ಬುಧವಾರ, ಅಕ್ಟೋಬರ್ 16, 2019
28 °C

ಅಭಿವೃದ್ಧಿ ಕಾಮಗಾರಿ ನೆನೆಗುದಿಗೆ: ಸದಸ್ಯರ ಅಸಮಾಧಾನ

Published:
Updated:
ಅಭಿವೃದ್ಧಿ ಕಾಮಗಾರಿ ನೆನೆಗುದಿಗೆ: ಸದಸ್ಯರ ಅಸಮಾಧಾನ

ಚಾಮರಾಜನಗರ: ಗುಂಡಿ ತೋಡಿದ್ದರೂ ಸಸಿ ನೀಡಿಲ್ಲ. ವರ್ಷಗಳೇ ಉರುಳಿದರೂ ರಸ್ತೆ, ಚರಂಡಿ, ಓವರ್‌ಹೆಡ್ ಟ್ಯಾಂಕ್ ಕಾಮಗಾರಿ ಪೂರ್ಣಗೊಂಡಿಲ್ಲ. ಜನರಿಗೆ ಉತ್ತರ ನೀಡುವುದೇ ಕಷ್ಟವಾಗಿದೆ. ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಜನಪ್ರತಿನಿಧಿಗಳು ತಲೆತಗ್ಗಿಸುವಂತಾಗಿದೆ!-ಹೀಗೆಂದು ಅಳಲು ತೋಡಿಕೊಂಡಿದ್ದು, ಜಿಲ್ಲಾ ಪಂಚಾ ಯಿತಿ ಸದಸ್ಯರು. ನಗರದ ಜಿ.ಪಂ. ಕೆಡಿಪಿ ಸಭಾಂಗಣದಲ್ಲಿ ಗುರುವಾರ ನಡೆದ ಮುಂದುವರಿದ ಸಾಮಾನ್ಯ ಸಭೆಯಲ್ಲಿ ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮ ಮತ್ತು ಸಾಮಾಜಿಕ ಅರಣ್ಯ ಇಲಾಖೆಯ ಕಾರ್ಯವೈಖರಿಗೆ ಸದಸ್ಯರಿಂದ ಅಸಮಾಧಾನ ವ್ಯಕ್ತವಾಯಿತು. ಅನುದಾನ ಬಿಡುಗಡೆಯಾಗಿದ್ದರೂ ಸಮರ್ಪಕ ಕೆಲಸವಾಗುತ್ತಿಲ್ಲ ಎಂದು ಅಧಿಕಾರಗಳತ್ತ ಬೊಟ್ಟು ಮಾಡಿದರು. 
ಚಿಕ್ಕಲ್ಲೂರು ಜಾತ್ರೆ:     ಕುಡಿಯುವ ನೀರಿಗೆ ಕ್ರಮ

ಚಾಮರಾಜನಗರ: ಕೊಳ್ಳೇಗಾಲ ತಾಲ್ಲೂಕಿನ ಚಿಕ್ಕಲ್ಲೂರು ಗ್ರಾಮದಲ್ಲಿ ಜ. 9ರಿಂದ ಆರಂಭವಾಗುವ ಜಾತ್ರೆಗೆ ಕುಡಿಯುವ ನೀರು ಪೂರೈಕೆ ಮಾಡುವ ವಿಷಯದ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.`ದೇವಸ್ಥಾನದ ಪಕ್ಕ ಹರಿಯುತ್ತಿದ್ದ ಹಳ್ಳ ಬತ್ತಿ ಹೋಗಿದೆ. ಇದರಿಂದ ಲಕ್ಷಾಂತರ ಮಂದಿ ಭಕ್ತರು ನೀರಿಗಾಗಿ ತೊಂದರೆ ಅನುಭವಿಸಲಿದ್ದಾರೆ. ಸಮರ್ಪಕವಾಗಿ ಕುಡಿಯುವ ನೀರು ಪೂರೈಕೆಗೆ ಕ್ರಮಕೈಗೊಳ್ಳಬೇಕು~ ಎಂದು ಸದಸ್ಯ ದೇವರಾಜು ಒತ್ತಾಯಿಸಿದರು.

