ಶುಕ್ರವಾರ, ನವೆಂಬರ್ 15, 2019
26 °C
ಬೆಂಗಳೂರು ಮೆಟ್ರೊ ರೈಲು ನಿಗಮದ ವ್ಯವಸ್ಥಾಪಕ ನಿರ್ದೇಶಕ ಎನ್. ಶಿವಶೈಲಂ ಅಭಿಪ್ರಾಯ

ಅಭಿವೃದ್ಧಿ-ಸರ್ಕಾರಿ ಭೂಮಿ ಸ್ವಾಧೀನವೇ ಕಷ್ಟ

Published:
Updated:

ಬೆಂಗಳೂರು: `ಸರ್ಕಾರಿ ಯೋಜನೆಗಳ ಅನುಷ್ಠಾನದ ಸಂದರ್ಭದಲ್ಲಿ ಸರ್ಕಾರಿ ಜಮೀನಿಗಿಂತ ಖಾಸಗಿ ಭೂಮಿ ಸ್ವಾಧೀನ ಮಾಡಿಕೊಳ್ಳುವುದೇ ಸುಲಭ' ಎಂದು ಬೆಂಗಳೂರು ಮೆಟ್ರೊ ರೈಲು ನಿಗಮದ ವ್ಯವಸ್ಥಾಪಕ ನಿರ್ದೇಶಕ ಎನ್. ಶಿವಶೈಲಂ ಅಭಿಪ್ರಾಯಪಟ್ಟರು.`ಜನಾಗ್ರಹ' ಹಾಗೂ ಬ್ರಿಟಿಷ್ ಡೆಪ್ಯುಟಿ ಹೈಕಮಿಷನರ್ ಕಚೇರಿ ಆಶ್ರಯದಲ್ಲಿ ನಗರದಲ್ಲಿ ಶುಕ್ರವಾರ ಆಯೋಜಿಸಿದ್ದ `ನಗರ ಆಡಳಿತ- ಚಲನಶೀಲ ವ್ಯವಸ್ಥೆ ಹಾಗೂ ಸವಾಲುಗಳು' ಕುರಿತ ಸಂವಾದದಲ್ಲಿ ಅವರು ಮಾತನಾಡಿದರು.`ಸರ್ಕಾರಿ ಭೂಮಿಯನ್ನು ಪಡೆಯುವುದೇ ದೊಡ್ಡ ಸವಾಲು. ರೈಲ್ವೆ ಇಲಾಖೆಗೆ ಸೇರಿದ ಜಮೀನನ್ನು ಪಡೆಯಲು ವಿಳಂಬವಾದ ಕಾರಣ ಮೆಟ್ರೊ ಯೋಜನೆ ಒಂದು ವರ್ಷದಷ್ಟು ಕಾಲ ವಿಳಂಬವಾಯಿತು. ರಕ್ಷಣಾ ಇಲಾಖೆಗೆ ಸಂಬಂಧಿಸಿದ ಜಾಗವನ್ನು ಮುಟ್ಟುವ ಹಾಗೆಯೇ ಇಲ್ಲ. ಇತರ ಇಲಾಖೆಗಳ ಭೂಮಿ ಪಡೆಯುವಾಗ ಸಹ ಕಷ್ಟಪಡಬೇಕಾಗುತ್ತದೆ' ಎಂದು ಅವರು ಪ್ರತಿಪಾದಿಸಿದರು.`ಖಾಸಗಿ ವ್ಯಕ್ತಿಗಳ ಜಮೀನು ಭೂಸ್ವಾಧೀನ ಮಾಡಿಕೊಳ್ಳುವಾಗ ಇಂತಹ ತಾಪತ್ರಯ ಇರುವುದಿಲ್ಲ. ಜನರಿಗೆ ಯೋಜನೆಯ ಬಗ್ಗೆ ಭಾರಿ ನಿರೀಕ್ಷೆ ಇರುತ್ತದೆ. ಯೋಜನೆಯ ಅನುಷ್ಠಾನದಿಂದ ಪ್ರದೇಶದ ಅಭಿವೃದ್ಧಿಯಾಗುತ್ತದೆ ಎಂಬ ಭಾವನೆಯೂ ಇರುತ್ತದೆ. ಹೀಗಾಗಿ ಯೋಜನೆ ಅನುಷ್ಠಾನಕ್ಕೆ ಅವರು ಸಹಕರಿಸುತ್ತಾರೆ' ಎಂದರು.`ಸರ್ಕಾರಿ ಇಲಾಖೆಗಳು ಪರಸ್ಪರ ಪೂರಕವಾಗಿ ಕಾರ್ಯನಿರ್ವಹಿಸಿದರೆ ಅಭಿವೃದ್ಧಿ ಚಟುವಟಿಕೆ ಸುವ್ಯವಸ್ಥಿತವಾಗಿ ಹಾಗೂ ವೇಗವಾಗಿ ಆಗುತ್ತದೆ. ನಗರದಲ್ಲೂ ಈ ಮಾದರಿಯನ್ನು ಅಳವಡಿಸಿಕೊಳ್ಳಬಹುದು. ಸಾರ್ವಜನಿಕ ಸಾರಿಗೆ ಅಭಿವೃದ್ಧಿ ಸಂದರ್ಭದಲ್ಲಿ ಆರಂಭಿಕ ಹಂತದಲ್ಲಿ ಪಾದಚಾರಿ ಮಾರ್ಗ ನಿರ್ಮಿಸಲು ಆದ್ಯತೆ ನೀಡಬೇಕು' ಎಂದು ಅವರು ಕಿವಿಮಾತು ಹೇಳಿದರು.`ಬಯೋಕಾನ್' ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಕಿರಣ್ ಮಜುಮ್‌ದಾರ್ ಷಾ, `ಕರ್ನಾಟಕದ ಜಿಡಿಪಿಯಲ್ಲಿ ಬೆಂಗಳೂರಿನ ಪಾಲು ಶೇ 60ರಷ್ಟು. ನಗರದ ಅಭಿವೃದ್ಧಿಗೆ ಬಜೆಟ್‌ನಲ್ಲಿ ಮೀಸಲಿಡುವ ಹಣ ಶೇ 15ರಷ್ಟು ಮಾತ್ರ. ಈ ಪರಿಸ್ಥಿತಿ ಬದಲಾಗಬೇಕು. ನಗರದಲ್ಲಿ 200 ಕೋಟಿ ವೆಚ್ಚದಲ್ಲಿ ಟೆಂಡರ್‌ಶ್ಯೂರ್ ರಸ್ತೆಗಳನ್ನು ನಿರ್ಮಿಸಲಾಗುತ್ತಿದೆ. ಮೀಸಲಿಟ್ಟ ಅನುದಾನ ಪ್ರಮಾಣ ಕಡಿಮೆಯಾಯಿತು' ಎಂದರು.`ಖಾಸಗಿ ಸಹಭಾಗಿತ್ವದಲ್ಲಿ ನಗರ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಬೇಕು. ಅಭಿವೃದ್ಧಿ ಯೋಜನೆಗಳ ಅನುಷ್ಠಾನದ ವಿಷಯದಲ್ಲಿ ನಾವು ಲಂಡನ್‌ನಿಂದ ಕಲಿಯಬೇಕಾದುದು ಸಾಕಷ್ಟು ಇದೆ. ಸರ್ಕಾರ ವಿಶ್ವಾಸಾರ್ಹ ಯೋಜನೆಗಳನ್ನು ಅನುಷ್ಠಾನಗೊಳಿಸಲು ಮುಂದಾದರೆ ಸಂಸ್ಥೆಗಳು ನೆರವು ನೀಡಲು ಮುಂದಾಗುತ್ತವೆ' ಎಂದರು.ಲಂಡನ್ ಮೇಯರ್ ಕಚೇರಿಯ ಸಿಬ್ಬಂದಿ ವಿಭಾಗದ ಮುಖ್ಯಸ್ಥ ಎಡ್ವರ್ಡ್ ಲಿಸ್ಟರ್, `ಲಂಡನ್‌ನಂತಹ ಮಹಾನಗರಗಳು ಆರ್ಥಿಕ ಕುಸಿತ ಕಂಡರೆ ಇಡೀ ದೇಶದ ಮೇಲೆ ದುಷ್ಪರಿಣಾಮ ಬೀರುತ್ತದೆ. ಜನಸಂಖ್ಯೆಯ ತೀವ್ರ ಗತಿಯ ಬೆಳವಣಿಗೆ ದೊಡ್ಡ ಸವಾಲಾಗಿದೆ. ನಗರ ಪ್ರದೇಶಗಳಿಗೆ ಜನರ ವಲಸೆ ಹೆಚ್ಚುತ್ತಿದೆ. ಎಲ್ಲ ವರ್ಗದ ಜನರಿಗೆ ಮೂಲಸೌಕರ್ಯ ಒದಗಿಸುವುದು ಕಠಿಣ ಸಂಗತಿ. ಲಂಡನ್‌ನಲ್ಲಿ ಈ ಕಾರ್ಯವನ್ನು ಯೋಜನಾಬದ್ಧವಾಗಿ ಮಾಡಲಾಗಿದೆ' ಎಂದರು.`ಜನಾಗ್ರಹ' ಸಂಸ್ಥೆಯ ಸಹಸಂಸ್ಥಾಪಕಿ ಸ್ವಾತಿ ರಾಮನಾಥನ್, `ನಮ್ಮ ನಗರ ಯೋಜನೆ ಸಾಂಪ್ರದಾಯಿಕ ಮಾದರಿಯದ್ದು. ನಾವು ಈಗಲೂ ಬ್ರಿಟಿಷ್ ಮಾದರಿ ಅನುಸರಿಸುತ್ತಿದ್ದೇವೆ. ಆದರೆ, ಬ್ರಿಟಿಷರು ಸಾಂಪ್ರದಾಯಿಕ ಮಾದರಿ ಕೈಬಿಟ್ಟು ನವೀನ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ನಾವು ಗಮನ ಹರಿಸಬೇಕಿದೆ. ನಗರದ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಮೀಸಲಿಡಬೇಕಿದೆ' ಎಂದರು.

ಪ್ರತಿಕ್ರಿಯಿಸಿ (+)