ಶುಕ್ರವಾರ, ಮೇ 14, 2021
31 °C

`ಅಭಿವೃದ್ಧಿ ಕಾರ್ಯ ಅನುಷ್ಠಾನ: ಸಮನ್ವಯ ಅಗತ್ಯ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾವೇರಿ: `ವಿವಿಧ ಇಲಾಖೆಗಳ ಜತೆಯಲ್ಲಿ ಬ್ಯಾಂಕಿಂಗ್ ವ್ಯವಸ್ಥೆ ಮಧ್ಯೆ ಉತ್ತಮ ಸಂಯೋಜನೆ ಇದ್ದಾಗ ಮಾತ್ರ ಅಭಿವೃದ್ಧಿ ಕಾರ್ಯಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲು ಸಾಧ್ಯವಾಗುತ್ತದೆ' ಎಂದು ಸಂಸದ ಶಿವಕುಮಾರ ಉದಾಸಿ ಹೇಳಿದರು.ನಗರದ ಜಿಲ್ಲಾ ಪಂಚಾಯ್ತಿ ಸಭಾಭವನದಲ್ಲಿ ಸೋಮವಾರ ನಡೆದ ಪ್ರಸಕ್ತ ಸಾಲಿನ ಸಾಲ ಯೋಜನೆಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.`ಸರ್ಕಾರದ ಯೋಜನೆಗಳು ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಸಮರ್ಪಕವಾಗಿ ತಲುಪಲು ಇಲಾಖೆಗಳ ಅಧಿಕಾರಿಗಳ ಜವಾಬ್ದಾರಿ ಹೆಚ್ಚಿದೆ. ಅದಕ್ಕಾಗಿ ಈ ಇಲಾಖೆ ಅಧಿಕಾರಿಗಳ ಜತೆಗೆ ಬ್ಯಾಂಕ್‌ಗಳು ಕೈಜೋಡಿಸುವುದು ಅಗತ್ಯವಾಗಿದೆ' ಎಂದರು.`ಜಿಲ್ಲಾ ಅಗ್ರಣೀಯ ಬ್ಯಾಂಕ್ ಆದ ವಿಜಯಾ ಬ್ಯಾಂಕ್ ವಿವಿಧ ಬ್ಯಾಂಕ್‌ಗಳ ನೇತೃತ್ವದಲ್ಲಿ ಕಳೆದ ಬಾರಿಗಿಂತ ಶೇ 35ರಷ್ಟು ಹೆಚ್ಚುವರಿ ಗುರಿ ಹೊಂದಿ ಸಿದ್ಧಪಡಿಸಿರುವ ಸಾಲ ಯೋಜನೆ ಕಳೆದ ಬಾರಿಯಂತೆ ಉತ್ತಮ ಸಾಧನೆ ತೋರುವತ್ತ ಗಮನ ಹರಿಸಲಿದೆ' ಎಂದು ಹೇಳಿದರು.`ಕಳೆದ ಮೂರು ವರ್ಷಗಳಿಂದ ಜಿಲ್ಲೆಯಲ್ಲಿ ಬರಗಾಲ ಎದುರಾಗಿದ್ದರಿಂದ ರೈತರ ಅನುಕೂಲಕ್ಕಾಗಿ ಅವರ ಅಲ್ಪಾವಧಿ ಸಾಲವನ್ನು ದೀರ್ಘಾವಧಿ ಸಾಲವನ್ನಾಗಿ ಪರಿವರ್ತಿಸುವುದು ಕೂಡ ಅಗತ್ಯವಿದೆ. ಈ ಬಗ್ಗೆ ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ ಹಾಗೂ ಬ್ಯಾಂಕುಗಳು ಗಂಭೀರ ಚಿಂತನೆ ಮಾಡಬೇಕು' ಎಂದು ಸಲಹೆ ಮಾಡಿದರು.`ಕಳೆದ ಸಾಲಿನಲ್ಲಿ ಆದ್ಯತಾ ಕ್ಷೇತ್ರಗಳ ಸಾಲ ನೀಡಿಕೆಯಲ್ಲಿ ಶೇ 104 ಆದ್ಯತಾ ರಹಿತ ರಂಗದಲ್ಲಿ ಶೇ 144ರಷ್ಟು ಹಾಗೂ ಕೃಷಿ ಕ್ಷೇತ್ರದಲ್ಲಿ ಶೇ 100ರಷ್ಟು ಸಾಧನೆ ಮಾಡಿರುವುದು' ಶ್ಲಾಘನೀಯ ಎಂದರು.ಶಿವಮೊಗ್ಗ ವಿಜಯಾ ಕ್ಷೇತ್ರಿಯ ಬ್ಯಾಂಕ್‌ನ ಸಹಾಯಕ ಮಹಾ ಪ್ರಬಂಧಕ ರಾಧಾಕೃಷ್ಣಶೆಟ್ಟಿ ಮಾತನಾಡಿ, `ಸರ್ಕಾರಿ ಇಲಾಖೆಗಳು ಸ್ವಸಹಾಯ ಗುಂಪುಗಳ ಬಗ್ಗೆ ಬ್ಯಾಂಕ್‌ಗಳಿಗೆ ಸಕಾಲಕ್ಕೆ ನಿಖರವಾದ ಮಾಹಿತಿ ಒದಗಿಸಬೇಕು' ಎಂದರು.ಭಾರತೀಯ ರಿಜರ್ವ್ ಬ್ಯಾಂಕ್‌ನ ಜಿಲ್ಲಾ ಉಸ್ತುವಾರಿ ಅಧಿಕಾರಿ ಶಂಕರ ಬಿಸ್ವಾಸ್ ಮಾತನಾಡಿ, ಬ್ಯಾಂಕುಗಳು ರಿಜರ್ವ್ ಬ್ಯಾಂಕ್ ನಿರ್ದೇಶನಗಳ ಅನ್ವಯ ಗ್ರಾಮಾಂತರ ಪ್ರದೇಶದಲ್ಲಿ ನಿಯಮಾನುಸಾರ ಅಧಿಕ ಸಂಖ್ಯೆಯ ಬ್ಯಾಂಕ್ ಶಾಖೆಗಳನ್ನು ತೆರೆದು ಸೇವೆ ನೀಡಬೇಕು' ಎಂದು ಸಲಹೆ ಮಾಡಿದರು.ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪಂಚಾಯ್ತಿ ಸಿಇಒ ಉಮೇಶ ಕುಸುಗಲ್ಲ ಮಾತನಾಡಿ, `ಬ್ಯಾಂಕುಗಳಲ್ಲಿ ಫಲಾನುಭವಿಗಳ ವಿವಿಧ ಯೋಜನೆಗಳ ಸಾಲ ಸೌಲಭ್ಯದ ಅರ್ಜಿಗಳನ್ನು ಸಣ್ಣಪುಟ್ಟ ತಾಂತ್ರಿಕ ಕಾರಣಗಳಿಗಾಗಿ ತಿರಸ್ಕರಿಸದೇ ಅವರಿಗೆ ಸೂಕ್ತಮಾರ್ಗದರ್ಶನ ಮಾಡಿ ಅರ್ಜಿಗಳನ್ನು ಪಡೆದು  ಸಾಲಗಳನ್ನು ನೀಡಲು ಬ್ಯಾಂಕ್‌ಗಳು ಮುಂದಾಗಬೇಕು' ಎಂದು ಹೇಳಿದರು.ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಜಿ.ಜಗದೀಶ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಶಂಕ್ರಣ್ಣ ಮಾತನವರ, ಉಪಾಧ್ಯಕ್ಷೆ ಗೀತಾ ಅಂಕಸಖಾನಿ, ನಬಾರ್ಡ್‌ನ ಜಿಲ್ಲಾ ಕಚೇರಿಯ ಸಹಾಯಕ ಮಹಾಪ್ರಬಂಧಕ ಎಂ.ಎನ್.ವಿದ್ಯಾಗಣೇಶ ಇತರರು ಪಾಲ್ಗೊಂಡಿದ್ದರು. ಜಿಲ್ಲಾ ಅಗ್ರಣೀಯ ಬ್ಯಾಂಕ್‌ನ ವ್ಯವಸ್ಥಾಪಕ ಎಂ. ಉಮೇಶಬಾಬು ಪ್ರಸಕ್ತ ಸಾಲಿನ ಬ್ಯಾಂಕ್‌ಗಳ ಸಾಧನೆ ವಿವರಿಸಿದರು.ಸಭೆಯಲ್ಲಿ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ವಿವಿಧ ತಾಲ್ಲೂಕುಗಳ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಗಳು ಭಾಗವಹಿಸಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.