ಅಭಿವೃದ್ಧಿ ಕಾರ್ಯಕ್ಕೆ ಅಸಡ್ಡೆ: ಆಕ್ಷೇಪ

7

ಅಭಿವೃದ್ಧಿ ಕಾರ್ಯಕ್ಕೆ ಅಸಡ್ಡೆ: ಆಕ್ಷೇಪ

Published:
Updated:
ಅಭಿವೃದ್ಧಿ ಕಾರ್ಯಕ್ಕೆ ಅಸಡ್ಡೆ: ಆಕ್ಷೇಪ

ರಾಯಚೂರು: ಕುಡಿಯುವ ನೀರು ಪೂರೈಕೆ, ರಸ್ತೆ ಅಭಿವೃದ್ಧಿ ಸೇರಿದಂತೆ ಹಲವಾರು ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಪ್ರತಿ ಸಭೆಯಲ್ಲಿಯೂ ಅಧಿಕಾರಿಗಳು ಅದೇ ಸಿದ್ಧ ಉತ್ತರ ಕೊಡುತ್ತಾರೆ. ಅನುಷ್ಠಾನ ಮಾತ್ರ ಸಮರ್ಪಕ ಆಗಿರುವುದಿಲ್ಲ. ಅಧಿಕಾರಿಗಳ ಅಸಡ್ಡೆ ಧೋರಣೆ ತಾಳಿದರೆ ಜನಪರ ಅಭಿವೃದ್ಧಿ ಕೆಲಸ ಆಗುವುದು ಹೇಗೆ ಎಂದು ಇಲ್ಲಿ ಮಂಗಳವಾರ ನಡೆದ ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಅನೇಕ ಸದಸ್ಯರು ಅಸಮಾಧಾನ ತೋಡಿಕೊಂಡರು.ಜಿಲ್ಲಾ ಪಂಚಾಯಿತಿ ಸಭಾಭವನದಲ್ಲಿ ಮಂಗಳವಾರ ಜಿಲ್ಲಾ ಪಂಚಾಯಿತಿ 4ನೇ ಸಾಮಾನ್ಯ ಸಭೆಯು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ತನ್ವೀರಾ ಬಷೀರುದ್ದೀನ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.ದೇವದುರ್ಗ ತಾಲ್ಲೂಕಿನಲ್ಲಿ ಎಲ್ಲ ಇಲಾಖೆಯ ಅಧಿಕಾರಿಗಳು ಯಾವುದೇ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿಲ್ಲ. ಎಲ್ಲ ಯೋಜನೆಗಳಲ್ಲಿಯೂ ಅಧಿಕಾರಿಗಳು ಲೂಟಿ ಮಾಡುತ್ತಿದ್ದಾರೆ ಎಂದು ಜಿಪಂ ಸದಸ್ಯ ದಾನಪ್ಪ ಆಲ್ಕೋಡ್ ಅವರು ಆರೋಪಿಸಿದರು.ಅವ್ಯವಹಾರದಲ್ಲಿ ತೊಡಗಿರುವ  ಅಧಿಕಾರಿಗಳ ವಿರುದ್ಧ ಸೂಕ್ತ ತನಿಖೆ ನಡೆಸಬೇಕು. ಈ ತನಿಖೆಗೆ ಸಮಿತಿ ರಚನೆ ಮಾಡಬೇಕು. ಇಂಥ ಅಧಿಕಾರಿಗಳ ವಿರುದ್ಧ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ  ಅಧಿಕಾರಿಗಳೇ ಕ್ರಿಮಿನಲ್ ಮೊಕದ್ದಮೆ ಹೂಡಬಾರದೇಕೆ ಎಂದು ಪ್ರಶ್ನಿಸಿದರು.ಎಲ್ಲ ಕಾಮಗಾರಿಗಳ ಬಗ್ಗೆ ತನಿಖೆ ನಡೆಸಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಮನೋಜ್ ಜೈನ್ ಅವರು ಸಭೆಗೆ ತಿಳಿಸಿದರು.ಕುಡಿಯುವ ನೀರಿನ ಸಮಸ್ಯೆಗಳ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಯಾವುದೇ  ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ. ಕುಡಿಯುವ ನೀರಿನ ಯೋಜನೆ ಅನುಷ್ಠಾನಗೊಳಿಸದ ಅಧಿಕಾರಿಗಳು ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ವಿಶ್ವನಾಥ ಪಾಟೀಲ್ ಅವರು ಸಭೆಗೆ ಒತ್ತಾಯಿಸಿದರು.ಶಾಸಕ ಪ್ರತಾಪಗೌಡ ಪಾಟೀಲ್ ಮಾತನಾಡಿ, ಅಧಿಕಾರಿಗಳು ಕಾಮಗಾರಿ ಪೂರ್ಣಗೊಳಿಸಲು ದಿನಾಂಕವನ್ನು ನಿಗದಿಪಡಿಸುತ್ತಾರೆ. ಆದರೆ, ಮುಂದಿನ ಸಾಮಾನ್ಯ ಸಭೆ ಬಂದರೂ ಯೋಜನೆಗಳ ಅನುಷ್ಠಾನ ಹಾಗೂ ಕಾಮಗಾರಿಗಳ ಪ್ರಗತಿ ಕಂಡುಬರುವುದಿಲ್ಲ. ಕುಡಿಯುವ ನೀರು ಸೇರಿದಂತೆ ಅನೇಕ ಕಾಮಗಾರಿ ಅನುಷ್ಠಾನಗೊಳಿಸದೇ ನಿರ್ಲಕ್ಷ್ಯವಹಿಸುವ ಅಧಿಕಾರಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು ಎಂದು ಸಭೆಗೆ ತಿಳಿಸಿದರು.ಮಾನ್ವಿ ತಾಲ್ಲೂಕಿನ ಕವಿತಾಳ ಗ್ರಾಮಕ್ಕೆ ಕುಡಿಯುವ ನೀರು ಪೂರೈಕೆಗೆ ಸಂಬಂಧಿಸಿದಂತೆ 80 ಲಕ್ಷರೂಪಾಯಿಗಳ ಅನುದಾವನ್ನು ಬಿಡುಗಡೆ ಮಾಡಲಾಗಿದೆ. ಆದರೆ, ಕಾಮಗಾರಿಗಳನ್ನು ಪೂರ್ಣಗೊಳಿಸಿಲ್ಲ.ಕಳೆದ ಸಭೆಯಲ್ಲಿ 15ದಿನದೊಳಗಾಗಿ  ಪೈಪ್ ಜೋಡಣೆ ಸೇರಿದಂತೆ ಕಾಮಗಾರಿ ಪೂರ್ಣಗೊಳಿಸುವುದಾಗಿ ಅಧಿಕಾರಿಗಳು ತಿಳಿಸಿದ್ದರು. ಆದರೆ, ಇದುವರೆಗೂ ಕಾಮಗಾರಿಯನ್ನು ಪೂರ್ಣಗೊಳಿಸಿಲ್ಲ. ಇದರಿಂದ ಕ್ಷೇತ್ರದ ಜನತೆಗೆ ಕುಡಿಯುವ ನೀರಿನ ಸಮಸ್ಯೆಯಾಗಿದೆ. ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಸದಸ್ಯೆ ಶಾಂತಮ್ಮ ಅವರು ಸಭೆಗೆ ಆಗ್ರಹಿಸಿದರು.ಕುಡಿಯುವ ನೀರು ಪೂರೈಕೆಗೆ ಸಂಬಂಧಿಸಿದಂತೆ ಪಾಲನಾ ವರದಿಯಲ್ಲಿ ಕಾಮಗಾರಿಗಳು ಪೂರ್ಣಗೊಳಿಸಿ ಗ್ರಾಮ ಪಂಚಾಯಿತಿಗೆ ಹಸ್ತಾಂತರಿಸಲಾಗಿದೆ ಎಂಬುದನ್ನು ಭೂಸೇನೆ ನಿಗಮದ ಉಪನಿರ್ದೇಶಕರು ವರದಿ ಸಲ್ಲಿಸಿದ್ದಾರೆ.

 

ಆದರೆ, ಕಾಮಗಾರಿಗಳು ಪೂರ್ಣಗೊಂಡಿಲ್ಲ. ಈ ಬಗ್ಗೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ತಾವು ಕಾಮಗಾರಿಗಳ ಕುರಿತು ಪರಿಶೀಲನೆ ನಡೆಸಬೇಕು ಎಂದು ಜಿಪಂ ಸದಸ್ಯ ವಿಶ್ವನಾಥ ಪಾಟೀಲ್ ಅವರು ಒತ್ತಾಯಿಸಿದರು.ಜಿಪಂ ಸಿಇಒ ಮನೋಜ್ ಜೈನ್ ಮಾತನಾಡಿ, ಕುಡಿಯುವ ನೀರು ಪೂರೈಕೆಗೆ ಕಾಮಗಾರಿ ಬಗ್ಗೆ ಸಂಬಂಧಪಟ್ಟ ಸದಸ್ಯರು ದಿನಾಂಕವನ್ನು ನಿಗದಿಪಡಿಸಿದ ದಿನದಂತೆ ಕಾಮಗಾರಿ ಪರಿಶೀಲನೆ ಮಾಡಲಾಗುವುದು ಎಂದು ಸಭೆಗೆ ತಿಳಿಸಿದರು.ಅಧಿಕಾರಿಗಳಿಗೆ ಜಿಪಂ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳ ಭಯವಿಲ್ಲ. ಹೀಗಾಗಿ ಯಾವುದೇ ಯೋಜನೆ ಅನುಷ್ಠಾನಗೊಳ್ಳವಲ್ಲಿ ನಿರ್ಲಕ್ಷ್ಯವಹಿಸುತ್ತಿದ್ದಾರೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಜಿಪಂ ಸದಸ್ಯ ಹನುಮೇಶ ಮದ್ಲಾಪುರ ಅವರು ಸಭೆಗೆ ತಿಳಿಸಿದರು.ಅತ್ತನೂರು ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಹಾಗೂ ಮುಖ್ಯಾಧ್ಯಾಪಕ ಹಣ ದುರ್ಬಳಕೆ ವಿರುದ್ಧ ಶಿಕ್ಷಣ ಇಲಾಖೆಯ ಯಾವು ಕ್ರಮ ಕೈಗೊಂಡಿದೆ ಹಾಗೂ ಶಾಲಾ ಖಾಲಿರುವ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಬೇಕು.ಶಾಲೆಯಲ್ಲಿರುವ ಶಿಕ್ಷಕರನ್ನು ಎರವಲು ಸೇವೆಗೆ ನಿಯೋಜಿಸಬಾರದು ಎಂದು ಮಾನ್ವಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಪಂಪನಗೌಡ ನೀರಮಾನ್ವಿ ಅವರು ಸಭೆಗೆ ತಿಳಿಸಿದರು.ಅತ್ತನೂರು ಗ್ರಾಮ ಪ್ರಾಥಮಿಕ ಶಾಲೆಯ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಮುಖ್ಯಾಧ್ಯಾಪಕರನ್ನು ಅಮಾನತ್‌ಗೊಳಿಸಲಾಗಿದೆ. ಎಸ್‌ಡಿಎಂಸಿ ಅಧ್ಯಕ್ಷರ ವಿರುದ್ಧ ಪೊಲೀಸ್ ಪ್ರಕರಣ ದಾಖಲಿಸಲಾಗಿದೆ ಎಂದು ಡಿಡಿಪಿಐ ಅಮೃತ್ ಬೆಟ್ಟದ್ ಅವರು ಸಭೆಗೆ ತಿಳಿಸಿದರು.ಕುರ್ಡಿ ಹಾಗೂ ಕಲ್ಲೂರು ಶಾಲೆಗಳಲ್ಲಿ  ಶಿಕ್ಷಕರ ಕೊರತೆಯಿಂದ ಮಕ್ಕಳ ಶಿಕ್ಷಣಕ್ಕೆ ಸಮಸ್ಯೆ ಎದುರಾಗಬಹುದಾಗಿದೆ. ಈ ಕಾರಣದಿಂದಾಗಿ ಸೂಕ್ತ ಕ್ರಮ ಕೈಗೊಳ್ಳಬೇಕು ಕುರ್ಡಿ ಜಿಪಂ ಸದಸ್ಯೆ ಕೆ.ಕಮಲಾಕ್ಷಮ್ಮ ಅವರು ಸಭೆಗೆ  ತಿಳಿಸಿದರು.ಶಿಕ್ಷಕ ಕೊರತೆ ಸರಿಪಡಿಸಲು ಕ್ರಮ ಕೈಗೊಳ್ಳಲಾಗುವುದು ಡಿಡಿಪಿಐ ಅವರು ಸಭೆಗೆ ತಿಳಿಸಿದರು.ಜಿಪಂ ಉಪಾಧ್ಯಕ್ಷೆ ಹರ್ಷಿತಾ ಜಗನ್ನಾಥರಾಯ, ಸದಸ್ಯರಾದ ಡಿ.ಅಚ್ಚುತ್‌ರೆಡ್ಡಿ, ಕೆ.ಶರಣಪ್ಪ, ಅಸ್ಲಂಪಾಷಾ, ಜಾಫರ್ ಅಲಿ ಪಟೇಲ್, ಮಹಾದೇವಪ್ಪ, ಪ್ರಕಾಶ ಪಾಟೀಲ್, ಎಚ್.ಬಿ ಮುರಾರಿ, ಉಮಾದೇವಿ ಹುಲಿರಾಜ್, ಗೋಪಾಲ ನಾಯಕ, ಬಸಮ್ಮ ಕುಂಟೋಜಿ ಹಾಗೂ ಇತರ ಸದಸ್ಯರು ಸಭೆಯಲ್ಲಿ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry