`ಅಭಿವೃದ್ಧಿ ಹಿನ್ನಡೆಗೆ ಭಿನ್ನಾಭಿಪ್ರಾಯ ಕಾರಣ'

7
ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆ

`ಅಭಿವೃದ್ಧಿ ಹಿನ್ನಡೆಗೆ ಭಿನ್ನಾಭಿಪ್ರಾಯ ಕಾರಣ'

Published:
Updated:

ರಾಮನಗರ: `ಚುನಾಯಿತ ಪ್ರತಿನಿಧಿಗಳು ಅಧಿಕಾರಿಗಳನ್ನು ಫುಟ್‌ಬಾಲಿನಂತೆ ಬಳಸಿಕೊಳ್ಳುತ್ತಿದ್ದೀರಿ. ನಿಮ್ಮಲ್ಲಿರುವ ಭಿನ್ನಾಭಿಪ್ರಾಯವನ್ನು ಸರಿಪಡಿಸಿಕೊಳ್ಳದೇ ಅಧಿಕಾರಿಗಳ ಮೇಲೆ ತಪ್ಪು ಹೊರಿಸುತ್ತೀರಿ' ಎಂದು ಜಿಲ್ಲಾ ಪಂಚಾಯಿತಿ ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್ ಶ್ರೀನಿವಾಸ್ ತಾಲ್ಲೂಕು ಪಂಚಾಯಿತಿ ಸದಸ್ಯರನ್ನು ತರಾಟೆಗೆ ತೆಗೆದುಕೊಂಡ ಪ್ರಸಂಗ ಶುಕ್ರವಾರ ನಡೆಯಿತು.ನಗರದ ಮಿನಿವಿಧಾನ ಸೌಧದ ಸಭಾಂಗಣದಲ್ಲಿ ನಡೆದ ತಾಲ್ಲೂಕು ಪಂಚಾಯಿತಿಯ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, `ಮೂರು ತಿಂಗಳಿಗೊಮ್ಮೆ ನಡೆಯುವ ಸಭೆಯಲ್ಲಿ ಅಭಿವೃದ್ಧಿ ಕಾರ್ಯಗಳ ಬಗ್ಗೆ ಚರ್ಚಿಸದೆ ಅಧಿಕಾರಿಗಳನ್ನು ದೂರುತ್ತೀರಿ.ಅಧಿಕಾರಿಗಳಾದ ನಾವು ಸಭೆಗಳಿಗೆ ಬರುವ ಮೊದಲು ಎಲ್ಲಾ ದಾಖಲೆಗಳನ್ನು ಸಿದ್ದಪಡಿಸಿಕೊಂಡು ಬರುತ್ತೇವೆ. ಆದರೆ ನೀವು ಸಭೆಯಲ್ಲಿ ಕೇಳಬೇಕಾದ, ಚರ್ಚಿಸಬೇಕಾದ ವಿಷಯಗಳನ್ನು ಕೇಳದೆ ಬೇರೆ ವಿಷಯವನ್ನು ಕೇಳುತ್ತೀರಿ. ನಾವು ಹೇಗೆ ನಿಮ್ಮ ಪ್ರಶ್ನೆಗಳಿಗೆ ಉತ್ತರಿಸುವುದು' ಎಂದು ಅವರು ಅಸಮಾಧಾನ ವ್ಯಕ್ತಡಿಸಿದರು.`ಮೊದಲು ನೀವು ಕ್ರೀಯಾ ಯೋಜನೆ ರೂಪಿಸಿದರೆ ಅದರಂತೆ ನಾವು ಕೆಲಸಗಳನ್ನು ಮಾಡಬಹುದು. ನಿಮ್ಮಲ್ಲಿರುವ ಪ್ರತಿಷ್ಠೆ, ಭಿನ್ನಾಭಿಪ್ರಾಯಗಳಿಂದ ಕ್ರಿಯಾ ಯೋಜನೆಯನ್ನು ರೂಪಿಸಲು ವಿಳಂಬ ಮಾಡುತ್ತೀರಿ. ಇದರಿಂದ ಅಭಿವೃದ್ಧಿ ಕೆಲಸಗಳು ಹಿನ್ನಡೆ ಸಾಧಿಸುತ್ತವೆ' ಎಂದು ಅವರು ದೂರಿದರು.ಅಧಿಕಾರಿಯ ಮಾತುಗಳಿಂದ ಬೇಸರಗೊಂಡ ತಾಲ್ಲೂಕು ಪಂಚಾಯಿತಿ ಸದಸ್ಯ ಮಹಿಪತಿ ಮಾತಾನಾಡಿ, `ನಮ್ಮಲ್ಲಿ ಯಾವುದೇ ರೀತಿಯ ಭಿನ್ನಾಭಿಪ್ರಾಯಗಳಿಲ್ಲ. ನಿಮ್ಮನ್ನು ಕೇಳಿದಾಗ ನಿಮ್ಮ ಇಲಾಖೆಯ ಮಾಹಿತಿ ನೀಡಿ ಸಾಕು' ಎಂದು ಖಾರವಾಗಿ ತಿಳಿಸಿದರು.ಸದಸ್ಯರ ಅಸಮಾಧಾನ:  ಅಭಿವೃದ್ಧಿಗೆ ಸಂಬಂಧಿಸಿದ ವಿಚಾರಗಳಲ್ಲಿ ಅಧಿಕಾರಿಗಳು ಹಣಕಾಸು, ಸಾಮಾಜಿಕ ನ್ಯಾಯ ಸಮಿತಿ ಸದಸ್ಯರನ್ನು ಸಹಮತಕ್ಕೆ ತೆಗೆದುಕೊಳ್ಳುತ್ತಿಲ್ಲ. ಯಾವುದೇ ಚರ್ಚೆ ಮಾಡದೆ ಏಕಾಪಕ್ಷೀಯವಾಗಿ ನಿರ್ಧಾರ ತೆಗೆದುಕೊಳ್ಳಲಾಗುತ್ತಿದೆ. 30 ತಿಂಗಳಿನಿಂದ ತಾಲ್ಲೂಕು ಪಂಚಾಯಿತಿ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕುಂಠಿತಗೊಂಡಿದೆ' ಎಂದು  ಸದಸ್ಯ ಕೆ.ಎಸ್. ಶಂಕರಯ್ಯ ಅಸಮಾಧಾನ ವ್ಯಕ್ತಪಡಿಸಿದರು.ತಾಲ್ಲೂಕು ಪಂಚಾಯಿತಿಯ ಉಪಾಧ್ಯಕ್ಷ ಭದ್ರಯ್ಯ ಮಾತನಾಡಿ, ಐಜೂರು ಟ್ಯಾಂಕ್ ವೃತ್ತದ ಬಳಿ ಇರುವ ಸರ್ಕಾರಿ ಶಾಲೆಯನ್ನು ಕೆಡವಿ ನೂತನ ಕಟ್ಟಡ ಕಟ್ಟುವ ಅವಶ್ಯಕತೆಯಾದರೂ ಏನು? ಈಗಿರುವ ಕಟ್ಟಡ ನಿರ್ಮಿಸಿ ಕೇವಲ ಹತ್ತು ವರ್ಷ ಮಾತ್ರ ಕಳೆದಿದೆ.

ಸರ್ಕಾರದಿಂದ ಹಣ ಬಿಡುಗಡೆಯಾಗಿದ್ದ ಕೂಡಲೇ ಸರ್ಕಾರದ ಹಣವನ್ನು ಪೋಲು ಮಾಡಬೇಕೆಂಬ ನಿಯಮ ಎಲ್ಲೂ ಇಲ್ಲ. ಅದರ ಬದಲಾಗಿ ಪಕ್ಕದ ಜಾಗದಲ್ಲಿ ಅಥವಾ ಇರುವ ಕಟ್ಟಡದ ಮೇಲೆ ಮತ್ತೊಂದು ಮಹಡಿ ನಿರ್ಮಾಣ ಮಾಡಿ ಎಂದು ಹೇಳಿದರು.ಅದಕ್ಕೆ ಪ್ರತಿಕ್ರಿಯಿಸಿದ ಬಿಇಒ ಒಂದೇ ಜಾಗದಲ್ಲಿ ಹಿಂದೂ ಮತ್ತು ಮುಸ್ಲಿಂ ಸಮಾಜದ ಶಾಲೆಗಳನ್ನು ನಡೆಸಲಾಗುತ್ತಿದೆ. ಖಾಲಿ ಇರುವ ಮೈದಾನದಲ್ಲಿ ನೂತನ ಶಾಲೆ ಕಟ್ಟಡವನ್ನು ನಿರ್ಮಾಣ ಮಾಡಲು ಎರಡು ಕೋಮಿನ ಜನರು ವಿರೋಧಿಸುತ್ತಿದ್ದಾರೆ. ಇದಲ್ಲದೆ ಬಿಡುಗಡೆಯಾಗಿರುವ ಹಣವನ್ನು ಬದಲಿ ಕಾಮಗಾರಿಗಳಿಗೆ ಉಪಯೋಗ ಮಾಡಿಕೊಳ್ಳುವಂತಿಲ್ಲ. ಬಿಡುಗಡೆಯಾಗಿರುವ ಹಣ ಸರ್ಕಾರಕ್ಕೆ ವಾಪಸ್ಸು ಹೋಗಬಾರದೆಂದು ನಿರ್ಧಾರ ತೆಗೆದುಕೊಂಡಿರುವುದಾಗಿ ಸಭೆಗೆ ತಿಳಿಸಿದರು.ಬಿಇಒ ಪ್ರತಿಕ್ರಿಯೆಯಿಂದ ಬೇಸರಗೊಂಡ ಭದ್ರಯ್ಯ ಅವರು, `ನೀವು ಮತ್ತು ಸಂಬಂಧಿಸಿದ ಎಂಜಿನಿಯರ್ ಸ್ಥಳ ಪರಿಶೀಲನೆ ಮಾಡಿ ಖಾಲಿ ಮೈದಾನದಲ್ಲಿ ಅಥವಾ ಇರುವ ಕಟ್ಟಡದ ಮೆಲೆಯೇ ಕಟ್ಟಡ ನಿರ್ಮಾಣ ಮಾಡಿ. ಇಲ್ಲದಿದ್ದರೆ ಸರ್ಕಾರದ ಹಣವನ್ನು ಪೋಲು ಮಾಡಲು ಹೋಗಬೇಡಿ. ಸುಮ್ಮನಿರಿ ಸಾಕು. ಪೋಲಾಗುವ ಬದಲು ಸರ್ಕಾರಕ್ಕೆ ಹಣ ವಾಪಸ್ಸದರೆ ತಪ್ಪಲ್ಲ' ಎಂದು ಹೇಳಿದರು.ಸದಸ್ಯ ಜಯರಾಂ ಮಾತನಾಡಿ, ನ್ಯಾಯ ಬೆಲೆ ಅಂಗಡಿಗಳಲ್ಲಿ ಅಕ್ಕಿಯನ್ನು ರೂ 1.50 ನಂತೆ ಮಾರಾಟ ಮಾಡುತಿರುವ ಬಗ್ಗೆ ದೂರುಗಳು ಬಂದಿವೆ ಎಂದರು. ಅಂತಹ ದೂರುಗಳು ಬಂದರೆ ನ್ಯಾಯ ಬೆಲೆ ಅಂಗಡಿಯ ಪರವಾನಗಿ ರದ್ದುಪಡಿಸುವುದಾಗಿ ಆಹಾರ ಇಲಾಖೆಯ ಅಧಿಕಾರಿಗಳು ಸಭೆಗೆ ತಿಳಿಸಿದರು.ಸದಸ್ಯ ಎಚ್. ಶಿವಪ್ರಸಾದ್ ಮಾತನಾಡಿ, ಮಳೆಗಾಲ ಆರಂಭಾವಗಿ 2-3 ತಿಂಗಳು ಕಳೆದರೂ ಉತ್ತಮ ಮಳೆಯಾಗದ ಹಿನ್ನೆಲೆಯಲ್ಲಿ ಈಗಲೂ ಟ್ಯಾಂಕರ್‌ಗಳಲ್ಲಿ ನೀರು ಸರಬರಾಜು ಮಾಡುವ ಪರಿಸ್ಥಿತಿ ಇದೆ. ಯಾವುದೇ ಕೆರೆ ಕಟ್ಟೆಗಳು ತುಂಬದ ಕಾರಣ ಅಂತರ್ಜಲ ಮಟ್ಟ ಕುಸಿದು ಕೊಳವೆ ಬಾವಿಗಳು ಬತ್ತಿ ಹೋಗಿವೆ. ಅಧಿಕಾರಿಗಳು ಕೈಕಟ್ಟಿ ಕುಳಿತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಬಿ.ಎನ್. ಭಾನುಮತಿ ಚಿಕ್ಕಬೋರೆಗೌಡ, ಪ್ರಭಾರ ಕಾರ್ಯ ನಿರ್ವಹಣಾಧಿಕಾರಿ ನಂಜುಂಡೇಗೌಡ, ಸಾಂಖ್ಯಿಕ ಅಧಿಕಾರಿ ಗಿರಿಗೌಡ ಸೇರಿದಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry