ಅಭಿವೃದ್ಧಿ ಕಾಣದ ಹೊಸಳ್ಳಿ: ತಪ್ಪದ ಜನರ ಗೋಳು

7

ಅಭಿವೃದ್ಧಿ ಕಾಣದ ಹೊಸಳ್ಳಿ: ತಪ್ಪದ ಜನರ ಗೋಳು

Published:
Updated:

ಯಲಬುರ್ಗಾ: ತಾಲ್ಲೂಕು ಕೇಂದ್ರ ಯಲಬುರ್ಗಾ ಪಟ್ಟಣದಿಂದ ಕೇವಲ ಮೂರು ಕಿ.ಮೀ. ಅಂತರದಲ್ಲಿರುವ ಹೊಸಳ್ಳಿ ಅಭಿವೃದ್ಧಿಯಿಂದ ವಂಚಿತವಾದ ಗ್ರಾಮ. ಇತರೆ ಗ್ರಾಮಕ್ಕೆ ಲಭ್ಯವಾಗುವಂತೆ ಈ ಗ್ರಾಮಕ್ಕು ವಿವಿಧ ಯೋಜನೆಗಳು ಅನುಷ್ಠಾನಗೊಳ್ಳುತ್ತಿರುತ್ತವೆ. ಆದರೆ ಅವುಗಳು ಪರಿಣಾಮಕಾರಿಯಾಗಿ ಜಾರಿಯಾಗದೇ ಬೇಕುಬೇಡವಾದ ರೀತಿಯಲ್ಲಿ ಆಗಿದ್ದರಿಂದ ಕೊಳಗೇರಿಯಂತಾಗಿ ಗ್ರಾಮಸ್ಥರು ನಿತ್ಯ ನರಕಯಾತನೆ ಅನುಭವಿಸುವಂತಾಗಿದೆ.

