ಅಭಿವೃದ್ಧಿ- ಪರಿಸರ ಮುಖಾಮುಖಿ

7

ಅಭಿವೃದ್ಧಿ- ಪರಿಸರ ಮುಖಾಮುಖಿ

Published:
Updated:
ಅಭಿವೃದ್ಧಿ- ಪರಿಸರ ಮುಖಾಮುಖಿ

ಹೀಗೂ ಉಂಟು

ಅಭಿವೃದ್ಧಿ ಯೋಜನೆಗಳು ದಿನೇ ದಿನೇ ದೇಶದ ಹಸಿರು ಸಿರಿಯನ್ನು ಆಪೋಶನ ತೆಗೆದುಕೊಳ್ಳುತ್ತಿರುವ ಹಿನ್ನೆಲೆಯಲ್ಲಿ, ಇಂತಹ ಯೋಜನೆಗಳಿಗೆ ಹಸಿರು ನಿಶಾನೆ ಕೊಡುವ ಮುನ್ನ ಸಮಗ್ರ ಪರಿಶೀಲನೆಗೆ ಒಳಪಡಿಸಲು ಕೇಂದ್ರ ಪರಿಸರ ಸಚಿವಾಲಯ ನಿರ್ಧರಿಸಿದೆ. ಈ ಯೋಜನೆಗಳಿಂದ ಆಗುವ ಆರ್ಥಿಕ ಲಾಭ ಮತ್ತು ಅದಕ್ಕಾಗಿ ಕಳೆದುಕೊಳ್ಳಬೇಕಾಗಿ ಬರುವ ಪರಿಸರದ ಪ್ರಮಾಣ ಎರಡರ ತುಲನೆಗೆ ಈಗ ಇರುವ ಮೌಲ್ಯಮಾಪನ ನಿಯಮಗಳನ್ನು ಇನ್ನಷ್ಟು ಬಿಗಿಗೊಳಿಸುವ ಉದ್ದೇಶ ಇದರ ಹಿಂದಿದೆ.ಕೈಗಾರಿಕೆ ಅಥವಾ ಮೂಲಸೌಲಭ್ಯ ಯೋಜನೆಗಳಿಗೆ ಅರಣ್ಯ ಭೂಮಿಯನ್ನು ಹಸ್ತಾಂತರಿಸುವ ಮುನ್ನ, ಯೋಜನೆಗಳಿಂದ ಆಗುವ ಲಾಭ- ನಷ್ಟದ ವಿಶ್ಲೇಷಣೆ ಒಳಗೊಂಡ ಮಾರ್ಗಸೂಚಿಯ ಕರಡನ್ನು ಜುಲೈ ಒಳಗೆ ಸಲ್ಲಿಸುವಂತೆ ಭೋಪಾಲ್ ಮೂಲದ ಭಾರತೀಯ ಅರಣ್ಯ ನಿರ್ವಹಣಾ ಸಂಸ್ಥೆಗೆ ಸಚಿವಾಲಯ ತಿಳಿಸಿದೆ. ಈ ಪರಿಷ್ಕೃತ ಮಾರ್ಗಸೂಚಿಯು ಅರಣ್ಯ ಸಂರಕ್ಷಣಾ ಕಾಯ್ದೆ- 1980ರ ಅಡಿ ಇರುವ ಪ್ರಸಕ್ತ ವ್ಯವಸ್ಥೆಗಿಂತ ಕಠಿಣವಾಗಿದ್ದು, ಯೋಜನೆ ಅನುಮತಿಯ ಸಾಧ್ಯಾಸಾಧ್ಯತೆ ಪರಿಶೀಲನೆಗೆ ನೆರವಾಗಲಿದೆ.ಈಗ ಅರಣ್ಯದಲ್ಲಿ ಕೈಗೊಳ್ಳುವ ಯಾವುದೇ ವಾಣಿಜ್ಯ ಅಥವಾ ಅಭಿವೃದ್ಧಿ ಯೋಜನೆಗೆ ಕೇಂದ್ರ ಸರ್ಕಾರದ ಅನುಮತಿ ಪಡೆಯುವ ಮುನ್ನ ಸಂಬಂಧಪಟ್ಟ ಸಂಸ್ಥೆಯು, ತಾನು ಸಲ್ಲಿಸುವ ಇತರ ವಿವರಗಳ ಜೊತೆಗೆ ಲಾಭ- ನಷ್ಟದ ವಿಶ್ಲೇಷಣೆಯನ್ನೂ ಕಳುಹಿಸಿಕೊಡಬೇಕು. ಆದರೆ ಈ ವಿಶ್ಲೇಷಣೆಯು ಅರಣ್ಯ ವ್ಯಾಪ್ತಿಯ ಬಯಲು ಪ್ರದೇಶದಲ್ಲಿ 20 ಹೆಕ್ಟೇರ್‌ಗಿಂತ ಹೆಚ್ಚು ಮತ್ತು ಕಣಿವೆಯಲ್ಲಿ ಐದು ಹೆಕ್ಟೇರ್‌ಗಿಂತ ಹೆಚ್ಚು ಪ್ರದೇಶ ವ್ಯಾಪ್ತಿಯನ್ನು ಒಳಗೊಂಡ ಯೋಜನೆಗಳಿಗೆ ಮಾತ್ರ ಅನ್ವಯಿಸುತ್ತದೆ.ಪರಿಸರ ಸಂಬಂಧಿ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥಪಡಿಸುವ ಸಲುವಾಗಿ ನೇಮಕಗೊಂಡಿರುವ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ (ಎನ್‌ಜಿಟಿ) ಸೂಚನೆ ಮೇರೆಗೆ ಹೊಸ ಮಾರ್ಗಸೂಚಿಯನ್ನು ರಚಿಸಲಾಗುತ್ತಿದೆ. ಮರಗಳನ್ನು ಕಡಿದುರುಳಿಸುವುದರಿಂದ ಆಗುವ ಹಾನಿ, ಕಟ್ಟಿಗೆ, ಕಿರು ಅರಣ್ಯ ಉತ್ಪನ್ನ ಹಾಗೂ ಅವುಗಳನ್ನು ಬೆಳೆಯುವ ಮೂಲಕ ಜೀವನೋಪಾಯ ಕಂಡುಕೊಂಡಿರುವ ಜನರಿಗೆ ವಾರ್ಷಿಕವಾಗಿ ಆಗುವ ನಷ್ಟ ಎಲ್ಲವನ್ನೂ ವಿಶ್ಲೇಷಣೆ ಒಳಗೊಂಡಿರುತ್ತದೆ.ದೇಶ ವಿವಿಧ ಕಾರಣಗಳಿಗಾಗಿ ಕಳೆದ ಎರಡು ವರ್ಷಗಳಲ್ಲಿ 367 ಚದರ ಕಿ.ಮೀ ಅರಣ್ಯ ಪ್ರದೇಶವನ್ನು ಕಳೆದುಕೊಂಡಿದೆ ಎಂದು ಭಾರತೀಯ ಅರಣ್ಯ ಸಮೀಕ್ಷಾ ವರದಿ- 2011 ಎಚ್ಚರಿಸಿರುವ ಹಿನ್ನೆಲೆಯಲ್ಲಿ ಈ ಬೆಳವಣಿಗೆ ಮಹತ್ವ ಪಡೆದುಕೊಂಡಿದೆ.ನಮ್ಮ ಅರಣ್ಯ ಪ್ರದೇಶ ಪ್ರಸ್ತುತ 6,92,027 ಚದರ ಕಿ.ಮೀ ಅಥವಾ ದೇಶದ ಭೌಗೋಳಿಕ ಪ್ರದೇಶದ ಶೇ 21.05ರಷ್ಟಿದೆ.

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry