ಅಭಿವೃದ್ಧಿ ಹಾದಿಯಲ್ಲಿ ರೇಷ್ಮೆ ಕೃಷಿ

7

ಅಭಿವೃದ್ಧಿ ಹಾದಿಯಲ್ಲಿ ರೇಷ್ಮೆ ಕೃಷಿ

Published:
Updated:

ಆರ್ಥಿಕ ಅಶಕ್ತತೆ ಎದುರಿಸುತ್ತಿರುವ ಮೊಳಕಾಲ್ಮುರು ತಾಲ್ಲೂಕಿನಲ್ಲಿ ಇತ್ತೀಚಿನ ದಿನಗಳಲ್ಲಿ ರೇಷ್ಮೆ ಕೃಷಿ ಗಣನೀಯ ಪ್ರಮಾಣದಲ್ಲಿ ಅಭಿವೃದ್ಧಿಯಾಗುತ್ತಿದ್ದು, ಹೊಸ ಅಶಾಕಿರಣ ಮೂಡಿಸುವ ಹಾದಿಯಲ್ಲಿದೆ. ತಾಲ್ಲೂಕು ಭೌಗೋಳಿಕವಾಗಿ ಮರಳು ಮಿಶ್ರಿತ ಕೆಂಪು ನೆಲ ಹೊಂದಿದ್ದು, ವಾತಾವರಣ ಸಹ ರೇಷ್ಮೆ ಕೃಷಿ ಮಾಡಲು ಪೂರಕವಾಗಿದೆ. ತಾಲ್ಲೂಕಿನಲ್ಲಿ ಕಳೆದ 30 ವರ್ಷಕ್ಕೂ ಹೆಚ್ಚಿನ ಅವಧಿಯಿಂದ ರೇಷ್ಮೆ ಬೆಳೆಯಲಾಗುತ್ತಿದ್ದು, ಬಿ.ಜಿ. ಕೆರೆ, ಮುತ್ತಿಗಾರಹಳ್ಳಿ, ಕೋನಸಾಗರ, ಕೊಂಡ್ಲಹಳ್ಳಿಯಲ್ಲಿ ಪ್ರಥಮವಾಗಿ ಬೆಳೆಯಲು ಆರಂಭಿಸಲಾಯಿತು. ಇದು ಮೂರಂಕಿ ದಾಟಲು ಐದು ವರ್ಷ ಬೇಕಾಯಿತು.ತಾಲ್ಲೂಕು ರೇಷ್ಮೆ ಇಲಾಖೆ ಮೂಲಗಳ ಪ್ರಕಾರ ಪ್ರಸ್ತುತ ತಾಲ್ಲೂಕಿನಲ್ಲಿ ಒಟ್ಟು 650 ಎಕರೆ ಪ್ರದೇಶದಲ್ಲಿ ರೇಷ್ಮೆ ಬೆಳೆಯಲಾಗುತ್ತಿದೆ. ಕೊಂಡ್ಲಹಳ್ಳಿ, ಕೋನಸಾಗರ, ಮುತ್ತಿಗಾರಹಳ್ಳಿ ಗ್ರಾಮಗಳಲ್ಲಿ 2010-11 ಸಾಲಿನಲ್ಲಿ ಒಂದೇ 175 ಎಕರೆ ಪ್ರದೇಶದಲ್ಲಿ ರೇಷ್ಮೆ ಹೆಚ್ಚಾಗುವ ಮೂಲಕ ಅಚ್ಚರಿ ಮೂಡಿಸಿದೆ. ಒಟ್ಟು 23 ಹಳ್ಳಿಗಳಲ್ಲಿ 300 ರೈತರು ಇದ್ದು ವಾರ್ಷಿಕ 173 ಟನ್ ಗೂಡು ಉತ್ಪಾದನೆಯಾಗುವ ಮೂಲಕ 300-350 ದರದ ಪ್ರಕಾರ  ಐದು ಕೋಟಿ ರೂಪಾಯಿಗೂ ಹೆಚ್ಚು ವಹಿವಾಟು ಆಗಿರುವ ನಿರೀಕ್ಷೆ ಇದೆ ಎಂದು ತಿಳಿದುಬಂದಿದೆ.ಈ ಭಾಗದಲ್ಲಿ ವಿ-1 ತಳಿ ಹೆಚ್ಚಾಗಿ ಬೆಳೆಯಲಾಗುತ್ತಿದ್ದು, ಸರಾಸರಿ ಪ್ರತಿ ಎಕರೆಗೆ 800-1000 ಮೊಟ್ಟೆ ಚಾಕಿ ಮಾಡಲಾಗುತ್ತಿದೆ. ಈ ಮೂಲಕ ಪ್ರತಿ 1000 ಮೊಟ್ಟೆಗೆ ಸುಮಾರು 600-700 ಕೆಜಿ ಇಳುವರಿ ಬರುತ್ತಿದೆ. ಮುತ್ತಿಗಾರಹಳ್ಳಿ ಗ್ರಾಮದ ಭಾರೀ ಬಸಣ್ಣ ಅವರು 100 ಮೊಟ್ಟೆಗೆ 99 ಕೆ.ಜಿ. ಗೂಡು ಉತ್ಪಾದನೆ ಮಾಡುವ ಮೂಲಕ ಹಾಗೂ ಪ್ರತಿ ಕೆಜಿ ಒಂದು ಬೈವೋಲ್ಟಿನ್ ತಳಿ ಗೂಡನ್ನು ಬಿ.ಜಿ. ಕೆರೆಯ ಬಿ. ಕೃಷ್ಣಪ್ಪ ಎಂಬ ರೈತ  ` 452 ಗೆ ಮಾರಾಟ ಮಾಡುವ ಮೂಲಕ ಪ್ರಶಂಶೆಗೆ ಪಾತ್ರವಾಗಿದ್ದಾರೆ.ಕಳೆದ ಒಂದು ವರ್ಷದಿಂದ ರೇಷ್ಮೆಗೂಡು ದರವು ಬೆಳೆಗಾರನನ್ನು ಕೈಬಿಡದ ಪರಿಣಾಮ ಮತ್ತು ಕಡಿಮೆ ಖರ್ಚಿನಲ್ಲಿ, ಅಟ್ಟದ ಮಾದರಿಯಲ್ಲಿ ಹುಳುಸಾಕಣೆ, ಹನಿ ನೀರಾವರಿ ಪದ್ಧತಿ ಸೇರಿದಂತೆ ಹಲವು ನೂತನ ತಾಂತ್ರಿಕತೆಗಳು ರೇಷ್ಮೆ ಬೆಳೆ ಹೆಚ್ಚಾಗಿ ಬೆಳೆಯಲು ಒತ್ತು ನೀಡುತ್ತಿದೆ. ಇತ್ತೀಚಿನ ದಿನಗಳಲ್ಲಿ ಜಿಲ್ಲೆ ಹಾಗೂ ಅಕ್ಕಪಕ್ಕದ ಜಿಲ್ಲೆಗಳ ರೇಷ್ಮೆ ಬೆಳೆಗಾರರನ್ನು ಈ ತಾಲ್ಲೂಕಿಗೆ ಕರೆದುಕೊಂಡು ಪ್ರಾತ್ಯಾಕ್ಷಿಕೆ ತೋರಿಸುವ ಮಟ್ಟಕ್ಕೆ ಇಲ್ಲಿನ ಬೆಳೆಗಾರರು ಮುಂದುವರಿದಿರುವುದು ಶ್ಲಾಘನೀಯ. 200ಕ್ಕೂ ಹೆಚ್ಚು ಮಾದರಿ ಹುಳು ಸಾಕಣೆ ಮನೆಗಳನ್ನು ಸಹ ನಿರ್ಮಿಸಿಕೊಂಡಿರುವುದು ಇದಕ್ಕೆ ಒತ್ತು ನೀಡುತ್ತದೆ ಎಂದು ಇಲಾಖೆ ನಿರೀಕ್ಷಕ ಹನುಮಂತಪ್ಪ, ನಾಗೇಂದ್ರಪ್ಪ, ತಾಳಿವಾಡ ಅಭಿಪ್ರಾಯಪಡುತ್ತಾರೆ.ಹೊಸ ನಾಟಿ, ಹನಿ ನೀರಾವರಿ, ಹುಳು ಸಾಕಣೆ ಮನೆ ನಿರ್ಮಾಣ, ಸಲಕರಣೆ ಸಹಾಯಧನ, ಸೋಂಕು ನಿವಾರಕಗಳ ಸೌಲಭ್ಯಗಳನ್ನು ಸರ್ಕಾರ ನೀಡುತ್ತಿರುವ ಜತೆಗೆ ಉದ್ಯೋಗಖಾತ್ರಿ ಯೋಜನೆಯಲ್ಲಿಯೂ ರೇಷ್ಮೆ ಅಭಿವೃದ್ಧಿಗೆ ಅವಕಾಶ ನೀಡುತ್ತಿರುವುದು ಉಪಯುಕ್ತವಾಗಿದ್ದು, ಬೆಳೆಗಾರರು ಮತ್ತಷ್ಟು ಬಳಕೆ ಮಾಡಿಕೊಳ್ಳುವ ಮೂಲಕ ಆರ್ಥಿಕಮಟ್ಟ ಅಭಿವೃದ್ಧಿಪಡಿಸಿಕೊಳ್ಳಲು ಮುಂದಾಗಬೇಕಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry