ಅಭಿವೃದ್ಧಿ ಕಾಮಗಾರಿಯಲ್ಲಿ ಭ್ರಷ್ಟಾಚಾರ: ಆರೋ

7

ಅಭಿವೃದ್ಧಿ ಕಾಮಗಾರಿಯಲ್ಲಿ ಭ್ರಷ್ಟಾಚಾರ: ಆರೋ

Published:
Updated:

ಹಗರಿಬೊಮ್ಮನಹಳ್ಳಿ: ಪೊಳ್ಳು ಆಶ್ವಾಸನೆ ನೀಡಿ ಕ್ಷೇತ್ರದ ಜನರನ್ನು ದಿಕ್ಕು ತಪ್ಪಿಸುತ್ತಿರುವ ಶಾಸಕ ನೇಮರಾಜನಾಯ್ಕ ಕಾರ್ಯ ವೈಖರಿಯನ್ನು ಖಂಡಿಸಿ ಹಾಗೂ ಕ್ಷೇತ್ರ ವ್ಯಾಪ್ತಿಯಲ್ಲಿ ಆಶ್ರಯ ಮನೆಗಳ ಕಳಪೆ ಕಾಮಗಾರಿ ಕೈಗೊಂಡ ಫಲಾನುಭವಿಗಳಿಗೆ ಹಣ ವಾಪಸ್ ನೀಡುವಂತೆ ಆಗ್ರಹಿಸಿ ಸೋಮವಾರ ಬಿಎಸ್‌ಆರ್ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ತಾಲ್ಲೂಕು ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.

ಸಾವಿರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದ ಬಿಎಸ್‌ಆರ್ ಕಾಂಗ್ರೆಸ್ ಕಾರ್ಯಕರ್ತರು ಪಟ್ಟಣದ ಈಶ್ವರ ದೇವಸ್ಥಾನದ ಆವರಣದಿಂದ ತಹಸೀಲ್ದಾರ್ ಕಚೇರಿಯವರೆಗೆ ಪ್ರತಿಭಟನಾ ರ‌್ಯಾಲಿ ಹಮ್ಮಿಕೊಂಡಿದ್ದರು. ಇದಕ್ಕೂ ಮೊದಲು ಬಸವೇಶ್ವರ ಬಜಾರ್‌ನ ರಾಜ್ಯ ಹೆದ್ದಾರಿಯಲ್ಲಿ ನಾಲ್ಕು ಗಂಟೆ ಹೆದ್ದಾರಿ ತಡೆ ನಡೆಸಿ ಶಾಸಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯುದ್ದಕ್ಕೂ ಕ್ಷೇತ್ರದ ಅಭಿವೃದ್ಧಿ ಕಾಮಗಾರಿಗಳಲ್ಲಿ ಭ್ರಷ್ಟಾಚಾರಿಗಳಿಗೆ ಪ್ರೋತ್ಸಾಹ ನೀಡುವ ಶಾಸಕರು, ಜನರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ಆರೋಪಿಸಿದರು.



ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಬಿಎಸ್‌ಆರ್ ಕಾಂಗ್ರೆಸ್ ರಾಜ್ಯ ಉಪಾಧ್ಯಕ್ಷ ಸಿರಾಜ್‌ಶೇಖ್ ಮಾತನಾಡಿ, ಹೊಗಳು ಭಟ್ಟರನ್ನು ಮತ್ತು ಕೆಲ ಪುಢಾರಿಗಳನ್ನು ಹಿಂದಿಟ್ಟುಕೊಂಡು ದುರಾಡಳಿತ ನಡೆಸುತ್ತಿರುವ ಶಾಸಕ ನೇಮರಾಜನಾಯ್ಕ ಜನರನು ವ್ಯವಸ್ಥಿತವಾಗಿ ವಂಚಿಸುತ್ತಿದ್ದಾರೆ. ಅಕ್ರಮವಾಗಿ ಆಸ್ತಿ ಸಂಪಾದಿಸಿದ್ದಾರೆ ಎಂದು ಆರೋಪಿಸಿದರು.



ಆಶ್ರಯ ಮನೆಗಳ ನಿರ್ಮಾಣಕ್ಕಾಗಿ ಸರ್ಕಾರ ನೀಡುವ ರೂ.53,000 ಅನುದಾನದಲ್ಲಿ, ಭೂಸೇನಾ ನಿಗಮದಿಂದ ಕಟ್ಟಡ ಸಾಮಾಗ್ರಿ ಮತ್ತು ನಿರ್ಮಾಣ ವೆಚ್ಚ ಎಂದು ಹೇಳಿ ಫಲಾನುಭವಿಗಳಿಗೆ ರೂ.32 ಸಾವಿರ ಮಾತ್ರ ಮನೆಯೊಂದಕ್ಕೆ 18 ಸಾವಿರ ಹಣವನ್ನು ಶಾಸಕ ನೇಮಿರಾಜನಾಯ್ಕ ಕಬಳಿಸಿದ್ದಾರೆ. ಕ್ಷೇತ್ರದಾದ್ಯಂತ ಒಟ್ಟು 20,000 ಫಲಾನುಭವಿಗಳಿಂದ ತಲಾ 18 ಸಾವಿರ ರೂಪಾಯಿ ಲಂಚ ಪಡೆದಿದ್ದು, ಈ ಹಣವನ್ನು ವಾಪಾಸ್ ನೀಡುವಂತೆ ಸಿರಾಜ್‌ಶೇಖ್ ಆಗ್ರಹಿಸಿದರು.



ಸುವರ್ಣ ಗ್ರಾಮ ಯೋಜನೆಸಹಿತ ತಾಲ್ಲೂಕಿನ ನಾನಾ ಅಭಿವೃದ್ಧಿ ಕಾಮಗಾರಿಗಳಲ್ಲಿ ಅಧಿಕಾರಿಗಳ ಮೂಲಕ ಭ್ರಷ್ಟಾಚಾರ ನಡೆಯಲು ಶಾಸಕರು ಪ್ರೋತ್ಸಾಹ ನೀಡುತ್ತಿದ್ದಾರೆ. ಭ್ರಷ್ಟಾಚಾರದ ಮೂಲಕ ಗಳಿಸಿರುವ ಹಣವನ್ನು ತಮ್ಮ ಸಂಬಂಧಿಕರ ಹೆಸರಿನಲ್ಲಿ ಆಸ್ತಿ ಖರೀದಿಸಿದ್ದು, ಈ ಬಗ್ಗೆ ತನಿಖೆ ನಡೆಸುವಂತೆ ಒತ್ತಾಯಿಸಿದರು.

ಕ್ಷೇತ್ರ ವ್ಯಾಪ್ತಿಯ ಪ್ರದೇಶಗಳ ಅಗತ್ಯ ಮೂಲ ಸೌಲಭ್ಯಗಳಿಗೆ ಸ್ಪಂದಿಸದ ಶಾಸಕರು ರಾಜೀನಾಮೆ ನೀಡುವಂತೆ ಅವರು ಆಗ್ರಹಿಸಿದರು.



ಮುಂದಿನ ಚುನಾವಣೆಯಲ್ಲಿ ಆಶ್ರಯ ಯೋಜನೆಯ ಫಲಾನುಭವಿಗಳು ಅವರಿಗೆ ತಕ್ಕ ಪಾಠ ಕಲಿಸಬೇಕು ಎಂದು ಒತ್ತಾಯಿಸಿದರು.



ಸಂಚಾಲಕ ಎಚ್.ಎಂ. ಚೋಳರಾಜ್, ಸಹ ಸಂಚಾಲಕ ಏಕಾಂಬರೇಶ್‌ನಾಯ್ಕ, ಮುಖಂಡ ಕೆ.ಪಿ. ಮಠದ್, ಜೆ. ಯೋಗಾನಂದ್, ಹಾಜಿ ಯೂಸೂಫ್, ಗ್ರಾ.ಪಂ. ಸದಸ್ಯ ನಾಗರಾಜ ಜನ್ನು, ಸಂಪತ್‌ಕುಮಾರನಾಯ್ಕ ಮತ್ತು ಸಾಹಿರಾ ಭಾನು ಪ್ರತಿಭಟನೆಯ ನೇತೃತ್ವ ವಹಿಸಿದ್ದರು. 



 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry