ಕರೆಸಿಕೊಂಡಿದ್ದಾರೆ ಎಂಬ ಮಾತುಗಳು ಕಾರ್ಯಕರ್ತರಿಂದ ಕೇಳಿ ಬಂದವು. ಸಂಜೆ ವಾಪಸ್ ಬರುವುದರಿಂದ ಸರ್ಕಾರದಿಂದ ಭರವಸೆಯನ್ನಾದರೂ ತರಬುದೆಂದೂ ನಿರೀಕ್ಷಿಸಿದ್ದರು. ಆದರೆ ಸಂಜೆ ಅವರು ಕಚೇರಿಗೆ ಮರಳಿದಾಗ ಅಂಥ ಯಾವುದೇ ಭರವಸೆಗಳನ್ನು ಹೊತ್ತು ತಂದಿರಲಿಲ್ಲ.ಬಳಿಕ ಪತ್ರಕರ್ತರೊಡನೆ ಮಾತನಾಡಿದ ಜಿಲ್ಲಾಧಿಕಾರಿ, `ಪ್ರತಿಭಟನೆ ಬಗ್ಗೆ ಚರ್ಚಿಸಲು ಬೆಂಗಳೂರಿಗೆ ಹೋಗಿರಲಿಲ್ಲ. ಬೆಂಗಳೂರು- ಮಂಗಳೂರು ರೈಲ್ವೆ ಮಾರ್ಗಕ್ಕೆ ಭೂಸ್ವಾಧೀನ ವಿಷಯಕ್ಕೆ ಸಂಬಂಧಿಸಿದಂತೆ ಮಾಹಿತಿ ಪಡೆಯುವ ಸಲುವಾಗಿ ಕಂದಾಯ ಇಲಾಖೆ ಮುಖ್ಯ ಕಾರ್ಯದರ್ಶಿ ಬೆಂಗಳೂರಿಗೆ ಆಹ್ವಾನಿಸಿದ್ದರು. ಬೆಳಿಗ್ಗೆ 11 ರಿಂದ 11.45ರವರೆಗೆ ಸಭೆ ನಡೆಯಿತು. ನಾನು ಮುಖ್ಯಮಂತ್ರಿಯನ್ನಾಗಲಿ, ಉಸ್ತುವಾರಿ ಸಚಿವರನ್ನಾಗಲಿ ಭೇಟಿ ಮಾಡಿಲ್ಲ~ ಎಂದು ಅವರು ಸ್ಪಷ್ಟಪಡಿಸಿದರು.

ರಾಜಕೀಯ ಮಂಥನ

ಅಪರೂಪಕ್ಕೆ ಎಂಬಂತೆ ಜಿಲ್ಲೆಗೆ ಭೇಟಿ ನೀಡುವ ದೇವೇಗೌಡರು ಸಾಮಾನ್ಯವಾಗಿ ಇಲ್ಲಿಯ ಶಾಸಕರೊಂದಿಗೆ ಹೆಚ್ಚು ಕಾಲ ಕಳೆಯುವುದಿಲ್ಲ. ಬುಧವಾರ ಪ್ರತಿಭಟನೆಯ ಕಾರಣದಿಂದಾಗಿ ಎಲ್ಲ ಶಾಸಕರಿಗೂ ಪಕ್ಷದ ಅಧ್ಯಕ್ಷರೊಡನೆ ದೀರ್ಘ ಮಾತುಕತೆ ನಡೆಸಲು ಅವಕಾಶ ಲಭಿಸಿತು.ಶಾಮಿಯಾನದಡಿ ಕುಳಿತಿದ್ದ ಗೌಡರು ಲೋಕಾಭಿರಾಮ ಮಾತನಾಡುತ್ತಾ, ರಾಜಕೀಯ ಚರ್ಚೆ ಆರಂಭಿಸಿದ್ದರು. ಮಾಜಿ ಮುಖ್ಯಮಂತ್ರಿ ಜೆ.ಎಚ್. ಪಟೇಲ್, ಎಸ್.ಎಂ. ಕೃಷ್ಣ ಕಾಲದಿಂದಲೇ ನಡೆದ ರಾಜಕೀಯ ಬೆಳವಣಿಗೆಗಳು, ಶಾಸಕರ ಕಾರ್ಯವೈಖರಿ... ಹೀಗೆ ಹಲವು ವಿಚಾರಗಳನ್ನು ಮೆಲುಕು ಹಾಕಿದರು. ಶಾಸಕರು ಯಾರಾದರೂ ಮಧ್ಯ ಬಾಯಿಹಾಕಿದರೆ , `ಮೊದಲು ಕೇಳಿಸಿಕೊಳ್ಳಯ್ಯ~ ಎಂದು ತಡೆದು ಮತ್ತೆ ಇತಿಹಾಸವನ್ನು ಮುಂದುವರಿಸಿದರು. ಆಗಾಗ `ರಾಜಕೀಯವನ್ನು ತಿಳ್ಕೊಳ್ಳಿ~ ಎನ್ನುತ್ತಾ ರಾಜಕೀಯದ ಪಟ್ಟುಗಳನ್ನೂ ಹೇಳಿಕೊಟ್ಟರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry