ಗುರುವಾರ , ನವೆಂಬರ್ 21, 2019
21 °C

ಅಭಿವೃದ್ಧಿ ನಿರೀಕ್ಷೆಯಲ್ಲಿ ಐತಿಹಾಸಿಕ ವೇಣುಕಲ್ಲುಗುಡ್ಡ

Published:
Updated:

ಧರ್ಮಪುರ ಹೋಬಳಿ ಕೇಂದ್ರದಿಂದ ಹಿರಿಯೂರು ಮಾರ್ಗವಾಗಿ 6 ಕಿ.ಮೀ. ಚಲಿಸಿ ಎಡಕ್ಕೆ ಮತ್ತೆ 6 ಕಿ.ಮೀ. ಚಲಿಸಿದರೆ ಕಾಣುವುದೇ ವೇಣುಕಲ್ಲುಗುಡ್ಡ.ಅದರ ಸುತ್ತಲೂ ಬಯಲು ಪ್ರದೇಶವಿದ್ದು, ಈ ಜಾಗದಲ್ಲಿ ಮಾತ್ರ ಕಡಿದಾದ ಕಲ್ಲುಗಳಿಂದ ಕೂಡಿದ ಬೆಟ್ಟವಿದೆ. ಆ ಬೆಟ್ಟದಿಂದಲೇ ಈ ಊರಿಗೆ ವೇಣುಕಲ್ಲುಗುಡ್ಡ ಎಂಬ ಹೆಸರು ಬಂದಿದೆ.ಬೆಟ್ಟದ ಸುತ್ತಲೂ ಆವೃತ್ತವಾದ 300 ಮನೆಗಳಿರುವ ಸುಮಾರು ನಾಲ್ಕು ಸಾವಿರ ಜನಸಂಖ್ಯೆ ಹೊಂದಿರುವ ಐತಿಹಾಸಿಕ ಪ್ರಸಿದ್ಧ ವೇಣುಕಲ್ಲುಗುಡ್ಡ ಅಭಿವೃದ್ಧಿಯ ನಿರೀಕ್ಷೆಯಲ್ಲಿ ಚಾತಕ ಪಕ್ಷಿಯಂತೆ ಕಾಯುತ್ತಿದೆ.ಈ ಗ್ರಾಮದಲ್ಲಿ ಎಲ್ಲಾ ಜಾತಿಯವರು ಇದ್ದು, ಸಹಬಾಳ್ವೆ ಜೀವನವನ್ನು ಸಾಗಿಸುತ್ತಿದ್ದಾರೆ. ಶೇ 70ರಷ್ಟು ಸಾಕ್ಷರತೆ ಹೊಂದಿರುವ ಗ್ರಾಮವಾಗಿದೆ.  ಧಾರ್ಮಿಕವಾಗಿ ಇಲ್ಲಿಯ ಜನರು ಬಸವಣ್ಣ, ಆಂಜನೇಯ, ಈಶ್ವರ, ವೇಣುಗೋಪಾಲಸ್ವಾಮಿ, ಸಿದ್ದೇಶ್ವರ, ತಿಮ್ಮಪ್ಪ, ಮೈಲಾರಲಿಂಗೇಶ್ವರ, ಪಾರ್ಥ ಲಿಂಗೇಶ್ವರ, ಲಕ್ಷ್ಮೀದೇವಿ, ವೀರಗಾರ, ಬೀರಪ್ಪ, ಯತ್ತಪ್ಪ ಮತ್ತಿತರ ದೇವರುಗಳನ್ನು ಪೂಜಿಸುತ್ತಾರೆ.ಗ್ರಾಮದ ಇತಿಹಾಸ: ವೇಣುಶಿಲಾದ್ರಿಪುರವೆಂಬ  ಪ್ರಾಚೀನ ಹೆಸರನ್ನು ಹೊಂದಿದ್ದ ಈ ಗ್ರಾಮ ಒಂದು ಕಾಲದಲ್ಲಿ ಸಂಸ್ಥಾನವೆನಿಸಿತ್ತು. ಶಾಸನಸ್ಥ ಗ್ರಾಮವಾಗಿದ್ದು, ಪಾಳೇಗಾರರ ಆಳ್ವಿಕೆಗೆ ಒಳಪಟ್ಟಿತ್ತು. ಹರತಿ-ಐಮಂಗಳ ಪಾಳೇಗಾರ ತಿಪ್ಪಳಾನಾಯಕಾಚಾರ್ಯನು                  ಆಳುತ್ತಿದ್ದನೆಂಬ ಉಲ್ಲೇಖವಿದೆ.ಗುಡ್ಡದ ಮೇಲೆ ವೇಣುಗೋಪಾಸ್ವಾಮಿ ದೇವಸ್ಥಾನವಿದ್ದು, ಹಿಂದೆ ಈ ಊರಿನ ಹಳ್ಳಿಕಾರಗೌಡ ರಂಗೇಗೌಡನಿಗೆ ಎರಡು ಮದುವೆಯಾದರೂ ಬಹುಕಾಲ ಮಕ್ಕಳಾಗಲಿಲ್ಲವಂತೆ. ಗೌಡರ ಹೊಲದಲ್ಲಿ ಸಪ್ಪೆ ಮೋರೆ ಹಾಕಿಕೊಂಡು ಹಾದು ಹೋಗುತ್ತಿದ್ದ ಬಾಲಕನನ್ನು  ಕರೆದು ವಿಚಾರಿಸಲಾಗಿ ಮುನಿಸಿಕೊಂಡು ಮನೆ ತೊರೆದು ಬಂದಿರುವುದಾಗಿ ತಿಳಿಸಿದ. ಗೌಡ ಅವನನ್ನು ತಮ್ಮ ಮನೆಯಲ್ಲಿಯೇ ಉಳಿಸಿಕೊಂಡ. ಆತ ಬಂದ ಮೇಲೆ ಅವನಿಗೆ ಮಕ್ಕಳಾಗಿ ಸಂಪತ್ತು ಹೆಚ್ಚಾಯಿತು. ಆತ ಸಾಮಾನ್ಯ ಬಾಲಕನಾಗಿರದೇ ಕಾರಣೀಕ ಮಗುವಾಗಿ ಬಂದ. ಅಂದಿನಿಂದ ಹಳ್ಳಿಕಾರರು ವೇಣುಗೋಪಾಸ್ವಾಮಿಯ ಆರಾಧಕರಾದರು. ಈ  ವೇಣುಗೋಪಾಸ್ವಾಮಿ  ಬೆಟ್ಟದ ಮೇಲಿರುವುದರಿಂದ  ಈ ಊರಿಗೆ ವೇಣುಕಲ್ಲುಗುಡ್ಡ ಎಂಬ ಹೆಸರು ಬಂದಿದೆ ಎಂದು ಗ್ರಾಮದ ವಿ.ಎನ್. ಚಂದ್ರಶೇಖರಯ್ಯ ತಿಳಿಸುತ್ತಾರೆ.ಏಳುಸುತ್ತಿನ ಕೋಟೆಯಾಗಿದ್ದು, ಚಿತ್ರದುರ್ಗದ ಕೋಟೆಯಲ್ಲಿರುವಂತೆ ಬತೇರಿ, ಬುರುಜು, ಕೋಟೆ, ಸುರಂಗಮಾರ್ಗ, ಅಕ್ಕತಂಗಿ ಹೊಂಡ, ತುಪ್ಪದಕೊಳ ಇದೆ. ಇದು ಏಳುಸುತ್ತಿನ ಕೋಟೆ ಆಗಿದ್ದು, ಮೂಲಪುರುಷ ಈರನಾಯಕ, ಕರೇನಾಯಕ, ರಂಗನಾಯಕ ಮತ್ತು ಕಸ್ತೂರಿ ರಂಗನಾಯಕ ಆಳ್ವಿಕೆ ಮಾಡಿ ಅನೇಕ ಐತಿಹ್ಯ ಬಿಟ್ಟು ಹೋಗಿದ್ದಾರೆ.ಪಾಳೆಗಾರರ ಗುರುಗಳಾಗಿದ್ದ ಹಾಲಪ್ಪಯ್ಯಸ್ವಾಮಿ ವರ ಜೀವಸಮಾಧಿ ಇಲ್ಲಿ ಕಾಣಬಹುದು. ಅವರ ವಂಶದವರು  ಸಂಗ್ರಹ ಮಾಡಿರುವ ಬಖೈರ್ ಮತ್ತು ತಾಳೇಗರಿಗಳನ್ನು ಸಾಕಷ್ಟು ಕಾಣಬಹುದು. ಇವು  ಇಂದಿನ ಸಂಶೋಧನಾಸಕ್ತರಿಗೆ  ಉತ್ತಮ ಆಕರಗಳಾಗಿವೆ. ಅವುಗಳನ್ನು ಸಂರಕ್ಷಿಸುವಲ್ಲಿ  ಪ್ರಾಚ್ಯವಸ್ತು ಇಲಾಖೆ ನಿರ್ಲಕ್ಷ್ಯ ತಾಳಿದೆ. ವೇಣುಕಲ್ಲುಗುಡ್ಡವನ್ನು ಪ್ರವಾಸಿ ತಾಣವನ್ನಾಗಿ ಮಾಡಿ ಪ್ರವಾಸಿಗರನ್ನು ಆಕರ್ಷಿಸಬೇಕು ಎಂಬುದು  ಮುಖ್ಯ ಶಿಕ್ಷಕ ವಿ. ತಿಪ್ಪೇಸ್ವಾಮಿ ಅವರ ಆಶಯ.ಗ್ರಾಮದಲ್ಲಿರುವ ಸೌಲಭ್ಯ: ಸುಸಜ್ಜಿತ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಸುಸಜ್ಜಿತ ಸರ್ಕಾರಿ ಪ್ರೌಢಶಾಲೆ, ಅಂಚೆ ಕಚೇರಿ, ಅಂಗನವಾಡಿ ಕೇಂದ್ರ, ಹಾಲು ಉತ್ಪಾಧಕ ಮಹಿಳಾ ಸಂಘ, ಸರ್ಕಾರಿ ನ್ಯಾಯಬೆಲೆ ಅಂಗಡಿ ಇದೆ.ಫ್ಲೋರೈಡ್ ನೀರು: ಗ್ರಾಮದಲ್ಲಿ ಸಾಕಷ್ಟು ಜನಸಂಖ್ಯೆ ಇರುವುದರಿಂದ  ಅದಕ್ಕೆ ಪೂರಕವಾಗಿ ಸಮರೋಪಾದಿಯಲ್ಲಿ ಕುಡಿಯುವ ನೀರಿನ ವ್ಯವಸ್ಥೆಯಾಗಿಲ್ಲ.  ಅದರಲ್ಲೂ ಫ್ಲೋರೈಡ್ ಅಂಶ ಹೆಚ್ಚಾಗಿದ್ದು, ನೀರು ಶುದ್ಧೀಕರಣ ಘಟಕ ಸ್ಥಾಪನೆಯಾಗಬೇಕು. ಶಾಶ್ವತವಾಗಿ ಕುಡಿಯುವ ನೀರಿನ ವ್ಯವಸ್ಥೆಯಾಗಬೇಕು. ಗ್ರಾಮದ ಕೆಲವು  ಬೀದಿಗಳಲ್ಲಿ ರಸ್ತೆ ಮತ್ತು ಒಳ ಚರಂಡಿ ಇಲ್ಲದೇ ನೀರು ರಸ್ತೆಯ ಮೇಲೆ ಹರಿದು ಅಲ್ಲಲ್ಲಿ ನೀರು ನಿಂತು ದುರ್ವಾಸನೆ ಬರುತ್ತದೆ ಎಂದು  ಕೆ. ಯಶೋಧಮ್ಮ ದೂರುತ್ತಾರೆ.ಗ್ರಾಮದಲ್ಲಿ ಗುಡಿಸಲು ವಾಸಿಗಳು ಸಾಕಷ್ಟು ಸಂಖ್ಯೆಯಲ್ಲಿದ್ದು, ಅವರಿಗೆ ತುರ್ತಾಗಿ ವಸತಿ ಸೌಕರ್ಯವಾಗಬೇಕು. ಸರ್ಕಾರಿ     ಪ್ರೌಢಶಾಲೆಯ ಆವರಣ ಸಾಕಷ್ಟು ವಿಸ್ತಾರವಾಗಿದೆ. ಇಲ್ಲಿ  ಕ್ರೀಡಾಂಗಣ ನಿರ್ಮಿಸಬೇಕು.  ಗ್ರಾಮದಲ್ಲಿ  ಶೌಚಾಲಯ ವ್ಯವಸ್ಥೆ ಇಲ್ಲದೆ  ಬಹಿರ್ದೆಸೆಗೆ ಪ್ರಕೃತಿಯೇ ಆಸರೆ. ಪ್ರತಿ ಕೇರಿಯಲ್ಲಿ ಡಾಂಬರೀಕರಣ ರಸ್ತೆ  ನಿರ್ಮಾಣ ಆಗಬೇಕು. ಗ್ರಾಮಕ್ಕೆ ಒಂದೆ ಒಂದು ಸರ್ಕಾರಿ ಬಸ್  ಬರುತ್ತಿದ್ದು, ಮತ್ತಷ್ಟು ಬಸ್ ಸೌಲಭ್ಯ ಬೇಕು. ಕಲ್ಯಾಣಿಯಲ್ಲಿ ಹೂಳು ತುಂಬಿದ್ದು ಅದನ್ನು ತೆಗೆಸಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು . ಗ್ರಾಮದಲ್ಲಿ ಸುವರ್ಣ ಗ್ರಾಮೋದಯ ಯೋಜನೆಯಡಿ ಅಭಿವೃದ್ಧಿ ಕೆಲಸಗಳು ಆಗಬೇಕು ಎಂಬುದು ಎಸ್‌ಡಿಎಂಸಿ ಅಧ್ಯಕ್ಷ ಪಿ.ಎಂ. ಶಿವಲಿಂಗಪ್ಪ ಅವರ ಮನದಾಳದ ಮಾತು.ಬಡವರಿಗೆ ಮತ್ತು ಸೂರಿಲ್ಲದವರಿಗೆ ಶಾಶ್ವತ ಪರಿಹಾರ ಕಲ್ಪಿಸುವಲ್ಲಿ ಆಡಳಿತ ವ್ಯವಸ್ಥೆ  ಮತ್ತು ಅಧಿಕಾರಿಗಳು ಮುಂದಾಗಬೇಕು ಎನ್ನುತ್ತಾರೆ ನಾಗರಿಕರು.

 

ಪ್ರತಿಕ್ರಿಯಿಸಿ (+)