ಶುಕ್ರವಾರ, ಮಾರ್ಚ್ 5, 2021
27 °C

ಅಭಿವೃದ್ಧಿ ಮೆಲುಕು; ಭರವಸೆ ಬೆಳಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಭಿವೃದ್ಧಿ ಮೆಲುಕು; ಭರವಸೆ ಬೆಳಕು

ತುಮಕೂರು: ಕೇಂದ್ರ, ರಾಜ್ಯ ಸರ್ಕಾರದ ನೆರವಿನಿಂದಾಗಿ ಜಿಲ್ಲೆ ಅಭಿವೃದ್ಧಿಯತ್ತ ವೇಗವಾಗಿ ಮುನ್ನಗ್ಗುತ್ತಿದೆ. ಕೈಗಾರಿಕಾ ಕಾರಿಡಾರ್, ಸ್ಮಾರ್ಟ್‌ ಸಿಟಿ ಯೋಜನೆಗಳು ನಿರುದ್ಯೋಗ ಸಮಸ್ಯೆ ನಿವಾರಣೆಯಲ್ಲಿ ಪ್ರಮುಖ ಪಾತ್ರ ವಹಿಸಲಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ ಹೇಳಿದರು.ನಗರದ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ಮಂಗಳವಾರ ಜಿಲ್ಲಾಡಳಿತ ಏರ್ಪಡಿಸಿದ್ದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಅಭಿವೃದ್ಧಿಯಲ್ಲಿ ರಾಜ್ಯ ಮುಂಚೂಣಿಯಲ್ಲಿದೆ. 2–3 ವರ್ಷಗಳಲ್ಲಿ ಜಿಲ್ಲೆಗೆ ಹಲವು ಯೋಜನೆಗಳು ಬಂದಿವೆ. ಹೆಚ್ಚು ಶೈಕ್ಷಣಿಕ ಸಂಸ್ಥೆಗಳನ್ನು ಹೊಂದಿದ್ದು ಅಂತರರಾಷ್ಟ್ರೀಯ ಮಟ್ಟದಲ್ಲಿ ವಿಜೃಂಭಿಸುತ್ತಿದೆ. ಅಲ್ಲದೇ ಬೇರೆ ರಾಜ್ಯಗಳಿಗೂ ಮಾದರಿ ಆಗಿದೆ ಎಂದರು.ಸಂವಿಧಾನ ಜಾರಿಯಾಗಿ 67 ವರ್ಷ ಕಳೆದರೂ ಅದರ ಆಶಯ ಸಾಕಾಗೊಳಿಸಲು ಸಾಕಷ್ಟು ದೂರ ಸಾಗಬೇಕಾಗಿದೆ. ಸಂವಿಧಾನದ ಮೂಲ ಅರ್ಥ ಹೇಳುವ ಪೀಠಿಕೆ ಅಂಶಗಳನ್ನು ಆಡಳಿತ ನಡೆಸುವ ಪ್ರತಿಯೊಬ್ಬರು ಗಮನಿಸಿ, ಸಾಕಾರಗೊಳಿಸಲು ಶ್ರಮಿಸಬೇಕು ಎಂದು ಸಲಹೆ ನೀಡಿದರು.ಪ್ರತಿಯೊಬ್ಬರು ಹಕ್ಕುಗಳ ಬಗ್ಗೆ ಮಾತ್ರವಲ್ಲದೇ ಕರ್ತವ್ಯಗಳ ಬಗ್ಗೆಯೂ ಮಾತನಾಡಬೇಕು. ಜವಾಬ್ದಾರಿ ಅರಿತುಕೊಳ್ಳುವ ಕಡೆ ಗಮನ ಹರಿಸಬೇಕು ಎಂದು ಹೇಳಿದರು. ಮುಂದಿನ ಎರಡು ವರ್ಷದಲ್ಲಿ ಹೆಲಿಕಾಪ್ಟರ್‌ ಹಾರಾಡುವ ವಾತಾವರಣ ನಿರ್ಮಾಣವಾಗಲಿದೆ. ಗಣರಾಜ್ಯೋತ್ಸವ ಅತಿಥಿಯಾಗಿ ದೇಶಕ್ಕೆ ಆಗಮಿಸಿರುವ ಫ್ರಾನ್ಸ್‌ ಅಧ್ಯಕ್ಷ ಫ್ರಾಂಸ್ವಾ ಒಲಾಂಡ್ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಹಲವು ಮಹತ್ವದ ಯೋಜನೆಗಳಿಗೆ ಸಹಿ ಹಾಕಿದ್ದಾರೆ. ಆ ಒಪ್ಪಂದಗಳಿಂದ ತುಮಕೂರಿಗೂ ಲಾಭ ಆಗುವಂತೆ ಜನಪ್ರತಿನಿಧಿಗಳು ನೋಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರವೂ ಹೆಜ್ಜೆ ಇಡಲಿದೆ ಎಂದು ಅವರು ಹೇಳಿದರು.ಏರೋಸ್ಪೇಸ್‌ ಹಬ್‌ ಸ್ಥಾಪನೆಗೆ ತುಮಕೂರು ಜಿಲ್ಲೆಯು ಪ್ರಾಶಸ್ತ್ಯ ಸ್ಥಳವಾಗಿದೆ. ಇಂಡೋ–ಫ್ರಾನ್ಸ್‌ ಒಪ್ಪಂದಗಳಿಂದ ಏರೋಸ್ಪೇಸ್‌ ಪರಿಕಲ್ಪನೆ ಸಾಕಾರವಾಗಲಿ ಎಂಬುದು ಎಲ್ಲರ ಆಶಯ ಎಂದು ಹೇಳಿದರು.ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 33 ಮಹನೀಯರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಪೊಲೀಸರ ಆಕರ್ಷಕ ಕವಾಯತು ಕಣ್ಮನ ಸೆಳೆಯಿತು. ಎನ್‌ಸಿಸಿ ವಿಭಾಗದಲ್ಲಿ ಆಕರ್ಷಕಪಥ ಸಂಚಲನ ಮಾಡಿದವರಿಗೆ ಪ್ರಶಸ್ತಿ ನೀಡಲಾಯಿತು. ಎನ್‌ಸಿಸಿ ಸೀನಿಯರ್‌ ವಿಭಾಗದಲ್ಲಿ ಸಿದ್ದಗಂಗಾ ಬಾಲಕರ ಕಾಲೇಜು ಪ್ರಥಮ, ತುಮಕೂರು ವಿ.ವಿ ಎನ್‌ಸಿಸಿ 4ನೇ ಬೆಟಾಲಿಯನ್‌ ದ್ವಿತೀಯ, ಸರ್ವೋದಯ ಬಾಲಕಿಯರ ತಂಡ ಮೂರನೇ ಬಹುಮಾನ ಪಡೆಯಿತು.ಸ್ಕೌಟ್ಸ್‌ ಅಂಡ್ ಗೈಡ್ಸ್‌ ವಿಭಾಗದಲ್ಲಿ ಸಿದ್ದಗಂಗಾ ಮಠದ ಶಾಲೆ ಪ್ರಥಮ, ವಿವೇಕಾನಂದ ಪ್ರೌಢಶಾಲೆ ದ್ವಿತೀಯ, ರೇಣುಕಾ ವಿದ್ಯಾಪೀಠ ತೃತೀಯ ಸ್ಥಾನ ಪಡೆಯಿತು. ಭಾರತ ಸೇವಾದಲ ವಿಭಾಗದಲ್ಲಿ ಕನ್ನಿಕಾ ಆಂಗ್ಲಶಾಲೆ ಪ್ರಥಮ, ಬಾಪೂಜಿ ಸಂಯುಕ್ತ ಪದವಿ ಪೂರ್ವ ಕಾಲೇಜು ದ್ವಿತೀಯ, ವಾಸವಿ ವಿದ್ಯಾಪೀಠ ತೃತೀಯ, ರೆಡ್‌ಕ್ರಾಸ್‌ ಶ್ರವಣದೋಷವುಳ್ಳ ಮಕ್ಕಳ ಶಾಲೆಗೆ ವಿಶೇಷ ಪ್ರಶಸ್ತಿ ನೀಡಲಾಯಿತು.ಮಕ್ಕಳ ಸಾಂಸ್ಕೃತಿಕ ಕಲರವ: ನಗರದ ಪಿ.ಎಚ್‌.ಕಾಲೊನಿ ಸಿದ್ಧಾರ್ಥ ಪ್ರೌಢಶಾಲೆಯ 500 ಮಕ್ಕಳು ಗುರುಮಂತ್ರಕ್ಕೆ ನೃತ್ಯ ಪ್ರದರ್ಶಿಸಿ, ಪ್ರಥಮ ಬಹುಮಾನ ಪಡೆದರು. ದೇವರಾಯಪಟ್ಟಣದ ವಿದ್ಯಾ ಪ್ರೌಢಶಾಲೆ ವಿದ್ಯಾರ್ಥಿಗಳಿಂದ ಹರೇರಾಮ, ಹರೇಕೃಷ್ಣ ನೃತ್ಯ, ಬಿಷಪ್‌ ಸಾರ್ಜೆಂಟ್ ಶಾಲೆಯ ಮಕ್ಕಳು ಐವತನ್ ಜಾನ್ಷೇನಮ್‌ ಹಾಡಿಗೆ ನೃತ್ಯ ಪ್ರದರ್ಶಿಸಿದರು. ವಿದ್ಯಾನಿಕೇತನ ಪ್ರೌಢಶಾಲೆ ಮಕ್ಕಳು ಘಜಲ್‌ಗೆ ನೃತ್ಯ ಪ್ರದರ್ಶಿಸಿದರು.ಸಂಸದ ಎಸ್‌.ಪಿ.ಮುದ್ದಹನುಮೇಗೌಡ, ಶಾಸಕ ಡಾ.ರಫೀಕ್‌ ಅಹಮದ್‌, ವಿಧಾನ ಪರಿಷತ್‌ ಸದಸ್ಯ ಕಾಂತರಾಜು, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ವೈ.ಎಚ್.ಹುಚ್ಚಯ್ಯ, ಮೇಯರ್‌ ಲಲಿತಾ, ಜಿಲ್ಲಾಧಿಕಾರಿ ಕೆ.ಪಿ.ಮೋಹನ್‌ರಾಜ್‌, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್‌ ರೆಡ್ಡಿ, ಜಿ.ಪಂ ಸಿಇಒ ಡಾ.ಬಿ.ಆರ್‌.ಮಮತಾ, ಲಿಡ್ಕರ್‌ ಅಧ್ಯಕ್ಷ ಆರ್‌.ರಾಮಕೃಷ್ಣ, ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷ ಮಂಚಲದೊರೆ ರಂಗಸ್ವಾಮಿ, ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಅನಿತಾ ಇತರರು ಇದ್ದರು.ಸರ್ವೋತ್ತಮ ಪ್ರಶಸ್ತಿ ಪ್ರದಾನ

ಸಾಹಿತ್ಯ, ಕ್ರೀಡೆ, ಸಮಾಜ ಸೇವೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸರ್ಕಾರಿ ನೌಕರರಿಗೆ ಜಿಲ್ಲಾ ಮಟ್ಟದ ಸರ್ವೋತ್ತಮ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಅತ್ಯುತ್ತಮ ಸರ್ಕಾರಿ ಸೇವೆ ಸಲ್ಲಿಸಿದ ಜಿಲ್ಲಾ ಆಸ್ಪತ್ರೆಯ ಡಾ. ಜಿ.ಆರ್‌. ಮಂಜುನಾಥ ಗುಪ್ತ, ಮಧುಗಿರಿ ತಹಶೀಲ್ದಾರ್ ಅನಂತರಾಮು, ತುಮಕೂರು ಸಹಾಯಕ ಕೃಷಿ ನಿರ್ದೇಶಕರ ಕಚೇರಿಯ ರೇಖಾಗಾರರಾದ ರುದ್ರಾಣಮ್ಮ, ತುಮಕೂರು ತಾಲ್ಲೂಕು ಗಂಗೋನಹಳ್ಳಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ತೀರ್ಥ, ಮಧುಗಿರಿ ಪುರಸಭೆ ಹಿರಿಯ ಆರೋಗ್ಯ ನಿರೀಕ್ಷಕ ಎಸ್‌. ಶ್ರೀನಾಥ್ ಬಾಬು, ತಿಪಟೂರು ತಾಲ್ಲೂಕು ಕಚೇರಿ ಡಿ ದರ್ಜೆ ನೌಕರ ಚಿಕ್ಕಣ್ಣ ಅವರು ಪ್ರಶಸ್ತಿಗೆ ಭಾಜನರಾದರು.ಪೊಲೀಸ್‌ ಬಿಗಿ ಭದ್ರತೆ

ನಗರದಲ್ಲಿ ಶಂಕಿತ ಉಗ್ರನ ಬಂಧನ ಹಿನ್ನೆಲೆಯಲ್ಲಿ ಕ್ರೀಡಾಂಗಣದ ಸುತ್ತ ಬಿಗಿ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿತ್ತು. ಬಾಂಬ್‌ ಡಿಟೆಕ್ಟರ್‌ ಮೂಲಕ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರನ್ನು ಕ್ರೀಡಾಂಗಣದ ಒಳಗೆ ಬಿಡಲಾಯಿತು. ನಗರದ ವಿವಿಧ ಶಾಲೆಗಳಿಂದ ಆಗಮಿಸಿದ ವಿದ್ಯಾರ್ಥಿಗಳು ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.