ಸೋಮವಾರ, ನವೆಂಬರ್ 18, 2019
27 °C

ಅಭಿವೃದ್ಧಿ ಶುಲ್ಕ ಮರು ನಿಗದಿಗೆ ಆದೇಶ

Published:
Updated:

ಬೆಂಗಳೂರು: ಕೃಷಿಯೇತರ ಉದ್ದೇಶಕ್ಕೆ ಪರಿವರ್ತನೆ ಮಾಡಿರುವ ಕಂದಾಯ ಜಮೀನಿಗೆ ನಿಗದಿ ಮಾಡಿದ್ದ ಅಭಿವೃದ್ಧಿ ಶುಲ್ಕವನ್ನು ಮರು ನಿಗದಿ ಮಾಡುವಂತೆ ಹೈಕೋರ್ಟ್ ಬುಧವಾರ ಆದೇಶಿಸಿದೆ.ಎಸ್.ಆರ್. ಕನ್‌ಸ್ಟ್ರಕ್ಷನ್ಸ್ ಕಂಪೆನಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎ.ಎಸ್. ಬೋಪಣ್ಣ ಈ ಆದೇಶ ನೀಡಿದರು. ಈ ಹಿಂದೆ ಅಭಿವೃದ್ಧಿ ಶುಲ್ಕವನ್ನು ಪ್ರತಿ ಚದರ ಮೀಟರ್‌ಗೆ ರೂ 550 ಎಂದು ನಿಗದಿ ಮಾಡಲಾಗಿತ್ತು. ಇದನ್ನು ಹೈಕೋರ್ಟ್ ರದ್ದುಪಡಿಸಿದೆ. ದರವನ್ನು ಅವೈಜ್ಞಾನಿಕವಾಗಿ ನಿಗದಿ ಮಾಡಲಾಗಿದೆ ಎಂದು ಅರ್ಜಿಯಲ್ಲಿ ದೂರಲಾಗಿತ್ತು.ಇದನ್ನು ಮಾನ್ಯ ಮಾಡಿದ ನ್ಯಾಯಮೂರ್ತಿಯವರು, ಅಭಿವೃದ್ಧಿ ಶುಲ್ಕವನ್ನು ಹೊಸದಾಗಿ ನಿಗದಿ ಮಾಡುವಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ನಿರ್ದೇಶನ ನೀಡಿದರು. ಅರ್ಜಿಯನ್ನು ಇತ್ಯರ್ಥಪಡಿಸಲಾಗಿದೆ.ಬಿಬಿಎಂಪಿ ವ್ಯಾಪ್ತಿಗೆ ಹೊಸದಾಗಿ ಸೇರ್ಪಡೆಯಾದ 110 ಹಳ್ಳಿಗಳು, 7 ನಗರಸಭೆ ಮತ್ತು ಒಂದು ಪುರಸಭೆಯ ವ್ಯಾಪ್ತಿಯಲ್ಲಿ ಕೃಷಿಯೇತರ ಉದ್ದೇಶಕ್ಕೆ ಪರಿವರ್ತಿಸಿರುವ ಕಂದಾಯ ಜಮೀನು, ಸ್ಥಳೀಯ ಸಂಸ್ಥೆಯಿಂದ ಅನುಮತಿ ಪಡೆಯದೆ ನಿರ್ಮಿಸಿರುವ ಬಡಾವಣೆಗಳಿಂದ ಅಭಿವೃದ್ಧಿ ಶುಲ್ಕ ಸಂಗ್ರಹಿಸಲಾಗುತ್ತಿದೆ.ಕೇಬಲ್ ಟಿವಿ ವಿವಾದ: ಖಾಸಗಿ ಉಪಗ್ರಹ ವಾಹಿನಿಗಳ ಅನಲಾಗ್ ಸಿಗ್ನಲ್ ಪ್ರಸಾರವನ್ನು ಇದೇ 16ರವರೆಗೆ ನಿಲ್ಲಿಸದಂತೆ ಕೇಂದ್ರ ಸರ್ಕಾರಕ್ಕೆ ಹೈಕೋರ್ಟ್ ಬುಧವಾರ ನಿರ್ದೇಶನ ನೀಡಿದೆ.ಕೇಬಲ್ ಆಪರೇಟರ್‌ಗಳ ಸಂಘ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್. ಅಬ್ದುಲ್ ನಜೀರ್ ಈ ನಿರ್ದೇಶನ ನೀಡಿದರು.`ಈಗ ರೂ 100   ಪಾವತಿಸಿದರೆ,  80ರಿಂದ 90 ಚಾನೆಲ್‌ಗಳನ್ನು ವೀಕ್ಷಿಸಬಹುದು. ಆದರೆ ಸೆಟ್‌ಟಾಪ್ ಬಾಕ್ಸ್ ಕಡ್ಡಾಯ ಎಂಬ ಆದೇಶ ಜಾರಿಯಾದ ನಂತರ, ಎಲ್ಲ ಚಾನೆಲ್‌ಗಳಿಗೂ ಪ್ರತ್ಯೇಕ ಶುಲ್ಕ ತೆರಬೇಕಾದಂಥ ಪರಿಸ್ಥಿತಿ ಎದುರಾಗುತ್ತದೆ. ಇದು ಬಡವರಿಗೆ ಅನುಕೂಲಕರ ಅಲ್ಲ' ಎಂದು ಕೇಬಲ್ ಆಪರೇಟರ್‌ಗಳ ಪರ ವಕೀಲರು ವಾದಿಸಿದರು. ಈಗ ಲಭ್ಯವಿರುವವುಗಳು ಗುಣಮಟ್ಟ ಹೊಂದಿಲ್ಲ ಎಂದೂ ವಾದಿಸಿದರು.

ಪ್ರತಿಕ್ರಿಯಿಸಿ (+)