ಬುಧವಾರ, ಏಪ್ರಿಲ್ 14, 2021
31 °C

ಅಭಿವೃದ್ಧಿ ಕಾಮಗಾರಿ: ಗುಲ್ಬರ್ಗ ರಾಜ್ಯದ್ಲ್ಲಲೇ ಹಿಂದೆ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಗುಲ್ಬರ್ಗ ಜಿಲ್ಲಾ ಪಂಚಾಯಿತಿ ಅಭಿವೃದ್ಧಿ ಕಾಮಗಾರಿಗಳ ಶೇಕಡಾವಾರು ಪ್ರಮಾಣವು ರಾಜ್ಯದ ಇನ್ನುಳಿದ ಜಿಲ್ಲೆಗಳಿಗೆ ಹೋಲಿಸಿದರೆ ಬಹಳ ಕಡಿಮೆ ಇದೆ ಎಂದು ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಪಲ್ಲವಿ ಅಕ್ಕುರಾತಿ ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಶನಿವಾರ ತಿಳಿಸಿದರು.ಜಲ ನಿರ್ಮಲ ಯೋಜನೆ ಹಾಗೂ ಉದ್ಯೋಗ ಖಾತರಿ ಯೋಜನೆಯಲ್ಲಿ ಒಂದಿಷ್ಟು ಅಭಿವೃದ್ಧಿ ಸಾಧನೆಯಾಗಿದೆ. ರಾಜ್ಯದ ವಿವಿಧ ಜಿಲ್ಲೆಗಳ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಶುಕ್ರವಾರ `ವಿಡಿಯೋ ಸಂವಾದ~ ಮೂಲಕ ಸರ್ಕಾರಕ್ಕೆ ವಿವರ ನೀಡುತ್ತಿದ್ದ ಸಂದರ್ಭದಲ್ಲಿ ಈ ಅಂಶ ಗಮನಕ್ಕೆ ಬಂದಿದೆ ಎಂದು ತಿಳಿಸಿದರು.`ಜಿಲ್ಲಾ ಪಂಚಾಯಿತಿ ಸಭೆಗಳಲ್ಲಿ ಸದಸ್ಯರೆಲ್ಲ ಅನೇಕ ಕಾಮಗಾರಿಗಳಿಗೆ ಅನುಮೋದನೆ ನೀಡಿದ್ದಾರೆ. ಆದರೆ ಅಧಿಕಾರಿಗಳು ಎಲ್ಲ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸದ ಕಾರಣ, ಗುಲ್ಬರ್ಗ ಜಿಲ್ಲಾ ಪಂಚಾಯಿತಿ ಅಭಿವೃದ್ಧಿ ಕಾಮಗಾರಿಗಳು ಹಿಂದುಳಿಯುತ್ತಿವೆ~ ಎಂದು ಸದಸ್ಯೆ ಶೋಭಾ ಬಾಣಿ ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.ಸಾಮಾನ್ಯ ಸಭೆಯು ಒಂದೂವರೆ ಗಂಟೆ ತಡವಾಗಿ ಆರಂಭಗೊಂಡಿತು. ಸಭೆಯ ಕಾರ್ಯಸೂಚಿಯ ಪ್ರಕಾರ ಸ್ಥಾಯಿ ಸಮಿತಿ ರಚಿಸುವ ವಿಷಯ ಮೊದಲು ಪ್ರಸ್ತಾಪಿಸಲಾಯಿತು. `ಸ್ಥಾಯಿ ಸಮಿತಿ ರಚನೆಗೆ ಇರುವ ನಿಯಮಗಳೇನು? ಒಂದು ವೇಳೆ ಚುನಾವಣೆ ಮೂಲಕ ಆಯ್ಕೆ ಮಾಡುವುದಾದರೆ ಯಾವ ರೀತಿ ಮತದಾನ ನಡೆಸಬೇಕು~ ಎಂಬುದರ ಬಗ್ಗೆ ಮಾಹಿತಿ ನೀಡುವಂತೆ ಜಿಪಂ ಮಾಜಿ ಉಪಾಧ್ಯಕ್ಷ ಹರ್ಷಾನಂದ ಗುತ್ತೇದಾರ ಕೋರಿದರು.ಅಧಿಕಾರಿಗಳಿಂದ ಗೊಂದಲ: ಸ್ಥಾಯಿ ಸಮಿತಿ ರಚನೆ ಸಂಬಂಧ ಪಂಚಾಯತ್‌ರಾಜ್ ಕಾನೂನಿನಲ್ಲಿರುವ ನಿರ್ದೇಶನಗಳನ್ನು ಜಿಲ್ಲಾ ಪಂಚಾಯಿತಿ ಯೋಜನಾಧಿಕಾರಿ ಸಭೆಯಲ್ಲಿ ಓದಿದರು. ಕನ್ನಡವನ್ನೆ ಸಾಕಷ್ಟು ಗೊಂದಲಮಯವಾಗಿ ಓದಿದ್ದಲ್ಲದೆ, ಅದನ್ನು ವಿವರಿಸುವಲ್ಲಿ ಅಧಿಕಾರಿ ಹಿನ್ನೆಡೆ ಕಂಡರು. ಇದರಿಂದ ಜಿಲ್ಲಾ ಪಂಚಾಯಿತಿ ಸಿಇಒ ಮಧ್ಯಪ್ರವೇಶಿಸಿದರು. ಸ್ಥಾಯಿ ಸಮಿತಿ ರಚಿಸಲು ಗುಲ್ಬರ್ಗ ಜಿಲ್ಲಾ ಪಂಚಾಯಿತಿಯಲ್ಲಿ ಅಂಗೀಕರಿಸಲಾದ ನಿಯಮಗಳನ್ನು ಸಭೆಗೆ ಮನವರಿಕೆ ಮಾಡಿದರು.ಸ್ಥಾಯಿ ಸಮಿತಿ ಸದಸ್ಯರನ್ನು ಬಹುಮತದಿಂದ ಆಯ್ಕೆಮಾಡಲು ಯಾವುದೇ ವಿರೋಧವಿಲ್ಲ ಎಂದು ಬಿಜೆಪಿ ಸದಸ್ಯರು ಸ್ಪಷ್ಟಪಡಿಸಿದರು. `ಅವಿರೋಧ ಆಯ್ಕೆಗೆ ನಾವು ಸಮ್ಮಿತಿಸುವುದಿಲ್ಲ. ಚುನಾವಣೆ ಮೂಲಕವೆ ನಿಯಮದ ಪ್ರಕಾರ ಸದಸ್ಯರನ್ನು ಆಯ್ಕೆಗೊಳಿಸಬೇಕು~ ಎಂದು ಹರ್ಷಾನಂದ ಗುತ್ತೇದಾರ ಹೇಳಿದರು.ಸರ್ವಾನುಮತದ ಆಯ್ಕೆಗೆ ನಿಯಮದಲ್ಲಿ ಅವಕಾಶವಿದೆ. ಆದರೆ ಚುನಾವಣೆ ನಡೆಸಲು ಆಗುವುದಿಲ್ಲ. ಏಕೆಂದರೆ ಗುಲ್ಬರ್ಗ ಜಿಪಂ ಅನುಮೋದಿಸಿದ ನಿಯಮಗಳನ್ನು ರಾಜ್ಯ ಸರ್ಕಾರಕ್ಕೆ ಕಳುಹಿಸಿ ಅನುಮೋದನೆ ಪಡೆದುಕೊಳ್ಳಲಾಗುವುದು. ಸರ್ಕಾರದ ನಿರ್ದೇಶನದಂತೆ ಆನಂತರ ಚುನಾವಣೆಗೆ ಅವಕಾಶ ನೀಡಲಾಗುವುದು ಎಂದು ಸಿಇಒ ತಿಳಿಸಿದರು.`ಪ್ರತಿ ಸಲದಂತೆ ಈ ಬಾರಿಯೂ ಸ್ಥಾಯಿ ಸಮಿತಿ ರಚಿಸುವ ಅಧಿಕಾರವನ್ನು ಅಧ್ಯಕ್ಷರಿಗೆ ಬಿಟ್ಟು ಕೊಡಬೇಕು~ ಎಂದು ಪೂಜಾ ಲೋಹಾರ ಮಾಡಿದ ಪ್ರಸ್ತಾಪಕ್ಕೆ ಯಾವುದೇ ಸಹಮತ ವ್ಯಕ್ತವಾಗಲಿಲ್ಲ.`ಸರ್ವಾನುಮತ ಇಲ್ಲದಿದ್ದರೆ ಚುನಾವಣೆ ನಡೆಸಬಹುದು ಎನ್ನುವ ಸ್ಪಷ್ಟ ಉಲ್ಲೇಖ ನಿಯಮದಲ್ಲೆ ಇರುವುದರಿಂದ ಚುನಾವಣೆ ನಡೆಸಬೇಕು. ಜೆಡಿಎಸ್, ಕಾಂಗ್ರೆಸ್ ಎರಡೂ ಪಕ್ಷದಿಂದಲೂ ಚುನಾವಣೆ ಬೇಡಿಕೆ ಇದೆ. ಅನಗತ್ಯವಾಗಿ ಸ್ಥಾಯಿ ಸಮಿತಿ ರಚನೆಯನ್ನು ವಿಳಂಬ ಮಾಡಬಾರದು~ ಎಂದು ಹರ್ಷಾನಂದ್ ಗುತ್ತೇದಾರ ಕೋರಿದರು.`ಚುನಾವಣೆ ನಡೆಸಿ, ಕೋರ್ಟ್‌ನಿಂದ ಸಮನ್ಸ್ ಪಡೆಯಲು ಸಾಧ್ಯವಿಲ್ಲ~ ಎಂದು ಸಿಇಒ ಪಲ್ಲವಿ ವಿಷಯವನ್ನು ಸರ್ಕಾರಕ್ಕೆ ರವಾನಿಸಲಾಗುವುದು ಎಂದು ಮಾತು ಮುಗಿಸಿದರು.ಸರ್ಕಾರದಿಂದ ಮರಳಿ ನಿರ್ದೇಶನ ಬರುವ ಹೊತ್ತಿಗೆ ಎರಡು ತಿಂಗಳಾಗಬಹುದು. ಹೀಗಾಗಿ ಇದನ್ನು ವಿಶೇಷವೆಂದು ಪರಿಗಣಿಸಿ ಮೂರು ದಿನದಲ್ಲಿ ಸರ್ಕಾರದಿಂದ ಮಾಹಿತಿ ಪಡೆದು, ಎಲ್ಲ ಸದಸ್ಯರಿಗೂ ಆ ಸುತ್ತೋಲೆಯನ್ನು ತಲಪಿಸಬೇಕು ಎಂದು ಸದಸ್ಯರು ಅಧಿಕಾರಿಗಳಿಗೆ ಸೂಚನೆ ನೀಡಿದರು.ಅನುದಾನ ಲೆಕ್ಕಾಚಾರ:ಈ ಮೊದಲು ಜಿಲ್ಲಾ ಪಂಚಾಯಿತಿ ಅಧ್ಯಕ್ಷರ ಅನುದಾನ ಎಂದು ರಾಜ್ಯ ಸರ್ಕಾರ ನೀಡುತ್ತಿದ್ದ ಅನುದಾನವು ಇದೀಗ `ಜಿಲ್ಲಾ ಪಂಚಾಯಿತಿ ಅಭಿವೃದ್ಧಿ ಅನುದಾನ~ ಎಂದು ಹೆಸರು ಬದಲಾಗಿದೆ. 2012-13ನೇ ಸಾಲಿನ ರೂ 2 ಕೋಟಿ ಕ್ರಿಯಾಯೋಜನೆಯಲ್ಲಿ ರಾಜ್ಯ ಸರ್ಕಾರವು ರೂ 50 ಲಕ್ಷ ಅನುದಾನ ಬಿಡುಗಡೆಗೊಳಿಸಿತ್ತು.ಹೀಗಾಗಿ ಕಳೆದ ಸಾಮಾನ್ಯ ಸಭೆಯ ತೀರ್ಮಾನದಂತೆ ರೂ 50 ಲಕ್ಷದ ಕಾಮಗಾರಿಗಳನ್ನು ಮಾತ್ರ ಕೈಗೊಳ್ಳಲಾಗಿದ್ದು, ಇನ್ನುಳಿದ ರೂ 1.5 ಕೋಟಿ ಕ್ರಿಯೋಯೋಜನೆಯನ್ನು ಕೈಬಿಡಲಾಗಿದೆ. ಸರ್ಕಾರವು ಮತ್ತೆ ರೂ 50 ಲಕ್ಷ ಬಿಡುಗಡೆ ಮಾಡಿದ್ದು, ಜಿಲ್ಲಾ ಪಂಚಾಯಿತಿ ಸದಸ್ಯರು ಈ ಬಗ್ಗೆ ನಿರ್ಧಾರ ಕೈಗೊಂಡಿದ್ದನ್ನು ಅನುಷ್ಠಾನಗೊಳಿಸಲಾಗುವುದು ಎಂದು ಅಧಿಕಾರಿಗಳು ಸಭೆಗೆ ತಿಳಿಸಿದರು.`ದೀಪಕನಾಗ್ ಪುಣ್ಯಶೆಟ್ಟಿ ಅಧ್ಯಕ್ಷರಾಗಿದ್ದಾಗ ಎರಡು ಕೋಟಿ ಅನುದಾನದ ಕ್ರಿಯಾಯೋಜನೆ ರೂಪಿಸಲಾಗಿತ್ತು. ಹೀಗಾಗಿ ಅದರಲ್ಲಿ ಕನಿಷ್ಠ ರೂ 1 ಕೋಟಿ ಕ್ರಿಯಾಯೋಜನೆಗೆ ಅನುದಾನ ಒದಗಿಸಬೇಕು. ಇನ್ನುಳಿದ ಒಂದು ಕೋಟಿಗೆ ಹೊಸ ಕ್ರಿಯಾಯೋಜನೆ ಸಿದ್ಧಪಡಿಸಿ~ ಎಂದು ಜಿಪಂ ಮಾಜಿ ಉಪಾಧ್ಯಕ್ಷ ನಿತೀನ್ ಗುತ್ತೇದಾರ ಸಭೆಗೆ ಮನವಿ  ಮಾಡಿದರು.ಬಸವರಾಜ ಪಾಟೀಲ ಸೇರಿದಂತೆ ಅನೇಕ ಸದಸ್ಯರು ಇದಕ್ಕೆ ವಿರೋಧ ವ್ಯಕ್ತಪಡಿಸಿದರು. ಹಿಂದಿನ ಅಧ್ಯಕ್ಷರ ಅವಧಿಯಲ್ಲಾದ ಕ್ರಿಯಾಯೋಜನೆಗೆ ರೂ 50 ಲಕ್ಷ ಅನುದಾನ ನೀಡಿದ್ದು ಸಾಕು; ಇನ್ನುಳಿದ ರೂ 1.5 ಕೋಟಿ ಅನುದಾನವನ್ನು ಎಲ್ಲ ಸದಸ್ಯರಿಗೂ ಸಮವಾಗಿ ಹಂಚಿಕೆ ಮಾಡಬೇಕು ಎಂದು ಸಿದ್ಧರಾಮ ಪ್ಯಾಟಿ ಸೇರಿದಂತೆ ಅನೇಕ ಸದಸ್ಯರು ಒತ್ತಾ           ಯಿಸಿದರು.`ಹೊಸದಾಗಿ ಬಂದಿರುವ ರೂ 50 ಲಕ್ಷ ಅನುದಾನವನ್ನು ಹಿಂದಿನ ಕ್ರಿಯಾಯೋಜನೆಗೆ ನೀಡೋಣ. ರೂ 1 ಕೋಟಿ ಅನುದಾನವನ್ನು ಆಡಳಿತಾರೂಢ ಬಿಜೆಪಿ ಸದಸ್ಯರಿಗೆ ಮಾತ್ರ ಹಂಚಿಕೆ ಮಾಡೋಣ~ ಎನ್ನುವ ಸಲಹೆಯೂ ವ್ಯಕ್ತವಾಯಿತು. ಒಟ್ಟಾರೆ ಅಭಿವೃದ್ಧಿ ಅನುದಾನದಲ್ಲಿ ಸಹಜವಾಗಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಿಗೆ ಹೆಚ್ಚಿನ ಪ್ರಮಾಣದ ಅನುದಾನ ನೀಡಬೇಕು ಎನ್ನುವುದಕ್ಕೆ ಎಲ್ಲರೂ ಸಹಮತ ಸೂಚಿಸಿದರು.ರೂ 1.5 ಕೋಟಿ ಅನುದಾನದಲ್ಲಿ ಅಧ್ಯಕ್ಷ, ಉಪಾಧ್ಯಕ್ಷರಿಗೆ ಎಷ್ಟು ಮೀಸಲಿಡಬೇಕು ಎನ್ನುವ ಬಗ್ಗೆ ಸಾಕಷ್ಟು ಜಿದ್ದಾಜಿದ್ದಿ ಲೆಕ್ಕಾಚಾರಗಳು ವ್ಯಕ್ತವಾದವು. `ಅಧ್ಯಕ್ಷ, ಉಪಾಧ್ಯಕ್ಷರಿಗೆ ರೂ 15 ಲಕ್ಷ ಕೊಟ್ಟು, ಉಳಿದೆಲ್ಲ ಅನುದಾನವನ್ನು ಸದಸ್ಯರಿಗೆ ಹಂಚಿಕೆ ಮಾಡೋಣ~ ಎಂದು ಒಂದು ಗುಂಪು ವಾದಿಸಿತು.ಇದಕ್ಕೆ ನಿರಾಕರಣೆ ವ್ಯಕ್ತಪಡಿಸಿದ ಅಧ್ಯಕ್ಷ ಶರಣಪ್ಪ ಪೊಲೀಸ್ ಪಾಟೀಲ, `ಎಷ್ಟೆ ಅನುದಾನ ದೊರೆತರೂ ಅದನ್ನು ಕ್ಷೇತ್ರದಲ್ಲಿನ ಅಭಿವೃದ್ಧಿ ಕಾಮಗಾರಿಗೆ ವಿನಿಯೋಗಿಸಲಾಗುವುದು. ರೂ 15 ಲಕ್ಷ ಬಹಳ ಕಡಿಮೆಯಾಯಿತು~ ಎಂದರು. ಅನುದಾನ ಹಂಚಿಕೆ ಸಂಬಂಧ ನಡೆದ ಲೆಕ್ಕಾಚಾರ ಮಾತುಗಳಿಂದಾಗಿ ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯು ತರಕಾರಿ ಮಾರುಕಟ್ಟೆಯಾಗಿ ಮಾರ್ಪಟ್ಟಿತು.`ಜಿಲ್ಲಾ ಪಂಚಾಯಿತಿ 42 ಸದಸ್ಯರಿಗೆ ತಲಾ ರೂ 3.5 ಲಕ್ಷ ಅನುದಾನ ನೀಡಲಾಗುವುದು. ಇನ್ನುಳಿದ ರೂ 27 ಲಕ್ಷವನ್ನು ಅಧ್ಯಕ್ಷ, ಉಪಾಧ್ಯಕ್ಷರಿಗೆ ತೆಗೆದಿಡಲಾಗುವುದು~ ಎಂದು ಅಧ್ಯಕ್ಷರು ಹೊರಡಿಸಿದ ಅಂತಿಮ ಸೂಚನೆಯನ್ನುಎಲ್ಲರೂ ಒಪ್ಪಿಕೊಂಡರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.