ಶನಿವಾರ, ಮೇ 15, 2021
25 °C

ಅಭಿವೃದ್ಧಿ ಕೆಲಸಗಳ ಬಗ್ಗೆ ತೃಪ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ನನ್ನ ಒಂದು ವರ್ಷದ ಅಧಿಕಾರ ಅವಧಿಯಲ್ಲಿ ಸಾಧಿಸಬೇಕಾದದ್ದು ಬಹಳಷ್ಟಿತ್ತು. ಎಲ್ಲವನ್ನೂ ಮಾಡಲು ಸಾಧ್ಯವಾಗಲಿಲ್ಲ. ಆದರೆ ನಿರ್ವಹಿಸಿದ ಅಭಿವೃದ್ಧಿ ಕೆಲಸಗಳ ಬಗ್ಗೆ ತೃಪ್ತಿ- ಸಮಾಧಾನವಿದೆ~ ಎಂದು ಮೇಯರ್ ಪಿ. ಶಾರದಮ್ಮ ಬುಧವಾರ ಇಲ್ಲಿ ತಿಳಿಸಿದರು.ಈ ತಿಂಗಳ 23ರಂದು ತಮ್ಮ ಅಧಿಕಾರ ಕೊನೆಗೊಳ್ಳಲಿರುವ ಹಿನ್ನೆಲೆಯಲ್ಲಿ ತಮ್ಮ ಒಂದು ವರ್ಷದ ಅಧಿಕಾರ ಅವಧಿಯಲ್ಲಿ ಮಾಡಿದ ಸಾಧನೆಗಳ ಬಗ್ಗೆ ವಿವರಿಸಲು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, `ನಗರದ ಅಭಿವೃದ್ಧಿ ಜತೆಗೆ, ಜನರ ಸಮಸ್ಯೆಗಳಿಗೆ ಸ್ಪಂದಿಸಲು ಪ್ರಾಮಾಣಿಕ ಪ್ರಯತ್ನ ನಡೆಸಿದ್ದೇನೆ~ ಎಂದು ಹೇಳಿದರು.

`ನಗರದ ಕಡು ಬಡವರ ಆರೋಗ್ಯ ಕಾಪಾಡಲು ಅನುಕೂಲವಾಗುವಂತಹ `ವಾಜಪೇಯಿ ಆರೋಗ್ಯಶ್ರೀ~ ಯೋಜನೆಯನ್ನು 198 ವಾರ್ಡ್‌ಗಳಲ್ಲಿ ಜಾರಿಗೊಳಿಸಲು ಪ್ರಯತ್ನ, 1200 ಕೋಟಿ ೂಪಾಯಿ ಆಸ್ತಿ ತೆರಿಗೆ ಸಂಗ್ರಹ, ಪರಿಶಿಷ್ಟರಿಗೆ 3,172 ಮನೆಗಳ ನಿರ್ಮಾಣ, ಗುತ್ತಿಗೆ ನೀಡಿದ್ದ ಆಸ್ತಿಗಳನ್ನು ಮತ್ತೆ ಪಾಲಿಕೆಗೆ ಪಡೆಯಲು ಪ್ರಯತ್ನ, ಒಂದು ಲಕ್ಷ ಸಸಿಗಳನ್ನು ನೆಡಲು ಕ್ರಮ ಕೈಗೊಳ್ಳಲಾಗಿದೆ~ ಎಂದು ಅವರು ವಿವರಿಸಿದರು.`ನಗರದಲ್ಲಿ ಕಸ ವಿಲೇವಾರಿ ಟೆಂಡರ್ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಆದರೆ, ಟೆಂಡರ್ ಪ್ರಕ್ರಿಯೆ ಅಂತಿಮಗೊಳ್ಳದ ಕಾರಣ ನನ್ನ ಅಧಿಕಾರಾವಧಿಯಲ್ಲಿ ಈ ಕೆಲಸ ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ ಎಂಬ ನೋವು ಕೂಡ ಕಾಡುತ್ತಿದೆ~ ಎಂದು ವಿಷಾದಿಸಿದರು.`ಪಾಲಿಕೆ ವ್ಯಾಪ್ತಿಯಲ್ಲಿ ಕಂದಾಯ ಹಾಗೂ ಆಸ್ತಿ ತೆರಿಗೆ ವ್ಯಾಪ್ತಿಯಿಂದ ಕೈತಪ್ಪಿ ಹೋಗಿದ್ದ ಸ್ವತ್ತುಗಳನ್ನು ಗುರುತಿಸಲು ಹಾಗೂ ತೆರಿಗೆ ವಂಚಿತ ಆಸ್ತಿಗಳಿಂದ ತೆರಿಗೆ ಸಂಗ್ರಹಿಸಲು ಎಲ್ಲ ಆಸ್ತಿಗಳಿಗೂ ಗುರುತಿನ ಸಂಖ್ಯೆ ನೀಡುವ ಪ್ರಕ್ರಿಯೆಗೆ ನನ್ನ ಅಧಿಕಾರ ಅವಧಿಯಲ್ಲೇ ಚಾಲನೆ ನೀಡಿದ್ದು ಹೆಮ್ಮೆಯ ಸಂಗತಿ~ ಎಂದು ಮೇಯರ್ ಹೇಳಿದರು.`ನಗರದಲ್ಲಿ ಸೂರಿಲ್ಲದೆ ಬದುಕುತ್ತಿರುವ ಪರಿಶಿಷ್ಟರಿಗೆ ಮನೆಗಳನ್ನು ನಿರ್ಮಿಸಿಕೊಡುವ ಉದ್ದೇಶದಿಂದ ಪಾಲಿಕೆಯ ಎಂಟು ವಲಯಗಳಲ್ಲಿ 11,612 ಮನೆಗಳ ನಿರ್ಮಾಣಕ್ಕೆ ಮಂಜೂರಾತಿ ನೀಡಲಾಗಿದೆ. ಈ ಪೈಕಿ 3,172 ಮನೆಗಳ ನಿರ್ಮಾಣ ಪೂರ್ಣಗೊಂಡಿದೆ. 3,690 ಮನೆಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಉಳಿದ 4,750 ಮನೆಗಳನ್ನು ನಿರ್ಮಿಸಲು ಕ್ರಮ ಕೈಗೊಳ್ಳಲಾಗಿದೆ~ ಎಂದು ಅವರು ತಿಳಿಸಿದರು.`ನಾಗರಿಕ ಸನ್ನದು ಯೋಜನೆಯನ್ನು ಪ್ರಾಮಾಣಿಕವಾಗಿ ಅನುಷ್ಠಾನಗೊಳಿಸಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಎಪ್ಪತ್ತಕ್ಕೂ ಅಧಿಕ ವಾರ್ಡ್‌ಗಳಿಗೆ ಭೇಟಿ ನೀಡಿ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ಕಂಡುಕೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. 150 ಕೋಟಿ ರೂಪಾಯಿಗಳ ಮೇಯರ್ ನಿಧಿಯಲ್ಲಿ 120 ಕೋಟಿ ರೂಪಾಯಿಗಳನ್ನು ಪ್ರಾಮಾಣಿಕವಾಗಿ ಹಂಚಿಕೆ ಮಾಡಿದ್ದೇನೆ~ ಎಂದರು.`ಪಾಲಿಕೆಯಲ್ಲಿ ಉತ್ತಮ ಹಣಕಾಸು ನಿರ್ವಹಣೆಗಾಗಿ ಪ್ರಧಾನಿಗಳಿಂದ ಪ್ರಶಂಸಾ ಪತ್ರ ಹಾಗೂ `ನರ್ಮ್~ ಯೋಜನೆಯ ಸಮರ್ಪಕ ಅನುಷ್ಠಾನಕ್ಕಾಗಿ ರಾಷ್ಟ್ರಪತಿಗಳಿಂದ `ನಗರ ರತ್ನ~ ಪ್ರಶಸ್ತಿ ಪಡೆದದ್ದು ಖುಷಿ ತಂದಿದೆ~ ಎಂದು ಮೇಯರ್ ಹೇಳಿದರು.`ನಗರದ ಕೆ.ಆರ್. ಮಾರುಕಟ್ಟೆ ಬಳಿ ನಡೆಯುತ್ತಿರುವ ಕೆಳಸೇತುವೆ (ಅಂಡರ್‌ಪಾಸ್)ನ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಈ ತಿಂಗಳ 25ರಂದು ಉದ್ಘಾಟಿಸಲು ಚಿಂತನೆ ನಡೆದಿದೆ~ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.