ಉಪ ಕಾರ್ಯದರ್ಶಿ ಗೂಡೂರು ಭೀಮಸೇನ ಮಾತನಾಡಿ, `ಈಗಾಗಲೇ, ಚಿಕ್ಕಲ್ಲೂರಿಗೆ ಭೇಟಿ ನೀಡಿ ಪರಿಶೀಲಿಸಲಾಗಿದೆ. ಭಕ್ತರಿಗೆ ಶುದ್ಧ ಕುಡಿಯುವ ನೀರು ಪೂರೈಸಲು ಕ್ರಮಕೈಗೊಳ್ಳಲಾಗುವುದು~ ಎಂದು ಹೇಳಿದರು.

ಸದಸ್ಯ ಕೆ. ಈಶ್ವರ್ ಮಾತನಾಡಿ, `ಕೊಳ್ಳೇಗಾಲ ತಾಲ್ಲೂಕಿನ ಸಂಗನಪಾಳ್ಯದಲ್ಲಿ ಕುಡಿಯುವ ನೀರಿಗೆ ತೊಂದರೆಯಿದೆ. ಕೃಷಿ ಪಂಪ್‌ಸೆಟ್ ಹೊಂದಿರುವ ರೈತರಿಗೆ ಪ್ರತಿನಿತ್ಯವೂ 10 ರೂ ನೀಡಿ ಜನರು ನೀರು ಪಡೆಯುತ್ತಿದ್ದಾರೆ. ಮಾರ್ಟಳ್ಳಿ, ಕೊತ್ತನಹುಂಡಿ ಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. ಆದರೆ, ಈ ಗ್ರಾಮಗಳಲ್ಲಿ ಓವರ್‌ಹೆಡ್ ಟ್ಯಾಂಕ್ ಮೂಲಕ ಕುಡಿಯುವ ನೀರು ಪೂರೈಸುವ ಕಾಮಗಾರಿಯೇ ಪೂರ್ಣಗೊಂಡಿಲ್ಲ. ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮದ ಅಧಿಕಾರಿಗಳ ನಿರ್ಲಕ್ಷ್ಯದ ಪರಿಣಾಮ ಗ್ರಾಮೀಣರು ತೊಂದರೆ ಅನುಭವಿಸುವಂತಾಗಿದೆ~ ಎಂದು ದೂರಿದರು.ಸ್ವಜಲಧಾರೆ ಯೋಜನೆಯಡಿ ಕುಡಿಯುವ ನೀರು ಪೂರೈಕೆ ಗಾಗಿ ವಿದ್ಯುತ್ ಸಂಪರ್ಕ ಪಡೆಯಲು ಸೆಸ್ಕ್‌ಗೆ ಶುಲ್ಕ ಪಾವತಿಸ ಲಾಗಿದೆ. 5 ವರ್ಷ ಕಳೆದರೂ ಸಂಪರ್ಕ ಕಲ್ಪಿಸಿಲ್ಲ. ಈಗಾಗಲೇ, ಕೊಳವೆಬಾವಿಯಲ್ಲೂ ಅಂತರ್ಜಲಮಟ್ಟ ಕುಸಿದಿದೆ~ ಎಂದು ಸಭೆಯ ಗಮನ ಸೆಳೆದರು.ಸದಸ್ಯ ಡಿ. ದೇವರಾಜು ಮಾತನಾಡಿ, `ನನ್ನ ಕ್ಷೇತ್ರದ ವ್ಯಾಪ್ತಿಯಲ್ಲೂ ಅಭಿವೃದ್ಧಿ ಕಾಮಗಾರಿ ನಿರ್ವಹಿಸಲು ನಿಗಮಕ್ಕೆ ಉಸ್ತುವಾರಿ ನೀಡಲಾಗಿದೆ. ಆದರೆ, ಕಾಮಗಾರಿಯೇ ಪೂರ್ಣಗೊಂಡಿಲ್ಲ~ ಎಂದು ಆರೋಪಿಸಿದರು.`ಚಾಮರಾಜನಗರ ತಾಲ್ಲೂಕಿನ ಕೊತ್ತಲವಾಡಿ ಗ್ರಾಮದಲ್ಲಿ ಕುಡಿಯುವ ನೀರು ಪೂರೈಕೆ ಕಾಮಗಾರಿಯನ್ನೂ ನಿಗಮಕ್ಕೆ ವಹಿಸಲಾಗಿದೆ. ಗ್ರಾಮದೇವತೆ ಜಾತ್ರೆ ನಡೆಯುವ ಹಿನ್ನೆಲೆ ಯಲ್ಲಿ ತುರ್ತಾಗಿ ಕಾಮಗಾರಿ ಪೂರ್ಣಗೊಳಿಸಲು ಸೂಚಿಸ ಬೇಕು~ ಎಂದು ಸದಸ್ಯ ಎ.ಸಿ. ರಾಜಶೇಖರ್ ಅಧ್ಯಕ್ಷರಿಗೆ ಕೋರಿದರು.`ತಮ್ಮಡಹಳ್ಳಿ ಶಾಲೆಯಲ್ಲಿ ಹೊಸ ಟ್ಯಾಂಕ್ ನಿರ್ಮಾಣಕ್ಕೆ ವಿಳಂಬ ಮಾಡಲಾಗುತ್ತಿದೆ~ ಎಂದು ಸದಸ್ಯೆ ಜಿ. ನಾಗಶ್ರೀ ದೂರಿದರು.ಇದಕ್ಕೆ ನಿಗಮದ ಅಧಿಕಾರಿ ಪ್ರತಿಕ್ರಿಯಿಸಿ, `ಬಿಡುಗಡೆ ಯಾಗಿರುವ ಅನುದಾನದಡಿ ಕೆಲಸ ನಿರ್ವಹಿಸಲಾಗಿದೆ. ಕೆಲವೆಡೆ ಅಂಗನವಾಡಿ ಕೇಂದ್ರಗಳ ನಿರ್ಮಾಣಕ್ಕೆ ನಿವೇಶನ ಲಭಿಸಿಲ್ಲ. ಹೀಗಾಗಿ, ಕಾಮಗಾರಿ ಆರಂಭಗೊಂಡಿಲ್ಲ. ಬಾಕಿ ಇರುವ ಕಾಮಗಾರಿಗಳನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಲಾಗುವುದು~ ಎಂದು ಸಭೆಗೆ ತಿಳಿಸಿದರು.ಉಪ ಕಾರ್ಯದರ್ಶಿ ಗೂಡೂರು ಭೀಮಸೇನ ಮಾತನಾಡಿ, `ಸರ್ಕಾರದಿಂದ ಬಿಡುಗಡೆಯಾದ ಅನುದಾನವನ್ನು ನಿಗದಿತ ಅವಧಿಯೊಳಗೆ ಖರ್ಚು ಮಾಡಿ ಅನುದಾನ ಬಳಕೆಯ ಪತ್ರ ಸಲ್ಲಿಸಬೇಕು. ಇಲ್ಲವಾದರೆ ಉಳಿದ ಅನುದಾನ ಬಿಡುಗಡೆ ಯಾಗುವುದಿಲ್ಲ. ಈಗಾಗಲೇ, ಕಾಮಗಾರಿ ವಿಳಂಬದ ಬಗ್ಗೆ ಸದಸ್ಯರು ಗಮನಕ್ಕೆ ತಂದಿದ್ದಾರೆ. ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಲು ನಿಗಮದ ಅಧಿಕಾರಿಗಳು ಕ್ರಮವಹಿಸ ಬೇಕು~ ಎಂದು ಸೂಚಿಸಿದರು.ಸಸಿ ನೀಡಿಲ್ಲ: ಸಾಮಾಜಿಕ ಅರಣ್ಯ ಇಲಾಖೆಯಡಿ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ ರೈತರಿಗೆ ಗುಂಡಿ ತೆಗೆಸಿ ಸಸಿ ನೀಡದಿರುವ ವಿಷಯ ಚರ್ಚೆಗೆ ಗ್ರಾಸವಾಯಿತು.ಸದಸ್ಯೆ ಜಿ. ನಾಗಶ್ರೀ ಮಾತನಾಡಿ, ಉದ್ಯೋಗ ಖಾತ್ರಿ ಯೋಜನೆಯಡಿ ಮಾದಾಪುರ ಕ್ಷೇತ್ರದಲ್ಲಿ ಸಸಿ ನೆಡಲು ಗುಂಡಿ ತೆಗೆಸಲಾಗಿದೆ. ಆದರೆ, ರೈತರಿಗೆ ಇಂದಿಗೂ ಸಸಿ ನೀಡಿಲ್ಲ. ಇದಕ್ಕೆ ಹೊಣೆ ಯಾರು? ವಿದ್ಯಾರ್ಥಿಗೊಂದು ಸಸಿ; ಶಾಲೆಗೊಂದು ವನ ಯೋಜನೆಯಡಿ ಎಷ್ಟು ಸಸಿ ವಿತರಿಸಲಾಗಿದೆ? ಎಂದು ಪ್ರಶ್ನಿಸಿದರು.ಸದಸ್ಯ ದೇವರಾಜು ಮಾತನಾಡಿ, `ವಿದ್ಯಾರ್ಥಿಗಳಿಗೆ ಸಸಿ ವಿತರಿಸುವ ಬಗ್ಗೆ ಪ್ರಚಾರ ಕೂಡ ನಡೆಸಿಲ್ಲ. ವಿಶಾಲ ಅಂಗಳ ಇರುವ ಶಾಲೆಗಳನ್ನು ಪರಿಗಣಿಸಿಲ್ಲ~ ಎಂದು ದೂರಿದರು.ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಪಿ. ರಾಜು ಮಾತನಾಡಿ, `ಉದ್ಯೋಗ ಖಾತ್ರಿ ಯೋಜನೆಯಡಿ ಬೆಳೆಸಿದ್ದ ಸಸಿಗಳನ್ನೇ ಆಸಕ್ತ ವಿದ್ಯಾರ್ಥಿಗಳಿಗೆ ನೀಡಲಾಗಿದೆ. ಮಕ್ಕಳಿಗೆ ಸಸಿ ನೀಡಲು ಪ್ರತ್ಯೇಕ ಅನುದಾನ ಬಿಡುಗಡೆಯಾಗಿಲ್ಲ. ಪ್ರಸಕ್ತ ಸಾಲಿನಡಿ ಸಸಿ ನೆಡಲು ಅನುದಾನ ಲಭಿಸಲಿದೆ. ಜತೆಗೆ, ಉದ್ಯೋಗ ಖಾತ್ರಿ ಯೋಜನೆಯಡಿ ಗುಂಡಿ ತೆಗೆದಿರುವ ರೈತರಿಗೂ ಸಸಿ ನೀಡಲಾಗುವುದು~ ಎಂದು ಸಭೆಗೆ ತಿಳಿಸಿದರು.ಉಪಾಧ್ಯಕ್ಷ ಎಂ. ಸಿದ್ದರಾಜು, ಸ್ಥಾಯಿಸಮಿತಿ ಅಧ್ಯಕ್ಷರಾದ ಬಿ.ಪಿ. ಪುಟ್ಟಬುದ್ಧಿ, ಕೊಪ್ಪಾಳಿ ಮಹದೇವನಾಯಕ ಇತರರು ಸಭೆಯಲ್ಲಿ ಹಾಜರಿದ್ದರು.

Post Comments (+)