ಗ್ರಾಮಸ್ಥರ ಬಹು ಒತ್ತಾಯದ ಮೇರೆಗೆ ಕಳೆದ ಮೂರ‌್ನಾಲ್ಕು ತಿಂಗಳ ಹಿಂದೆ ಗ್ರಾಮದಲ್ಲಿನ ಪ್ರಮುಖ ರಸ್ತೆಯನ್ನು ಸಿಮೆಂಟ್ ರಸ್ತೆಯಾಗಿ ಪರಿವರ್ತಿಸಿದ್ದು ಹೆಸರಿಗೆ ಮಾತ್ರ ಇದ್ದಂತಿದೆ. ಸಿಮೆಂಟ್ ರಸ್ತೆ ಪಕ್ಕದ ಕಿರು ಚರಂಡಿ ಸರಿಯಾಗಿ ಮಾಡದ ಕಾರಣ ದಿನಬಳಕೆಯ ಕೊಳಚೆ ನೀರು ರಸ್ತೆಯ ಮೇಲೆಯೆ ಹರಿಯುತ್ತಿವೆ. ಇದರಿಂದ ಸಿಮೆಂಟ್ ರಸ್ತೆ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ.ಅಲ್ಲದೇ ಇದೇ ರಸ್ತೆಯಲ್ಲಿಯೇ ಸಾರ್ವಜನಿಕರು ಬಹಿರ್ದೆಸೆಗೆ ಹೋಗುವುದರಿಂದ ಈ ರಸ್ತೆಯಲ್ಲಿ ಸಂಚರಿಸುವಾಗ ಮೂಗುಮುಚ್ಚಿಕೊಂಡು ಹೋಗಬೇಕು. ಅಷ್ಟೆ ಅಲ್ಲದೇ ಅಕ್ಕಪಕ್ಕದ ಮನೆಯವರು ದುರ್ನಾತ ಹಾಗೂ ಸೊಳ್ಳೆಗಳ ಕಾಟಕ್ಕೆ ಅನಾರೋಗ್ಯದಿಂದ ಬಳಲುವಂತಾಗಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ ಶೆಟ್ಟಿ ಬಣದ ರಾಜಶೇಖರ ಶ್ಯಾಗೋಟಿ, ಅಮ್ಮತಗೌಡ ಹಿರೇಗೌಡ, ಚನ್ನವೀರಗೌಡ ಹಾಗೂ ಇತರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹೊರವಲಯದಿಂದ ಊರೊಳಗೆ ಹಾದು ಹೋಗುವ ಬೈಪಾಸ್ ರಸ್ತೆ ಗುತ್ತಿಗೆದಾರರಿಗೆ ಜನಪ್ರತಿನಿಧಿಗಳಿಗೆ ಅಭಿವೃದ್ಧಿ ಹೆಸರಿನಲ್ಲಿ ಹಣ ನುಂಗಲು ಹೇಳಿ ಮಾಡಿಸಿದಂತಿದೆ. ವಿವಿಧ ಯೋಜನೆಗಳ ಅಡಿಯಲ್ಲಿ ಸದ್ರಿ ರಸ್ತೆ ಅಭಿವೃದ್ಧಿಗಾಗಿ ಹಣವನ್ನು ನಿಗದಿಪಡಿಸಿ ಅಭಿವೃದ್ಧಿಗೊಳಿಸದೆ ಖೊಟ್ಟಿದಾಖಲೆ ಸೃಷ್ಟಿಸಿ ಅನುದಾನವನ್ನು ಗುಳಂ ಮಾಡುತ್ತಾರೆ.ಹೀಗೆ ಸುಮಾರು ವರ್ಷಗಳಿಂದಲೂ ಈ ಬೈಪಾಸ್ ರಸ್ತೆಯು ಅಭಿವೃದ್ಧಿ ಕಾಣದೆ ಬಂಡಿ ಜಾಡಿನಂತಾಗಿದೆ. ಅಲ್ಲದೇ ಇದೆ ರಸ್ತೆ ಪಕ್ಕದಲ್ಲಿ ಚರಂಡಿ ಕೂಡಾ ನಿರ್ಮಾಣ ಮಾಡಬೇಕಿತ್ತು ಅದನ್ನು ಕೂಡಾ ನಿರ್ಮಿಸಿಲ್ಲ, ಹೀಗೆ ಸ್ಥಳೀಯ ಜನಪ್ರತಿನಿಧಿಗಳು ಅಧಿಕಾರಿಗಳು ಈ ಬಗ್ಗೆ ನಿರ್ಲಕ್ಷ್ಯ ಧೋರಣೆ ಅನುಸರಿಸಿದ್ದರಿಂದ ಗ್ರಾಮ ಕೊಳಚೆ ಗ್ರಾಮವಾದಂತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.ಗ್ರಾಮದ ಮಕ್ಕಳ ಹಿತದೃಷ್ಟಿಯಿಂದ ಅಂಗನವಾಡಿ ಕೇಂದ್ರ(2)ಕ್ಕೆ ಸ್ವಂತ ಕಟ್ಟಡ ನಿರ್ಮಾಣಕ್ಕೆ 2008-09ನೇ ಸಾಲಿನಲ್ಲಿಯೇ ಮಂಜೂರಾಗಿದೆ. ಸದ್ರಿ  ಕಟ್ಟಡ ಶೇ70ರಷ್ಟು ಸಿದ್ದಗೊಂಡು ವರ್ಷಗಳೆ ಕಳೆದಿವೆ, ಆದರೆ ಉಳಿದ ಸ್ವಲ್ಪ ಕೆಲಸಪೂರ್ಣಗೊಳಿಸುವ ಬಗ್ಗೆ ಗುತ್ತಿಗೆದಾರರಾಗಲಿ, ಸಂಬಂಧಪಟ್ಟ ಅಧಿಕಾರಿಗಳಾಗಿ ಇನ್ನೂವರೆಗೂ ಚಿಂತಿಸುತ್ತಿಲ್ಲ. ಇದರಿಂದ ಮಕ್ಕಳು ತೀವ್ರ ತೊಂದರೆ ಅನುಭವಿಸುವಂತಾಗಿದೆ, ಹೀಗೆ ಗ್ರಾಮದ ಅನೇಕ ಯೋಜನೆಗಳು ಸರಿಯಾಗಿ ಅನುಷ್ಠಾನಗೊಳ್ಳದೇ ಬೇಕಾಬಿಟ್ಟಿಯಾಗಿದ್ದರಿಂದ ಜನತೆ ಅಭಿವೃದ್ಧಿಯಿಂದ ವಂಚಿತರಾಗುವಂತಾಗಿದೆ.ಗ್ರಾಮದಲ್ಲಿ ನೀರಿನ ಸಂಪನ್ಮೂಲ ಅಗತ್ಯಕ್ಕಿಂತಲೂ ಹೆಚ್ಚಿಗೆ ಇದ್ದರೂ ಅದನ್ನು ಸರಿಯಾಗಿ ನಿರ್ವಹಿಸದೇ ಇರುವುದರಿಂದ ರಾತ್ರಿ ಹಗಲೆನ್ನದೇ ಹರಿದು ಚರಂಡಿ ಸೇರುವುದು ಸಾಮಾನ್ಯವಾಗಿದೆ, ಚರಂಡಿ ಇಲ್ಲದಿರುವ ಕಾರಣ ರಸ್ತೆ ಮೇಲೆ ಹರಿದು ನಿಂತು ರಸ್ತೆಯಲ್ಲಿರುವ ದೊಡ್ಡ ದೊಡ್ಡ ತಗ್ಗುಗಳಲ್ಲಿ ನಿಂತು ಹೊಂಡಗಳಾಗಿ ರೂಪುಗೊಂಡಿವೆ. ತಿಪ್ಪೆಗುಂಡಿಯಲ್ಲಿಯೇ ಸಾರ್ವಜನಿಕ ನಳದ ವ್ಯವಸ್ಥೆ ಮಾಡಿದ್ದು ಕೊಳೆಚೆ ನೀರು ಹಾಗೂ ತಿಪ್ಪೆಯಲ್ಲಿಯೇ ಕೊಡಗಳನ್ನು ಇಟ್ಟು ಕುಡಿಯುವ ನೀರು ತುಂಬಿಕೊಳ್ಳುವ ಅನಿರ್ವಾಯತೆ ಗ್ರಾಮಸ್ಥರದ್ದಾಗಿದೆ, ಈ ಬಗ್ಗೆ ಗ್ರಾಮ ಪಂಚಾಯಿತಿ ಅಧಿಕಾರಿ ಒಮ್ಮೆಯೂ ಇತ್ತ ಕಡೆ ದೃಷ್ಟಿ ಹರಿಸಿಲ್ಲ ಎಂದು ಕರವೇ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿ ಗ್ರಾಮದ ಸಮಗ್ರ ಅಭಿವೃದ್ಧಿಗೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಆಸಕ್ತಿ ತೋರದೆ ಹೋದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂಬ ಎಚ್ಚರಿಕೆಯ ಮಾತುಗಳನ್ನಾಡುತ್ತಿದ್ದಾರೆ.ತಾಲ್ಲೂಕು ಕೇಂದ್ರಕ್ಕೆ ತೀರಾ ಹತ್ತಿರದ ಗ್ರಾಮ ಈ ಹೊಸಳ್ಳಿ ಸ್ವಚ್ಛತೆ ಬಗ್ಗೆ ವಿಶೇಷ ಆಂದೋಲನ ನಡೆಯಬೇಕಾಗಿದೆ, ರಸ್ತೆಗುಂಟಾ ಬಹಿರ್ದೆಸೆಗೆ ಹೋಗುವುದನ್ನು ನಿಯಂತ್ರಿಸಬೇಕಾಗಿದೆ. ವ್ಯರ್ಥವಾಗಿ ಹರಿದು ಚರಂಡಿ ಸೇರುವ ನೀರನ್ನು ಸಂರಕ್ಷಿಸಬೇಕಾಗಿದೆ. ಅರ್ಧಕ್ಕೆ ನಿಂತ ಅಂಗನವಾಡಿ ಕೇಂದ್ರ ಶೀಘ್ರದಲ್ಲಿ ಪೂರ್ಣಗೊಳಿಸಿ ಮಕ್ಕಳ ಉಪಯೋಗಕ್ಕೆ ಅನುಕೂಲ ಮಾಡಿಕೊಡಬೇಕಾಗಿದೆ. ರಿಂಗ್ ರಸ್ತೆಗೆ ಕಾಯಕಲ್ಪ ತೋರಿ ವಾಹನಗಳು ಇದೇ ರಸ್ತೆಗುಂಟಾ ಸಂಚರಿಸುವಂತೆ ಮಾಡಬೇಕು ಎಂದು ರಾಜಶೇಖರ ಶ್ಯಾಗೋಟಿ ಹಾಗೂ ಇತರರು ಆಗ್ರಹಿಸಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry