ಬುಧವಾರ, ಅಕ್ಟೋಬರ್ 23, 2019
23 °C

ಅಭಿವೃದ್ಧಿ ವಂಚಿತ ಗ್ರಾಮ ಮಲ್ಕಸಮುದ್ರ

Published:
Updated:

ಯಲಬುರ್ಗಾ: ತಾಲ್ಲೂಕು ಕೇಂದ್ರ ಯಲಬುರ್ಗಾದಿಂದ ಕೇವಲ ಏಳೆಂಟು ಕಿ.ಮೀ ದೂರದಲ್ಲಿರುವ ಮಲ್ಕಸಮುದ್ರ ಗ್ರಾಮ ಅಭಿವೃದ್ಧಿಯಿಂದ ಸಂಪೂರ್ಣ ವಂಚಿತವಾಗಿದ್ದು, ಗ್ರಾಮದ ಜನತೆ ನಿತ್ಯ ನರಕಯಾತನೆ ಅನುಭವಿಸುತ್ತಾಗಿದ್ದಲ್ಲದೇ ಮೂಲ ಸೌಕರ್ಯ ಸಲ್ಪಿಸಿಕೊಡುವಲ್ಲಿ ಸ್ಥಳೀಯ ಆಡಳಿತ ಸಂಪೂರ್ಣ ವಿಫಲವಾಗಿದೆ.ಬೇವೂರು ಮಾರ್ಗವಾಗಿ ಸಂಚರಿಸಿದರೆ ಮೊದಲಿಗೆ ಲಭ್ಯವಾಗುವ ಈ ಮಲ್ಕಸಮುದ್ರ ಗ್ರಾಮದ ಜನತೆ ಬಹುತೇಕ ದೈನಂದಿನ ವ್ಯವಹಾರ ಹಾಗೂ ಇನ್ನಿತರ ಕಚೇರಿ ಕೆಲಸ ಕಾರ್ಯಗಳಿಗೆ ಪಟ್ಟಣಕ್ಕೆ ಬಂದು ಹೋಗಬೇಕು. ಹೀಗೆ ತಾಲ್ಲೂಕು ಕೇಂದ್ರ ಇಷ್ಟೊಂದು ಹತ್ತಿರವಿದ್ದರೂ ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿ ಕಾಣದೆ ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಗುರಿಯಾಗಿದೆ. ಇದರ ಪರಿಣಾಮ ಗ್ರಾಮದ ಯುವಕರು ಅಧಿಕಾರಿಗಳ ಹಾಗೂ ಚುನಾಯಿತ ಪ್ರತಿನಿಧಿಗಳ ವಿರುದ್ಧ ವ್ಯಾಪಕ ಟೀಕೆಗಳನ್ನು ವ್ಯಕ್ತಪಡಿಸುತ್ತಿದ್ದಾರೆ.ಗ್ರಾಮದ ಬಸ್ ನಿಲ್ದಾಣದಿಂದ ಸುಮಾರು ಒಂದು ಕಿ.ಮೀ ಒಳಗಡೆ ಕ್ರಮಿಸುವ ರಸ್ತೆ ಸಂಪೂರ್ಣ ಹಾಳಾಗಿ ಸುಮಾರು ಮೂರ‌್ನಾಲ್ಕು ವರ್ಷಗಳೆ ಕಳೆದಿವೆ ಆದರೂ ಅದನ್ನು ದುರಸ್ತಿಗೊಳಿಸಿಲ್ಲ, ಅಲ್ಲದೇ ಅದಕ್ಕೆ ಹೊಂದಿಕೊಂಡ ಎರಡು ಬದಿಯ ಚರಂಡಿಗಳು ಭರ್ತಿಯಾಗಿ ಹೋಗಿದ್ದರೂ ಕೊಳಚೆಯನ್ನು ವಿಲೇವಾರಿ ಮಾಡುವ ಬಗ್ಗೆ ಯೋಜನೆ ಮಾಡಿಲ್ಲ, ಹಾಗೆಯೇ ವಿವಿಧ ಓಣಿಯಲ್ಲಿನ ರಸ್ತೆಗಳ ತುಂಬಾ ರಜ್ಜು ರಾಡಿಯದೇ ಸಾಮ್ರಾಜ್ಯ. ಹೀಗೆ ಈಡೀ ಗ್ರಾಮವೇ ಕೊಳಗೇರಿಯಂತಾಗಿ ದುರ್ನಾತಗಳ ತಾಣವಾಗಿ ಪರಿಣಮಿಸಿದಂತಿವೆ.ಕೆಲವೊಂದು ಓಣಿಯಲ್ಲಿ ರಸ್ತೆಗಳಲ್ಲಿ ಬಂಡೆ ಜೋಡಣೆ, ಸಿಮೆಂಟ್ ರಸ್ತೆ ನಿರ್ಮಿಸಿದ್ದು, ಮತ್ತೆ ಕೆಲವು ಕಡೆ ಯಾವುದೇ ರೀತಿಯ ರಸ್ತೆ ಸುಧಾರಣೆ ಕಾರ್ಯ ನಡೆಯದೇ ಕೊಳಚೆ ಪ್ರದೇಶದಂತಿವೆ. ಸಿಮೆಂಟ್ ರಸ್ತೆಯಲ್ಲಿಯೂ ಕೂಡಾ ದಿನಬಳಕೆ ನೀರು ಸುಗಮವಾಗಿ ಹರಿದು ಹೋಗದೇ ನಿಂತಲ್ಲೆ ನಿಲ್ಲುವಂತೆ ಮಾಡಿದ್ದರಿಂದ ಸಂಚಾರಕ್ಕೆ ತೀವ್ರ ತೊಂದರೆಯಾಗುವುದು ಸಾಮಾನ್ಯ ಸಂಗತಿಯಾಗಿದೆ.ನೆರೆಹಾವಳಿಗೆ ತುತ್ತಾಗಿರುವ ಸಂತ್ರಸ್ಥರಿಗೆ ಸಕಾಲದಲ್ಲಿ ಆಶ್ರಯ ಮನೆ ಕಲ್ಪಿಸಿಕೊಡುವಲ್ಲಿ ವಿಫಲವಾಗಿದ್ದರ ಹಿನ್ನೆಲೆಯಲ್ಲಿ ನೊಂದ ಕುಟುಂಬ ಸಮುದಾಯ ಭವನದಲ್ಲಿಯೇ ಆಶ್ರಯ ಪಡೆಯಬೇಕಾಗಿದೆ. ಮಾರಾಟ ಮಳಿಗೆಯಂತೂ ಇದ್ದು ಇಲ್ಲದಂತಾಗಿದೆ. ಆಗಾಗ ಗ್ರಾಮ ಲೆಕ್ಕಿಗರು ಸಭೆ ಮಾಡಲು ಉಪಯೋಗಿಸಿಕೊಳ್ಳುತ್ತಿದ್ದಾರೆ. ಗ್ರಾಮದಲ್ಲಿ ಪ್ರಾಥಮಿಕ ಶಾಲೆಗೆ ಹೋಗುವ ರಸ್ತೆಯ್ದ್ದುದಕ್ಕೂ ಸಾಮೂಹಿಕ ಶೌಚ್ಯ ಸ್ಥಳವಾಗಿ ಪರಿಣಮಿಸಿದಂತಿದೆ.ಅದೇ ರಸ್ತೆಗೆ ಹೊಂದಿಕೊಂಡ ಕುಡಿಯುವ ನೀರಿನ ತೊಟ್ಟಿಯ ಬಟ್ಟೆ ತೊಳೆಯುವ ಸ್ಥಳವಾಗಿ ಪರಿವರ್ತನೆಗೊಂಡಿದೆ. ಬಟ್ಟೆ ತೊಳೆಯಲೆಂದೇ ಹತ್ತಿರದಲ್ಲಿಯೇ  ಬಂಡೆಹಾಕಿ ಅವಕಾಶ ಮಾಡಿಕೊಂಡಿದ್ದರೂ ಅದು ಅನುಕೂಲವಾಗಿಲ್ಲ ಎಂಬ ಕಾರಣ ಕಿರುನೀರಿನ ತೊಟ್ಟಿಯಲ್ಲಿಯೇ ಬಟ್ಟೆ ತೊಳೆಯುವುದು ಸಾಮಾನ್ಯವಾಗಿದೆ.

 

ಹೀಗೆ ಅವ್ಯವಸ್ಥೆಗಳ ಆಗರವಾಗಿರುವ ಈ ಮಲ್ಕಸಮುದ್ರ ಗ್ರಾಮದ ಸಮಗ್ರ ಅಭಿವೃದ್ಧಿಗೆ ಚುನಾಯಿತ ಪ್ರತಿನಿಧಿಗಳು ಆಸಕ್ತಿ ತೋರಬೇಕಾಗಿದೆ. ಚುನಾವಣೆ ಸಂದರ್ಭದಲ್ಲಿ ಮಾತ್ರ ಭೇಟಿ ನೀಡುವ ಶಾಸಕರು, ಜಿಪಂ ಹಾಗೂ ತಾಪಂ ಸದಸ್ಯರು ಗ್ರಾಮದ ಸಮಗ್ರ ಅಭಿವೃದ್ಧಿಗೆ ಮುತುವರ್ಜಿ ತೋರಬೇಕಾಗಿದೆ.

 

ಕೇವಲ ಮನೆಗಳ ಹಂಚಿಕೆ, ಉದ್ಯೋಗ ಖಾತ್ರಿ ಯೋಜನೆಯಲ್ಲಿ ಅನುಕೂಲ ಮಾಡಿಕೊಡುವುದಷ್ಟೆ ಸದಸ್ಯರ ಕೆಲಸ ಎಂಬಂತೆ ನಡೆದುಕೊಳ್ಳುತ್ತಿರುವ ಸ್ಥಳೀಯ ಪಂಚಾಯಿತಿ ಸಿಬ್ಬಂದಿ, ಅಭಿವೃದ್ಧಿ ಅಧಿಕಾರಿ ವಿರುದ್ಧ ಮೇಲಧಿಕಾರಿಗಳು ಸೂಕ್ತ ಕ್ರಮ ಕೈಗೊಂಡು ಗ್ರಾಮದ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಕಳಕಪ್ಪ ಹೂಗಾರ, ಡಿಎಸ್‌ಎಸ್ ಡಿ.ಎಚ್. ಶಶಿಧರ ಆಗ್ರಹಿಸಿದ್ದಾರೆ.

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯಿಸಿ (+)